ಜಿ.ಎನ್.ಮೋಹನ್
‘ಮೋಹನ್, ನನಗೊಂದು ಜಡೆ ಇತ್ತು’ ಎಂದರು ಟಿ ಎನ್ ಸೀತಾರಾಂ
ಚಿತ್ರಕಲಾ ಪರಿಷತ್ ನ ಕ್ಯಾಂಟೀನ್ ನಲ್ಲಿ ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಕಾಫಿ ಎಂಜಾಯ್ ಮಾಡುತ್ತಿದ್ದ ನಾನು ತಕ್ಷಣ ಅವರ ತಲೆಗೂದಲು ನೋಡಿದೆ.
ಬಿ ಕೆ ಚಂದ್ರಶೇಖರ್, ಆರ್ ಜಿ ಹಳ್ಳಿ ನಾಗರಾಜ್ ಹಾಗೂ ಟಿ ಎನ್ ಸೀತಾರಾಮ್ ಅವರದ್ದು ನಿಜವಾದ ಕೂದಲಲ್ಲ, ವಿಗ್ ಅಂತ ನಾವು ಎಷ್ಟೋ ಸಲ ಗೆಳೆಯರ ಸರ್ಕಲ್ನಲ್ಲಿ ಬೆಟ್ ಕಟ್ಟಿಕೊಂಡಿದ್ದೆವು.
‘ಎಳೆದು ನೋಡಿ ಬಂದು ಹೇಳಿದವರಿಗೆ ಸಿಟಿಆರ್ ನಲ್ಲಿ ಮಸಾಲೆದೋಸೆ’ ಎನ್ನುವ ಬಹುಮಾನದ ಆಮಿಷವನ್ನೂ ಮುಂದಿಟ್ಟಿದ್ದೆವು.
ಈಗ ಸೀತಾರಾಂ ಹೀಗೆ ಹೇಳಿದಾಗ ನಾನು ಮತ್ತೆ ಅದೇ ‘ವಿಗ್’ ತಲೆಯನ್ನು ನೋಡಿದೆ.
ಸೊಂಪಾಗಿ ಇದ್ದ ಕೂದಲು
ಇನ್ನು ಇವರು ಚಿಕ್ಕವರಿರುವಾಗ ಮನೆಯಲ್ಲಿ ಜಡೆ ಹೆಣೆಯದೇ ಏನು ತಾನೇ ಮಾಡಿದ್ದಾರು ಎಂದುಕೊಂಡೆ
ನಾನು ಅವರ ಸೊಂಪಾದ ಕೂದಲನ್ನು ಮೆಚ್ಚುತ್ತಾ ಕುಳಿತಿದ್ದರೆ ಅವರಿಗೆ ಅದೇ ಗುಂಪಿನಲ್ಲಿ ಮುಖ ಮುಚ್ಚಿಕೊಂಡು ಓಡಾಡುವಂತ ಕೀಳರಿಮೆಯನ್ನು ತಂದಿಟ್ಟಿತ್ತು.
ನನ್ನ ಊರು ತಳಗವಾರ. ಅಲ್ಲಿದ್ದಾಗ ಏನೋ ಅನಿಸಲಿಲ್ಲ. ಆಮೇಲೆ ದೊಡ್ಡಬಳ್ಳಾಪುರ ಶಾಲೆ ಸೇರಿದೆ. ಅದು ಟೌನ್. ಅಲ್ಲಿದ್ದ ಹುಡುಗರೆಲ್ಲಾ ಮಾಡ್ ಆಗಿದ್ದರು. ಅವರ ನಡುವೆ ಜಡೆ ಬಿಟ್ಟುಕೊಂಡು ನಾನು ತರಗತಿಗಳಲ್ಲಿ ಕೂರುತ್ತಿದ್ದೆ. ಇದು ಸಿಕ್ಕಾಪಟ್ಟೆ ಕೀಳರಿಮೆ ಉಂಟುಮಾಡಿಬಿಟ್ಟಿತು..
ನಾನು ಮನೆಯಲ್ಲಿ ರಂಪ ಮಾಡಿದೆ. ತಿರುಪತಿಗೆ ಕರೆದುಕೊಂಡು ಹೋಗಿ ತಲೆ ಬೋಳು ಮಾಡಿದರು. ನಾನು ಬಾಣಲೆಯಿಂದ ಬೆಂಕಿಗೆ ಬಿದ್ದೆ. ಈಗ ಇನ್ನೊಂದು ರೀತಿಯ ಕೀಳರಿಮೆ ಎಂದು ಸೀತಾರಾಮ್ ಕಾಫಿ ಕಪ್ಪಿನೊಳಗೆ ತಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕುವಂತೆ ಕುಳಿತಿದ್ದರು.
ನಾನು ಅವರ ಸಿನೆಮಾ, ಧಾರಾವಾಹಿ, ನಾಟಕ ಈ ಎಲ್ಲಕ್ಕೂ ಈ ಕೀಳರಿಮೆಯೇ ಭದ್ರವಾದ ಬುನಾದಿ ಒದಗಿಸಿರಬಹುದಾ ಎಂದು ಅದೇ ಕಾಫಿ ಕಪ್ ನ್ನು ಹಿಡಿದು ಸಂಶೋಧನೆಗಿಳಿದಿದ್ದೆ.
ಆವಾಗ್ಲೇ ಸೀತಾರಾಮ್ ಒಂದು ಇಂಟೆರೆಸ್ಟಿಂಗ್ ವಿಷಯ ಹೇಳಿದರು.
ನನಗೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಊರಿಗೆ ಹೋಗಿ ಎಲ್ಲಾ ಪ್ಯಾಕ್ ಮಾಡಿ ಕಾಲೇಜಿಗೆ ಸೇರಲು ಬರಬೇಕು ಅನ್ನುವಾಗ ಕಾಲೇಜಿನಿಂದ ಪತ್ರ ಬಂತು. ನಿಮ್ಮದು ಅಂಡರ್ ಏಜ್ ಸೀಟು ಕೊಡೋಕಾಗಲ್ಲ ಅಂತ. ‘ಏನು ಗೊತ್ತಾ ನಾನು ಸಿಕ್ಕಾಪಟ್ಟೆ ಚೆನ್ನಾಗಿ ಓದುತ್ತಿದ್ದೆ. ಹಾಗಾಗಿ ಒಂದು ಸಲ ಡಬಲ್ ಪ್ರೊಮೋಷನ್, ಇನ್ನೊಂದು ಸಲ ಟ್ರಿಬಲ್ ಪ್ರೊಮೋಷನ್ ಕೊಟ್ಟುಬಿಟ್ಟ್ಟಿದ್ದರು. ಹಾಗಾಗಿ ಅಂಡರ್ ಏಜ್ ಆಗೋದೆ’ ಎಂದು ನಕ್ಕರು.
ನನಗೆ ಟಿ ಎನ್ ಸೀತಾರಾಮ್ ಇದನ್ನೆಲ್ಲಾ ಹೇಳುತ್ತಿದ್ದಾಗ ಮನಸ್ಸೆಲ್ಲಾ ಅವರು ಬರೀತಿದ್ದ ಲವ್ ಲೆಟರ್ ಬಗ್ಗೆನೇ ಇತ್ತು.
‘ಅಯ್ಯೋ ಬಿಡ್ರಿ ಅದೊಂದು ಹುಚ್ಚಾಟ. ಆದ್ರೆ ಇಷ್ಟು ಮಾತ್ರ ನಿಜ ಲವ್ ಲೆಟರ್ ಬರೆಯೋದ್ರಲ್ಲಿ ನಾನು ಸಿಕ್ಕಾಪಟ್ಟೆ ಫೇಮಸ್ ಆಗೋಗಿಬಿಟ್ಟೆ. ನನ್ನ ಹಾಸ್ಟೆಲ್ ರೂಮ್ ಹತ್ರ ಲವ್ ಲೆಟರ್ ಬರೆಸಿಕೊಳ್ಳೋಕೆ ಅಂತಾನೆ ಹುಡುಗರು ಕ್ಯೂ ನಿಲ್ಲೋರು..’ ಎಂದರು.
ನಾನು ಕಾಮಿಡಿ ಕಿಲಾಡಿಗಳು ಆನಂದನ ಥರಾ ‘ಡೀಟೇಲ್ಸ್ ಪ್ಲೀಸ್..’ ಅಂತ ಹಲ್ಲು ಕಿರಿದೆ.
‘ಒಂದು ದಿನ ಕಿ ರಂ ನನ್ನತ್ರ ಮಾತಾಡ್ತಾ ಕುಮಾರವ್ಯಾಸನ ಪದ್ಯಾನ ಎಷ್ಟು ಚೆನ್ನಾಗಿ ಲವ್ ಲೆಟರ್ ಮಾಡಬಹುದು’ ಅಂದರು. ಹಾಗೆ ಮಾತಾಡ್ತಾ ‘ಒಂದೇ ಥರಾ ಬರಿಯೋದು ಯಾಕೆ ಅದರಲ್ಲೂ ಎಕ್ಸ್ಪಿರಿಮೆಂಟ್ ಮಾಡಬೋದು ಉದಾಹರಣೆಗೆ ಸಂಭಾಷಣೆ ಥರಾ ಅಂತ.. ಏನೇನೋ ಹೇಳಿದ್ರು. ನಾನು ಇದನ್ನೆಲ್ಲಾ ಜಾರಿಗೆ ತಂದುಬಿಟ್ಟೆ. ಅಲ್ಲಿಂದ ಶುರುವಾಯ್ತು ನೋಡಿ ನಾನು ಲವ್ ಲೆಟರ್ ಬರ್ಯೋದು ಹುಡುಗರು ಕ್ಲಿಕ್ ಆಗೋದು…’ ಅಂತ ನಕ್ಕರು.
ನಾನು ‘ಪ್ರಜಾವಾಣಿ’ಯಲ್ಲಿದ್ದಾಗ ಒಂದು ರೀತಿ ಅಘೋಷಿತ ಡ್ರಾಮಾ ಕ್ರಿಟಿಕ್ ಕೂಡಾ. ಕಲಾಕ್ಷೇತ್ರ ನನ್ನ ಎರಡನೆಯ ಅಡ್ದಾ. ಅಲ್ಲಿಯೇ ಸೀತಾರಾಂ ಅವರ ದೊಡ್ಡ ಪ್ರತಿಭೆ ನನಗೆ ಅರಿವಾಗಿದ್ದು.
ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ, ಬದುಕ ಮನ್ನಿಸೋ ಪ್ರಭುವೇ ಎಲ್ಲಾ ನನ್ನ ಹೃದಯಕ್ಕೆ ತಾಕಿ ಸಾಕಷ್ಟು ದಿನ ಮನಸ್ಸನ್ನು ಕದಡಿ ಹಾಕಿದ್ದವು.
‘ಒಂದೊಂದು ನಾಟಕದ ಹಿಂದೆಯೂ ಒಂದೊಂದು ದೊಡ್ಡ ಕಥೆ ಇದೆ’ ಅಂತ ಸೀತಾರಾಂ ನಿಟ್ಟುಸಿರಿಟ್ಟರು.
‘ನಮಗೆ 20 ಎಕರೆ ಜಮೀನಿತ್ತು. ನಾನು ಆದರ್ಶಗಳ ಹೊಸ್ತಿಲಿನಲ್ಲಿದ್ದೆ. ನಮ್ಮ ತಂದೆ ನನಗೆ ಪತ್ರ ಬರೆದು ನನ್ನ ಕೈನಲ್ಲಿ ಜಮೀನು ನೋಡಿಕೊಳ್ಳಲು ಆಗುತ್ತಿಲ್ಲ ಊರಿಗೆ ವಾಪಸ್ ಬಾ ಎಂದರು. ನಾನು ನಿಮ್ಮ ಆಸ್ತಿ ನನಗೆ ತೃಣಕ್ಕೆ ಸಮಾನ, ನನಗೆ ಅದು ಬೇಕಾಗಿಲ್ಲ ಅಂತ ಮಾರುತ್ತರ ಬರೆದೆ. ಅಪ್ಪ ಆ ವೇಳೆಗಾಗಲೇ ತೀವ್ರ ಖಾಯಿಲೆಗೆ ತುತ್ತಾಗಿದ್ರು. ಅದೇ ಕೊನೆ ಪತ್ರ ಓದಿದ ನಂತರ ಔಷಧ ತೆಗೆದುಕೊಳ್ಳೋದೇ ನಿಲ್ಲಿಸಿಬಿಟ್ಟರು. 58ನೆಯ ವಯಸ್ಸಿಗೇ ತೀರಿಹೋದರು. ಅದು ನನ್ನನ್ನು ಸಾಕಷ್ಟು ಘಾಸಿ ಮಾಡಿಬಿಟ್ಟಿತು. ಅದರ ಫಲವೇ ಬದುಕ ಮನ್ನಿಸೋ ಪ್ರಭುವೇ’ ಎಂದರು.
ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಸೀತಾರಾಮ್ ನನ್ನತ್ತ ನೋಡಿದವರೇ ‘ನಾಟಕ ಯಶಸ್ವಿಯಾಯಿತು ಮೋಹನ್, ಆದರೆ ಈಗೀಗ ಅನಿಸ್ತಾ ಇದೆ. ನಾನು ನಾಟಕ ಬರೆದು ನನ್ನ ಅಪ್ಪನ ಸಾವನ್ನೂ ಎನ್ಕ್ಯಾಷ್ ಮಾಡಿಕೊಂಡುಬಿಟ್ಟೆನಾ ಅಂತ’
ನನಗೆ ಒಂದು ಕ್ಷಣ ಶಾಕ್ ಆಯಿತು. ಅರೆ! ಸೀತಾರಾಂ ಎಲ್ಲರಿಗಿಂತ ಭಿನ್ನ ಅನಿಸೋದು ಇದಕ್ಕೆ ಆಲ್ವಾ
‘ಜಾರ್ಜ್ ಫರ್ನಾಂಡಿಸ್ ರಿಂದ ಆದ ಶಾಕ್ ಅಂತೂ ಮರೆಯೋಕೆ ಸಾಧ್ಯ ಇಲ್ಲ’ ಎಂದರು. ತಕ್ಷಣ ನನ್ನ ಕಿವಿಯನ್ನು ನಿಮಿರಿಸಿ ಕುಳಿತೆ.
‘ಜಾರ್ಜ್ ಫರ್ನಾಂಡಿಸ್ ಆಗ ನಮಗೆ ದೊಡ್ಡ ಆದರ್ಶ. ಮುಂಬೈನಲ್ಲಿನ ಶಿಪ್ಪಿಂಗ್ ಕಂಪನಿಯನ್ನು ನಡೆಸುತ್ತಿದ್ದ ಧರ್ಮತೇಜ ಅನ್ನುವ ಮಹಾಭ್ರಷ್ಟನಿದ್ದ. ಜಾರ್ಜ್ ಏನಾದ್ರೂ ಮಂತ್ರಿ ಆದರೆ ಇವನು ನೇರಾ ಜೈಲಿಗೆ ಹೋಗುತ್ತಾನೆ ಅಂತ ಮಾತಾಡಿಕೊಳ್ಳುತ್ತಿದ್ದೆವು.
ಅಂದುಕೊಂಡಂತೆಯೇ ಜಾರ್ಜ್ ಗೆದ್ದು ಮಂತ್ರಿಯೇ ಆದರು. ಒಮ್ಮೆ ನಾನು ಗೆಳೆಯರೊಂದಿಗೆ ಅವರನ್ನು ನೋಡಲು ಹೋದೆ. ಒಳಗೆ ಯಾರೋ ಇದ್ದಾರೆ ವೇಟ್ ಮಾಡಿ ಎಂದರು. ಎಷ್ಟೋ ಹೊತ್ತಾದ ಮೇಲೆ ಆ ವಿಐಪಿ ಹೊರಗಡೆ ಬಂದರು. ನೋಡ್ತೇನೆ ಅವರು ಧರ್ಮತೇಜ. ನನಗೆ ಇನ್ನಿಲ್ಲದ ಶಾಕ್ ಆಯ್ತು. ಅದರ ಪ್ರತಿಫಲವೇ ಆಸ್ಫೋಟ’ ಎಂದರು.
ಇರ್ಲಿಬಿಡಿ ಆದರೆ ಈ ಆಸ್ಫೋಟ ನಾಟಕ ನೋಡೋಕೆ ಪುಟ್ಟಣ್ಣ ಕಣಗಾಲ್ ಬಂದಿದ್ರು. ಬಿಡದೆ ನನ್ನಿಂದ ಮಾನಸ ಸರೋವರಕ್ಕೆ ಸಂಭಾಷಣೆ ಬರೆಸಿದರು ಎನ್ನುತ್ತಾ ಲಂಕೇಶ್ ಜೊತೆಗಿನ ನಾಟಕ, ಸಿನೆಮಾಗೆ ಹೊರಳಿಕೊಂಡರು.
‘ಸಾರ್ ನೀವು ಸೊಟ್ಟಗೆ ನಡೀತೀರಿ’ ಎಂದೆ. ತಕ್ಷಣ ನಮ್ಮಿಬ್ಬರ ನಡುವೆ ನಗುವಿನ ‘ಆಸ್ಫೋಟ’ವಾಯಿತು.
‘ಹೌದ್ರೀ ಅದೊಂದು ಕಥೆ. ಕಾರಂತರು ವಂಶವೃಕ್ಷ ಮಾಡಿದಾಗ ಲಂಕೇಶ್ಅವರೇನ್ರಿ ಸಿನೆಮಾ ಮಾಡೋದು ನಾವೂ ಮಾಡೋಣ ಬನ್ನಿ ಅಂದ್ರು. ಸರಿ ಅಂದೆ. ಅವರು ನೀವೇ ಅದರಲ್ಲಿ ಹೀರೋ ಅಂದ್ರು. ನನಗೆ ಅರಗಿಸಿಕೊಳ್ಳಲಿಕ್ಕೆ ಆಗಲಿಲ್ಲ. ನಾನು ಭಯಪಟ್ಟು ಸಾರ್ ಬೇಡವೇಬೇಡ ನನಗೆ ನೆಟ್ಟಗೆ ನಡೆಯೋಕೂ ಬರಲ್ಲ, ಸೊಟ್ಟ ಸೊಟ್ಟಗೆ ನಡೀತೀನಿ ಅಂದೆ. ಆದ್ರೆ ಲಂಕೇಶ್ ಬಿಡಬೇಕಲ್ಲ. ನನ್ನ ಸಿನೆಮಾಗೆ ಸೊಟ್ಟ ಸೊಟ್ಟಗೆ ನಡೆಯೋನೆ ಬೇಕು ಅಂತ ಎಳೆದುಕೊಂಡು ಹೋಗಿ ‘ಪಲ್ಲವಿ’ ಹೀರೋ ಮಾಡಿಬಿಟ್ರು’
ಅವರು ಲಂಕೇಶ್ ಗುಂಗಿನಿಂದ ಹೊರಬಂದಿರಲಿಲ್ಲ.
ಅವರು ನನಗೆ ‘ಬೀಗಬೇಡ ಮತ್ತು ಬಾಗಬೇಡ’ ಅನ್ನುವ ಕಿವಿಮಾತು ಹೇಳಿದ್ದರು. ಅದಕ್ಕೂ ಮೊದಲಿನಿಂದಲೂ ನಾನು ಹಾಗೆಯೇ ಬಂದಿದ್ದೆ ಎನ್ನುತ್ತಾ ನೆನಪಿನಲ್ಲಿ ಜಾರಿಹೋದರು.
ನನ್ನೆದುರಿಗಿದ್ದ ಹೋರಾಟಗಾರ ಸೀತಾರಾಂಗೆ ‘ಈಗ ಈ ಜಾಗತೀಕರಣದ ಕಾಲ ಏನನ್ಸುತ್ತೆ’ ಅಂದೆ.
ಅವರು ನನ್ನ ಕಡೆ ನೋಡಿದವರೇ ಸ್ವಲ್ಪ ಸಮಯ ಸುಮ್ಮನಿದ್ದು ‘ನೀವೇ ಬರೆದಿದ್ದೀರಲ್ಲಾ ಕವಿತೆ ‘ಕೋಡಂಗಿಗಿನ್ನು ಕೆಲಸವಿಲ್ಲ’ ಅಂತ. ಅಷ್ಟೇ.. ಎಂದು ಎದ್ದರು.