ಜಿ.ಎನ್.ಮೋಹನ್
ನಾನು ಇನ್ನೇನು ಇಡೀ ಒಂದು ಗಂಟೆಯ ಭಾಷಣ ಮುಗಿಸಿ ‘ಸೀ ಯು’ ಎನ್ನುವಂತೆ ಮುಖ ಮಾಡಿ ಆಚೆ ಹೊರಡುವ ವೇಳೆಗೆ ಸಭಾಂಗಣದಲ್ಲಿದ್ದ ಎಲ್ಲರೂ “ಸಾರ್ ನೀವು ‘ಜಿ’ ಅಂದ್ರೆ ಏನು ಅಂತಾನೆ ಹೇಳಲಿಲ್ಲ..” ಅಂತ ಒಟ್ಟಾಗಿ ಕೂಗು ಹಾಕುತ್ತಾರೆ.
ಯಾವುದೇ ಪತ್ರಿಕೋದ್ಯಮದ ಕ್ಲಾಸ್ ನಲ್ಲಿ ‘ನಿಮ್ಮ ಹೆಸರು ಏನು?’ ಎನ್ನುವುದು ನಾನು ಕೇಳುವ ಮೊದಲ ಪ್ರಶ್ನೆಯಾದರೆ, ‘ಆ ಹೆಸರು ಯಾಕೆ ಬಂತು’ ಎನ್ನುವುದು ಎರಡನೆಯ ಪ್ರಶ್ನೆ.
‘ಸಾರ್ ಅದು ನಮ್ಮ ಅಪ್ಪ ಅಮ್ಮ ಇಟ್ಟದ್ದು’ ಎನ್ನುವ ಮಾಮೂಲಿ ಉತ್ತರ ಬರುತ್ತದೆ ಎನ್ನುವುದು ನನಗೆ ಖಂಡಿತಾ ಗೊತ್ತು.
ಆಗಲೇ ನಾನು ಸ್ವಲ್ಪ ಗಂಭೀರವಾಗಿ ‘ಅದು ಗೊತ್ತು ಆದರೆ ಅವರು ಅದೇ ಹೆಸರು ಯಾಕೆ ಇಟ್ಟರು’ ಎಂದು ಕೇಳುತ್ತೇನೆ.
ನಂತರ ಸಿಟ್ಟಾದವನಂತೆ ‘ನೀವು ಪತ್ರಿಕೋದ್ಯಮದ ವಿದ್ಯಾರ್ಥಿಗಳು ನಿಮ್ಮಜೊತೆ ೨೦ಕ್ಕಿಂತ ಹೆಚ್ಚು ವರ್ಷದಿಂದ ಪ್ರಯಾಣ ಮಾಡುತ್ತಿರುವ ನಿಮ್ಮ ಹೆಸರನ್ನ ಒಂದು ನಿಮಿಷ ಬಿಡುವು ಮಾಡಿಕೊಂಡು ಮಾತನಾಡಿಸಲಾಗಿಲ್ಲ ಎಂದರೆ ಏನು ಅರ್ಥ? ನೀವು ಪತ್ರಕರ್ತರಾಗಲು ಸಜ್ಜಾಗುತ್ತಿರುವವರಲ್ಲವಾ ಪ್ರತಿಯೊಂದಕ್ಕೂ ಮೂಗು ತೂರಿಸಬೇಕು ತಾನೇ’ ಅಂತ ಗದರುತ್ತೇನೆ.
ಆ ನಂತರ ನೋಡಬೇಕು. ಅವರ ಹೆಸರು ಹಿಡಿದುಕೊಂಡು ಅವರ ತಂದೆ ತಾಯಿಗೆ, ಅವರ ನೆಂಟರಿಗೆ ಫೋನ್ ಮಾಡುತ್ತಾ ಹೆಸರ ಆಟ ಆಡುವುದನ್ನು.
ಇಷ್ಟು ಆಗಿ ಮುಗಿಯಿತು ಎನ್ನುವಾಗ ‘ಸರ್ ಈಗ ನೀವು ಹೇಳಿ ಜಿ ಎನ್ ಮೋಹನ್ ಅನ್ನುವ ಹೆಸರು ಹೇಗೆ ಬಂತು?’ ಎನ್ನುವ ಪ್ರತಿಬಾಣ ಹೂಡುತ್ತಾರೆ.
ಆಗ ನಾನು ನಕ್ಕು ‘ಇದು ಇವತ್ತಿನ ನಿಮ್ಮ ಹೋಮ್ ವರ್ಕ್. ಹುಡುಕೋದು ನಿಮ್ಮ ಕೆಲಸ’ ಅಂತ ಕೈ ಬೀಸಿ ಹೊರಟುಬಿಡುತ್ತೇನೆ.
ಮಾರನೆಯ ಸಲ ಭೇಟಿ ಆದಾಗ ಅವರು ನನ್ನ ಹೆಸರು ಒಂದು ಒಡಪೇನೋ ಎನ್ನುವಂತೆ ಅದರ ಬೆನ್ನು ಹತ್ತಿ ಬಂದಿರುತ್ತಾರೆ.
ಆದರೆ ಎಲ್ಲರಿಗೂ ಬಿಡಿಸಲಾಗದ ಒಗಟಾಗಿ ಹೋಗುವುದು ನನ್ನ ಹೆಸರಲ್ಲಿರುವ ‘ಜಿ’ . ತಲೆಕೆಳಗಾಗಿ ನಿಂತು ಲೆಕ್ಕ ಮಾಡಿದರೂ ಅದರ ಉತ್ತರ ಹುಡುಕಲಾಗಿರುವುದಿಲ್ಲ.
ಹೀಗೇ ಒಂದು ದಿನ ಪಿ ಸಾಯಿನಾಥರನ್ನು ತುಮಕೂರಿಗೆ ದಾಟಿಸಬೇಕಿತ್ತು. ಬರಗೂರು ರಾಮಚಂದ್ರಪ್ಪನವರ ಆಹ್ವಾನದ ಮೇರೆಗೆ ಅವರು ಅಲ್ಲಿ ಇರಬೇಕಿತ್ತು.
ಆ ನಂತರ ಶರ ವೇಗದಲ್ಲಿ ನಾನು ಮಂಗಳೂರು ಸೇರಿಕೊಳ್ಳಬೇಕಾದ ತುರ್ತಿತ್ತು. ಹಾಗಾಗಿ ಮಂಗಳೂರು ರಸ್ತೆಯನ್ನು ಕೂಡಿಕೊಳ್ಳುವ ಕುಣಿಗಲ್ ಹಾದಿಯಲ್ಲಿದ್ದೆ. ಕಾರು ರಭಸದಿಂದ ಮುನ್ನುಗುತ್ತಿತ್ತು.
ಆಗಲೇ ನಾನು ಒಂದಿಷ್ಟು ಜೋರಾಗೇ ‘ನಿಲ್ಸಿ, ನಿಲ್ಸಿ’ ಅಂತ ಕೂಗಿದೆ. ಏನೋ ಭಯಂಕರವಾಯಿತು ಎಂದು ಡ್ರೈವರ್ ಕಾರು ನಿಲ್ಲಿಸಿದ.
ನಾನು ಓಡಿಹೋದವನೇ ರಸ್ತೆಬದಿಯಿದ್ದ ಬೋರ್ಡ್ ನ್ನು ಮುಟ್ಟಿ ಮುಟ್ಟಿ ನೋಡತೊಡಗಿದೆ.
ಆ ವೇಳೆಗೆ ನಮ್ಮ ಗುಬ್ಬಚ್ಚಿ ಸತೀಶ್ ಹಾಗೂ ಅವರ ಕುಟುಂಬ ಅಲ್ಲಿಗೆ ಬರಬೇಕೇ? . ಅವರಿಗೂ ಡೌಟು. ಯಾವುದೋ ಬೋರ್ಡ್ ತೊಳೆಯುವಂತೆ ನಿಂತಿರುವ ‘ಇವರು ಅವರೇನಾ..?’ ಅಂತ.
ನಾನು ದೊಡ್ಡದಾಗಿ ನಕ್ಕು ‘ಇದು ನನ್ನ ಹೆಸರಿನಲ್ಲಿದೆಯಲ್ಲಾ ಜಿ ಅದರ ಬೊರ್ಡು’ ಅಂದೆ.
‘ಯುರೇಕಾ’ ಎನ್ನುವಂತೆ ಅವರೂ ನನ್ನ ಜೊತೆ ಇದ್ದವರೂ ನನ್ನತ್ತ ನೋಡಿದರು.
ಯಸ್, ನನ್ನ ಹೆಸರಿನಲ್ಲಿರುವ ‘ಜಿ’ ಅಂದರೆ ಇನ್ನೇನೂ ಅಲ್ಲ ‘ಗೂಳೂರು’.
ಇದನ್ನು ಕೇಳಿದವರು ಯಾರನ್ನೇ ನೋಡಿ ‘ಓಹ್ ಗೂಳೂರಾ..!’ ಅಂತ ಒಂದು ಸಲ ನನ್ನನ್ನ ಆಪಾದಮಸ್ತಕ ನೋಡಿ ಒಂದು ಹುಸಿ ನಗೆಯನ್ನು ಬೀರಿಯೇ ಬೀರುತ್ತಾರೆ.
ಯಾಕೆಂದರೆ ಗೂಳೂರು, ಗಣೇಶನಿಗೆ ಹೆಸರುವಾಸಿ. ‘ಬಿಡು ಗುರೂ ನೀನು ಗೂಳೂರಿನವನು ಅಂತ ಬಿಡಿಸಿಹೇಳಬೇಕಾ’ ಅಂತ ನಾನೇ ಗಣೇಶ ಎನ್ನುವಂತೆ ಮುಖ ಮಾಡುತ್ತಾರೆ.
ಗೂಳೂರು ಗಣೇಶ ನ ಖದರ್ ಬೇರೆಯೇ. ಎಲ್ಲಾ ಕಡೆ ಗಣೇಶನ ಹಬ್ಬದ ದಿನ ಗಣೇಶ ಸ್ಥಾಪನೆ ಆದರೆ ಇಲ್ಲಿ ಗಣೇಶನ ಕೆಲಸ ಶುರುವಾಗುವುದೇ ಆ ಹಬ್ಬದ ದಿನ.
ಅದೂ ದೇಗುಲದ ಒಳಗೆ ಮೂರ್ತಿ ನಿರ್ಮಾಣ ಶುರು ಮಾಡುತ್ತಾರೆ. ಅದು ಎಷ್ಟು ಬೆಳೆಯುತ್ತಾ ಹೋಗುತ್ತೆ ಎಂದರೆ ದೇಗುಲದ ಬಾಗಿಲಿನಿಂದ ಹೊರಬರಲಾಗದಷ್ಟು. ಹಾಗಾಗಿ ಗಣೇಶನ ಕಿರೀಟವನ್ನು ಬೇರೆ ಮಾಡಿ ಕೂರಿಸುತ್ತಾರೆ. ಕಿರೀಟ ತೆಗೆದರಷ್ಟೇ ಆತ ಹೊರಬರಲು ಸಾಧ್ಯ.
ಈ ಊರಲ್ಲಿ ಗಣಪತಿ ಯಾಕೆ ಬಂದ ಎಂದು ಕೇಳಿದರೆ ಊರಲ್ಲಿಇರುವ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ಕಥೆ ಇದೆ. ಅದು ಇರಲಿ ಬಿಡಿ ಆದರೆ ‘ಬೆಂಗಳೂರು ಬಣ್ಣಕ್ಕೆ, ಗುಬ್ಬಿ ಸುಣ್ಣಕ್ಕೆ, ಗೂಳೂರು ಗಣೇಶನಿಗೆ’ ಹೆಸರುವಾಸಿ.
ಗಣೇಶನನ್ನ ನೀರಿಗೆ ಬಿಟ್ಟರೂ ಅವನ ಕಿರೀಟವನ್ನು ಮಾತ್ರ ಬಿಡುವುದಿಲ್ಲ. ಅದನ್ನ ಮೆರವಣಿಗೆಯಲ್ಲಿ ತಂದು ಮತ್ತೆ ದೇವಸ್ಥಾನದಲ್ಲಿ ಸ್ಥಾಪಿಸುತ್ತಾರೆ. ಮತ್ತೆ ಮುಂದಿನ ಹಬ್ಬದವರೆಗೆ ಕಿರೀಟಕ್ಕೆ ಪೂಜೆ.
ಯಾಕೆ ಈ ಊರಲ್ಲಿ ಗಣೇಶ ಅಷ್ಟೆತ್ತರ? ಅಂತ ಊರವರನ್ನೇ ಒಮ್ಮೆ ಕೇಳಿದ್ದೆ. ಅವರು ಸಿಂಪಲ್ಲಾಗಿ ಊರವರ ವಿಶ್ವಾಸ ಎಲ್ಲಾ ಸೇರಿದರೆ ಗಣೇಶ ಅಷ್ಟು ಎತ್ತರ ಆಗ್ತಾನಪ್ಪ ಅಂದರು.
‘ಓಹೋ ಅಪ್ಪಡಿ..’ ಅಂದುಕೊಂಡು ಸುಮ್ಮನಾದೆ.
ಅದಿರಲಿ ಪುಟ್ಟಣ್ಣ ಕಣಗಾಲ್ ಗೂ ಈ ಗೂಳೂರು ಗಣೇಶನಿಗೂ ಒಂದು ಕನೆಕ್ಷನ್ ಇದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ಪಡುವಾರಳ್ಳಿ ಪಾಂಡವರು’ ಸಿನೆಮಾದಲ್ಲಿ ‘ಈ ಗುಡೇಮಾರನಹಳ್ಳಿ ಗಿಣಿ ಗಮ್ಮತ್ತು ಆ ಗೂಳೂರು ಗಣೇಶನಿಗೂ ಗೊತ್ತಿಲ್ಲ’ ಅಂತ ಒಂದು ಡೈಲಾಗ್ ಬರುತ್ತೆ.
ಅದು ಬಂದದ್ದೇ ಬಂದದ್ದು. ನೀವು ನೋಡಬೇಕಿತ್ತು. ಊರವರೆಲ್ಲಾ ಗಾಡಿ ಕಟ್ಟಿಕೊಂಡು ಹಿಂಡು ಹಿಂಡಾಗಿ ಹೋಗಿ ಆ ಸಿನೆಮಾ ನೋಡಿದ್ದರು.
ಆ ಕಡೆ ಗುಡೇಮಾರನಹಳ್ಳಿಯವರೂ ಗಾಡಿ ಹತ್ತಿರಬೇಕು…!!