ಕಳೆದಸಂಚಿಕೆಯಿಂದ……….
‘ಸಮಾಜ ಸೇವೆ ಎಂಬುದು ನನಗೆ ಅತ್ಯಂತ ಪ್ರಿಯವಾದ ಕ್ಷೇತ್ರ’. ಇದು ಕೃಷ್ಣ ಅವರ ಮನದಾಳದ ಮಾತು. ಹೀಗಾಗಿ ಈ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ತಮ್ಮ ಕನಸಿನ ಯೋಜನೆಗಳನ್ನು ನನಸು ಮಾಡುತ್ತಿದ್ದಾರೆ. ಹಾದಿಯಲ್ಲಿ ತಮಗೆ ಎದುರಾದ ನಿಂದನೆ, ಸೋಲು ಮೊದಲಾದ ನಕಾರಾತ್ಮಕ ಅಭಿಪ್ರಾಯಗಳಿಗೆ ಅಂಜದೆ, ಸಕಾರಾತ್ಮಕ ಚಿಂತನೆಗಳಿಂದ ಹಿಡಿದು ಜನಪರ ಕೆಲಸ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ರೆಡ್ ಕ್ರಾಸ್ ಸಂಸ್ಥೆ ಸೇರಲು ಪ್ರೋತ್ಸಾಹಿಸಿದ ಮಾಜಿ ಮೇಯರ್ ಕೆ. ಎಂ. ನಂಜಪ್ಪ ಹಾಗೂ ಹಿರಿಯ ಸಹೋದರ ಡಬ್ಲ್ಯೂ, ಪಿ. ಶಿವಕುಮಾರ್ ಅವರನ್ನು ಕೃಷ್ಣ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಡಾ. ಕೃಷ್ಣರವರು ಸಮಾಜ ಸೇವೆ ಮಾಡಬೇಕೆಂಬ ಸದುದ್ದೇಶದಿಂದಲೇ ಮೊದಲಿಗೆ 1984ರಲ್ಲಿ ರೆಡ್ ಕ್ರಾಸ್ ಸಂಸ್ಥೆಗೆ ಸದಸ್ಯರಾಗಿ ನೋಂದಣಿ ಮಾಡಿಸಿದರು. ಮುಂದೆ 2001ರಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕಾರಿಣಿ ಸದಸ್ಯತ್ವಕ್ಕೆ ಆಯ್ಕೆಯಾದರು. ಕೆಲವೇ ದಿನಗಳಲ್ಲಿ ಅವರ ಕಾರ್ಯತತ್ಪರತೆ ಹಾಗೂ ದಕ್ಷ ಆಡಳಿತದ ಹಿನ್ನೆಲೆಯಲ್ಲಿ ಇದೇ ಸಂಸ್ಥೆಗೆ ಕೋಶಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 2006ರಲ್ಲಿ ರೆಡ್ ಕ್ರಾಸ್ ರಾಷ್ಟ್ರೀಯ ಕಾರ್ಯಕಾರಿಣಿಗೆ ಆಯ್ಕೆಯಾಗುವಷ್ಟರ ಮಟ್ಟಿಗೆ ಇವರ ಸೇವೆ ವಿಸ್ತಾರವಾಗುತ್ತದೆ. 2007ರಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹೀಗೆ ಹಂತಹಂತವಾಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ಹೊಂದುತ್ತಲೇ ಅನನ್ಯ ಸೇವೆಯನ್ನು ಸಲ್ಲಿಸಿದರು. ಇವರ ಆಡಳಿತಾತ್ಮಕವಾದ ನಿಪುಣತೆ, ಸಾವಿರಾರು ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಪಲ್ಸ್ ಪೋಲಿಯೋ ಹಾಗೂ ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮಗಳು ಹೀಗೆ ಸಂಸ್ಥೆಯ ಭಾಗವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿದ ಹಿನ್ನೆಲೆಯಲ್ಲಿ ಇವರ ಸೇವೆಯನ್ನು ಗುರುತಿಸಿ 2012ರಲ್ಲಿ ಮಾನವೀಯ ಸೇವೆಗಾಗಿ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿಯಾದ ‘ರಾಷ್ಟ್ರಪತಿಗಳ ಚಿನ್ನದ ಪದಕ’ ನೀಡಿ ಗೌರವಿಸಲಾಗಿದೆ.
ಮುಂದುವರೆಯುವುದು,………….