ಪಾರದರ್ಶಕ ವ್ಯಕ್ತಿತ್ವ
ಕಳೆದ ಸಂಚಿಕೆಯಿಂದ……..
ಆತ್ಮೀಯ ಸ್ನೇಹಿತರನ್ನು ಇವರು ಸುಲಭವಾಗಿ ಕಳೆದುಕೊಳ್ಳುವುದಿಲ್ಲ. ತಾವು ಉನ್ನತ ಸ್ಥಾನದಲ್ಲಿದ್ದರೂ ಗೆಳೆಯರೊಡನೆ ಸಹಜವಾಗಿ ನಡೆದುಕೊಳ್ಳುತ್ತಾರೆ.
ಡಾ. ಕೃಷ್ಣರವರಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳ ಸಮರ್ಪಕ ಸಮತೋಲನವಿದೆ. ಕ್ರಿಯಾಶೀಲತೆ, ಆದರ್ಶ, ಚಿಂತನೆ, ಶುದ್ಧ ಆಚಾರ, ಸಾಮಾಜಿಕ ಕಳಕಳಿ, ಪ್ರಾಮಾಣಿಕ ಮಾತು, ನಿಯಮಬದ್ಧ ಶಿಸ್ತು ಸದ್ಗುಣಗಳು ಇವರನ್ನು ಈ ಮಟ್ಟಕ್ಕೆ ಏರಿಸಿವೆ. ಕೃಷ್ಣರಂತಹ ಅನೇಕ ವ್ಯಕ್ತಿಗಳ ಅವಶ್ಯಕತೆ ಇಂದು ನಮ್ಮ ಭಾರತ ದೇಶಕ್ಕಿದೆ.
ಒಮ್ಮೆ ‘ಅಕ್ಕ’ ಸಂಸ್ಥೆ ಚಿಕಾಗೊದಲ್ಲಿ ಏರ್ಪಡಿಸಿದ್ದ ಕನ್ನಡ ಸಮ್ಮೇಳನಕ್ಕೆ ಡಾ. ಕೃಷ್ಣರವರು ತೆರಳಿದ್ದರು. ಅಲ್ಲಿಂದ ಕತಾರ್ ದೇಶದ ರಾಜಧಾನಿ ದೋಹದಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಅಲ್ಲಿಂದ ದುಬೈಗೆ ಹೋಗುವ ಸಂದರ್ಭ ಒದಗಿ ಬಂದಿತು. ದುಬೈಗೆ ಹತ್ತಿರದ ಶಾರ್ಜಾದಲ್ಲಿ ಹಿರಿಯ ಪತ್ರಕರ್ತ ಇ.ವಿ. ಸತ್ಯನಾರಾಯಣ ಅವರು ತಮ್ಮ ತಮ್ಮನ ಮನೆಗೆ ಸ್ನೇಹಿತರ ತಂಡದೊಡನೆ ಕೃಷ್ಣರವರನ್ನೂ ಕರೆದೊಯ್ದಿದ್ದರು. ಮಧ್ಯಾಹ್ನದ ಊಟ ಮುಗಿಸಿ ತಮ್ಮನ ಮನೆಯಿಂದ ವಾಪಸು ಹೊರಡುವಾಗ ಲೋಕಾರೂಢಿಯಂತೆ ತಮ್ಮ ಅತಿಥಿಗಳೆಲ್ಲರಿಗೂ ಉಡುಗೊರೆಯಾಗಿ ಚಿಕ್ಕ ವಾಚನ್ನು ನೀಡಿದರು. ಬೆಳಗಿನ ಜಾವ ಬೆಂಗಳೂರಿಗೆ ಬಂದಿಳಿದ ತಂಡವೆಲ್ಲವೂ ಪರಸ್ಪರ ಶುಭಾಶಯ
ತಿಳಿಸಿ ನಿರ್ಗಮಿಸುವಾಗ ಕೃಷ್ಣರವರು ‘ಸತ್ಯನಾರಾಯಣ ಅವರೇ ತಪ್ಪು ತಿಳಿಯಬೇಡಿ. ನಿಮ್ಮ ತಮ್ಮ ಅಲ್ಲಿ ನೀಡಿದ್ದ ವಾಚನ್ನು ನಿಮಗೆ ವಾಪಸ್ ಮಾಡುತ್ತಿದ್ದೇನೆ. ಅನ್ಯಥಾ ಭಾವಿಸದೆ ಇದನ್ನು ಬೇರೆ ಯಾರಿಗಾದರೂ ಅದರಲ್ಲೂ ವಿಶೇಷವಾಗಿ ಯಾವುದಾದರೂ ವಿದ್ಯಾರ್ಥಿಗೆ ಉಡುಗೊರೆಯಾಗಿ ನೀಡಿ’ ಎಂದು ಹೇಳಿ ವಿನಮ್ರವಾಗಿ ವಾಪಸ್ ನೀಡಿ ಸ್ನೇಹದ ನಗೆ ಬೀರಿ ಹೊರಟೇಬಿಟ್ಟರು. ಸ್ನೇಹಿತರ ವಲಯದಲ್ಲಿ ಕೃಷ್ಣರವರು ಅಜಾತ ಶತ್ರು.
ಶಿಕ್ಷಣ ದೇಗುಲದಲ್ಲಿ ಎಲ್ಲೂ ಒಂದು ಪೈಸೆಯೂ ಅಪವ್ಯಯ ಆಗಬಾರದು. ಪ್ರತಿಯೊಂದಕ್ಕೂ ಲೆಕ್ಕಚಾರವಿರಬೇಕು ಎನ್ನುವುದು ಇವರ ನಿಲುವು. ಇವರ ಗೌರವ ಸ್ಥಾನದ ಅರ್ಥಕ್ಕೆ ಸ್ವಲ್ಪವೂ ಲೋಪಬರದಂತೆ, ಕನ್ನಡಿಯಂತೆ ಇವರು ಕೆಲಸ ನಿರ್ವಹಿಸುತ್ತಿದ್ದಾರೆ. ಮಕ್ಕಳ ಹಣವನ್ನು ಮಕ್ಕಳಿಗೇ ಸದ್ವಿನಿಯೋಗ ಮಾಡಬೇಕು, ಪ್ರತಿಭೆಗಳು ಅರಳಬೇಕು ಎಂಬುದು ಇವರ ಅಭಿಲಾಷೆ. ವಿದ್ಯಾರ್ಥಿಗಳು ಎಂದರೆ ಅವರು ಓದಿದವರು ಎಂದು ಮಾತ್ರ ಅರ್ಥವಲ್ಲ, ‘ತಯಾರಾದವರು’ ಎಂದು ಅರ್ಥವಾಗುತ್ತದೆ ಎಂಬುದು ಇವರ ಉವಾಚ. ಆರ್ಥಿಕವಾಗಿ ಬಡ ಮಕ್ಕಳಿಗೆ ಫೀಜಿನಲ್ಲಿ ಸಾಕಷ್ಟು ರಿಯಾಯಿತಿ ನೀಡಿ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿರುವುದು ಇವರ ಹೃದಯವಂತಿಕೆಗೆ ಸಾಕ್ಷಿ.
ಅಂಧ ಹಾಗೂ ಇತರೆ ವಿಕಲಚೇತನ ಮಕ್ಕಳಿಗೆ ಶೇ. 50ರಷ್ಟು ರಿಯಾಯ್ತಿ ದರದಲ್ಲಿ ಪ್ರವೇಶಾವಕಾಶ ಏರ್ಪಡಿಸಿದ್ದಾರೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಇಂಥ ಹಲವರು ಉತ್ತಮ ಹುದ್ದೆಯಲ್ಲಿದ್ದಾರೆ. ತಮ್ಮ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಬೇರೆ ಬೇರೆ ರಾಮಕೃಷ್ಣಾಶ್ರಮಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಚಿಂತನ-ಮಂಥನಗಳಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡುವುದರ ಮೂಲಕ ಕೃಷ್ಣ ಅವರು ತಮ್ಮ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಪ್ರಗತಿಗೆ ನೈತಿಕತೆಯನ್ನು ತುಂಬಿದ್ದಾರೆ. ವಿದ್ಯಾದಾನ ಶ್ರೇಷ್ಠದಾನ ಎಂದು ಅರಿತಿರುವವರಲ್ಲಿ ಇವರು ಒಬ್ಬರು.
ಮುಂದುವರೆಯುವುದು……