ತುಮಕೂರು ಲೈವ್

12 ದೇವಾಲಯಗಳಿಂದ ಹೊರಡಲಿದೆ ಸಪ್ತಪದಿ ರಥ

Publicstory. In


Tumkur: ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾರ್ಯಕ್ರಮದಲ್ಲಿ ಪ್ರತಿ ನವ-ಜೋಡಿಗೆ ಅಗತ್ಯತೆಗನುಣವಾಗಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5000 ರೂ.ಗಳನ್ನು ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ 10000 ರೂ.ಗಳನ್ನು ಮತ್ತು ವಧುವಿಗೆ ಚಿನ್ನದ ತಾಳಿ, 2 ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ ಅಂದಾಜು 40,000 ರೂ.ಗಳಲ್ಲಿ) ಒಟ್ಟು 55,000 ರೂ.ಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ರಾಜ್ಯದ ಆಯ್ದ 12 ದೇವಾಲಯಗಳಿಂದ ಫೆ. 13 ರಂದು ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ಸಪ್ತಪದಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ, ಕರಪತ್ರಗಳು ಇರುತ್ತವೆ. ಈ ರಥ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಈ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ ಎಂದರು.

ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಲು ಹಾಗೂ ಬಡವರಿಗೆ ನೆರವಾಗುವ ದೃಷ್ಠಿಯಿಂದ ಸರ್ಕಾರ ಜಾರಿಗೊಳಿಸಿರುವ ಈ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯದ ಜತೆ ಹೆಚ್ಚಿನ ಸಂಖ್ಯೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Comment here