ರಜನಿ ಎಂ
ನನಗನಿಸುತ್ತದೆ
ನಿನ್ನಷ್ಟು ತಾಳ್ಮೆ ನನಗಿಲ್ಲ
ನಿನ್ನ ತರಹವೇ ಇದೇನೇ
ಎಂದು ನೂರು ಜನ ಹೇಳಿದರೂ
ನಿನ್ನಷ್ಟು ಸುಂದರ ಇಲ್ಲ..
ನೀನು ನಿನ್ನ ಮಕ್ಕಳಿಗೆ ಕೊಟ್ಟಷ್ಟು
ನಾನು….ಊಹೂ
ಕೊಡಲು ಸಾಧ್ಯವೇ ಇಲ್ಲ.
ನಿನಗೆ ನೀನೇ ಸಾಟಿ..
ನನ್ನ ಕಷ್ಟಗಳೆಲ್ಲ ನಿನ್ನ
ಅನುಭವದ ಮೂಸೆಯಲ್ಲಿ
… ಬರೇ.. ಬಿಟ್ಟ ಸ್ಥಳ ತುಂಬಿರಿ…
ನೀನು ಸಾದಾ ಕಾಟನ್ ಸೀರೆಯಲ್ಲಿ
ನಕ್ಕ ನಿಷ್ಕಲ್ಮಶ ನಗು…
ಇನ್ನೂ ನನ್ನ ಮುಖದಲ್ಲಿ ಉಕ್ಕಿಲ್ಲ..
ನಿನ್ನ ನಾಳೆಯ
ತಿಂಡಿ ತಯಾರಿ..ನಾನು
ಪರೀಕ್ಷೆಗೂ ಅಷ್ಟು ಶ್ರದ್ಧೆ ಇಲ್ಲ..
ಅರಮನೆಯೇ ಎದುರಿದ್ದರೂ
ಮಕ್ಕಳ ಹಿತಾಸಕ್ತಿಯೆ
ನಿನಗೆ ಹೆಚ್ಚು..
ಮನೆಯವರ ಕೋಪ
ತಾಪ ,ಹುಚ್ಚಾಟ..
ಮನಸ್ತಾಪ ಎಲ್ಲ …ಶಾಲೆಯಿಂದ
ಬಂದ ಕ್ಷಣ … ಎಲ್ಲಿಯೋ ಬಚ್ಚಿಡುತ್ತಿದ್ದೆ…
ಬಡತನವನ್ನೂ ಸೇರಿಸಿ .
ಬರೇ ಬೇಳೆ ಸಾರು ..
ನಿನ್ನಂತೆ ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರೂ
ಓಹ್ …ನಿನ್ನ ಕೈ ರುಚಿ ಇಲ್ಲ.
ಆಗುತ್ತೆ ಆಗೆ ಆಗುತ್ತೇ
ಮಾಡುತ್ತೀಯ …ಇದೆ ನಿನ್ನ ಮಾತು … ನೀನು
ಕೌನ್ಸೆಲಿಂಗ್ ಕಲೆ ಎಲ್ಲಿ ಕಲಿತಿದ್ದೆ ??
ಬೆಟ್ಟ ಕಳಚಿ ಬಿದ್ದರೂ
ನೀನು ಅಂಗೈಲೀ …ಹಿಡಿದು
ಬಿಡುತ್ತಿದ್ದೆ…..
ಕಷ್ಟದಲ್ಲೂ
ಸುಖದಲ್ಲೂ ಸ್ಥಿತ ಪ್ರಜ್ಞೆ..
ದೋಸೆ ಹುಯ್ದರೂ
ಅಲ್ಲಿ ನಿನ್ನ ಅತ್ಮ, ಕಲೆ,ಶ್ರದ್ಧೆ,ಇತ್ತು
ಅಂದರೆ.. ಇನ್ನು…ನಿನ್ನ ಮಗಳನ್ನು
ಹೇಗೆ ನೀನು ಸಿದ್ಧ ಪಡಿಸಿರಬೇಕು ??
ಅದಕ್ಕೆ ನ್ಯಾಯ
ಒದಗಿಸುವ ಜವಾಬ್ದಾರಿ
ನನ್ನ ಮೇಲಿದೆ … ಅಮ್ಮಾ.