ಪಾವಗಡ: ರಕ್ತ ಹರಿಸಿ ಸ್ವಾತಂತ್ರ್ಯ ತಂದು ಕೊಟ್ಟ ಹೋರಾಟಗಾರರನ್ನು ಪ್ರತಿಯೊಬ್ಬರು ಸ್ಮರಿಸಿ ಗೌರವಿಸಬೇಕು ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಮಹನೀಯರು ಪ್ರಾಣ ಬಲಿದಾನ ಮಾಡಿದ್ದಾರೆ. ಇಲ್ಲವಾದಲ್ಲಿ ಆಂಗ್ಲರ ಗುಲಾಮರಾಗಿ ಬದುಕಬೇಕಿತ್ತು. ಅಂತಹ ಮಹನೀಯರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಅಭಿವೃದ್ಧಿಯತ್ತ ಸಾಗುತ್ತಿದೆ. ತಾಲ್ಲೂಕಿನ ಜ್ವಲಂತ ಸಮಸ್ಯೆಯಾದ ನೀರಿನ ಸಮಸ್ಯೆ ಶೀಘ್ರ ಬಗೆಹರಿಯಲಿದೆ. ಭದ್ರಾ ಮೇಲ್ದಂಡೆ, ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ತಹಶೀಲ್ದಾರ್ ಕೆ.ಆರ್.ನಾಗರಾಜು, ಭಾರತೀಯರು ಎಲ್ಲರೂ ಒಂದೆ ಎಂಬ ಭಾವನೆ ಪ್ರತಿಯೊಬ್ಬರು ಹೊಂದಬೇಕು. ಜಾತಿ, ಧರ್ಮ, ಭಾಷೆ, ಪ್ರದೇಶದ ಎಲ್ಲೆ ಮೀರಿ ಎಲ್ಲರೂ ಸಹೋದರರಂತೆ ಸಹಬಾಳ್ವೆ ನಡೆಸಬೇಕು ಎಂದರು.
ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಬೇಕು. ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಲು ಒಬ್ಬರಿಗೊಬ್ಬರು ನೆರವಾಗಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಪುರಸಭೆ ಮುಖ್ಯಾಧಿಕಾರಿ ಅರ್ಚನಾ, ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ, ಉಪಾದ್ಯಕ್ಷೆ ಸುಧಾಲಕ್ಷ್ಮಿ ಪ್ರಮೋದ್, ಸದಸ್ಯ ಎಂ.ಎ.ಜಿ.ಇಮ್ರಾನ್, ವೇಲು, ನಾಗಬೂಷಣರೆಡ್ಡಿ, ರೈತ ಮುಖಂಡರಾದ ನರಸಿಂಹರೆಡ್ಡಿ, ಪುಜಾರಪ್ಪ, ಕೃಷ್ಣಾರಾವ್, ಆರ್.ಟಿ.ಖಾನ್ ಉಪಸ್ಥಿತರಿದ್ದರು.