ತುರುವೇಕೆರೆ: ಪಟ್ಟಣದ ತಾಲ್ಲೂಕು ಕಚೇರಿಗೆ ಕಂದಾಯ ಸಚಿವ ಆರ್.ಕೃಷ್ಣ ಭೈರೇಗೌಡ ಶುಕ್ರವಾರ ದಿಢೀರ್ ಭೇಟಿ ನೀಡಿದ ವೇಳೆ, ಸಾರ್ವಜನಿಕರು ಅಧಿಕಾರಿಗಳ ಮೇಲೆ ದೂರಿನ ಸುರಿಮಳೆಗರೆದರು.
.ಈ ವೇಳೆ ತಾಲ್ಲೂಕಿನ ಶ್ರೀರಾಂಪುರದ ರೈತ ಗಂಗಯ್ಯ ನಕಾಶೆಯಂತೆ ದಾರಿ ಬಿಡಿಸಿಕೊಡಬೇಕೆಂದು ಅರ್ಜಿ ನೀಡಿದ್ದೆ ಸಮಸ್ಯೆ ಬಗೆಹರಿದಿಲ್ಲ ಎಂದು ಹೇಳಿದ್ದಕ್ಕೆ ಅವರ ಕಡತ ತರಿಸಿಕೊಂಡ ಸಚಿವರು ಅರ್ಜಿ ನೀಡಿ ಎರಡುವಾರವಾದರೂ ಇದಕ್ಕೆ ಏನೂ ಕ್ರಮ ತೆಗೆದುಕೊಂಡಿಲ್ಲ ಏಕೆನಿಮ್ಮಗೆ ಅಕ್ಕ, ತಮ್ಮ, ಅಪ್ಪ, ಅಣ್ಣ ಯಾರೂ ಇಲ್ಲವೇ? ಜನರ ಕಷ್ಟ ಗೊತ್ತಾಗೋದಿಲ್ಲವೇ? ಅವರನ್ನು ಎಷ್ಟು ದಿನ ಕಚೇರಿಗೆ ಅಲೆದಾಡಿಸುತ್ತೀರಿ? ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಹಾಗು ಗ್ರೇಟ್-2 ತಹಶೀಲ್ದಾರ್ ಸುಮತಿ ಅವರನ್ನು ತರಾಟೆಗೆ ತೆಗೆದುಕೊಂಡು ರೈತರ, ಸಾರ್ವಜನಿಕರ ಅರ್ಜಿಗಳಿಗೆ ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ತಾಕೀತು ಮಾಡಿದರು.
‘ನಂತರ ಪತ್ರಕರ್ತರೊಂದಿಗೆ ಮಾತನಾಡಿ, ತುರುವೇಕೆರೆ ಕಂದಾಯ ಇಲಾಖೆಯ ಆಡಳಿತದಲ್ಲಿ ಚುರುಕು ಮೂಡಿಸಲು ಹಾಗೂ ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ವಿಳಂಬಗಳನ್ನು ತಪ್ಪಿಸಲು ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿದ್ದೆನೆ.
ಇದರಿಂದಾಗಿ ಜನರ ಸಮಸ್ಯೆಗಳು ಏನೆಂಬುದು ಅರಿವಾಗಿದೆ. ತಾಲ್ಲೂಕು ಕಚೇರಿಯಲ್ಲಿ ರೈತರ ಸಮಸ್ಯೆಗಳು ಸಾಕಷ್ಟಿದ್ದು ಅವುಗಳನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಇದರಿಂದ ಜನರಿಗೆ ತೊಂದರೆಗಳಾಗುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಂತವುಗಳನ್ನು ತಪ್ಪಿಸಲು ಹಾಗು ಆಡಳಿತದಲ್ಲಿ ಬಿಗಿಗೊಳಿಸಲು ಇಂತಹ ಬೇಟೆಗಳು ಅನಿವಾರ್ಯವಾಗಿದೆ.
ಇಲ್ಲಿ ಒಬ್ಬೊಬ್ಬರಿಗೆ ನ್ಯಾಯ ಕೊಡಿಸುವುದು ಮುಖ್ಯ ಅಲ್ಲ. ಎಲ್ಲರ ಕೆಲಸ ಕಾರ್ಯಗಳು ಆಗಬೇಕು. ಒಟ್ಟಾರೆ ಇಡೀ ಕಂದಾಯ ಇಲಾಖೆಯ ಆಡಳಿತ ವ್ಯವಸ್ಥೆ ಸರಿಯಾಗಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕು ಅಷ್ಟೇ ಎಂದರು.’
‘ತಾಲ್ಲೂಕು ಕಚೇರಿಯಲ್ಲಿ ಬಲಾಡ್ಯರಿಗೆ ಹಾಗೂ ಹಣವಂತರಿಗೆ ಬಗರ್ ಹುಕುಂ ಜಮೀನುಗಳನ್ನು ಅಧಿಕಾರಿಗಳು ಮಂಜೂರು ಮಾಡಿಕೊಟ್ಟಿದ್ದಾರೆ ಹಾಗೂ ಕಳೆದ 15-20 ವರ್ಷದಿಂದ ಸಾಗುವಳಿ ಮಾಡುವ ರೈತರಿಗೆ ಮಂಜೂರು ಚೀಟಿ ನೀಡದೇ ಅಧಿಕಾರಿಗಳು ಸತಾಯಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಬಗರ್ ಹುಕುಂ ಅರ್ಜಿಗಳು ಪೆಂಡಿಂಗ್ ಇರುವುದನ್ನು ಬೇಗ ವಿಲೇವಾರಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ, ತಾಲ್ಲೂಕು ಶಿರಸ್ಥೆದಾರ್ ಸುನಿಲ್ ಕುಮಾರ್, ತಾಲ್ಲೂಕು ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜ್ , ಮುಖಂಡರಾದ ಟಿ.ಎನ್.ಶಿವರಾಜು ಮತ್ತು ರೈತರು ಉಪಸ್ಥಿತರಿದ್ದರು.