ಕಳೆದಸಂಚಿಕೆಯಿಂದ…….
ಡಾ. ಕೃಷ್ಣರವರ ತಂದೆ ಅಪ್ಪಟ ಗಾಂಧೀವಾದಿಗಳು. ಗಾಂಧೀಜಿಯವರ ತತ್ವ ಆದರ್ಶಗಳ ಪ್ರೇರಣೆ ಪಡೆದ ಪುಟ್ಟಯ್ಯನವರಿಗೆ ಸಮಾಜದ ಕಾರ್ಯಗಳಲ್ಲಿ ತುಂಬು ಆಸಕ್ತಿ. ಒಟ್ಟಾರೆ ಸಮಾಜದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ನಿಸ್ವಾರ್ಥ ಮನಸ್ಸಿನಿಂದ 1983ರಲ್ಲಿ ‘ವೂಡೇ ಪ್ರತಿಷ್ಠಾನ’ವನ್ನು ಪುಟ್ಟಯ್ಯನವರು ಸ್ಥಾಪಿಸಿದರು. ಪುಟ್ಟಯ್ಯನವರು ವಿದ್ಯಾರ್ಥಿಯಾಗಿದ್ದಾಗ ತಾವು ಸರ್ಕಾರದಿಂದ ಪಡೆದ ಸ್ಕಾಲರ್‌ಶಿಪ್‌ನ ಉದ್ದೇಶವನ್ನು ಗ್ರಹಿಸಿ ತಾವೂ ಅದೇ ರೀತಿಯಲ್ಲಿ ಹಲವಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬೇಕೆಂಬ ಹಂಬಲದಿಂದ ‘ವೂಡೇ ಪ್ರತಿಷ್ಠಾನ’ ಸ್ಥಾಪಿಸಿ, ಪ್ರತಿವರ್ಷ ನೂರಾರು ವೃತ್ತಿಶಿಕ್ಷಣ ಪಡೆಯುವ ಪ್ರತಿಭಾವಂತ ಆಕಾಂಕ್ಷಿಗಳಿಗೆ ವಿದ್ಯಾರ್ಥಿವೇತನ ನೀಡಲು ಪ್ರಾರಂಭಿಸಿದರು. ಆಗ ಕೃಷ್ಣರವರು ಇನ್ನೂ ವಿದ್ಯಾರ್ಥಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡುವುದರ ಜೊತೆಜೊತೆಗೆ ಪ್ರತಿಷ್ಠಾನದ ಮೂಲಕ ಆರೋಗ್ಯ ಸೇವೆ ಒದಗಿಸುವ ಕೆಲಸವನ್ನೂ ಮಾಡಿದರು. ಹಳ್ಳಿಹಳ್ಳಿಗಳಲ್ಲಿರುವ ಆರ್ಥಿಕವಾಗಿ ದುರ್ಬಲರಾದ ಮಹಿಳೆಯರನ್ನು ಗುರುತಿಸಿ ಎಂ.ಒ. ಮೂಲಕ ಅವರಿಗೆ ಪ್ರತಿ ತಿಂಗಳು ಹಣ ಕಳಿಸುವ ವ್ಯವಸ್ಥೆಯನ್ನು ಪ್ರತಿಷ್ಠಾನ ಮಾಡುತ್ತಾ ಬಂದಿದೆ.
ಜನ ಸಮುದಾಯದ ಹಿತೈಷಿ ಸಂಸ್ಥೆಗಳಾದ ಆಚಾರ್ಯ ವಿನೋಬಾಭಾವೆ ಸ್ಥಾಪಿತ ವಿಶ್ವನೀಡಂ ಟ್ರಸ್ಟ್, ಸಂತ ಜಾನ್ ಆಂಬುಲೆನ್ಸ್ ಸಂಸ್ಥೆ ಮುಂತಾದವುಗಳ ಒಡನಾಟ ಮತ್ತು ಕಾರ್ಯಭಾರಗಳು ಏನಿದ್ದರೂ, ಎಷ್ಟಿದ್ದರೂ, ಹುಟ್ಟಿದೂರು
ಮತ್ತು ಮನೆತನಗಳ ಸಂಸ್ಮರಣೆ ಮತ್ತು ಋಣ ಪಾವತಿಗಳ ಸದಾಶಯದಿಂದ ವೂಡೇ ಪ್ರತಿಷ್ಠಾನ ಇಂದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಸಂಸ್ಥಾಪಕ ಟ್ರಸ್ಟಿಯಾಗಿ ಕೃಷ್ಣರವರು ಕರ್ತವ್ಯ ನಿರ್ವಹಿಸುವಲ್ಲಿ ಇವರ ಅರ್ಪಣಾ ಮನೋಭಾವ ಅಮೋಘವಾದುದು.
ಹಾಗೂ ವೂಡೇ ಪ್ರತಿಷ್ಠಾನ ಸರ್ವೋದಯ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಸೇವಾಮನೋಭಾವದ ಹಿರಿಯರಿಗೆ ವೂಡೇ ಪ್ರತಿಷ್ಠಾನ ಪ್ರಶಸ್ತಿಗಳನ್ನು ನೀಡುವ ಗುರುತರವಾದ ಜವಾಬ್ದಾರಿಯನ್ನು ನೆರವೇರಿಸುತ್ತಾ ಬಂದಿದೆ. ಜೊತೆಗೆ ಸಮಾಜಕ್ಕೆ ಪ್ರಯೋಜನಕಾರಿಯಾಗಿ ಬದುಕಿ ಬಾಳಿದವರ ತತ್ವ ಆದರ್ಶಗಳು, ಮಾನವೀಯ ಮೌಲ್ಯಗಳು, ಸಾಮಾಜಿಕ ಪ್ರಗತಿಯ ಜವಾಬ್ದಾರಿಗಳು, ರಾಷ್ಟ್ರಪ್ರೇಮದ ಆಸಕ್ತಿಗಳು ಹೀಗೆ ಬಹುಮುಖಿಯಾದ ಅಂಶಗಳನ್ನು ಕುರಿತ ಅನೇಕ ಉಪನ್ಯಾಸಗಳನ್ನು ಏರ್ಪಡಿಸುವುದರೊಂದಿಗೆ ಅವರನ್ನು ಕುರಿತ ಪುಸ್ತಕಗಳನ್ನೂ ಪ್ರಕಟಿಸುತ್ತಿದೆ.
ಮುಂದುವರೆಯುತ್ತದೆ…….