ಪುಸ್ತಕ ಬಿಡುಗಡೆ

ನಿನೊಲಿದ ಬದುಕು ಕೃತಿ ಬಿಡುಗಡೆ

ನಾಳೆ ತುಮಕೂರಿನಲ್ಲಿ ನಿನೊಲಿದ ಬದುಕು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸ್ವಪ್ನ ಬುಕ್ ಹೌಸ್ ಇವರ ಸಹಯೋಗದಲ್ಲಿ ಡಾ. ಸಿ ಸೋಮಶೇಖರ್ ಅವರ ಅಭಿಮಾನಿ ಬಳಗ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಕರ್ನಾಟಕ ಸರ್ಕಾರದ ಹಿರಿಯ ಐ.ಎ.ಎಸ್. ಅಧಿಕಾರಿಯಾಗಿ ನಿವೃತ್ತರಾಗಿರುವ ಸಿ.ಸೋಮಶೇಖರ ಅವರ ವ್ಯಕ್ತಿತ್ವ ಬಹುಮುಖ ಹಾಗೂ ಅತ್ಯಂತ ಸೃಜನಶೀಲವಾದದ್ದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿನ ಕುಟುಂಬದಲ್ಲಿ ಜೆ.ವಿ.ಚಿಕ್ಕವೀರಪ್ಪ ಮತ್ತು ನಂಜಮ್ಮನವರ ಸುಪುತ್ರರಾಗಿ 09-08-1954ರಲ್ಲಿ ಜನಿಸಿದ ಸಿ.ಸೋಮಶೇಖರ ಅವರು ಬಾಲ್ಯದಿಂದಲೇ ಶರಣ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ವಿದ್ಯಾರ್ಥಿ ದೆಸೆಯಿಂದಲೇ ಶೈಕ್ಷಣಿಕ ಪ್ರತಿಭೆಯ ಜೊತೆಗೆ ಉತ್ತಮ ವಾಗ್ಮಿಯಾಗಿ ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಮುಂತಾದ ಸಾಹಿತ್ಯಕ ಸ್ಪರ್ಧಾ ಚಟುವಟಿಕೆಗಳಲ್ಲಿ ನೂರಾರು ಪ್ರಶಸ್ತಿ, ಬಹುಮಾನಗಳನ್ನು ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಕಾಂ. ಪದವಿ ಪಡೆದು ಮೊದಲು ಬೆಂಗಳೂರಿನ ಕೆ.ಎಲ್.ಇ. ಕಾಲೇಜಿನಲ್ಲಿ ವಾಣಿಜ್ಯ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದವರು, ತದನಂತರ ರಾಜ್ಯ ಸರ್ಕಾರದಲ್ಲಿ 1982ರಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಆಯ್ಕೆಯಾಗಿ ಪ್ರಮುಖ ಇಲಾಖೆಯಲ್ಲಿ ದಕ್ಷತೆ ಹಾಗೂ ಮಾನವೀಯ ಸಂವೇದನೆಯೊಂದಿಗೆ ಕಾರ್ಯ ನಿರ್ವಹಿಸಿದವರು. ಭಾರತೀಯ ಲೋಕಸೇವಾ ಆಯೋಗದಿಂದ ಕೇಂದ್ರ ಪ್ರಥಮ ದರ್ಜೆ ಸೇವೆಗೆ ಆಯ್ಕೆಯಾಗಿದ್ದರೂ ನಾಡು ನುಡಿ ಮೇಲಿನ ಅಭಿಮಾನದಿಂದ ಅವರು ರಾಜ್ಯಸೇವೆಯನ್ನೇ ಆಯ್ಕೆ ಮಾಡಿಕೊಂಡರು.

ರಾಜ್ಯ ಸರ್ಕಾರದಿಂದ ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ, ಅಬಕಾರಿ ಇಲಾಖೆಗಳಂತಹ ಹಲವಾರು ಪ್ರಮುಖ ಇಲಾಖೆಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಶ್ರೀಯುತರಿಗೆ ತುಮಕೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅವಧಿ ಹೆಚ್ಚಿನ ಜನಮನ್ನಣೆಯನ್ನು ತಂದುಕೊಟ್ಟಿತು. ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿ 2014 ಜೂನ್‌ನಲ್ಲಿ ನಿವೃತ್ತರಾದ ಡಾ. ಸಿ.ಸೋಮಶೇಖರ ಅವರು ಇದೀಗ ಸಾರ್ವಜನಿಕ ಬದುಕಿನಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಬಾಲ್ಯದಿಂದಲೂ ವಚನಾಧ್ಯಯನ ಅವರ ಆದ್ಯತೆಯ ವಿಷಯ, ಡಾ. ಎಚ್ಚೆಸ್ಕೆ ಅವರು ಹೇಳಿರುವಂತೆ ತತ್ವದಲ್ಲಿ ಅದ್ದಿದ ಮನಸ್ಸು”. ”ಸೋಮಶೇಖರ ಅವರದು ಬಸವ

ರಾಜ್ಯದ ಶರಣ ಸಾಹಿತ್ಯ ಪ್ರಸಾರದ ಪ್ರಧಾನ ಸಂಸ್ಥೆಗಳಲ್ಲಿ ಒಂದಾದ ಬಸವ ವೇದಿಕೆಯನ್ನು ಸಮಾನ ಮನಸ್ಕರೊಂದಿಗೆ 1991ರಲ್ಲಿ ಸ್ಥಾಪನೆ ಮಾಡಿ ಈ ಸಂಸ್ಥೆಯ ವತಿಯಿಂದ ಪ್ರತಿಷ್ಠಿತ ‘ಬಸವಶ್ರೀ’ ಮತ್ತು ‘ವಚನಸಾಹಿತ್ಯಶ್ರೀ’ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿರುವ ಡಾ. ಸಿ.ಸೋಮಶೇಖರ ಅವರು ತಮ್ಮ ನಿವೃತ್ತಿಯ ನಂತರ 2015ರಲ್ಲಿ ‘ಡಾ. ಸಿ.ಸೋಮಶೇಖರ-ಶ್ರೀಮತಿ ಎನ್ .ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ’ವನ್ನು ಸ್ಥಾಪಿಸಿ ಈ ಎರಡೂ ಸಂಸ್ಥೆಗಳ ಅಧ್ಯಕ್ಷರಾಗಿದ್ದು ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷವಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಬಾಲ್ಯದಿಂದಲೂ ವಚನ ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿಯೊಂದಿಗೆ ಅವರು ನಡೆಸಿದ ತಳಸ್ಪರ್ಶಿ ಅಧ್ಯಯನದ ಫಲವಾಗಿ ಅವರು ರಚಿಸಿದ ‘ವಚನಗಳಲ್ಲಿ ಸಾಮಾಜಿಕ ಚಿಂತನೆ’ ಎಂಬ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾನಿಲಯವು ಡಿ.ಲಿಟ್ ನೀಡಿ ಗೌರವಿಸಿದೆ. ಶ್ರೀಯುತರಿಗೆ ಅನೇಕ ಗೌರವಾನ್ವಿತವಾದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಅರ್ಹವಾಗಿಯೇ ಸಂದಾಯವಾಗಿವೆ.

ಒಬ್ಬ ಅಪರೂಪದ ವಾಗ್ಮಿಗಳಾಗಿ ವಿವಿಧ ವಿಷಯಗಳ ಬಗ್ಗೆ ಅನೇಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಅತ್ಯಂತ ವಿಚಾರಪೂರ್ವಕ ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಜನಪ್ರಿಯ ಡಾ. ಸಿ.ಸೋಮಶೇಖರ ಅವರು “ಎನಗಿಂತ ಕಿರಿಯರಿಲ್ಲ” ಎನ್ನುವ ಶರಣರ ಸಂದೇಶಕ್ಕೆ ತಕ್ಕಂತೆ ತನ್ನ ಬದುಕನ್ನು ರೂಪಿಸಿಕೊಂಡಿರುವವರು.

ನಿವೃತ್ತಿಯ ನಂತರ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕರ್ನಾಟಕ ಗಡಿಭಾಗದಲ್ಲಿ ವಿಶ್ವತವಾಗಿ ಸಂಚಾರ ಮಾಡಿ ಕನ್ನಡ ಅಸ್ಮಿತೆಯನ್ನು ಸಂರಕ್ಷಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಇವರ ಬದುಕು ಒಂದು ರೀತಿಯಲ್ಲಿ ಹೋರಾಟದ ಬದುಕು, ಸ್ನೇಹ, ಪ್ರೀತಿ, ದಯೆ, ಮಾನವೀಯ ಅನುಕಂಪಗಳಂತಹ ಜೀವನ ಮೌಲ್ಯಗಳನ್ನು ತಮ್ಮ ಆಡಳಿತ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಂಡು ಬಂದಿರುವ ಇವರು ಒಬ್ಬ ಅಜಾತಶತ್ರು ಅವರ ಆತ್ಮಕಥನ “ನೀನೊಲಿದ ಬದುಕು” ಅವರ ಬದುಕಿನ ಪಯಣದ ಒಂದು ವಿಶಿಷ್ಟ ಕಥಾನಕವಾಗಿದೆ.

ಪುಸ್ತಕ ಬಿಡುಗಡೆಯ ಕಾರ್ಯಕ್ರಮವು ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯ ಸಾನಿದ್ಯದಲ್ಲಿ, ಮಾನ್ಯ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ ಅವರ ಅಧ್ಯಕ್ಷತೆಯಲ್ಲಿ ಡಾ ವೈ ಎಸ್ ಪಾಟೀಲ್, ಭಾ.ಆ.ಸೇ ಉದ್ಘಟಿಸಲಿದ್ದಾರೆ, ಡಾ. ದೊಡ್ಡರಂಗೇಗೌಡ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿ ಕುರಿತು ಪರಿಚಯವನ್ನು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅವರು ಮಾಡಲಿದ್ದಾರೆ. ಕೆ ಎಸ್ ಸಿದ್ದಲಿಂಗಪ್ಪ,ಡಾ. ಎಂ ವೆಂಕಟೇಶ್ವರಲು, ಡಾ ಕೆ ವಿದ್ಯಾಕುಮಾರಿ ಭಾ,ಆ,ಸೇ ತುಮಕೂರು ಇವರು ಉಪಸ್ಥಿತಲಿರಲಿದ್ದಾರೆ.

Comment here