ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರಕ್ಕೆ ಸಮೀಪದ ಇಂದಿನ ಆಂಧ್ರಪ್ರದೇಶಕ್ಕೆ ಸೇರಿದ ‘ವೂಡೇ’ ಗ್ರಾಮ, ಕೃಷ್ಣರವರ ಪೂರ್ವಿಕರು ಹುಟ್ಟಿದ ಊರು. ವೂಡೇದ ಹನುಮಂತಪ್ಪನವರು ವೂಡೇ ಪಿ. ಕೃಷ್ಣರವರ ಮುತ್ತಾತಂದಿರು. ಇಂದು ಬೇಚರಕ್ ಗ್ರಾಮವಾಗಿರುವ ವೂಡೇದಿಂದ ಕ್ರಿ.ಶ. 1800ರಷ್ಟೊತ್ತಿಗೆ ಕಾರಣಾಂತರಗಳಿಂದ ಹೊರಟು ಬಂದು ಬೆಂಗಳೂರು ನಗರದಲ್ಲಿ ನೆಲೆಸಿ ಬೇರೆ ಬೇರೆ ವ್ಯಾಪಾರದಲ್ಲಿ ತೊಡಗಿ ನಂತರ ಮ್ಯಾಂಗನೀಸ್ ಗಣಿಯ ಉದ್ಯಮ ನಡೆಸಿದರು.
ಅವರು ವ್ಯಾಪಾರದಂತೆ ಸಾಹಿತ್ಯದಲ್ಲೂ ಆಸಕ್ತರು. ಅವರು ಗಮಕ ಕಲೆಯಲ್ಲಿ ಪಾಂಡಿತ್ಯವನ್ನು ಪಡೆದವರು. “ಭಾರತವಾಚನ ಪ್ರವೀಣ’ ಎಂದು ಹೆಸರಾದವರು. ಇವರ ಪುತ್ರ ಡಬ್ಲ್ಯೂ. ಹೆಚ್ .ಹನುಮಂತಪ್ಪ (ಸೀನಿಯರ್) ರವರ ಸಾಧನೆ ಅಮೋಘವಾದದ್ದು. ಬೆಂಗಳೂರಿನ ಲಂಡನ್ ಮಿಷನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಇಂಗ್ಲಿಷ್ ಮತ್ತು ಮಾತೃಭಾಷೆಗಳೆರಡರಲ್ಲೂ ಏಕಕಾಲಕ್ಕೆ ಪಾಂಡಿತ್ಯವನ್ನು ಸಾಧಿಸಿದವರು.
ಅಂದಿನ ಪ್ರತಿಷ್ಠಿತ ಸಿವಿಲ್ ಇಂಜಿನಿಯರಿಂಗ್ ಕಂಟ್ರಾಕ್ಟರ್‌ಗಳಲ್ಲಿ ಒಬ್ಬರಾದ ಇವರು ಅಂದು ಕಟ್ಟಿದ ಅಣೆಕಟ್ಟು, ಕೆರೆ, ಸರ್ಕಾರಿ ಕಟ್ಟಡಗಳು ಇಂದಿಗೂ ಅವರ ಕಾರ್ಯಕ್ಷಮತೆಯ ಪ್ರತೀಕವಾಗಿ ನಮ್ಮ ಮುಂದಿವೆ. ಆಗಿನ ‘ಮೈಸೂರು ಕಾಂಗ್ರೆಸ್’ ಸಂಸ್ಥಾಪಕರಲ್ಲಿ ಇವರು ಮೊದಲಿಗರು. ಬ್ರಹ್ಮಸಮಾಜ ಸ್ಥಾಪಕ ರಾಜಾ ರಾಮ್‌ಮೋಹನ್‌ರಾಯ್‌ರವರ ಸಿದ್ಧಾಂತಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಬೆಳೆದವರು.
ಬೆಂಗಳೂರು ನಗರದ ಮುನಿಸಿಪಲ್ ಕೌನ್ಸಿಲರ್ ಆಗಿ 1920 ರಿಂದ 1956ರವರೆಗೂ ನಿರಂತರ 36 ವರ್ಷಗಳ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು. 1940-41ರಲ್ಲಿ ಬೆಂಗಳೂರು ನಗರ ಮುನಿಸಿಪಲ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದು. ಇವರ ಯೋಜನೆ ಹಾಗೂ ಯೋಚನೆಗಳೆಲ್ಲವೂ ಅತ್ಯಂತ ಎತ್ತರದಲ್ಲಿರುತ್ತಿದ್ದವು.
ಡಬ್ಲ್ಯೂ ಹೆಚ್ ಹನುಮಂತಪ್ಪನವರು ರಾಜಾ ರಾಮ್ ಮೋಹನ್ ರಾಯ್ ಅವರ ಅಭಿಮಾನಿ ಯಾದ್ದರಿಂದ ತಾವು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ರಸ್ತೆಯ ರಾಜಾ ರಾಮ್ ಮೋಹನ್ ರಾಯ್ ಬಡಾವಣೆಯಲ್ಲಿ ಒಂದು ರಾಜಾರಾಮ್ ಮೋಹನ್ ರಾಯ್ ಸ್ಮಾರಕ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಗೆ ಕಾರಣರಾದರು.
ಮುಂದುವರೆಯುವುದು…….