ಅಲೆಮಾರಿಗಳ ಮೂಲಭೂತ ಸೌಕರ್ಯ ಮತ್ತು ವಿಶ್ವಾಸ ವೃದ್ಧಿಯತ್ತ ದೃಢಹೆಜ್ಜೆ ; ತಹಸೀಲ್ದಾರ್ ಕೆ ಪುರಂದರ್
(
*ಪಬ್ಲಿಕ್ ಸ್ಟೋರಿ ಪರಿಣಾಮ*
ಚಿಕ್ಕನಾಯಕನಹಳ್ಳಿ : ಪಟ್ಟಣದ ರಾಯಪ್ಪನಪಾಳ್ಯ ರಸ್ತೆಯಲ್ಲಿರುವ ದಕ್ಕಲಿಗ ಅಲೆಮಾರಿ ಜನಾಂಗದ ಗಾಂಧಿನಗರಕ್ಕೆ ಮಂಗಳವಾರ ಭೇಟಿಕೊಟ್ಟ ತಹಸೀಲ್ದಾರ್ ಮತ್ತು ತಾಲ್ಲೂಕು ಆಡಳಿತದ ತಂಡ, ಅಲ್ಲಿನ ನಿವಾಸಿಗಳ ಕುಂದು-ಕೊರತೆಗಳನ್ನು ಆಲಿಸಿ, ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ ಅಲೆಮಾರಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಶೌಚಾಲಯ, ಆಧಾರ್ ಕಾರ್ಡ್, ಪಡಿತರ ಚೀಟಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸುವ ಸಲುವಾಗಿ ತಹಸೀಲ್ದಾರ್ ಕೆ ಪುರಂದರ್’ರವರು, ಪುರಸಭೆ ಮುಖ್ಯಾಧಿಕಾರಿ ಪಿ ಮಂಜಮ್ಮನವರಿಗೆ ಹಲವು ಸೂಚನೆಗಳನ್ನು ನೀಡಿದರು.
ಅಲ್ಲಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಚರ್ಚೆ ನಡೆಯಿತು. ಶೌಚಾಲಯವಿಲ್ಲದೆ ಬಯಲ ಶೌಚಾಲಯಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆಯಿಂದ ನಿತ್ಯ ಹಿಂಸೆಪಡುತ್ತಿರುವ ಅಲ್ಲಿನ ಮಹಿಳೆಯರ ಸಮಸ್ಯೆಯನ್ನು ಮುಖ್ಯವಾಗಿ ಚರ್ಚಿಸಿ ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ತಹಸೀಲ್ದಾರ್ ಮುಖ್ಯಾಧಿಕಾರಿಗೆ ಸೂಚಿಸಿದರು.
ಆಧಾರ್ ಕಾರ್ಡ್ ಹೊಂದಿಲ್ಲದವರು ಅಥವಾ ಕಳೆದುಕೊಂಡಿರುವವರ ಪಟ್ಟಿಮಾಡಿ ಅವರಿಗೆ ಶೀಘ್ರವೇ ಆಧಾರ್ ಕಾರ್ಡ್ ಒದಗಿಸಿಕೊಡುವಂತೆ ಸೂಚಿಸಲಾಯಿತು.
ಮಕ್ಕಳು ಮತ್ತು ಮಹಿಳೆಯರ ಸುರಕ್ಷೆ ಹಾಗೂ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಯಿತು. ಪಡಿತರ ಮತ್ತು ಹಸಿವುಮುಕ್ತ ಅಲೆಮಾರಿ ಕಾಲೊನಿಗಾಗಿ ಕ್ರಮಗಳನ್ನು ವಹಿಸಲು ನಿರ್ದೇಶನಗಳನ್ನು ನೀಡಲಾಯಿತು.
ಪಬ್ಲಿಕ್ ಸ್ಟೋರಿ’ಯ ವರದಿಗಾರರ ಒತ್ತಾಸೆಗೆ ಮಣಿದು ಕಳೆದ ನವೆಂಬರ್ 30’ರಂದು ಸಂಜೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿಯವರು, ಅಲೆಮಾರಿಗಳ ಗಾಂಧಿನಗರ ಕಾಲೊನಿಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ತಾಲ್ಲೂಕು ಆಡಳಿತಕ್ಕೆ ಸ್ಪಷ್ಟ ನಿರ್ದೇಶನಗಳನ್ನು ನೀಡಿಹೋಗಿದ್ದರು. ಅಲ್ಲಿನ ನಿವಾಸಿಗಳ ಕುಂದು-ಕೊರತೆ ಪರಿಹರಿಸಲು ಶೀಘ್ರವೇ ಜನಸಂಪರ್ಕ ಸಭೆ ನಡೆಸಿ ವರದಿ ಕಳಿಸಿಕೊಡಿ ಎಂದು ತಾಲ್ಲೂಕು ಆಡಳಿತಕ್ಕೆ ತಾಕೀತು ಮಾಡಿ ಹೋಗಿದ್ದರು. ಅದರ ಪರಿಣಾಮವಾಗಿ, ಅಲೆಮಾರಿ ಜನಾಂಗದವರ ಕುಂದು-ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಅಲೆಮಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬದುಕುವ ಹಕ್ಕು ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುವ ಕಾರ್ಯಗಳನ್ನು ಜಾರಿ ಮಾಡುವತ್ತ ತಾಲ್ಲೂಕು ಆಡಳಿತ ಮುನ್ನಡೆಯುತ್ತಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹುಳಿಯಾರು ಕೆರೆ-ದಂಡೆ ನಿವಾಸಿಗಳು ಮತ್ತು ಗಾಂಧಿನಗರ ಕಾಲೊನಿಯ ಅಲೆಮಾರಿಗಳ ಕುಂದು-ಕೊರತೆ ಬಗ್ಗೆ ನೀಡಿದ್ದ ಸೂಚನೆಗಳನ್ನು ಪಾಲಿಸಿ, ಬೇಗನೇ ಇಲ್ಲಿನ ಅಲೆಮಾರಿಗಳ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಕೆ ಪುರಂದರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು, ಪುರಸಭೆ ಮುಖ್ಯಾಧಿಕಾರಿ ಮಂಜಮ್ಮ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗಾಂಧಿನಗರ ಅಲೆಮಾರಿ ಜನಾಂಗದ ಕುಂದು-ಕೊರತೆ ನಿವಾರಣೆಯ ಜನಸಂಪರ್ಕ ಸಭೆಯಲ್ಲಿ ಹಾಜರಿದ್ದರು.
ಸಭೆಯಲ್ಲಿ, ಗಾಂಧಿನಗರ ಕಾಲೊನಿಯ ಅಲೆಮಾರಿಗಳು ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ