Saturday, April 20, 2024
Google search engine
Homeನಮ್ಮೂರು250 ಕೋಟಿ ವರ್ಷಗಳ ಹಿಂದೆ ಸಮುದ್ರವಾಗಿದ್ದ ಚಿಕ್ಕನಾಯಕನಹಳ್ಳಿ

250 ಕೋಟಿ ವರ್ಷಗಳ ಹಿಂದೆ ಸಮುದ್ರವಾಗಿದ್ದ ಚಿಕ್ಕನಾಯಕನಹಳ್ಳಿ

ಮಹೇಂದ್ರ ಕೃಷ್ಣಮೂರ್ತಿ


ಹೌದೇ ಎಂದು ಹುಬ್ಬೇರಿಸಬೇಡಿ! ನಿಜವೇ ಎಂದು ಕೇಳಬೇಡಿ. ನೀರಿಗಾಗಿ ಹಾತೊರೆಯುತ್ತಿರುವ ಈ ಬೆಟ್ಟಗುಡ್ಡಗಳ ನಾಡು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬಹಳ, ಬಹಳ ವರ್ಷಗಳ ಹಿಂದೆ ಒಂದು ಸಮುದ್ರವಾಗಿತ್ತು.

ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ವರದಿ ಮುಂದಿಟ್ಟುಕೊಂಡು ಲೇಖಕ, ಈಗ ಡಿಡಿಪಿಐ ಆಗಿರುವ ಎಚ್.ಕೆ.ನರಸಿಂಹಮೂರ್ತಿ ವಾದಕ್ಕೆ ನಿಂತರು.

ಚಿತ್ರಗಳು: ಅನಿಲ್ ಕುಮಾರ್ ಎಂ.ಆರ್.

ತೆಂಗು, ಕಂಬಳಿ, ಕೋಮುಸಾಮರಸ್ಯಕ್ಕಷ್ಟೇ ಚಿಕ್ಕನಾಯಕನಹಳ್ಳಿಯ ಅಸ್ಮಿತೆ ಅಡಗಿಲ್ಲ. 250 ಕೋಟಿ ವರ್ಷಗಳ ಹಿಂದೆ ಇದೊಂದು ಪಾತಾಳ ಲೋಕ; ಅರ್ಥಾಥ್ ಸಮುದ್ರದ ತಳವಾಗಿತ್ತು. ನೋಡಿ ಇಲ್ಲಿದೆ ವಿಜ್ಜಾನಿಗಳ ವರದಿ ಎಂದರು.

ಅವರ ಮಾತುಗಳ ದಿಕ್ಕು ಹಿಡಿದು ಚಿಕ್ಕನಾಯಕನಹಳ್ಳಿಗೆ ಕಾಲಿಟ್ಟಾಗ ಸಮುದ್ರದ ತಳದಲ್ಲೇ ಕಾಲಿಟ್ಟ ಭಾವಕ್ಕೆ ಒಳಗಾದೆ. 234 ಗ್ರಾಮಗಳ ತನ್ನ ವ್ಯಾಪ್ತಿಯೊಳಗೆ ಅಡಗಿಸಿಕೊಂಡ ಚಿಕ್ಕನಾಯಕನಹಳ್ಳಿ ಈಗ ಸಮುದ್ರ ಮಟ್ಟಕ್ಕಿಂತ ಬರೋಬರಿ 2569 ಅಡಿ ಎತ್ತರದಲ್ಲಿದೆ.

ಅರೆರೆ ಇದೇನಿದು ಎಲ್ಲಿಯ ಸಮುದ್ರ, ಇದೆಲ್ಲಿಯ ಎತ್ತರ. ಇದೇ ಪ್ರಕೃತಿಯ ಕೌತುಕ.

ಹಿಂದೊಮ್ಮೆ ಸಮುದ್ರದ ತಳ; ಈಗ ಸಮುದ್ರ ಮಟ್ಟಕ್ಕೂ ಎರಡೂವರೆ ಸಾವಿರಕ್ಕೂ ಅಧಿಕ ಎತ್ತರದಲ್ಲಿ ನಿಂತಿದೆ.

ಇದಕ್ಕೆಲ್ಲ ಚಂಡಮಾರುತ, ಭೂಕಂಪ, ಜ್ವಾಲಾಮುಖಿ ಸ್ಫೋಟ ಕಾರಣ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. 250 ಕೋಟಿ ವರ್ಷಗಳ ಹಿಂದೆ ಘಟಿಸಿದ್ದ ಈ ಪ್ರಾಕೃತಿಕ ಮಹಾ ಘನಸ್ಪೋಟ ಒಂದು ಸಮುದ್ರವನ್ನು ಚಿಕ್ಕನಾಯಕನಹಳ್ಳಿ ಆಗಿದೆ. ಇದರೊಳಗೆ ಅದಿರು ಮಾತ್ರವಲ್ಲ ಕೆಣಕಿದರೆ ಚಿನ್ನದ ನಿಕ್ಷೇಪವೂ ಸಿಗಬಹುದು.

ಪ್ರಕೃತಿಯ ವಿಸ್ಮಯ ಅದೇನೆ ಇರಲಿ, ಒಂದು ನದಿಯನ್ನೂ ಕಾಣದ ಕಲ್ಪತರು ಜಿಲ್ಲೆಯ ಈ ಊರು ಹಿಂದೊಮ್ಮೆ ಸಮುದ್ರದವಾಗಿತ್ತು ಎಂಬುದೇ ಒಂದು ಥ್ರಿಲ್ ನೀಡುವ ವಿಷಯ.

ಚಿಕ್ಕನಾಯಕಹಳ್ಳಿ ಎಂದರೆ ಅನೇಕ ಸಾಹಸಗಾಥೆಗಳ ಊರಾಗಿದೆ. ಹಾಗಲವಾಡಿ ನಾಯಕರ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣವನ್ನು ಎರಡನೇ ಪಾಳೇಗಾರ ಸಾಲಿನಾಯಕ (1554-1580) ವಿಜಯದ ನೆನಪಿಗೆ ಕಾರಣನಾದ ಸಹೋದರ ಚಿಕ್ಕನಾಯಕನ ಹೆಸರಿನಲ್ಲಿ ಕಟ್ಟಿದನು. ಇದು ರಾಜನ ಹೆಸರಿನ ಊರು.

ತನ್ನ ಸಹೋದರನ ಶೌರ್ಯ, ಸಾಹಸವನ್ನು ಜನ ಕೊಂಡಾಡಲಿ ಎಂಬ ಕಾರಣಕ್ಕಾಗಿ ಈ ಪಟ್ಟಣ ಕಟ್ಟಿದ ಎಂದು ಇತಿಹಾಸದಲ್ಲಿ ಹೇಳಲಾಗಿದೆ.

20ನೇ ಶತಮಾನದ ಪವಾಡಪುರುಷರೆಂದೇ ಪ್ರಸಿದ್ಧಿ ಪಡೆದಿದ್ದ ಕಂದಿಕೆರೆ ಶಾಂತವೀರಸ್ವಾಮಿ ಅವರ ವೈಭವ ಇತಿಹಾಸದಲ್ಲಿ ಅಡಗಿದೆ.

ಕಂದಿಕೆರೆ ಸ್ವಾಮೀಜಿಗಳನ್ನು ನೋಡಲು ಉತ್ತರ ಕರ್ನಾಟಕದಿಂದ ಜನಜಾತ್ರೆಯೇ ಇಲ್ಲಿಗೆ ಬರುತ್ತಿತ್ತು. ಸೂಫಿ ಪಂಥದ ಮಹಾನ್ ಸಂತ ತಾತಯ್ಯ ಇಲ್ಲೇ ಬಾಳಿ ಬದುಕಿದರು.

ತಾತಯ್ಯನ ಗೋರಿ ಪಟ್ಟಣದಲ್ಲಿದೆ. ಇಲ್ಲಿಯ ಉರುಸ್‌ನ ನೇತೃತ್ವ ಇಂದಿಗೂ ಹಿಂದೂಗಳೇ ವಹಿಸಿಕೊಳ್ಳುತ್ತಾರೆ.

ತಾತಯ್ಯನ ಪವಾಡ ಚಿಕ್ಕನಾಯಕನಹಳ್ಳಿಗಷ್ಟೇ ಸೀಮಿತವಾಗಿಲ್ಲ. ಇಡೀ ಜಿಲ್ಲೆಗೆ ಪಸಹರಿಸಿದೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಈಗಲೂ ತಾತಯ್ಯನಿಗೆ ಹರಕೆ ಹೊತ್ತುಕೊಳ್ಳುವ ಪರಿಪಾಠವಿದೆ. ಹಿಂದೂ-ಮುಸ್ಲಿಂ ಕೋಮುಸಾಮರಸ್ಯ ಪ್ರಸಿದ್ಧ ಸ್ಥಳಗಳಲ್ಲಿ ಇದೂ ಒಂದಾಗಿದೆ.

ಕಂಬಳಿ ನೇಯುವ ಮೂಲಕವೇ ಪ್ರಸಿದ್ಧಿಪಡಿರುವ ಈ ಪಟ್ಟಣ ಸ್ವಾತಂತ್ರ್ಯ ಚಳವಳಿಯ ಚರಿತ್ರೆಯಲ್ಲಿ ಅತಿ ದೊಡ್ಡ ಹೆಸರನ್ನು ದಾಖಲಿಸಿರುವುದು ಬಹುತೇಕರಿಗೆ ಗೊತ್ತಿಲ್ಲ. 1942ರಲ್ಲಿ ನಡೆದ ಎರಡನೇ ಮಹಾಯುದ್ಧದ ವೇಳೆ ಇಲ್ಲಿನ ಉಣ್ಣೇ ನೇಕಾರರ ಸಂಘ ಸದಸ್ಯರು ಭಾರತದ ಮಿತ್ರರಾಷ್ಟ್ರದ ಸೈನಿಕರಿಗೆ 50 ಸಾವಿರ ಕಂಬಳಿ ನೇಯ್ದು ಕಳುಹಿಸಿದ ಕೀರ್ತಿ ಇದೆ.

ಆ ಕಾಲಘಟ್ಟದಲ್ಲಿ ಸೈನಿಕರಿಗೆ ಇಷ್ಟೊಂದು ಭಾರಿ ಕಂಬಳಿ ಕಳುಹಿಸಿದ್ದ ಭಾರತದ ಏಕೈಕ ಊರು ಚಿ.ನಾ.ಹಳ್ಳಿ. ದೇಸಿ ಚಳವಳಿಯ ಕಾಲಘಟ್ಟದಲ್ಲೇ ಇಲ್ಲಿ ದೇಸಿ ವಿದ್ಯಾಪೀಠ ಆರಂಭವಾಗಿದ್ದು ಈಗ ಇತಿಹಾಸ.

ಚಿಕ್ಕನಾಯಕನಹಳ್ಳಿಯಲ್ಲಿ ಚಿನ್ನದ ನಿಕ್ಷೇಪಗಳಿವೆ. ಹೊನ್ನೇಬಾಗಿ, ಬೆಳ್ಳಾರದ ಗುಡ್ಡಗಳಲ್ಲಿ ಚಿನ್ನದ ನಿಕ್ಷೇಪ ಅಡಗಿದೆ. ಆದರೆ ಚಿನ್ನ ಹೊರತೆಗೆಯಲು ವೆಚ್ಚ ದುಬಾರಿಯಾಗಲಿದೆ ಎಂಬ ಕಾರಣಕ್ಕಾಗಿ ಚಿನ್ನದಗಣಿ ಇಲ್ಲಿ ಆರಂಭವಾಗಿಲ್ಲ.

ಇಲ್ಲಿ ಸಿಗುವ ಮ್ಯಾಂಗನೀಸ್ ಅದಿರು ದೇಶದ ಉತ್ಕೃಷ್ಟ ಮ್ಯಾಂಗನೀಸ್ ಅದಿರು ಎನಿಸಿದೆ. ಮ್ಯಾಂಗನೀಸ್ ಅದಿರು ಗಣಿಗಾರಿಕೆ ತಲತಲಾಂತರದಿಂದಲೂ ನಡೆದುಕೊಂಡು ಬರುತ್ತಿದೆ.

ಕುಪ್ಪೂರು ತಮ್ಮಡಿಹಳ್ಳಿಮಠ, ಶೆಟ್ಟಿಕೆರೆಯ ಹೊಯ್ಸಳಶೈಲಿಯ ಯೋಗಮಾಧವ ದೇವಾಲಯ, ಬೈಗುಳವೇ ಪೂಜೆ ಮಾಡಿಕೊಂಡಿರುವ ಹೆಸರುಹಳ್ಳಿಯ ಲಕ್ಕವ್ವ, ಆಂಜನೇಯ, ತೀರ್ಥರಾಮೇಶ್ವರ ದೇವಸ್ಥಾನಗಳಿಗೆ ಇದು ಪ್ರಸಿದ್ಧಿ ಪಡೆದಿದೆ. ಶರಣ ಸಿದ್ಧರಾಮೇಶ್ವರರು ಈ ನಾಡಿನಲ್ಲಿ ಸಂಚರಿಸಿದ ಕೀರ್ತಿಯೂ ಇಲ್ಲಿದೆ.

ಮದಲಿಂಗನ ನೆನೆದು..


ಮದಲಿಂಗನೆಂಬ ಸಾಹಸಿಯ ಮೈ ನವಿರೇಳಿಸುತ್ತದೆ. ಜಾನಪದ ಕಥೆಯಾಗಿರುವ ಮದಲಿಂಗ ಕುರಿತು ಮೊಟ್ಟಮೊದಲಿಗೆ ಮಾಸ್ತಿ ಅಯ್ಯಂಗಾರ್ ಬಹರದಲ್ಲಿ ದಾಖಲಿಸಿದರು.

ಮದುವೆಯ ಬಳಿಕ ಹೆಂಡತಿ, ಅತ್ತೆ, ನಾದಿನಿ ಜಾಣೆಯೊಂದಿಗೆ ಚಿಕ್ಕನಾಯಕನಹಳ್ಳಿಗೆ ಬರುತ್ತಾನೆ. ಎತ್ತಿನಗಾಡಿಯ ಪ್ರಯಾಣದ ಹೊತ್ತು ಕಳೆಯಲು ನಾದಿನಿ ಜಾಣೆಯನ್ನು ರೇಗಿಸುತ್ತಿರುತ್ತಾನೆ. ಹರಟೆ, ರೇಗಾಟದ ನಡುವೆ ತಮಾಷೆಗಾಗಿ ಜಾಣೆಯನ್ನು ತನಗೆ ಕೊಟ್ಟ ಮದುವೆ ಮಾಡುವಂತೆ ಅತ್ತೆಗೆ ಕೇಳುತ್ತಾನೆ.

ಇದಕ್ಕೆ ನಕ್ಕ ಅತ್ತೆ ಇನ್ನಂಥ ಗಂಡಸಿಗೆ ಇಬ್ಬರು ಹೆಂಡರು ಬೇಕಾ ಎಂದು ಪ್ರಶ್ನೆ ಎಸೆಯುತ್ತಾಳೆ.
ಅತ್ತೆಯ ಮಾತಿನಿಂದ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದ ಮದಲಿಂಗ ಚಿಕ್ಕನಾಯಕಹಳ್ಳಿ ಸಮೀಪದ ಬರುತ್ತಿದ್ದಾಗ ಸಿದ್ದ ಗುಡ್ಡವನ್ನು ನೋಡಿ ಈ ಗುಡ್ಡವನ್ನು ಹಿಮ್ಮುಖವಾಗಿ ಹತ್ತಿ, ಹಿಮ್ಮುಖವಾಗಿ ಇಳಿದರೆ ಜಾಣೆಯನ್ನು ಕೊಟ್ಟು ಮದುವೆ ಮಾಡಬೇಕು ಎಂದು ಸವಾಲು ಎಸೆಯುತ್ತಾನೆ. ಸವಾಲಿಗೆ ಅತ್ತೆ ಒಪ್ಪುತ್ತಾಳೆ.

ಬೆಟ್ಟ ಹತ್ತಿದ ಮದಲಿಂಗ ಹಿಮ್ಮುಖವಾಗಿ ಇಳಿಯುತ್ತಾನೆ. ಸುಸ್ತಾದ ಮದಲಿಂಗನಿಗೆ ನೀರು ಕುಡಿಸಲು ಜಾಣೆ ಮುಂದಾದಾಗ ನೀರು ಹಿಡಿದಿದ್ದ ಮಗೆ (ಮಣ್ಣಿನ ತಂಬಿಗೆ) ಬಿದ್ದು ಒಡೆದು ಹೋಗುತ್ತದೆ. ನೀರಿಲ್ಲದೇ ಗಂಟಲು ಒಣಗಿ ಮದಲಿಂಗ ಸಾಯುತ್ತಾನೆ. ಮದಲಿಂಗ ಇಹಲೋಕ ತೃಜಿಸಿದ ಕಣಿವೆ ಇಂದು ಮದಲಿಂಗನ ಕಣಿವೆಯಾಗಿದೆ.

ಮದಲಿಂಗನಿಗೆ ನೀರು ತರಲು ಹೋದ ಹೆಂಡತಿ ಮಡುವಿಗೆ ಬಿದ್ದು ಸಾಯುತ್ತಾಳೆ. ಇದು ಮದನಮಡು ಆಗಿದೆ. ಮದಲಿಂಗನಿಗೆ ತಮ್ಮ ಜೊಲ್ಲು ನೀಡಿ ಬದುಕಿಸುವ ಪ್ರಯತ್ನ ಮಾಡಿ ಸಾಧ್ಯವಾಗದೇ ಜಾಣೆ ಕೂಡ ಸಾಯುತ್ತಾಳೆ. ಜಾಣೆ ಸಾವಿಗೀಡಾದ ಸ್ಥಳ ಜಾಣೆಹಾರ್ ಆಗಿದೆ.

ಅಳಿಯ, ಇಬ್ಬರು ಹೆಣ್ಣು ಮಕ್ಕಳ ಸಾವಿನಿಂದ ಕಂಗಾಲಾಗಿ ಅಲ್ಲಿಂದ ಓಡುತ್ತಾ ಸ್ವಲ್ಪ ದೂರದಲ್ಲಿ ಅತ್ತೆಯೂ ಸಾಯುತ್ತಾಳೆ. ಅತ್ತೆ ಸತ್ತ ಜಾಗ ಈಗ ಹತ್ಯಾಳು ಆಗಿದೆ.

ಅತ್ತೆ ಸಮಾಧಿ ಮಾಡಿದ ಜಾಗ ಎನ್ನಲಾದ ಜಾಗವನ್ನು ಈಗಲೂ ಅಜ್ಜಿಗುಡ್ಡೆ ಎಂದು ಕರೆಯಲಾಗುತ್ತದೆ.

ಇಲ್ಲಿನ ಸಾಸಲುಗೆ ಹೊಯ್ಸಳದ ಪಟ್ಟದರಾಣಿ ಶಾಂತಲೆ ಬಂದಿದ್ದಳು ಎಂಬದಕ್ಕೆ ಇಲ್ಲಿ ಶಾಸನ ದೊರೆತಿದೆ. ಈ ಗ್ರಾಮದಲ್ಲಿ ನ್ಯಾಯ ಮಾಡಲು ಶಾಂತಲೆ ಬಂದಿದ್ದಳು, ನ್ಯಾಯ ಬಗೆಹರಿಸಿದ್ದಳು ಎಂದೂ ಹೇಳಲಾಗುತ್ತದೆ.

ಪಟ್ಟಾಧಿಕಾರದ ನೆನಪಿಗೆ ದೇವಸ್ಥಾನ
ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ಅವರಿಗೆ ಪಟ್ಟಾಧಿಕಾರ ಮಾಡುವ ದಿನವೇ ಚಿಕ್ಕನಾಯಕನಹಳ್ಳಿಯಲ್ಲಿನ ಕೇಶವ ದೇವಾಲಯವನ್ನು ನಿರ್ಮಿಸಿಲಾಯಿತು.

ಧರ್ಮಪ್ರಭು ಮುದಿಯಪ್ಪ ನಾಯಕ ತನ್ನ ಕೃತಿಯೊಂದರಲ್ಲಿ ಬರಹ ಕಲಿಸಿದವರ ಪಾದಕ್ಕೆ ಭಕ್ತಿಯಿಂದ ಕೃತಜ್ಞತೆಯಿಂದ ಶರಣು, ಶರಣು ಎಂದು ಹೇಳಿರುವುದು ಹಾಗಲವಾಡಿ ನಾಯಕರು ಗುರು ಪರಂಪರೆಗೆ ನೀಡುತ್ತಿದ್ದ ಗೌರವಕ್ಕೆ ಸಾಕ್ಷಿಯಾಗಿದೆ.

ಅಬ್ಬಬ್ಬಾ ಏನ್ನೆಲ್ಲ ಅಡಗಿಸಿಟ್ಟುಕೊಂಡಿದೆ ನಮ್ಮ ಚಿಕ್ಕನಾಯಕನಹಳ್ಳಿ ಅಲ್ಲವೇ?


ಈ ಲೇಖ‌ನ ಪ್ರಜಾವಾಣಿಯ ನಮ್ಮೂರು, ನಮ್ಮ ಜಿಲ್ಲೆ ಅಂಕಣಕ್ಕೆ ಬರೆದಿದ್ದೆ. ಸಣ್ಣ ಬದಲಾವಣೆಯೊಂದಿಗೆ ಮತ್ತೊಮ್ಮೆ ಇಲ್ಲಿ ಪ್ರಕಟವಾಗುತ್ತಿದೆ.

ಪೂರಕ ಮಾಹಿತಿ: ಭರತ್ ಎಂ.ಎನ್. ಪತ್ರಕರ್ತರು,‌ ಚಿ.ನಾ.ಹಳ್ಳಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?