Publicstory/prajayoga
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಕುಣಿಗಲ್: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಆಸ್ಪತ್ರೆಯ ಮುಂಭಾಗ ರಸ್ತೆ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೊತ್ತಗೆರೆ ಹೋಬಳಿ ತೆರದಕುಪ್ಪೆ ಗ್ರಾಮದ ಮಹಿಳೆ ಪಲ್ಲವಿ (21) ಮೃತ ಮಹಿಳೆಯಾಗಿದ್ದು, ಜುಲೈ 7 ರಂದು ಪಲ್ಲವಿ ಎಂಬುವರನ್ನು ಹೆರಿಗೆಗೆಂದು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಲ್ಲಿನ ಸ್ತ್ರೀರೋಗ ತಜ್ಞ ವೈದ್ಯರು ಹಣ ನೀಡಿದರೆ ಮಾತ್ರ ಹೆರಿಗೆ ಮಾಡುವುದಾಗಿ ಪೋಷಕರಲ್ಲಿ ಬೇಡಿಕೆ ಇಟ್ಟಿದ್ದರು. ಮೃತಳ ಪತಿ ಹಣವನ್ನು ತಂದು ನೀಡಿದ ನಂತರ ವೈದ್ಯರು ಚಿಕಿತ್ಸೆ ಆರಂಭಿಸಿದರು. ಮಗು ದಪ್ಪವಿದ್ದ ಕಾರಣ ಸಾಮಾನ್ಯ ಹೆರಿಗೆ ಮಾಡಲು ಆಗದೆ ಸಿಜರಿನ್ ಹೆರಿಗೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಣಂತಿಗೆ ತೀವ್ರ ರಕ್ತ ಸ್ರಾವವಾಗಿ ನಿಶ್ಚೇತನಗೊಂಡಳು. ಇದನ್ನು ಕಂಡು ಗಲಿಬಿಲಿಗೊಂಡ ವೈದ್ಯರು ಬಾಣತಿಂಯನ್ನು ಆದಿಚುಂಚನಗಿರಿಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಯಾಗದೆ ಶುಕ್ರವಾರ ಮೃತಪಟ್ಟಿದ್ದು, ಇದಕ್ಕೆ ತಾಲೂಕು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ಪೊಲೀಸರ ಮಧ್ಯ ಪ್ರವೇಶದಿಂದ ಉದ್ವಿಗ್ನ ಸ್ಥಿತಿ ತಿಳಿಯಾಯಿತು. ಈ ವೇಳೆ ಜೆಡಿಎಸ್ ಪಕ್ಷವು ಹೆದ್ದಾರಿ ತಡೆದು ಪ್ರತಿಭಟಿಸಿತು.
ಕಾಂಗ್ರೆಸ್ ಶಾಸಕ ಡಾ. ರಂಗನಾಥ್, ಬಿ.ಜೆ.ಪಿ. ಮುಖಂಡ ಡಿ. ಕೃಷ್ಣಕುಮಾರ್ ಮಾಜಿ ಸಚಿವ ಜೆ.ಡಿ.ಎಸ್.ಡಿ ನಾಗರಾಜಯ್ಯ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಘಟನೆಯ ವಿವರ ಪಡೆದುಕೊಂಡರು.
ಕರ್ತವ್ಯ ಲೋಪ ಎಸಗಿರುವ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಮೊದಲಿನಿಂದಲೂ ಈ ವೈದ್ಯರು ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ವೈದ್ಯರ ವಿರುದ್ಧ ಡಿಎಚ್‌ಒ, ಡಿಸಿಗೂ ದೂರು ನೀಡಿದ್ದೆವು. ಅವರನ್ನು ಕೂಡಲೇ ಅಮಾನತ್ತು ಗೊಳಿಸಿ ತನಿಖೆ ನಡೆಸಬೇಕು ಎಂದು ಡಿಎಚ್‌ಒಗೆ ಸೂಚಿಸಿದ್ದೇನೆ. ಸಂತ್ರಸ್ತ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಅಗತ್ಯವಿರುವ ಅನಸ್ತೇಶಿಯಾ ತಜ್ಞ ವೈದ್ಯರನ್ನು ನೇಮಕ ಮಾಡಬೇಕೆಂದು ಶಾಸಕ ಡಾ. ರಂಗನಾಥ್ ಆಗ್ರಹಿಸಿದರು.