Publicstory/prajayoga
ತುಮಕೂರು: ಹಲವರ ತ್ಯಾಗ, ಬಲಿದಾನದಿಂದ ಗಳಿಸಿದ ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಯುವಜನರ ಮೇಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಯು) ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ಎಂಪ್ರೆಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ವತಿಯಿಂದ ಸ್ವಾತಂತ್ರದ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶದಲ್ಲಿ ಎಲ್ಲರೂ ಶಾಂತಿಯುತ ಜೀವನ ನಡೆಸಬೇಕೆಂದರೆ ಯುವಜನರು ಹೆಚ್ಚು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಮುನ್ನೆಡೆಯಬೇಕಾಗಿದೆ ಎಂದರು.
ಅಂದು ನಮ್ಮ ಹಿರಿಯರು ಮಾಡಿದ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದ ಸೇವೆಯಿಂದಾಗಿ ಇಂದು ದೇಶ ಅಭಿವೃದ್ದಿ ಪಥದತ್ತ ಸಾಗಿ ಬಂದಿದೆ. ಪರೋಪಕಾರ ಇದಂ ಶರೀರಂ ಎಂಬ ನುಡಿಯಂತೆ ನಮ್ಮ ಪೂರ್ವಜರು ನಡೆದುಕೊಂಡ ಪರಿಣಾಮ ಇಂದು ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ. ಈ ಗುಣವನ್ನು ಯುವಜನರು ಮೈಗೂಡಿಸಿ ಕೊಂಡು ಮುನ್ನೆಡೆಯಬೇಕಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣೆ ಪಡೆಯ ಗೌರವಾಧ್ಯಕ್ಷ ಎಸ್.ಪಿ.ಚಿದಾನಂದ ಮಾತನಾಡಿ, ಭಾರತದ ಸ್ವಾತಂತ್ರದ 75ನೇ ಅಮೃತಮಹೋತ್ಸವದ ಅಂಗವಾಗಿ ನಮ್ಮ ಸಂಸ್ಥೆಯಿಂದ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ರಾಷ್ಟ್ರ ಪ್ರೇಮ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳು ಹೇಗೆ ರಾಷ್ಟ್ರ ದ್ವಜ, ರಾಷ್ಟ್ರಗೀತೆಗೆ ಗೌರವ ನೀಡಬೇಕು. ಇವುಗಳ ರಚನೆಯ ಹಿಂದಿನ ಮಹತ್ವ ಮತ್ತಿತರರ ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ಮುಂದಿನ 25 ವರ್ಷಗಳ ಕಾಲ ನಮ್ಮ ಅಭಿಯಾನ ನಿರಂತರವಾಗಿ ನಡೆಯುತ್ತದೆ. ಆ ಮೂಲಕ ದೇಶದ ಅಭಿವೃದ್ದಿಯಲ್ಲಿ ಯುವಜನರನ್ನು ತೊಡಗಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವಾಗಿದೆ ಎಂದರು.
ಎಂಪ್ರೆಸ್ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲ ಷಣ್ಮುಖಪ್ಪ ಮಾತನಾಡಿ, ಭಾರತದ ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರೋತ್ತರದ ಅರ್ಥಿಕ, ಸಾಮಾಜಿ, ಶೈಕ್ಷಣಿಕ, ಕೈಗಾರಿಕಾ ಮತ್ತು ಔದ್ಯೋಗಿಕ ಬೆಳವಣಿಗೆಯನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಪ್ರತಿಯೊಂದಕ್ಕೂ ವಿದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ ಇಂದು ಸ್ವಾವಲಂಬನೆ ಸಾಧಿಸಿ, ವಿಶ್ವದ 6ನೇ ಅತಿ ದೊಡ್ಡ ಅರ್ಥಿಕ ವ್ಯವಸ್ಥೆಯನ್ನು ಹೊಂದಿದೆ. 2030ರ ವೇಳೆಗೆ ದೇಶ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗೆ ಕಾರಣ ಇದುವರೆಗೂ ದೇಶವನ್ನು ಮುನ್ನೆಡೆಸಿದ ಮಹನೀಯರ ಸ್ವಾರ್ಥರಹಿತ ಸೇವೆ. ಹಾಗಾಗಿ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನೆಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಬಸವರಾಜು ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಮ್ಮ ಸಂಸ್ಥೆವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ.ಇಂದಿನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಹೀಗೆ ಮೂರು ವಿಭಾಗಗಳಲ್ಲಿ ದೇಶಭಕ್ತಿ ಗೀತೆ ಗಾಯನ, ಭರತ ನಾಟ್ಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇಂದು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಆಗಸ್ಟ್ 13ರಂದು ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ನಡೆಯುವ ದೇಶಕ್ಕಾಗಿ ನಡಿಗೆ ವಾಕ್ಥಾನ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಅಲ್ಲದೆ ವಾಕಥಾನ್ನಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಟೀಶರ್ಟ್ ಜೊತೆಗೆ ಪ್ರಶಂಶನಾ ಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯ ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮನೋಹರ್, ಖಜಾಂಚಿ ಸಂದೀಪಗೌಡ, ಬಿ.ಎಸ್. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.