Publicstory/prajayoga
ತಿಪಟೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಉಸಿರಾಟದ ತೊಂದರೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಯುವಕರು ತುತ್ತಾಗುತ್ತಿರುವುದು ವೈದ್ಯಕೀಯ ಲೋಕ ಚಿಂತಿಸುವಂತಾಗಿದೆ ಎಂದು ಕುಮಾರ್ ಆಸ್ಪತ್ರೆ ವೈದ್ಯ ಡಾ. ಜಿ.ಎಸ್. ಶ್ರೀಧರ್ ಕಳವಳ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಒತ್ತಡಗಳಿಗೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ಯುವ ಸಮುದಾಯ ಜಂಕ್ಫುಡ್ಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿರುವುದು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದರು.
ಶ್ರೀರಂಗ ಆಸ್ಪತ್ರೆಯ ವೈದ್ಯ ಡಾ. ಜೆ.ಬಿ. ವಿವೇಚನ್ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿಗಳ ಪರಿಶ್ರಮ ಅರ್ಥ ಮಾಡಿಕೊಂಡು ಮೊಬೈಲ್ನಿಂದ ದೂರವಿರಿ. ಪುಸ್ತಕಗಳನ್ನು ಹೆಚ್ಚು ಓದುವ ಮೂಲಕ ಸದೃಢ ಮನಸ್ಥಿತಿ ಹೊಂದಬೇಕು. ಚಿಕ್ಕ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಮಾರ್ಗದರ್ಶನದಲ್ಲಿ ನಡೆದರೆ ಯಾವುದೇ ರೋಗ ರುಜಿನಗಳಿಗೆ ಒಳಗಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸರಸ್ವತಿ ಕೆ.ಬಿ. ಮಾತನಾಡಿ, ಸಾವು ಮತ್ತು ಬದುಕಿನ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳು ಅರಿತಾಗ ಮಾತ್ರ ಒತ್ತಡಗಳಿಂದ ಮುಕ್ತಿ ಹೊಂದಬಹುದು. ಉತ್ತಮ ಆರೋಗ್ಯ ಬೇಕೆಂದರೆ ವಿದ್ಯಾರ್ಥಿಗಳು ಗುರಿ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದರೆ ಮುಂದಿನ ದಿನಗಳಲ್ಲಿ ಉತ್ತಮ ಜೀವನ ಮಾಡಬಹುದು ಎಂದು ಸಲಹೆ ನೀಡಿದರು.
ಈ ವೇಳೆ ಡಾ. ವೆಂಕಟಯ್ಯ ಮತ್ತು ಪ್ರೊ. ಈರಯ್ಯ, ಡಾ. ಹೊನ್ನಾಂಜನೇಯಡಾ.ಜಿಎಸ್, ಪ್ರೊ. ಭಾರತಿ, ಹಳೆ ವಿದ್ಯಾರ್ಥಿ ಸಂಘದ ಲಿಖಿತ್ ಗೌಡ, ಸಿ.ಎಸ್. ಪುನೀತ್ ಕುಮಾರ್, ಶಂಕರ್ (ಶಿರಾ) ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು