Publicstory/prajayoga
ತುಮಕೂರು: ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಅಧಿಕೃತವಾಗಿ ಬಿಜೆಪಿ ಸೇರಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅವರು ಕಮಲ ಪಾಳೆಯ ಸೇರಿಕೊಂಡರು.
ಮುದ್ದಹನುಮೇಗೌಡ ಅವರು ಬಿಜೆಪಿ ಸೇರುವ ಮೂಲಕ ಜಿಲ್ಲೆಯಲ್ಲಿ ಕಮಲ ಪಾಳೆಯ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ. ಒಕ್ಕಲಿಗ ಮತ ಬುಟ್ಟಿಯನ್ನು ಬಿಜೆಪಿ ಹೆಚ್ಚಿಸಿಕೊಂಡಂತಾಗಿದೆ.
ಮಾಜಿ ಶಾಸಕ ಬಿ.ಸುರೇಶ್ ಗೌಡ, ಮುದ್ದಹನುಮೇಗೌಡ ಜೋಡಿ ಜಿಲ್ಲೆಯಲ್ಲಿ ಒಕ್ಕಲಿಗರನ್ನು ಬಿಜೆಪಿಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಬಲ ಬರಲಿದೆ ಎಂಬ ಲೆಕ್ಕಾಚಾರ ಕಮಲ ಪಾಳೆಯದಲ್ಲಿದೆ.
ಕುಣಿಗಲ್ ನಿಂದ ಸ್ಪರ್ಧೆ; ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುದ್ದಹನುಮೇಗೌಡ ಅವರನ್ನು ಸ್ಪರ್ಧೆಗೆ ಇಳಿಸಲು ಬಿಜೆಪಿ ಮೊದಲಿಗೆ ಪ್ರಯತ್ನ ನಡೆಸಿತ್ತು. ಆದರೆ ವಿಧಾನಸಭೆಗೆ ಕುಣಿಗಲ್ ನಿಂದ ಸ್ಪರ್ಧಿಸಲು ಎಸ್ ಪಿಎಂ ಆಸಕ್ತಿ ತೋರಿರುವುದರಿಂದ ಅವರಿಗೆ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಖಾತರಿಯಾಗಿದೆ.
ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ತೊರೆಯುವುದಾಗಿ ಈಚೆಗಷ್ಟೇ ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಹೇಳಿದ್ದರು. ಅಲ್ಲದೇ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ದೇವೇಗೌಡ ಅವರಿಗೆ ಬೆಂಬಲ ನೀಡಿತ್ತು. ರಾಜ್ಯಸಭಾ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಅದರಂತೆ ಕಾಂಗ್ರೆಸ್ ನಡೆದುಕೊಳ್ಳದ ಕಾರಣ ಅಸಮಾಧಾನಗೊಂಡಿದ್ದರು.
ರಫೀಕ್ ನಿರಾಳ; ಮುದ್ದಹನುನೇಗೌಡ ಬಿಜೆಪಿ ಸೇರ್ಪಡೆ ತುಮಕೂರು ನಗರದ ಮಾಜಿ ಶಾಸಕ ರಫೀಕ್ ಅಹ್ಮದ್ ಅವರನ್ನು ನಿರಾಳಗೊಳಿಸಿದೆ.
ಎಸ್ ಪಿಎಂ ಅವರನ್ನು ತುಮಕೂರು ನಗರ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಆದರೆ ಇದಕ್ಕೆ ಎಸ್ ಪಿಎಂ ಒಪ್ಪಿರಲಿಲ್ಲ. ಈಗ ಅವರು ಬಿಜೆಪಿ ಸೇರಿರುವುದರಿಂದ ರಫೀಕ್ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಖಾತರಿಯಾದಂತಾಗಿದೆ.