ತುರುವೇಕೆರೆ: ಪಟ್ಟಣದ ವಿವಿಧ ಭಾಗಗಳಲ್ಲಿನ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ ವೇರ್ನ ಮೂರು ಅಂಗಡಿಗಳ ಬೀಗ ಮುರಿದು ಲಕ್ಷಾಂತರ ರೂಪಾಯಿಗಳ ಮೌಲ್ಯದ ವಸ್ತು ಕಳವು ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲೆಯ ಉದಯಗಿರಿ ತಾಲ್ಲೂಕಿನ ಸಯ್ಯದ್ ಅಜರುದ್ದಿನ್ (28) ಮತ್ತು ಹತಾವುಲ್ಲಾ(23) ಬಂಧಿತ ಆರೋಪಿಗಳಾಗಿದ್ದು ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ. ಬಂದಿತ ಆರೋಪಿಗಳು ಮಂಡ್ಯ, ಮೈಸೂರು ಸೇರಿದಂತೆ ವಿವಿಧ ತಾಲ್ಲೂಕು ಜಿಲ್ಲೆಗಳಲ್ಲಿನ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದಾರೆ ಎನ್ನಲಾಗಿದೆ.
ಈ ಆರೋಪಿಗಳು ಅಕ್ಟೋಬರ್ ತಿಂಗಳಲ್ಲಿ ಪಟ್ಟಣದ ಪೊಲೀಸ್ ಠಾಣೆ ಎದುರಿನ ಸಿ.ಟಿ ಎಲೆಕ್ಟ್ರಾನಿಕ್ಸ್ ಅಂಗಡಿ, ಬಾಣಸಂದ್ರ ರಸ್ತೆಯಲ್ಲಿನ ಶಾರದಾ ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ವೇರ್ ಮತ್ತು ಮುನಿಯೂರು ಗೇಟ್ ಬಳಿಯ ಗಂಗಾಧರೇಶ್ವರ ಹಾರ್ಡ್ ವೇರ್ ಅಂಗಡಿಯ ಬೀಗ ಮುರಿದ ಕಳ್ಳರು ಲಕ್ಷಾಂತರ ರೂಪಾಯಿಗಳ ಮೌಲ್ಯದ ಟಿ.ವಿ, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕೊಳವೆ ಬಾವಿಯ ಉಪಕರಣಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದರು.
ಪಟ್ಟಣದ ಈ ಸರಣಿ ಕಳ್ಳತನದಿಂದ ಅಂಗಡಿ ಮಾಲೀಕರು ಮತ್ತು ಪಟ್ಟಣಿಗರು ಆತಂಕಕ್ಕೆ ಒಳಗಾಗಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡ ತಾಲ್ಲೂಕಿನ ಸಿಪಿಐ ಲೋಹಿತ್ ಅವರು ಕಳವಾದ ಒಂದು ತಿಂಗಳೊಳಗಾಗಿ ಅಂದರೆ ನವೆಂಬರ್ 18ರಂದು ಆರೋಪಿಗಳನ್ನು ಸೆರೆಹಿಡಿದಿದ್ದು
ಇದರಿಂದ ಪಟ್ಟಣಿಗರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.