Thursday, December 26, 2024
Google search engine
HomeUncategorizedಮನೆಯಿಲ್ಲ ಕಟ್ಟಿಸಿಕೊಡಿ - ಮಕ್ಕಳ ಅಳಲು

ಮನೆಯಿಲ್ಲ ಕಟ್ಟಿಸಿಕೊಡಿ – ಮಕ್ಕಳ ಅಳಲು

ಸಿರಾ:- ಸರ್ ನಮ್ಮ ತಂದೆತಾಯಿ ಇಬ್ಬರೂ ಮರಣ ಹೊಂದಿದ್ದಾರೆ. ಕಷ್ಟದಲ್ಲೂ ಶಾಲೆ ಬಿಟ್ಟಿಲ್ಲ

ಈ ಹಳ್ಳಿಯಲ್ಲಿ ವಾಸಮಾಡಲು ನಮಗೆ ಸ್ವಂತ ಮನೆಯಿಲ್ಲ. ಆಗಾಗಿ ನಮಗೆ ನಿವೇಶನವನ್ನು ನೀಡಿ ಮನೆಯನ್ನು ನಿರ್ಮಿಸಿಕೊಡಿ ಮತ್ತು ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಡಿ ಎಂದು ತರೂರು ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಸಿಂಚನ ರವರು ಮಕ್ಕಳ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಳು.


ಶಿರಾ ತಾಲೂಕಿನ ತರೂರು ಗ್ರಾಮ ಪಂಚಾಯಿತಿ, ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಹಾಗೂ ಸಿಎಂಸಿಎ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಪುಷ್ಪಲಕ್ಷ್ಮೀರವರು ದೀಪ ಬೆಳಗುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.

ಈ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಯ ಮಕ್ಕಳು ತಮ್ಮ ತಮ್ಮ ಶಾಲೆಯ ಮತ್ತು ಗ್ರಾಮದ ಸಮಸ್ಯೆ-ಸವಾಲುಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.


ಗಂಜಲಗುಂಟೆ ಅಂಗನವಾಡಿ ಕಾರ್ಯಕರ್ತೆಯಾದ ಹೇಮಾರವರು ಸಭೆಯಲ್ಲಿ ತಮ್ಮ ಅಂಗನವಾಡಿ ಕೇಂದ್ರದ ಸಮಸ್ಯೆಯನ್ನು ಚರ್ಚಿಸುತ್ತಾ, ನಮ್ಮ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡಯಿಲ್ಲ, ಶಾಲೆಯ ಒಂದು ನಿರುಪಯುಕ್ತ ಕೊಠಡಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ. ಆ ಕೊಠಡಿಯು ಸಹ ಮಕ್ಕಳನ್ನು ಕೂರಿಸಲು ಅಪಾಯಕಾರಿಯಾಗಿದ್ದು, ಕೇಂದ್ರದ ಹೊರಗಡೆ ಮಕ್ಕಳಿಗೆ ಊಟ, ಪಾಠ ಎಲ್ಲವನ್ನು ಸಹ ನಡೆಸಲಾಗುತ್ತಿದೆ‌ ಎಂದರು.

ಇಲಾಖೆಯಿಂದ ಕಟ್ಟಡ ಕಟ್ಟಲು ಅನುಮೋದನೆ ಆಗಿದ್ದರೂ ಕೂಡ ಯಾವುದೇ ಜನಪ್ರತಿನಿಧಿಗಳು ಕಟ್ಟಡವನ್ನು ಕಟ್ಟಿಕೊಡಲು ಮುಂದೆ ಬರುತ್ತಿಲ್ಲ. ಇದರಿಂದ ಕೇಂದ್ರವನ್ನು ನಡೆಸಲು ಬಹಳ ಕಷ್ಟಕರವಾಗುತ್ತಿದೆ. ಕೂಡಲೇ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇಂದ್ರಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಿ ಕೊಡಬೇಕೆಂದು ಕೇಳಿಕೊಂಡರು.


ಸಭೆಯಲ್ಲಿ ಮಕ್ಕಳು ತಮ್ಮ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವಂತೆ, ರಸ್ತೆಗಳನ್ನು ಸರಿಪಡಿಸುವಂತೆ, ಶಾಲೆಗೆ ನೀರನ್ನು ಪೂರೈಸುವಂತೆ, ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸುವಂತೆ, ಆಟದ ಮೈದಾನವನ್ನು ಮತ್ತು ಕಾಂಪೌಂಡ್ ಒದಗಿಸುವಂತೆ, ಶೌಚಾಲಯವನ್ನು ನಿರ್ಮಿಸಿಕೊಡುವಂತೆ, ಹಾಗೂ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಒಟ್ಟು 9 ಶಾಲೆಗಳಿಂದ 200ಕ್ಕೂ ಹೆಚ್ಚು ಮಕ್ಕಳು, 5 ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿ, ಒಟ್ಟು 35 ಸಮಸ್ಯೆಗಳನ್ನು ಹೇಳಿಕೊಂಡರು.

ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಹುಬೇಗ ಬಗೆಹರಿಸುವುದಾಗಿ ತಿಳಿಸಿದರು.


ಸಭೆಯಲ್ಲಿ ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಮಂಜುನಾಥ್ ಅಮಲಗೊಂದಿರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಭಾರತ ಸರ್ಕಾರವು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು 2030ನ್ನು ಒಪ್ಪಿಕೊಂಡಿದ್ದು ಮಕ್ಕಳ ಆರೋಗ್ಯ, ರಕ್ಷಣೆ, ಶಿಕ್ಷಣ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧನೆ ಹಾಗೂ ಹಸಿವು, ತಾರತಮ್ಯ ಮತ್ತು ಶೋಷಣೆಗಳು ಕೊನೆಗೊಳಿಸುವುದಕ್ಕೆ ಬದ್ಧವಾಗಿದೆ. ಮಕ್ಕಳ ಪರಿಸ್ಥಿತಿಯನ್ನು ತಳಮಟ್ಟದಿಂದಲೇ ಗಮನಿಸಿ ಅವಶ್ಯಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಎಲ್ಲ ಇಲಾಖೆಗಳು, ಜನಪ್ರತಿನಿಧಿಗಳು ಹಾಗೂ ಸಮುದಾಯದ ಜವಾಬ್ದಾರಿಯಾಗಿದೆ.

ರಾಜ್ಯದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಸಂಖ್ಯೆ ಶೇ.35ರಷ್ಟಿದೆ. ಕರ್ನಾಟಕ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳ ಭಾಗವಹಿಸುವಿಕೆ ಹಕ್ಕು ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಂದ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು 2006ರಲ್ಲಿ ಪ್ರಾರಂಭಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವೆಂಬರ್ 2023 ರಿಂದ 24 ಜನವರಿ 2024ರ ವರೆಗೆ 10 ವಾರಗಳ ಮಕ್ಕಳಿಗೆ ಸ್ಪಂದಿಸುವ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವಂತೆ ಪ್ರಸ್ತುತ ವರ್ಷವೂ ಸುತ್ತೋಲೆ ಹೊರಡಿಸಿದೆ.

ಈ ಅಭಿಯಾನದಲ್ಲಿ ಪಂಚಾಯತ್ ಮಟ್ಟದಲ್ಲಿ ಎಲ್ಲಾ ಶಾಲೆಗಳಿಗೆ ಮಕ್ಕಳ ದನಿ ಪೆಟ್ಟಿಗೆ, ಕೋರಿಕೆ ಪತ್ರಗಳನ್ನು ವಿತರಿಸಬೇಕಾಗುತ್ತದೆ, ಪಂಚಾಯತ್ ಅಧಿಕಾರಿಗಳು ಶಾಲೆ ಮತ್ತು ಅಂಗನವಾಡಿಗಳಿಂದ ಮಕ್ಕಳ ಸ್ಥಿತಿಗತಿ ವರದಿಯನ್ನು ಸಂಗ್ರಹಿಸಿ ಪಂಚಾಯತ್ ಮಟ್ಟದಲ್ಲಿ ರಚಿಸಿರುವ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಬೇಕಾಗುತ್ತದೆ.

ತದನಂತರ ಒಂದು ದಿನ ಎಲ್ಲಾ ಶಾಲೆಯ ಮಕ್ಕಳನ್ನು ಸೇರಿಸಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಮಾಡಬೇಕಿದೆ. ಎಲ್ಲಾ ಮಕ್ಕಳಿಗೆ ರೋಗನಿರೋಧಕಗಳು ತಲುಪಿರುವ ಬಗ್ಗೆ, ಅಪೌಷ್ಟಿಕತೆಯಿರುವ ಮಕ್ಕಳ ಬಗ್ಗೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ದತಿಗಳನ್ನು ನಿಲ್ಲಿಸುವ ಬಗ್ಗೆ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ, ಮಕ್ಕಳಿಗೆ ಬದುಕಲು ಮತ್ತು ಶಿಕ್ಷಣ ಪಡೆಯಲು ಬೇಕಾದ ಸೌಲಭ್ಯಗಳನ್ನೂ ಒಳಗೊಂಡಂತೆ ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚಿಸಬೇಕಿದೆ.

ಆದ್ದರಿಂದ ಸಭೆಯಲ್ಲಿ ಮಕ್ಕಳೂ ಸಹ ವೈಯಕ್ತಿಕ, ತಮ್ಮ ಹಳ್ಳಿಯ ಮತ್ತು ಶಾಲೆಯ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸಬೇಕೆಂದು ಅಭಿಪ್ರಾಯಪಟ್ಟರು.


ನೋಡಲ್ ಅಧಿಕಾರಿಗಳಾದ ಮಂಜುಪ್ರಸಾದ್ ರವರು ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಮನೆಗೂ ಗಂಗೆ ಶೀರ್ಷಿಕೆಯಡಿ ಪ್ರತಿಯೊಬ್ಬರಿಗೂ ಸಮಾನವಾಗಿ ನೀರನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಜೊತೆಗೆ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳ ಗ್ರಾಮ ಸಭೆಯಲ್ಲಿ ಅನೇಕ ಮಕ್ಕಳು ತಮ್ಮ ಹಳ್ಳಿಯಲ್ಲಿ ಮತ್ತು ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತೇವೆಂದು ತಿಳಿಸಿದರು.


ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಗ್ರಾಮ ಪಂಚಾಯತಿಯ ಪಂಚಾಯತ್ ಅಧ್ಯಕ್ಷೆಯಾದ ಶ್ರೀಮತಿ ಪುಷ್ಪಲಕ್ಷ್ಮೀರವರು ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಗ್ರಾಮ ಪಂಚಾಯತಿಯು ಬದ್ದವಾಗಿದ್ದು, ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಶ್ರಮಿಸುತ್ತೇವೆ. ಈ ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರಿಂದ ಪಂಚಾಯತಿಯಲ್ಲಿ ಕ್ರಿಯಾ ಯೋಜನೆ ಮಾಡಲು ಸಹಾಯಕವಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಹನುಮಂತರಾಯಪ್ಪರವರು ಹಿಂದಿನ ವರ್ಷದ ಮಕ್ಕಳ ಗ್ರಾಮಸಭೆಯ ಅನುಪಾಲನಾ ವರದಿಯನ್ನು ಮಂಡಿಸಿದರು. ಶಿಕ್ಷಕರಾದ ಹನುಮಂತರಾಜು ರವರು ನಿರೂಪಿಸಿದರು. ರಾಜ್ಯದ ಮಕ್ಕಳ ಸ್ಥಿತಿಗತಿ ವರದಿಯನ್ನು ಪ್ರದರ್ಶಿಸಲಾಯಿತು. ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ಪಂಚಾಯತ್ ವತಿಯಿಂದ ಎಲ್ಲಾ ಶಾಲೆಗಳಿಗೆ ಆಟದ ಸಾಮಾಗ್ರಿಗಳನ್ನು ವಿತರಿಸಲಾಯಿತು. ಶಿಕ್ಷಣ ಇಲಾಖೆಯ ಸಿಆರ್‌ಪಿ ಸುರೇಶ್ ರವರು, ಆರೋಗ್ಯ ಇಲಾಖೆಯ ಸಿಬ್ಬಂದಿ ಗೋಪಿನಾಥ್, ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕರಾದ ಸಿದ್ದೇಶ್ ಕೆ.ಎಸ್ ರವರು, ಗ್ರಾಮ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ನಾಗಣ್ಣ, ರಾಮಕ್ಕರವರು, ಸಿಎಂಸಿಎ ಸ್ವಯಂಸೇವಕರಾದ ನವ್ಯರವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗದವರು, ಮಕ್ಕಳು ಮತ್ತು ಗ್ರಾಮಸ್ಥರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?