ರಾಜ್ಯ, ರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿರುವ ಬಹುರೂಪಿ ಪ್ರಕಾಶನದ ಧ್ಯಾನಕ್ಕೆ ಕೂತ ನದಿ ಕಥಾ ಸಂಕಲನ ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಹಲವು ಕಥೆಗಳ ಒಂದು ಸಂಕಲನ.
ಕಥೆಗಾರ ಸದಾಶಿವ ಸೊರಟೂರು ಕಥೆಗಳ ಮೂಲಕವೇ ಪರಿಚಿತರು. ಒಂದಿಷ್ಟು ಕುತೂಹಲ, ಮನಕ್ಕೆ ಸಿಗದ ಉತ್ತರಗಳ, ಮಾನವೀಯತೆಯ ಗೆಲವು, ತತ್ತರಗೊಂಡ ಬದಕು, ಜತೆಗೊಂದಿಷ್ಟು ಪ್ರೀತಿ ಅನೇಕ ಕತೆಗಳ ಜೀವಾಳ.
ಪ್ರತಿಯೊಂದು ಕತೆಯೂ ಓದಿಸಿಕೊಳ್ಳುವ ಕುತೂಹಲವನ್ನು ಮೂಡಿಸುತ್ತವೆ. ಹೀಗಾಗಿ ಓದಬಹುದಾದ ಕಥಾ ಸಂಕಲನ. ಅಪ್ಪನ ಕುರಿತ ವ್ಯಾಮೋಹಿಗಳಿಗೆ ಹರಿದ ಕುಪ್ಪಸದ ಬೆಳಕು ಕತೆ ಇಷ್ಟವಾಗುತ್ತದೆ. ಇಲ್ಲಿರುವ ಎಲ್ಲ ಕತೆಗಳ ಬಗ್ಗೆ ಪತ್ರಕರ್ತ ದೇವು ಪತ್ತಾರ್ ಒರೆದಿದ್ದಾರೆ.
ಹರಿದ ಕುಪ್ಪಸದ ಬೆಳಕು ಕತೆಯ ಕೆಲವು ಸಾಲುಗಳು ಹೀಗಿವೆ. ಓದೂಗರ ಕುತೂಹಲಕ್ಕಾಗಿ ಇಲ್ಲಿ ನೀಡಲಾಗಿದೆ. ಪುಸ್ತಕ ಬೇಕಿದ್ದವರು ಬಹುರೂಪಿಯ ಅಂತರ್ಜಾಲದ ಮೂಲಕವೂ ತರಿಸಿಕೊಳ್ಳಬಹುದು.
ಹರಿದ ಕುಪ್ಪಸದ ಬೆಳಕು ಕತೆಯ ತುಣುಕು
ಬಣ್ಣದ ಟೀ ಶರ್ಟ್, ಮಂಡಿ ಮೇಲೆ ಹರಿದ ಜೀನ್ಸ್ ತೊಟ್ಟಿದ್ದ.
ಅವನು ಬೆಂಗಳೂರಿಗೆ ಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಬೆಂಗಳೂರಿನಲ್ಲಿ ಒಂದು ವರ್ಷ ಕಾಲ ಆನ್‌ಲೈನ್ ಮ್ಯಾಗಜೀನೊಂದರಲ್ಲಿ ಕೆಲಸ ಮಾಡಿ, ‘ನಿಮ್ಮಪ್ಪ ಹೋಗಿಬಿಟ್ರಪ’ ಅನ್ನುವ ಸುದ್ದಿ ಹೊತ್ತುಕೊಂಡು, ಕಣ್ಣಲ್ಲಿ ನೀರು ತುಂಬಿಕೊಂಡು ಬಸ್ಸು ಹತ್ತಿದ್ದ. ಹೊರಡುವ ಮುನ್ನ ಗೆಳತಿ ನೀತಾಗೆ ‘ಅಪ್ಪ ಹೋಗಿಬಿಟ್ರು ನೀತಾ’ ಅನ್ನುವ ಮೆಸೇಜ್ ಹಾಕಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಅಕ್ಷರಶಃ ಮೌನಿಯಾಗಿದ್ದ. ನಂತರ ಸುಮಾರು ಒಂದು ವರ್ಷ ಕಾಲ ಅವನಿಗೊಂದು ಕೆಲಸ ಅನ್ನುವುದೂ ಇರಲಿಲ್ಲ. ಇದರ ನಡುವೆ ಮೂರಾಲ್ಕು ಬಾರಿ ಪತ್ರಿಕೆಗಳಲ್ಲಿ ಕೆಲಸಕ್ಕೆ ಸೇರಲು ಸಂದರ್ಶನಕ್ಕೆಂದು ಬಂದು ಹೋಗಿದ್ದ. ಇವನು ಹೇಳುವುದಕ್ಕೂ ಅವರು ಕೇಳುವುದಕ್ಕೂ ಹೊಂದದೆ ಕೆಲಸ ಕೈ ಹಿಡಿದಿರಲಿಲ್ಲ. ಸೆಂಟ್ರಲ್ ಕಾಲೇಜು ಮುಂದಿನ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿದ್ದ. ಹುಡುಕಿ- ಹುಡುಕಿ ಸೋತು ಮತ್ತೆ ಊರಿನ ಬಸ್ಸು ಹತ್ತುತ್ತಿದ್ದ.
ಮಗದೊಂದು ಪ್ಯಾರಾ
ನನ್ನ ಸಾವು ಸಾವಷ್ಟೆ ಅದಕ್ಕೆ ಕಾರಣಗಳು ಅಂತ ಇಲ್ಲ..’
ಎಂಬ ಒಂಟಿ ಸಾಲೊಂದು ಒಂದು ಪುಟದ ತುಂಬೆಲ್ಲಾ ಅನಾಥವಾಗಿತ್ತು. ಅಪ್ಪ ಒಂದೇ ಸಾಲನ್ನು ಬರೆದು ಬದುಕು ಮುಗಿಸಿದ್ದರು. ಅಪ್ಪ ‘ವ’ ಬರೆಯುವ ಶೈಲಿ ಶರ್ವನಿಗೆ ಗೊತ್ತಿತ್ತು. ವ ಬರೆಯುವಾಗ ಮೊದಲ ಆರಂಭದ ಸುರುಳಿ ಕೆಳಗೆ ಬಚ್ಚಿಟ್ಟುಕೊಳ್ಳುತ್ತಿತ್ತು. ಸ್ಕೂಲಿಗೆ ಪತ್ರ ಬರೆಯುವಾಗ ಅದರಲ್ಲಿ ‘ಶರ್ವ ಹುಷಾರು, ಶರ್ವ ಅರಾಮಾಗಿ ಓದು ಟೆನ್ನನ್ ಬೇಡ.. ಶರ್ವ ದುಡ್ಡು ಏನಾದ್ರೂ ಬೇಕಿತ್ತಾ..’ ಅಂತ ಬರೆಯುವಾಗಲೆಲ್ಲಾ ಅವರು ವ ಬರೆಯುತ್ತಿದ್ದ ಶೈಲಿ ಅವನಿಗೆ ಮನದಟ್ಟಾಗಿತ್ತು.
‘ಹೌದು ಸರ್.. ಈ ಅಕ್ಷರಗಳು ಅಪ್ಪನವೇ..’ ಶರ್ವ ಖಚಿತಪಡಿಸಿದ್ದ.
ಅವನ ಹೇಳಿಕೆ ದಾಖಲಿಸಿಕೊಂಡು ಸಹಿ ಪಡೆದು ಅವರು ಹೊರಟು ಹೋಗಿದ್ದರು.
ಅಪ್ಪನ ನೆನಪುಗಳೊಂದಿಗೆ ಬದುಕಿನ ಚಿತ್ರಣ ತೆರೆದುಕೊಳ್ಳುವ ಕಥಾ ಶೈಲಿ ಕುತೂಹಲ ಹುಟ್ಟಿಸುತ್ತದೆ.