ಕೇಂದ್ರ ಸಂಸ್ಕೃತಿಕ ಸಚಿವಾಲಯದಿಂದ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರಿಗೆ ರಾಜಸ್ಥಾನ ರಾಜ್ಯದ ಉದಯಪುರದಲ್ಲಿ ನಮ್ಮ ಸಂಸ್ಕೃತಿಯಲ್ಲಿ ವಿವಿಧತೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ತರಬೇತಿ ಪಡೆಯಲು ಕರ್ನಾಟಕ ರಾಜ್ಯದಿಂದ 8 ಶಿಕ್ಷಕರು ಭಾಗವಹಿಸಿ, ವಿವಿಧ ಕಲೆಗಳನ್ನು ಅನಾವರಣಗೊಳಿಸಿ, ಹಲವು ರಾಜ್ಯಗಳ ಶಿಕ್ಷಕರಿಂದ ಹಾಗೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದ ಪಡೆದಿದ್ದಾರೆ.
ಶಿರಾ ತಾಲ್ಲೂಕಿನ ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ಹಾಗೂ ಗೊಲ್ಲರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ನೂರ್ ಅಹಮದ್ ಸೇರಿದಂತೆ ರಾಜ್ಯದ ಚಿತ್ರದುರ್ಗ, ರಾಮನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಲಾ ಇಬ್ಬರು ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ನಮ್ಮ ನೆಲಮೂಲ ಸಂಸ್ಕೃತಿಯ ಬಗ್ಗೆ ಅಲ್ಲಿನ ಶಿಕ್ಷಕರಿಗೆ ಮಾಹಿತಿ ನೀಡಿ, ಬೇರೆ ಬೇರೆ ರಾಜ್ಯಗಳ ಕಲೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅಧ್ಯಯನ ಮಾಡಿ ಬಂದಿದ್ದಾರೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯದಿಂದ ರಾಜಸ್ಥಾನದ ಉದಯಪುರದಲ್ಲಿ ಕಳೆದ ಡಿ.11 ರಿಂದ ಪ್ರಾರಂಭವಾದ ಈ ತರಬೇತಿ ಕಾರ್ಯಾಗಾರದಲ್ಲಿ ಪ್ರತಿದಿನವೂ ಎರಡು ರಾಜ್ಯಗಳ ವಿಸ್ತೃತ ಮಾಹಿತಿಯೊಂದಿಗೆ ಅಲ್ಲಿನ ಭೌಗೋಳಿಕ ವೈವಿಧ್ಯತೆ, ಭಾಷಾ ವೈವಿಧ್ಯತೆ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಪ್ರಾದೇಶಿಕ ಕಲೆಗಳ ಅನಾವರಣ, ಸ್ಥಳೀಯ ನೃತ್ಯ ಪ್ರಕಾರಗಳು ಸೇರಿದಂತೆ ಹಲವು ವೈವಿಧ್ಯತೆಗಳನ್ನು ಪ್ರತಿ ಶಿಕ್ಷಕರು ಪ್ರದರ್ಶನ ನೀಡಿದರು.
ಕರ್ನಾಟಕದ ಜಾನಪದ ನೃತ್ಯ ಪ್ರಕಾರಗಳಾದ ಕಂಸಾಳೆ, ವೀರಗಾಸೆ, ಯಕ್ಷಗಾನ, ಡೊಳ್ಳು ಕುಣಿತ, ಹುಲಿ ಕುಣಿತ, ಗೊರವರ ಕುಣಿತ ಸೇರಿದಂತೆ ಹಲವು ಕಲಾಪ್ರಕಾರಗಳ ಪರಿಚಯ ಮಾಡಿಕೊಡಲಾಯಿತು. ರಾಜ್ಯದ ವಿವಿಧ ಭಾಗಗಳ ವೇಷ-ಭೂಷಣ, ಆಹಾರ ಪದ್ದತಿ, ನೃತ್ಯ ಪ್ರಕಾರಗಳನ್ನು ಪ್ರದರ್ಶನ ಮಾಡಲಾಯಿತು.
ಶಿರಾ ತಾಲ್ಲೂಕು ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ದಕ್ಷಿಣ ಕರ್ನಾಟಕದ ಮೈಲಾರಲಿಂಗನ ಭಕ್ತರು ಪ್ರದರ್ಶಿಸುವ ಗೊರವರ ಕುಣಿತ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದ್ದು, ಎಲ್ಲರ ಮನ ಸೂರೆಗೊಂಡಿತು. ಹಿರಿಯೂರಿನ ಅರುಣ್, ಚಿದಾನಂದ್, ಚಿಕ್ಕಮಗಳೂರಿನ ಶಿವಕುಮಾರ್, ರಾಮನಗರ ಜಿಲ್ಲೆಯ ರಂಜಿತ ಸಂಗಡಿಗರು ಪ್ರದರ್ಶಿಸಿದ ಹುಲಿ ಕುಣಿತ ಆಕರ್ಷಣೀಯವಾಗಿತ್ತು. ನಂತರ ರಾಜ್ಯದ ವಿಶೇಷ ತಿನಿಸುಗಳನ್ನು ಎಲ್ಲಾ ಶಿಬಿರಾರ್ಥಿಗಳಿಗೂ ಹಾಗೂ ಅಧಿಕಾರಿಗಳಿಗೂ ವಿತರಿಸಿ, ಅದರ ವೈಶಿಷ್ಟ್ಯತೆ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರು ಕರ್ನಾಟಕ ದೇಗುಲಗಳ ಬಗ್ಗೆ ತಯಾರಿಸಿದ ಪ್ರಾಜೆಕ್ಟ್ ಗೆ ಪ್ರಥಮ ಬಹುಮಾನ ಲಭಿಸಿತು. ರಾಮನಗರದ ಲಾವಣ್ಯ, ಚಿಕ್ಕಮಗಳೂರಿನ ಶಕೀಲ ಭಾಗವಹಿಸಿ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಕುರಿತು ಮಾಹಿತಿ ಹಂಚಿಕೊಂಡರು.
ಫೋಟೋ-1 ಮತ್ತು 2
ಶಿರಾ ತಾಲ್ಲೂಕಿನ ಶಿಕ್ಷಕರಾದ ಆರ್.ತಿಪ್ಪೇಸ್ವಾಮಿ ಹಾಗೂ ನೂರ್ ಅಹಮದ್ ಸೇರಿದಂತೆ ರಾಜ್ಯದ 8 ಜನ ಶಿಕ್ಷಕರು ರಾಜಸ್ಥಾನದ ಉದಯಪುರದಲ್ಲಿ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ಕಲೆಗಳ ಪ್ರದರ್ಶನ ನೀಡಿದರು.