ದೇವರಹಳ್ಳಿ ಧನಂಜಯ
ಆಸೆ,ಕನಸು,ಪಥ್ಯ,ಅಪಥ್ಯ,
ಬೇರೆ,ಬೇರೆಯದೇ ಸತ್ಯ.
ನಿನ್ನ ಆಗಮನದಿಂದ ಸುಖಾಂತ್ಯ
ಎರಡು ಪ್ರಪಂಚ ಒಂದಾಗಿ ದಾಂಪತ್ಯ.
ಕಿಚ್ಚು,ಹುಚ್ಚು,ಬೇರೆಯದೇ ಸಂಬಂಧ
ಎಲ್ಲವೂ ಡಿಕ್ಕಿ,ಸೆಳೆತ ವೈರುಧ್ಯ.-
ಕೂಡಿ, ಕೊನರು ಹೊಮ್ಮಿದ
ಜೀವಪರ ಗಂಧ.
ಕೊಸರು ಕೊನರಾಗಿ ಮಡಿಲು ತುಂಬಿ.
ಮೈ ಮನದಿ ಕಚಗುಳಿ ಪಲ್ಲವಿಸಿದಾಗ .
ಹೇರುವ ಯಾತನೆಯು ಪುಳಕದ ಘಳಿಗೆಯ
ಹೆತ್ತ ಒಡಲು ಮರೆಯಲಾಗದು.
ಹುಟ್ಟಿಸಿದವ ಎಂಬ ಅಹಂಕಾರದ ಎದೆಯ ಮೇಲೆ
ಪುಟ್ಟ ಪಾದ ಇಟ್ಟು ತುಟಿ ಚೆಲ್ಲಿದ ನಗು.
“ನಾನು ಹುಟ್ಟಿದ ಮೇಲೆ ನೀನು ಹುಟ್ಟಿದ್ದು”ಎಂದ ಮಗು,
ನಿರಹಂಕಾರದ ಪಾಠಹೇಳಿದ ಗುರು.
ನಿಮ್ಮೂರಿನ ಸಮಸ್ಯೆ, ಸುದ್ದಿಗಳನ್ನು ಇಲ್ಲಿಗೆ ಬರೆದು ವಾಟ್ಸಾಪ್ ಮಾಡಿ: 9844817737
ಕಣ್ಣು ಕಂಡವರೆಲ್ಲ ನಿನ್ನ ಬಿಂಬವೇ ಆಗಿ
ಎಲ್ಲರೂ ಎಲ್ಲವೂ ನೀನೇ ಆಗಿ
ಒಳಗಿನ ಕತ್ತಲೆ ದೂಡಿ.
ಎದೆಯ ಬೆಳಗಿದ ಮಿಂಚುಹುಳುವೆ.
ರಕ್ತ ಮಾಂಸ ದಿಂದಲೇ ಉದಿಸಿ
ಮನುಜ ಮಿತಿಯನ್ನು ಮಾನವೀಯ ಗೊಳಿಸಿ.
ದೇವರ ಹೆಸರಲ್ಲಿ ಕತ್ತಿ ಶೂಲಗಳು ಇರಿಯುತ್ತಿವೆ.
ಗುಂಡು ತುಪಾಕಿ ಸಿಡಿಯುತ್ತಿವೆ
ಸುಳ್ಳ, ಕೊಲೆಗಡುಕ, ಎಲ್ಲರ ಎದೆಯಲ್ಲೂ
ತಣ್ಣಗೆ ಕುಳಿತು ನಗುತ್ತಿರುವ ನನ್ನ ದೇವರೇ
ನಿನ್ನ ವಿಶಾಲ ಬಿತ್ತಿಯ ಮರೆಯಲಾಗದು
ಮರೆಯಲಾಗದ ಕವಿತೆಯ ಬರೆಯಲಾಗದು.