ದೇವರಹಳ್ಳಿ ಧನಂಜಯ
ನಾನು ಕವಿತೆ .
ಕಾಯುತ್ತಿದ್ದೇನೆ.
ಅಕ್ಷರದಾಚೆಗೆ ಚಾಚಿಕೊಳ್ಳಲು.
ಜಗದ ಪ್ರೀತಿಯ ಬಾಚಿಕೊಳ್ಳಲು.
ಮುಟ್ಟಲಾಗದ ಭಾವವಾ ಮುಟ್ಟಿ
ಹೊಸ ಹುಟ್ಟಿಗೆ
ಮುಟ್ಟಾಗಲು.
ಮುಟ್ಟ ಸಂಕಟಕೆ ರಟ್ಟಾಗಲು.
ಹುಣಸೆಹಣ್ಣಿಗೆ ಬೀಸಿದ ಕೋಲು
ಗುಬ್ಬಿ ಗೂಡಿಗೆ ತಾಕಿ,
ಹೊಡೆದ ತತ್ತಿಯ ಮುಂದೆ
ತಾಯ ಎದೆ ತತ್ತರಿಸಿದೆ.
ಮರೆಯಲ್ಲಿ ನಿಂತು,
ಹುಳಿ ಮಾವಿಗೆ ಬೀಸಿದ
ಕವಣೆ ಕಲ್ಲು,ಕೊಲ್ಲುತ್ತಿದೆ
ಜಗದ ಜೀವತಂತು.
ತಳವಿಲ್ಲದ ತುತ್ತಿನ ಚೀಲ
ತುಂಬಲು ಶಹರು ಸೇರಿ
ಕಳೆದು ಹೋದವರು
ನೆಲೆ ಕಳೆದುಕೊಂಡಿದ್ದಾರೆ.
ಅಲೆಮಾರಿ ದೊಂಬರ ಮಗಳು
ಗಾಳಿಯಲ್ಲಿ ಕಟ್ಟಿದ
ಅಗ್ಗದ ಗುಂಟ
ಆಕಾಶಕ್ಕೆ ಹೆಜ್ಜೆ ಹಾಕುತ್ತಿದ್ದಾಳೆ
ಮೇರೆ ಮೀರಿದ
ಉಳ್ಳವರ ದೊಂಬರಾಟ
ಪುಟ್ಟ ಮಗುವಿನ ತುತ್ತಿನ ಕನಸ
ಕಸಿದು,ಕೆಕೆ ಹಾಕಿದೆ.
ನಾನು ಕವಿತೆ.
ಕಾಯುತ್ತಿದ್ದೇನೆ.
ಅಕ್ಷರದ ಆಚೆಗೆ ಚಾಚಿಕೊಳ್ಳಲು.
ಜಗದ ಪ್ರೀತಿಯ ಬಾಚಿಕೊಳ್ಳಲು.