ಜಿ.ಎನ್.ಮೋಹನ್
ನಾನು ಕಲಬುರ್ಗಿಗೆ ಕಾಲಿಟ್ಟು ಕೆಲವು ತಿಂಗಳಷ್ಟೇ ಆಗಿತ್ತು.
‘ಲೋಹಿಯಾ ಪ್ರಕಾಶನ’ದ ಚನ್ನಬಸವಣ್ಣ ಅವರು ಫೋನ್ ಮಾಡಿ ನಿಮಗೆ ಒಂದು ಹಸ್ತಪ್ರತಿ ಕಳಿಸ್ತಿದ್ದೇನೆ ಅದನ್ನು ಓದಿ ಪ್ರಿಂಟ್ ಮಾಡಬಹುದಾ ಹೇಳಿ ಎಂದು ಒತ್ತಾಯಿಸಿದರು.
ಅವರು ತಿಳಿಸಿದಂತೆ ನಾಲ್ಕೈದು ದಿನಗಳಲ್ಲಿ ಸಾಕಷ್ಟು ದೊಡ್ಡದಾದ ಹಸ್ತಪ್ರತಿಯೇ ಬಂತು.
ನೋಡಿದರೆ ಅದು ನಮ್ಮ ಎಚ್. ನಾಗವೇಣಿಯ ‘ಗಾಂಧಿ ಬಂದ’ ಕಾದಂಬರಿಯ ಹಸ್ತಪ್ರತಿ.
ಆಗಿನ್ನೂ ಕಲಬುರ್ಗಿಯ ನೆಲದ ಸೊಗಡಿಗೆ ಹೊಂದಿಕೊಳ್ಳುತ್ತಿದ್ದ ನನಗೆ ಕರಾವಳಿಯ ಸೆಳೆತ ಬಿಟ್ಟಿರಲಿಲ್ಲ.
ಐದು ವರ್ಷಗಳ ಕಾಲ ಮಂಗಳೂರಿನಲ್ಲಿದ್ದು ಇಡೀ ಅವಿಭಜಿತ ದಕ್ಷಿಣ ಕನ್ನಡವನ್ನು ಬಿರುಗಾಳಿಯಂತೆ ಸುತ್ತಿದ್ದ ನನಗೆ ಕಡಲಿಲ್ಲದ ಊರಲ್ಲಿ ಇರುವುದಕ್ಕೆ ಮೈ ಮನಸ್ಸನ್ನು ಒಗ್ಗಿಸಿಕೊಳ್ಳುತ್ತಿದ್ದೆ.
ಆಗ ಸಿಕ್ಕಿದ್ದೇ ಇದು.
ಓದಲು ಕುಳಿತವನು ಆ ಹಸ್ತಪ್ರತಿ ಹಿಡಿದೇ ಹಗಲು ರಾತ್ರಿಗಳನ್ನು ಒಂದು ಮಾಡಿದೆ.
ಕೊನೆ ಪುಟ ಮಗುಚಿದಾಗ ‘ವಾಹ್!’ ಎನ್ನುವ ಉದ್ಘಾರ ಹೊರಬಿತ್ತು.
ನಾಗವೇಣಿ ತಮ್ಮ ಇಡೀ ಬದುಕನ್ನು ಅರೆದು ಸೃಷ್ಟಿಸಿದ್ದಾರೇನೋ ಎನ್ನುವಂತಿತ್ತು ‘ಗಾಂಧಿ ಬಂದ’.
ಮೊದಲು ಉತ್ತರ ಕನ್ನಡ, ದಕ್ಷಿಣ ಕನ್ನಡ ಎರಡೂ ಒಂದೇ ಆಗಿತ್ತು. ಅದಕ್ಕೆ ‘ಕನ್ನಡ ಜಿಲ್ಲೆ’ ಎಂದು ಕರೆಯುತ್ತಿದ್ದರು.
ಆ ಕನ್ನಡ ಜಿಲ್ಲೆಗೆ ಮೂರು ಬಾರಿ ಗಾಂಧಿ ಭೇಟಿ ಕೊಡುವ ಹಿನ್ನೆಲೆಯಲ್ಲಿ ಜರುಗುವ ಕಥೆ ಇದು.
ನಾನು ಇನ್ನಿಲ್ಲದಂತೆ ಮಿಸ್ ಮಾಡಿಕೊಳ್ಳುತ್ತಿದ್ದ ಇಡೀ ಕಡಲ ತೀರ ಈ ಕಾದಂಬರಿಯ ಮೂಲಕ ನನ್ನ ಮಡಿಲಿಗೆ ಬಂದು ಬಿದ್ದಿತ್ತು.
ಅಲ್ಲಿಯ ಕಡಲು, ಬದುಕು ಎಲ್ಲವೂ ನನ್ನನ್ನು ಮತ್ತೆ ತವರಿಗೆ ಎಳೆದುಕೊಂಡು ಹೋಗಿ ನಿಲ್ಲಿಸಿತ್ತು.
ಅದನ್ನು ಓದಿ ಥ್ರಿಲ್ ಆದ ನಾನು ಆ ಥ್ರಿಲ್ ಇತರರಿಗೂ ದಾಟಿಸಬೇಕೆಂದುಕೊಂಡು ನನ್ನ ಆಯ್ದ ಗೆಳೆಯರಿಗೆ ನೀಡಿದೆ.
ಆ ಕಾದಂಬರಿ ಕೈದಾಟಿದ ಎರಡು ದಿನಕ್ಕೆ ನನ್ನ ಬಳಿ ವಾಪಸ್ ಬಂತು ‘ಬರೀ ಪ್ರೂಫ್ ಮಿಸ್ಟೇಕು ಸಾರ್’ ಎನ್ನುವ ಷರಾದೊಂದಿಗೆ.
ನಾನೂ ಓದಿದ್ದೆನಲ್ಲಾ, ಏನಿತ್ತು ಪ್ರೂಫ್ ಮಿಸ್ಟೇಕ್ ಅದರಲ್ಲಿ ಎಂದು ಕ್ಷಣ ಗೊಂದಲಕ್ಕೊಳಗಾದೆ.
ಆಮೇಲೆ ಗೊತ್ತಾಯಿತು. ತುಳುನಾಡಿನ ಬಹುತೇಕ ಪದ ಪ್ರಯೋಗಗಳು ಅಲ್ಲಿನವರಿಗೆ ಅರ್ಥವೇ ಆಗಿರಲಿಲ್ಲ.
ಒಂದೇ ಏಟಿಗೆ ಪ್ರೂಫ್ ಮಿಸ್ಟೇಕ್ ಎನ್ನುವ ತೀರ್ಮಾನಕ್ಕೆ ಬಂದಿದ್ದರು.
ಇದಾಗಿ ಮೂರು ವರ್ಷ ಕಳೆಯಿತು.
ನಾನು ಕಲಬುರ್ಗಿಯಲ್ಲಿ ಮೂರು ವರ್ಷ ಇದ್ದು ಕೆಲಸ ಬದಲಿಸಿ ಮತ್ತೆ ಕರಾವಳಿಯನ್ನೇ ಆಯ್ಕೆ ಮಾಡಿಕೊಂಡು ಬಂದಿದ್ದೆ.
ಬಂದಿನ್ನೂ ಕೆಲ ತಿಂಗಳಾಗಿರಲಿಲ್ಲ
ಮತ್ತೆ ಲೋಹಿಯಾ ಚನ್ನಬಸವಣ್ಣ ಅವರ ಕರೆ
ಒಂದು ಹಸ್ತಪ್ರತಿ ಕಳಿಸ್ತೇನೆ ಓದಿ ಮುದ್ರಣಕ್ಕೆ ತೆಗೆದುಕೊಳ್ಳಬಹುದಾ ಹೇಳಿ ಅಂತ.ಜ
ಸರಿ ಅಂದ ಮೂರನೆಯ ದಿನಕ್ಕೆ ಹಸ್ತಪ್ರತಿ ಬಂತು.
ನೋಡುತ್ತೇನೆ ಗೀತಾ ನಾಗಭೂಷಣರ ‘ಬದುಕು’ ಕಾದಂಬರಿ.
ಮತ್ತೆ ನಾನು ಹಸ್ತಪ್ರತಿ ಹಿಡಿದು ಹಗಲು ರಾತ್ರಿಗಳನ್ನು ಒಂದು ಮಾಡಿದೆ.
ಓದಿ ಮುಗಿಸಿದಾಗ ಸಾಕಷ್ಟು ದಿನ ಅದು ನನ್ನೊಳಗೆ ಆಡುತ್ತಲೇ ಇತ್ತು.
ಅದರೊಳಗೆ ನನ್ನ ಕಲಬುರ್ಗಿಯ ನಿಟ್ಟುಸಿರಿತ್ತು.
ಅಲ್ಲಿಯ ನೋವು ಪುಟ ಪುಟದಲ್ಲೂ ಹೊರಳಿತ್ತು.
ನನಗೆ ಗೀತಕ್ಕನ ಕೃತಿ ಎಷ್ಟು ಇಷ್ಟವಾಯಿತೋ ಅಷ್ಟೇ ನಾನು ಮಿಸ್ ಮಾಡಿಕೊಳ್ಳುತ್ತಿದ್ದ ಕಲಬುರ್ಗಿ ನನ್ನ ಕೈಗೆ ಮತ್ತೆ ಸಿಕ್ಕಿದ್ದು ಇನ್ನಷ್ಟು ಸಂತೋಷಕ್ಕೆ ಕಾರಣವಾಗಿತ್ತು.
ಕಲಬುರ್ಗಿ ಎನ್ನುವುದು ಬರೀ ಶರಣಬಸವೇಶ್ವರ, ಬಂದೇ ನವಾಜ್ ಅಲ್ಲ.. ಮಾಪುರ ತಾಯಿಯ ಮಕ್ಕಳ ತವರು ಕೂಡಾ.
ಇಂತಹ ಜಿಲ್ಲೆಯ ಮೂಲೆ ಮೂಲೆ ಸುತ್ತಿದ ನನ್ನೊಳಗೆ ಅವರ ವೇದನೆಯ ಎಳೆಯೊಂದು ಸದಾ ಜೊತೆಯಾಗಿತ್ತು.
ಹಾಗಾಗಿ ಈ ಕೃತಿ ನನ್ನ ಇನ್ನೊಂದು ತವರಿನ ಗಂಧವನ್ನು ತೀಡಿತ್ತು
ಇದರಿಂದ ಥ್ರಿಲ್ ಆದ ನಾನು ಇದನ್ನು ಬೇರೆಯವರೂ ಓದಬೇಕೆಂದು ಅಲ್ಲಿಯ ಮುದ್ರಕನೊಬ್ಬನಿಗೆ ಕೊಟ್ಟೆ.
ಆಶ್ಚರ್ಯ ಆದರೂ ನಿಜ ಆತ ಎರಡೇ ದಿನದಲ್ಲಿ ‘ಸಾರ್ ಇದರಲ್ಲಿ ಬರೀ ಪ್ರೂಫ್ ಮಿಸ್ಟೇಕ್’ ಎಂದು ವಾಪಸು ಕೊಟ್ಟ.
ನನಗೆ ಇಂದಿಗೂ ಅಚ್ಚರಿ ಎರಡು ಮಹತ್ಕೃತಿಗಳು, ಎರಡು ಭಿನ್ನ ಸಂಸ್ಕೃತಿಯ ಲೋಕದಲ್ಲಿ ‘ಪ್ರೂಫ್ ಮಿಸ್ಟೇಕ್’ ಕೃತಿಗಳಾಗಿ ಹಣೆಪಟ್ಟಿ ಹೊಂದಿದ್ದವು.
ಆದರೆ ಎರಡೂ ಆಯಾ ನೆಲದ ಮಿಸ್ಟೇಕ್ ಗಳಿಗೆ ಖಂಡಿತಾ ಪ್ರೂಫ್ ಒದಗಿಸುತ್ತಿದ್ದವು.
—-
ಹೇಳಲು ಮರೆತೆ..
ನಾನು ಹಸ್ತಪ್ರತಿಯಲ್ಲಿಯೇ ಓದಿದ, ಮುದ್ರಿಸಲೇಬೇಕು ಎಂದು ಷರಾ ಬರೆದ ಎರಡೂ ಕೃತಿಗಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದು ಬೀಗಿದವು.
‘ಬದುಕು’ ಕೇಂದ್ರ ಸಾಹಿತ್ಯ ಅಕಾಡೆಮಿ, ‘ಗಾಂಧಿ ಬಂದ’ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾದವು.
ಗಾಂಧಿ ಬಂದ ಕೃತಿಯ ಮೊದಲ ಮುದ್ರಣಕ್ಕೆ ಬೆನ್ನುಡಿಯನ್ನು ನಾನೇ ಬರೆದಿದ್ದೆ.