Friday, November 22, 2024
Google search engine
Homeಸಾಹಿತ್ಯ ಸಂವಾದಅಂತರಾಳಅಮ್ಮ ರಿಟೈರ್ ಆಗ್ತಾಳೆ..

ಅಮ್ಮ ರಿಟೈರ್ ಆಗ್ತಾಳೆ..

ಜಿ ಎನ್ ಮೋಹನ್


ಅಮ್ಮ ರಿಟೈರ್ ಆಗ್ತಾಳೆ..
ಓದಿದ ತಕ್ಷಣ ಒಂದು ನಿಮಿಷ ಮನಸ್ಸು ಗೊತ್ತಿಲ್ಲದೆಯೇ ಜರ್ಕ್ ಹೊಡೆಯಿತು

ಅಮ್ಮ.. ರಿಟೈರ್ ಆಗ್ತಾಳೆ..??

ಮತ್ತೆ ಮತ್ತೆ ಓದಿಕೊಂಡೆ

ಪುಸ್ತಕದ ಅಂಗಡಿಯಲ್ಲಿ ಆ.. ಈ.. ಪುಸ್ತಕದ ಮೇಲೆ ಕೈ ಆಡಿಸುತ್ತಾ ಓಡಾಡುತ್ತಿದ್ದ ನನಗೆ ಯಾವುದೋ ಮೂಲೆಯಲ್ಲಿ ಅಡಗಿಕೊಂಡಿದ್ದ ಈ ಪುಸ್ತಕ ಕಂಡಿತು.

ತಕ್ಷಣ ಯಾರೋ ನನ್ನ ಅಂಗಿ ಜಗ್ಗಿದಂತಾಯ್ತು. ಒಂದು ಕ್ಷಣ ಅಲ್ಲೇ ನಿಂತೆ

ಪುಸ್ತಕದ ಹೆಸರು ‘ಅಮ್ಮ ರಿಟೈರ್ ಆಗ್ತಾಳೆ’.

ಇದನ್ನು ಆಗಿನ ಕಾಲದ ಪತ್ರಕರ್ತೆ, ಖಾದ್ರಿ ಶಾಮಣ್ಣನವರ ಗರಡಿಯಲ್ಲಿ ಪಳಗಿದ್ದ, ಜಿ ನಾರಾಯಣರ ಜೊತೆ ಪತ್ರಿಕಾ ಅಕಾಡೆಮಿಯಲ್ಲೂ ಇದ್ದ ಸುಶೀಲಾ ಕೊಪ್ಪರ್ ಅನುವಾದಿಸಿದ್ದು

‘ಆಯೀ ರಿಟಾಯರ್ ಹೋತೆಯ’ ಎನ್ನುವ ಮರಾಠಿ ನಾಟಕದ ಅನುವಾದ ಅದು.

ಅಶೋಕ್ ಪಾಟೋಳೆ ಎಂದರೆ ಮರಾಠಿ ರಂಗಭೂಮಿಯಲ್ಲಿ ಒಂದು ಹೊಸ ರೀತಿಯ ಸಂವೇದನೆ ಬೆಸುಗೆ ಹಾಕಿದವರು.

ಅದಕ್ಕೂ ಹೆಚ್ಚಾಗಿ ಹೆಣ್ಣಿನ ಮನಸ್ಸನ್ನು ರಂಗಭೂಮಿಗೆ ತಂದವರು. ‘ಸದ್ದಿಲ್ಲದೇ ಮಲಗಿಕೊಳ್ಳಿ ಇನ್ನು’ ‘ಅಕ್ಕಿ ಆರಿಸ್ತಾ ಆರಿಸ್ತಾ’ ‘ಆಕೆಯ ಬಳಿ ಇದೆ ಅಂತ’ ‘ರಾಮ ನಿನ್ನ ಸೀತೆ ಮಹಾತಾಯಿ’ ಇವರ ನಾಟಕಗಳ ಹೆಸರು.

ಒಂದು ಕ್ಷಣ ನನ್ನ ಮನಸ್ಸು ಖಾಲಿ ಉಯ್ಯಾಲೆಯೊಂದು ತೂಗುತ್ತಿರುವುದನ್ನು ನೋಡುತ್ತಾ ನಿಂತಂತಾಯ್ತು.

ಹೌದಲ್ಲಾ.. ಅಮ್ಮನಿಗೂ ರಿಟೈರ್ಮೆಂಟ್ ಇದ್ದಿದ್ದರೆ..
ಅಥವಾ ಅಮ್ಮನೇ ರಿಟೈರ್ಮೆಂಟ್ ಘೋಷಿಸಿಬಿಟ್ಟರೆ..

ಅಶೋಕ್ ಪಾಟೋಳೆ ನಾಟಕದಲ್ಲಿ ಒಂದು ದಿನ ಅಮ್ಮ ಹೀಗೇ ರಿಟೈರ್ಮೆಂಟ್ ಘೋಷಿಸಿಬಿಡುತ್ತಾಳೆ.

ಆ ನಂತರ ಇಡೀ ಮನೆ ಅಷ್ಟೇ ಅಲ್ಲ, ಆ ಮನೆಯ ಹೊರಗಿನ ಮನೆಗಳೂ..,

ಅದಷ್ಟೇ ಅಲ್ಲ, ಆ ಮನೆಯ ಹೊರಗಿನ ಮನಗಳೂ ಅಸ್ವಸ್ಥವಾಗುತ್ತ ಹೋಗುತ್ತವೆ, ಮಂಕಾಗುತ್ತ ಹೋಗುತ್ತವೆ.

ಹಾಗಾದರೆ ಅಮ್ಮ ಇಷ್ಟು ದಿನ ಕೆಲಸ ಮಾಡುತ್ತಿದ್ದಾಳೆ, ಅದೂ ಬೆಟ್ಟದಷ್ಟು ಎಂದು ಯಾರೂ ಗಮನಿಸಿರಲಿಲ್ಲವಲ್ಲ..

ಮೊನ್ನೆ ಹೀಗೆ ಯಾರ ಜೊತೆಯೋ ಮಾತನಾಡುತ್ತಿದ್ದೆ
ಅವರು ಇಂದಿನ ಮಹಿಳೆ ಮಾಡುತ್ತಿರುವ ಅಗಾಧ ಕೆಲಸದ ಅಂಕಿ ಅಂಶ ನೀಡುತ್ತಾ ಮಹಿಳೆಯ ಶ್ರಮ ಹೇಗೆಲ್ಲಾ ಇದೆ ಎನ್ನುವುದನ್ನು ಒತ್ತಿ ಹೇಳುತ್ತಿದ್ದರು

ನನಗೆ ತಕ್ಷಣ ನೆನಪಿಗೆ ಬಂದದ್ದು ಈ ‘ಅಮ್ಮ ರಿಟೈರ್ ಆಗ್ತಾಳೆ’ ಅನ್ನುವ ಪುಸ್ತಕ

‘ಸಾರ್ ಒಂದು ಕ್ಷಣ ಯೋಚಿಸಿ ನೋಡಿ

ನಮ್ಮ ಮನೆಯ ಅಮ್ಮ ರಿಟೈರ್ ಆಗಿಬಿಟ್ಟರೆ ಏನಾಗುತ್ತೆ ಅಂತ’ ಅಂದೆ

ಅವರು ತಕ್ಷಣ ನಿಟ್ಟುಸಿರಿಟ್ಟರು

ಹೌದಲ್ಲಾ, ನಾನೇಕೆ ಪೆಪ್ಸಿ ಇಂದಿರಾ ನೂಯಿ, ಎಸ್ ಬಿ ಐ ನ ಅರುಂಧತಿ ಭಟ್ಟಾಚಾರ್ಯ, ಐಸಿಐಸಿಐ ನ ಚಂದ್ರ ಕೊಚಾರ್ ಅವರ ಬಗ್ಗೆನೇ ಮಾತಾಡ್ತಿದ್ದೆ
ಅವರು ಮಾಡ್ತಿರೋದು ಮಾತ್ರ ಕೆಲಸ ಅಂದುಕೊಂಡೆ

ಅಮ್ಮ, ನಮ್ಮ ಮನೆಯ ಅಮ್ಮನೇ ಎಷ್ಟೊಂದು ದುಡೀತಿದ್ದಾಳಲ್ಲಾ
ಈ ಎಲ್ಲಾ ಶ್ರಮ ಹಣದಲ್ಲಿ ಲೆಕ್ಕ ಹಾಕಿದ್ರೆ ಅಮ್ಮ ಸಹಾ ನೂಯಿ, ಭಟ್ಟಾಚಾರ್ಯ, ಕೊಚಾರ್ ಗಿಂತ ಕಡಿಮೆ ಇಲ್ಲ ಆಲ್ವಾ ಅಂದರು

ನನ್ನ ಅಮ್ಮ ಈ ಹಿಂದೆ ಚಿಕ್ಕದಾಗಿ ಎಡವಿ ಬಿದ್ದ ಕಥೆ ನಿಮಗೆ ಹೇಳಬೇಕು.

ಎಡವಿ ಬಿದ್ದರು ಅಷ್ಟೇ. ಕಿರು ಬೆರಳಿಗೆ ಗಾಯ. ಒಂದಷ್ಟು ರಕ್ತ
ಅಮ್ಮನಿಗೆ ನಿಲ್ಲಲಾಗುತ್ತಿಲ್ಲ, ನಡೆಯಲಾಗುತ್ತಿಲ್ಲ

ಮನೆ ಎನ್ನುವ ಅಷ್ಟು ದಿನ ಅಚ್ಚುಕಟ್ಟಾದ ಮನೆ ಆ ಒಂದು ಕ್ಷಣಕ್ಕೇ ಬೋರಲು ಬಿದ್ದು ಬಿಟ್ಟಿತು.

ಆ ಕ್ಷಣದಿಂದ ನೋಡುತ್ತೇನೆ ನಾನು ಎಂದೂ ಗಮನಿಸಿರದ ಒಂದು ಜಿರಲೆಯೂ ಸಹಾ ನನ್ನತ್ತ ಕೆಕ್ಕರಿಸಿ ನೋಡುತ್ತಿದೆ, ಹೋಗಲಿ ಎಂದರೆ ಆ ಇರುವೆ.. ಕಣ್ಣಿಗೂ ಕಾಣದೆ ಓಡಾಡುತ್ತಿದ್ದ ಇರುವೆ ನನ್ನೆದುರು ನಿನ್ನ ಕಚ್ಚಿಯೇ ಸಿದ್ದ ಎಂದು ಬಾಯ್ತೆರೆದು ನಿಂತಿದೆ.

ಬೀದಿಯಲ್ಲಿ ಓಡಾಡುವ ಬೆಕ್ಕೂ, ಬಿಬಿಎಂಪಿಯ ತಲೆ ಇಲ್ಲದ ಕಾಮಗಾರಿಯಿಂದಾಗಿ ಚರಂಡಿ ಬಿಟ್ಟು ಮನೆಗಳಿಗೆ ನುಗ್ಗುತ್ತಿರುವ ಹೆಗ್ಗಣಗಳೂ..

ಅಷ್ಟೇ ಅಲ್ಲ ನನ್ನ ಅಂಗಿ ಚಡ್ಡಿ ಟೀ ಶರ್ಟ್ ಗಳಿಗೂ ಬಾಯಿ ಬಂದಿದೆ. ಒಂದು ಟಪ್ ಸದ್ದಿಗೆ ಅದು ಪೇಪರ್ ಎಂದು ಕರಾರುವಾಕ್ಕಾಗಿ ಗುರುತಿಸುತ್ತಿದ್ದ, ಹಾಲಿನವ ಎದುರು ನಿಂತು ಎರಡಾ ಮೂರಾ ಪ್ಯಾಕೆಟ್ ಎನ್ನುತ್ತಾನೆ ಮೊಸರು ಚಿಕ್ಕದಾ ದೊಡ್ಡದಾ ಎನ್ನುತ್ತಿದ್ದಾನೆ ನಾನು ಕಕ್ಕಾಬಿಕ್ಕಿ.

ಬೀದಿಯಲ್ಲಿ ದನಿ ಎತ್ತಿ ತರಕಾರಿಯವ ಇವತ್ತು ಬಟಾಣಿ ಇದೆ ಎಂದು ಕೂಗಿ ಕರೆಯುತ್ತಿದ್ದಾನೆ. ನಾನು ಹೊರಗೆ ತಲೆ ಇಟ್ಟು ಕೊಡಪ್ಪಾ ಎಂದರೆ ಕಿಸಕ್ಕನೆ ನಕ್ಕು ಬಟಾಣಿ ಕಾಳಾಗಿ ಬರಲ್ಲಾ ಸ್ವಾಮಿ ಎಂದು ಗೇಲಿ ಮಾಡುತ್ತಿದ್ದಾನೆ

ಕಾಂಪೌಂಡಿನ ಟ್ಯಾಂಕ್ ನಲ್ಲಿ ರಾತ್ರಿ ನೀರು ಬಿದ್ದ ಶಬ್ದವಾದರೆ ಮೋಟಾರ್ ಆನ್ ಮಾಡಲು ಅದು ಎಷ್ಟನೇ ನಂಬರ್ ನದ್ದು ಎನ್ನುವುದೂ ಗೊತ್ತಿಲ್ಲ.

ಸಕ್ಕರೆ ಹಾಗು ಉಪ್ಪಿನ ಡಬ್ಬಗಳು ಒಂದೇ ಆಗಿ ಗೋಚರಿಸುತ್ತಿದೆ.
ಸಾರಿಗೆ ಹಾಕುವ ಸೌಟುಗಳು ‘ಫೋನ್ ಎ ಫ್ರೆಂಡ್’ ಎಂದು ಗೇಲಿ ಮಾಡುತ್ತಿವೆ

ಅಡಿಗೆ ಮನೆಯ ಅಷ್ಟೂ ಡಬ್ಬಗಳೂ ಕೃಷ್ಣನನ್ನು ಬಂಧಿಸಲು ಸನ್ನದ್ಧರಾದಾಗ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿರುವ ನೂರಾರು ಕೃಷ್ಣರಂತೆ ನನ್ನ ಮುಂದೆ ಮಾಯಾಲೋಕ ಸೃಷ್ಟಿಸಿವೆ.

ಯಾವ ಡಬ್ಬದ ಮೇಲೂ ಹೆಸರಿಲ್ಲ ಆದರೆ ಅಮ್ಮ ಒಂದೇ ಬಾರಿಯೂ ಲೆಕ್ಕ ತಪ್ಪಿರಲಿಲ್ಲ.

ಇದ್ದ 12 ಬಲ್ಬ್ ಗಳ ಪೈಕಿ ಕೆಟ್ಟಿರುವ ಬಲ್ಬ್ ಮಹಡಿಯಲ್ಲಿದೆ ಎಂದೂ.. ನೀರಿನ ಬಿಲ್ ಇಂದು ಕಟ್ಟದಿದ್ದರೆ ನಾಳೆ ಅದಕ್ಕೆ 25 ರೂ ಬಡ್ಡಿ ಹೆಚ್ಚು ಕಟ್ಟಬೇಕಾಗಿ ಬರುತ್ತದೆ ಎಂದೂ.. ಇವತ್ತು ಕೊನೆ ಮನೆಯ ಮಗಳ ಎಸ್ ಎಸ್ ಎಲ್ ಸಿ ರಿಸಲ್ಟ್ ಇದೆ ವಿಚಾರಿಸಿಕೊಂಡು ಬಾ ಅಂತಲೂ.. ಹೇಗೆ ಹೇಗೆ ಸಾಧ್ಯವಾಯ್ತು ಇದೆಲ್ಲಾ

ಅಮ್ಮ ಒಂದು ಸಲ ಎಡವಿದ್ದಕ್ಕೇ ಮನೆ ಎಂಬ ಇಡೀ ಮನೆ ಎಡವಿದ್ದಷ್ಟೇ ಅಲ್ಲ, ಮುಗುಚಿಕೊಂಡು ನನ್ನ ತಲೆಯ ಮೇಲೆ ಬಿದ್ದು ಹೋಯ್ತು

‘ಯಾವಾಗ ಬಂದರೂ ನಮ್ಮ ಮನೆಯಲ್ಲಿ ನಾಲ್ಕು ಜನರಿಗಾಗುವಷ್ಟಾದರೂ ಊಟ ಇರುತ್ತದೆ ಗೊತ್ತಾ’ ಎಂದು ಸಿಕ್ಕ ಸಿಕ್ಕಲ್ಲಿ ಕೊಚ್ಚಿಕೊಳ್ಳುತ್ತಿದ್ದ ನಾನು ಮೂರು ದಿನ ಅನ್ನದ ಬಟ್ಟಲುಗಳನ್ನು ಖಾಲಿ ಇಟ್ಟು ಬೀದಿಯಲ್ಲಿರುವ ಹೋಟೆಲ್ ಗಳಿಗೆ ಪಾರ್ಸಲ್ ಕಟ್ಟಿಸಿ ತರಲು ಓಡುತ್ತಿದ್ದೆ.

..ಮನೆಯಲ್ಲಿ ಕುಳಿತೇ ತನ್ನ ಅಕ್ಕನ ಮಗನ ಕೋರ್ಟ್ ಕೇಸಿಗೆ ನೆರವಾಗುವ, ದೊಡ್ಡ ಮಗಳಿಗೆ ಬಾಡಿಗೆಯವರು ಸಿಕ್ಕರೇ ಎಂದು ಕಕ್ಕುಲಾತಿ ತೋರುವ, ಅಲಾಟ್ ಆದ ಸೈಟು ಕೈಗೆ ಸರಿಯಾಗಿ ಧಕ್ಕಿತೆ ಎಂದು ವಿಚಾರಿಸುವ, ಊರಲ್ಲಿ ಆದ ಮಳೆಗೆ ಏನೇನು ಬದಲಾವಣೆ ಆಗಬಹುದು ಎಂದು ಕರಾರುವಾಕ್ಕಾಗಿ ಹೇಳುವ,

ದಿನಸಿ ಅಂಗಡಿಯವನು ಡೆಲಿವರಿ ಕೊಟ್ಟ ಒಂದು ತಿಂಗಳ ಸಾಮಾನಿನಲ್ಲಿ ಎಷ್ಟು ಕಾಂಪ್ಲಿಮೆಂಟರಿ ಐಟಂ ಬಚ್ಚಿಟ್ಟುಕೊಂಡಿದ್ದಾನೆ ಎಂದು ಲೆಕ್ಕ ಹಾಕಿ ಅವನಿಗೆ ಫೋನ್ ತಿರುಗಿಸುವ..

ಹೌದಲ್ಲಾ
ಅಮ್ಮ ರಿಟೈರ್ ಆಗ್ತಾಳೆ ಅಂದ್ರೆ
ಅಂದ್ರೆ..

ಅಮ್ಮನ ಬಗ್ಗೆ ಎಲ್ಲರಿಗೂ ಜೀವ ಆದರೆ ಅದು ಎರೆಹುಳುವಿನ ರೀತಿಯ ಜೀವ. ಸದ್ದಿಲ್ಲದೇ ಮಣ್ಣನ್ನು ಉತ್ತುತ್ತಲೇ ಇರುತ್ತದೆ. ಗೊಬ್ಬರವಾಗುವಂತೆ, ಹಸಿರು ಉಕ್ಕಲು ಹಾದಿ ಕೊಡುವಂತೆ

ಆದರೆ ಎರೆಹುಳು ಕಣ್ಣಿಗೆ ಕಂಡರೆ ತಾನೇ..

ನಮಗೆ ರಾಸಾಯನಿಕದ ಹಮ್ಮು. ಒಂದು ಹೊಡೆತದಲ್ಲಿ ಹತ್ತು ಚಿಗುರಿಸುತ್ತೇವೆ ಎನ್ನುವ ಅಹಮ್ಮು
ಆದರೆ ಮಣ್ಣು ಮಾತ್ರವಲ್ಲ, ಜೊತೆಗೆ ನಾವು ಎರೆಹುಳುವನ್ನೂ ಕೊಂದಿದ್ದೇವೆ

ತಾಯನ್ನಲ್ಲ, ಮನೆಯನ್ನೂ

ಯಾಕೋ ಸುನಂದಾ ಬೆಳಗಾಂವಕರ ನೆನಪಾಗುತ್ತಿದ್ದಾರೆ

ತಾಯಿ, ತವರು ಬಗ್ಗೆ ಸುನಂದಾ ಬರೆಯುವ ರೀತಿ ಆ ಸದ್ದಿಲ್ಲದ ಎರೆಹುಳುಗಳಿಗೆ ಶ್ರದ್ಧೆಯಿಂದ ಕೊಡುವ ಗೌರವವೇ

ಆಕೆ ಹೇಳುತ್ತಾರೆ ‘ಅಮ್ಮ ಬಡಿಸೋ ಅಡುಗೆಯಲ್ಲಿ ಅಮ್ಮ ಅನ್ನೋದೇ ರುಚಿ..’ ಅಂತ

ಹೌದಲ್ಲಾ..

ಇರಲಿ,

ಒಂದು ವ್ಯತ್ಯಾಸ ಗಮನಿಸಿದ್ದೀರಾ..

ನೀವು ಗಂಡಸರಿಗೆ ಫೋನ್ ಮಾಡುವುದಕ್ಕೂ, ಹೆಂಗಸರಿಗೆ ಫೋನ್ ಮಾಡುವುದಕ್ಕೂ..

ಗಂಡಸರಿಗೆ ಫೋನ್ ಮಾಡಿದಾಗ ಎರಡನೆಯ ರಿಂಗ್ ಗೆ ‘ಹಲೋ’ ಅನ್ನುವ ದನಿ ಕೇಳುತ್ತದೆ

ಇನ್ನೇನು ಇವರು ಫೋನ್ ತೆಗೆಯುವುದಿಲ್ಲ ಎಂದು ನಿರ್ಧಾರ ಮಾಡಿ ಫೋನ್ ಕಟ್ ಮಾಡುವ ವೇಳೆಗೆ ಹೆಂಗಸರ ‘ಹಲೋ’ ಕೇಳುತ್ತದೆ

ವ್ಯತ್ಯಾಸ ಅಷ್ಟೇ

ಗಂಡಸು ಮೊಬೈಲ್ ಹಿಡಿದುಕೊಂಡೇ 24 ಗಂಟೆ ಕೂತಿದ್ದಾನೆ

ಹೆಂಗಸು ಇಡೀ ಮನೆ ಸುಧಾರಿಸುತ್ತಿದ್ದಾಳೆ

ನಾನು ಕೊನೆಯ ರಿಂಗ್ ವರೆಗೆ ಕಾಯುತ್ತೇನೆ

ಅದು ರಿಸೀವ್ ಆಗದಿದ್ದರೂ ಮತ್ತೆ ಫೋನ್ ಮಾಡುವ ತಾಳ್ಮೆಯಿದೆ

ಏಕೆಂದರೆ ಅವರು ರಿಟೈರ್ ಆಗದ ಕೆಲಸಗಳಲ್ಲಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?