ಡಾ. ವೆಂಕಟೇಶಯ್ಯ ನೆಲ್ಲಿಕುಂಟೆ.
ಕೃಷಿ ಮತ್ತು ಪಶುಪಾಲನೆಗಳು ಒಂದುಗೂಡಿ ಬದುಕು ಸಾಗಿಸುವ ಕುಟುಂಬದಲ್ಲಿ ಹುಟ್ಟಿರುವ ನನ್ನಂತವರಿಗೆ ಬಾಲ್ಯವೆಂಬುದು ದೊಡ್ಡ ಜವಾಬ್ಧಾರಿಯನ್ನೂ , ಬಲವಂತದ ಗಾಂಭೀರ್ಯವನ್ನೂ ಹೇರಿತ್ತು. ಗೋಲಿ, ಮರಕೋತಿ ಆಟ, ಚಿನ್ನಿದಾಂಡುಗಳಂತಹ ಹಳ್ಳಿ ಆಟಗಳೆಲ್ಲ ನನ್ನಂತವರಿಗೆ ಕೈಗೆ ಸುಲಭಕ್ಕೆ ಸಿಗದ ಉರಿಯ ಹೂವುಗಳಂತಾಗಿದ್ದವು. ಗುಂಪುಗೂಡಿ ಆಡುವ ಈ ಆಟಗಳೆಲ್ಲ ಗೊತ್ತೇ ಇಲ್ಲ ನನಗೆ. ಅದಕ್ಕೆ ಸ್ಕೂಲು,ಕಾಲೇಜುಗಳಲ್ಲಿ ಬರೀ ಓಡುವ ಆಟಗಳಲ್ಲೆ ಭಾಗವಹಿಸುತ್ತಿದ್ದೆ. ಬಾಲ್ಯವೆಲ್ಲ ಬರಿ ದುಡಿಮೆಯಲ್ಲೆ ಮುಗಿದು ಹೋಯ್ತು. ಆರು-ಏಳು ವರ್ಷಗಳಿಗಾಗಲೇ ಹಸು, ಎಮ್ಮೆ, ಕುರಿಗಳನ್ನು ಮೇಯಿಸುತ್ತಿದ್ದ ,ಹೊಲದಲ್ಲಿನ ಹುಲ್ಲು, ಮನೆಯಲ್ಲಿನ ಕಸ ಹೊರುತ್ತಿದ್ದ, ತೋಳಗಳ ವಿರುದ್ಧ ಹೋರಾಡುತ್ತಿದ್ದ ನೆನಪುಗಳೇ ಬಂದು ಎದುರು ಕೂರುತ್ತವೆ.
ಅಪ್ಪ ಎಂದರೇನೆಂದು ಅರಿಯುವ ಮೊದಲೆ ಆತ ಮಣ್ಣೊಳಗೆ ಮರೆಯಾಗಿ ಹೋದ. ಅಪ್ಪನ ಫೋಟೋ ಕೂಡ ಇಲ್ಲದ ಸ್ಥಿತಿಯಲ್ಲಿ ನೆನಪುಗಳು ಮಾತ್ರ ಆತನನ್ನು ತಡವರಿಸಿ ನೆನಪಿಸಲು ಸಾಧ್ಯವಷ್ಟೆ ನನಗೆ. ಘೋರ ಗಾಳಿ, ಸಿಡಿಲು, ಮಳೆ, ಹಾವು, ಹದ್ದುಗಳ ಉಪಟಳದಿಂದ ಗೂಡು ರಕ್ಷಿಸಿ ಮರಿಗಳಿಗೆ ರೆಕ್ಕೆ ಮೂಡುವ ಮೊದಲೆ ಮರಿಗಳನ್ನು ಅನಾಥ ಮಾಡಿ ಯಮನ ಹಲ್ಲಿಗೆ ಆಹಾರವಾಗುವ ಹಿರಿ ಹಕ್ಕಿಯ ಸ್ಥಿತಿ ನನ್ನ ಕುಟುಂಬದ್ದು. ಇದರ ಜೊತೆಗೆ ಅಡವಿಯ ಹುಲ್ಲು, ಬೆಟ್ಟ, ನರಿ, ತೋಳ, ಹಳ್ಳ, ತೋಡು ,ಜೇನಿನ ಪಥ, ಅಣಬೆಯ ತಾವು, ಕಾರೆ, ಕವಳೆ, ಬಿಕ್ಕೆ, ಸೀತಾಫಲಗಳು ಹಣ್ಣಾಗಿ ಸಂಭ್ರಮಿಸುತ್ತಿದ್ದ ಜಾಗಗಳೂ ನೆನಪಿನ ತಿಜೋರಿಯಲ್ಲಿ ಕೂತಿವೆ. ರೈತಾಪಿ ಮನೆಗಳಲ್ಲಿ ಮಕ್ಕಳು ಕಾಲು ಮತ್ತು ಕೈಗಳನ್ನು ಸ್ವತಂತ್ರವಾಗಿ ಬಳಸಬಲ್ಲರು ಎಂಬ ನಂಬಿಕೆ ಬಂದಕೂಡಲೆ ಅವರನ್ನು ಕೃಷಿ ದುಡಿಮೆಯಲ್ಲಿ ತೊಡಗಿಸುತ್ತಿದ್ದರು. ಇಡೀ ಮನೆಗೆ ಮನೆಯೆ ಮೈಮುರಿದು ದುಡಿದರೂ ಯುಗಾದಿಗೆ ಒಂದು ಜೊತೆ ಬಟ್ಟೆ ಕೊಳ್ಳಲಾಗದ, ವಾರಕ್ಕೊಮ್ಮೆ ಹಿಡಿ ಅನ್ನಕ್ಕೆ ಒದ್ದಾಡಿ ಹೋಗುವ ಒಕ್ಕಲು ಕುಟುಂಬಗಳಲ್ಲಿ ನನ್ನದೂ ಒಂದಾಗಿತ್ತು.
ನೆನಪಿಸಿಕೊಂಡರೆ ತಡೆಯಲಾಗದಷ್ಟೂ ವೇದನೆಯಾಗುತ್ತದೆ. ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಅಪ್ಪನಿಗೆ ಕ್ಯಾನ್ಸರ್ ಬಂತು. ತಮ್ಮ ನನಗಿಂತ ನಾಲ್ಕು ವರ್ಷ ಚಿಕ್ಕವನು. ಅಪ್ಪನನ್ನು ಸೇರಿಸಿದ್ದ ಆಸ್ಪತ್ರೆಯ ಮುಖವನ್ನೂ ಸಹ ಸಣ್ಣ ಮಕ್ಕಳಾಗಿದ್ದ ನಾವು ನೋಡಿರಲಿಲ್ಲ. ಅಪ್ಪ ಆಪರೇಷನ್ ಮಾಡಿಸಿಕೊಂಡು ಮನೆಗೆ ಬಂದರು. ಮೃದು ಆಹಾರ ಕೊಡಬೇಕೆಂದು ಡಾಕ್ಟರು ಪಥ್ಯ ಹೇಳಿದ್ದರು. ಸುಮಾರಾಗಿ ಜಮೀನಿದ್ದ ನನ್ನಂತವರ ಮನೆಗಳಲ್ಲಿಯೂ ಅಕ್ಕಿ ಎನ್ನುವುದು ಅಮೃತ ಸಮಾನ ಧಾನ್ಯವಾಗಿತ್ತು. ರೈತನ ಕೈಯಲ್ಲಿ ಅಂದು ಹಣವಿರುತ್ತಿರಲಿಲ್ಲ. ಇಂದೂ ಇಲ್ಲ ಬಿಡಿ. ವ್ಯವಸಾಯದ ಸಮಯ ಹೊರತುಪಡಿಸಿ ಉಳಿದ ಸಮಯಗಳಲ್ಲಿ ಅಣ್ಣ ಬಳ್ಳಾಪುರದ ಯಾವುದೋ ಸಾಮಿಲ್ಲಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಆತನ ದುಡಿಮೆಯ ಪುಡಿಗಾಸು ನಮಗೆ ಆಸರೆಯೂ ಆಗಿತ್ತು.
ಇಂಥ ದಿನಗಳಲ್ಲಿ ಅಪ್ಪನಿಗೆ ಸಣ್ಣದೊಂದು ಪಾತ್ರೆಯಲ್ಲಿ ಅಮ್ಮ ಅನ್ನ ಮಾಡಿ ಬಡಿಸುತ್ತಿದ್ದಳು . ಎಲ್ಲರಿಗೂ ಆಸೆಯೆ. ಎಂಟು-ಒಂಬತ್ತು ವರ್ಷಗಳಿಗೆ ಆಸೆ ಹತ್ತಿಕ್ಕಿಕೊಳ್ಳುವ ಕೃತಕ ವೈರಾಗ್ಯದ ಕಲೆಯನ್ನು ಅಮ್ಮ ಕಲಿಸಿದ್ದಳು. ತಮ್ಮ ಚಿಕ್ಕವನು. ಪಾಪ ,ಮೆಲ್ಲನೆ ಅಮ್ಮನ ಕಿವಿಯಲ್ಲಿ ‘ನಂಗೂ ಒಂದು ತುತ್ತು ಕೊಡು ಅಂದ’. ಎಲ್ಲರ ಕಣ್ಣೊಳಗೆ ಇಣುಕಿದ ನೀರು ಹಾಗೇ ಸೀದು ಎದೆಯ ಆಳಕ್ಕೆ ಇಳಿದು ಹೋಯಿತು. ಸರೀಕರೆದುರು ಮರ್ಯಾದೆಯೆಂಬುದು ಜೀವಕ್ಕಿಂತ ಮಿಗಿಲು ಎಂಬ ತತ್ವವನ್ನು ನಮ್ಮ ರಕ್ತದೊಳಗೆ ಅಚ್ಚು ಹಾಕಿದ್ದರು. ಬಹುಶಃ ಈ ಮನೋಭಾವದಿಂದಲೆ ಭಾರತದ ರೈತರು ಯಾವ ಪ್ರತಿಭಟನೆಯನ್ನೂ ತೋರದೆ ಜೀವ ಕಳೆದುಕೊಳ್ಳಲು ಕಾರಣವೆನ್ನಿಸುತ್ತದೆ. ಕಷ್ಟ ಹೊದ್ದು ಕಂಬನಿಯೊಳಗೆ ಕೈತೊಳೆವ ರೈತಾಪಿ ಜನರಿಗೆ ನಿಜವಾಗಿಯೂ ಜಾತಿ , ಧರ್ಮಗಳಿಲ್ಲ. ಮನುಷ್ಯ ದ್ವೇಷಿ ಶಕ್ತಿಗಳು ಕೂಡಿ, ಕಷ್ಟದ ಜೀವಿಗಳು ಒಂದುಗೂಡದಂತೆ ಒಡೆದು ನಾಶಮಾಡುತ್ತಿದ್ದಾರಷ್ಟೆ. ಈ ವರ್ಷ(2016) ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ 50 ಕ್ಕೂ ಹೆಚ್ಚಿನವರು ದಲಿತ ರೈತರು. ಎಷ್ಟು ದುಡಿದರೂ ಆಸ್ಪತ್ರೆಗೆ ಕಟ್ಟಲು ಹತ್ತಿಪ್ಪತ್ತು ಸಾವಿರ ಹಣವನ್ನು ಹೊಂದಿಸಲಾಗದೆ ತಾಳಿಯನ್ನೂ ಮಾರವಾಡಿ ಅಂಗಡಿಗಳಲ್ಲಿ ಒತ್ತೆ ಇಡುವುದೊ ಇಲ್ಲ ಕಿಡ್ನಿ ಮಾರಿಕೊಳ್ಳುವುದನ್ನೊ ಮಾಡಿರುವ ಅಸಂಖ್ಯಾತ ಉದಾಹರಣೆಗಳಿವೆ. ಇಂಥವೆಲ್ಲ ನಡೆಯುವಾಗ ಕಳೆದ 68 ವರ್ಷಗಳಿಂದ ನಾವು ಸಾಧಿಸಿದ್ದೇನು? ರೈತನ ರಕ್ತ, ಬೆವರು, ಮೂಳೆ ಮಾಂಸಗಳನ್ನು ತೈಲದಂತೆ ಉರಿಸಿ ಯಾರನ್ನು ಕೊಬ್ಬಿಸಲಾಯಿತು?
ಇವೆಲ್ಲದರ ನಡುವೆ, ನಗು ಕಳೆದುಕೊಂಡು ನಡೆದ ಕುಟುಂಬದಲ್ಲಿ ಹುಟ್ಟಿದ ನನಗೆ ಕೆಲವು ಘಟನೆಗಳು ತಣ್ಣಗೆ ಬೆಚ್ಚುವಂತೆ ಮಾಡುತ್ತವೆ. ಒಮ್ಮೆ ಹೀಗಾಯಿತು; ಹೊಲ ಕುಯಿಲಿನ ಟೈಮು. ರೈತರನ್ನು ರುಬ್ಬಿ ಹಾಕುವ ಶಕ್ತಿಗಳ ಜೊತೆಗೆ ಅನೇಕ ಸಾರಿ ನಿಸರ್ಗ ಶಕ್ತಿಯೂ ಸೇರಿಕೊಳ್ಳುತ್ತದೆ. ಹಿಂಗಾರಿನ ಅಂಗೈ ಅಗಲದ ಮೋಡದ ತುಣುಕೊಂದು ರಾಕ್ಷಸಾಕಾರ ಪಡೆದು, ಬೆಳೆದದ್ದನನ್ನೆಲ್ಲಾ ಕೊಚ್ಚಿ ಹಾಕುತ್ತದೆ. ಅನಾರಾಗಿ ಮಳೆ ಬಂದು ತಿನ್ನೋ ರಾಗಿ ಹೊತ್ಕೊಂಡೋಯ್ತು’ ಎಂಬ ಮಾತುಗಳನ್ನು ಈ ಸಂದರ್ಭಗಳಲ್ಲಿ ಮತ್ತೆ ಮತ್ತೆ ಕೇಳುತ್ತೇವೆ. ಮುಂಗಾರಿನಲ್ಲಿ ತೆಕ್ಕೆ ಬಿದ್ದ ಕಾಳಿಂಗಗಳಂತೆ ಏರಿ ಬರುವ ಮೋಡಗಳು ಊರು ತಲುಪುವ ಹೊತ್ತಿಗೆ ಬುರ್ನಾಸಾದರೆ, ಸ್ವಾತಿ- ವಿಶಾಖದಂತಹ ಮಳೆಗಳು ಹಾಗಲ್ಲ . ಪೂರ್ವದ ಕಡಲಿಂದ ಏರಿ ಧಾವಿಸಿ ಬರುವ ಮೋಡಗಳು ಕೆಲವೊಮ್ಮೆ ಅತಿ ಕಠೋರ ಮತ್ತು ನಿಷ್ಕರುಣಿ. ಪಶ್ಚಿಮ ಘಟ್ಟಗಳಂತಹ ಗೋಡೆಗಳ ಅಡ್ಡಿ ಇಲ್ಲದೆ ಏರಿ ಬರುವುದರಿಂದಲೊ ಏನೋ ಈ ಮಾರುತಗಳು ಮಾಡುವ ಅನಾಹುತ ಮಾತ್ರ ಊಹಾತೀತ (ಯಾಕೊ ಇತ್ತೀಚೆಗೆ ಇಂಥ ಮಳೆಗಳೂ ಬರೀ ನೆನಪುಗಳಾಗುತ್ತಿವೆ). ಪಾಪ ,ಪೂರ್ವದ ಕಡಲಂಚಿನ ಜನರಿಗೆ ಅಕ್ಟೋಬರ್ ನಂತರ ಆಸ್ತಿ ಪಾಸ್ತಿ ಉಳಿಸಿಕೊಳ್ಳುವುದರ ಜೊತೆಗೆ ಜೀವ ಉಳಿಸಿಕೊಳ್ಳುವುದೊಂದು ದೊಡ್ಡ ಸಾಹಸ. ಮೃತ್ಯುವೆಂಬುದು ಹಳ್ಳ, ಹೊಳೆ,ಗಾಳಿ, ಸಿಡಿಲು,ಕಡಲು ಯಾವ್ಯಾವುದೋ ರೂಪದಲ್ಲಿ ಯಾವಾಗ ಬೇಕಾದರೂ ಬಂದು ಅಪ್ಪಳಿಸಬಹುದು. ಈ ಟೈಮುಗಳಲ್ಲಿ ಪಾಪದ ರೈತರು ಥೇಟ್ ಬಿರುಗಾಳಿಗೆ ಸಿಕ್ಕ ತಾಯಿ ಹಕ್ಕಿಯಂತೆ ಹೋರಾಡುತ್ತಿರುತ್ತಾರೆ.’ರಾಜ ಯಾರಾದರೂ ರಾಗಿ ಬೀಸೋದು ತಪ್ಪಲಿಲ್ಲ’ ಎಂಬ ತತ್ವದ ಚುಂಗು ಹಿಡಿದು ಬಡಿದಾಡುವುದು ಮಾತ್ರ ಇನ್ನೂ ತಪ್ಪಿಲ್ಲ. ಮಕ್ಕಳು ಮರಿಯೆನ್ನದೆ ನಿಸರ್ಗದ ಎದುರಿನ ಈ ಹೋರಾಟದಲ್ಲಿ ತೊಡಗಿಕೊಳ್ಳುತ್ತಾರೆ.
ಬಹುಶಃ 7 ವರ್ಷದ ನಾನೂ ಸಹ ಇಂಥ ಟೈಮಿನಲ್ಲೆಲ್ಲ 12 ಎಮ್ಮೆಗಳನ್ನು ಮೇಯಿಸುವ ಜವಾಬ್ಧಾರಿ ನಿಭಾಯಿಸುತ್ತಿದ್ದೆ. ಮಳೆಗೂ ಎಮ್ಮೆಗಳಿಗೂ ವಿಶ್ವ ರಹಸ್ಯದ ಯಾವುದೊ ನಿಸ್ತಂತು ಸಂಬಂಧವಿದೆಯೆನ್ನಿಸುತ್ತದೆ.ಸಣ್ಣ ಹನಿ ಗಾಳಿಗೆ ಮೂಗರಳಿಸಿ ಬಾಲ ಎತ್ತಿ ತಿರುಗಿಸುತ್ತಾ ಹಳ್ಳ ಗುಡ್ಡಗಳೆನ್ನದೆ ದಿಕ್ಕಾಪಾಲು ಓಡತೊಡಗುತ್ತವೆ. ಸಿನಿಮಾಗಳಲ್ಲಿ ಮಾತ್ರ ತಮಾಷೆಯೆನ್ನಿಸುವ ಈ ದೃಶ್ಯಗಳು ನಿಜದಲ್ಲಿ ನಮಗೆ ನರಕ ಸದೃಶ್ಯವಾಗಿರುತ್ತಿದ್ದವು. ಇಂಥ ಘಳಿಗೆ ಬರದಿರಲೆಂದು ಮೋಡಕಟ್ಟುವ ವೇಳೆಗೆ ಅಂಬಿನಿಂದ ಎಮ್ಮೆಗಳನ್ನು ಹಿಡಿದು ಗಟ್ಟಿಯಾದ ಮರ ಗಿಡಗಳಿಗೆ ಕಟ್ಟಿ ಹಾಕುತ್ತಿದ್ದೆವು . ಇಲ್ಲವೆಂದರೆ ವಿಶ್ವಾಮಿತ್ರ ಸೃಷ್ಟಿಯಾದ ಇವುಗಳ ಕಾಲು ತೋರಿಸಿದ ಕಡೆ ಬುದ್ಧಿ ಓಡುತ್ತದೆ.ಅಂಥ ಸಮಯದಲ್ಲಿ ದೇವರೂ ಕೂಡ ಕಾಪಾಡಲಾರ. ಇದರ ಜೊತೆಗೆ ತೋಳ, ಕತ್ತೆಕಿರುಬ, ನರಿಗಳು ಮೋಡ ಮುಸುಕಿ ಹಗಲು ಕತ್ತಲಾದಂತೆ ಭ್ರಮೆ ಹುಟ್ಟಿಸಿದರೆ ಸಾಕು ಹಗಲಲ್ಲೆ ಬಗಲಲ್ಲಿ ಕೂತು ಊಳಿಡುತ್ತಿದ್ದವು ಅಷ್ಟೊತ್ತಿಗಾಗಲೆ ಸೀಳು ನಾಯಿಗಳು ಕಣ್ಮರೆಯಾಗಿದ್ದವು. ಹುಲಿಗಳು ಇನ್ನೂ ಮೊದಲೆ ಬಲಿಯಾಗಿ ಹೋಗಿದ್ದವು.ಆಗ ಹಸು, ಎಮ್ಮೆ ,ಕುರಿ ಕಾಯುತ್ತಿದ್ದವರೆಲ್ಲ ವಾರಿಗೆಯವರೆ. ಕೈಕಾಲು ಗಟ್ಟಿಯಿರುವ ದೊಡ್ಡವರೆಲ್ಲ ಹೊಲಗಳಲ್ಲಿ ಯುದ್ಧಕ್ಕಿಳಿದವರಂತೆ ದುಡಿಯುತ್ತಿದ್ದರು.
ನಿಷ್ಕರುಣಿ ಆಕಾಶ, ಕೋಟೆ ಕೋಟೆ ಮೋಡಗಳು, ಜೋಗಿ ಹಳ್ಳದಾಚೆಯ ಗುಡ್ಡಪ್ಪನಕಟ್ಟೆ, ಬಿಳಿಗುಂಡ್ಲು ಬಯಲಲ್ಲಿ, ಹಳ್ಳಗಳಲ್ಲಿ ಎಮ್ಮೆ ಮೇಯುತ್ತಿದ್ದವು. ಬೈಗು ಕವಿಯತೊಡಗಿತು. ನೋಡ ನೋಡುತ್ತಿದ್ದಂತೆ ನಮ್ಮ ಎಮ್ಮೆಯೊಂದು ಕೆಳಕ್ಕೆ ಕುಸಿದು ಬಿತ್ತು. ತುಸು ದೊಡ್ಡ ಹುಡುಗರು ‘ಹೋ ಎಮ್ಮೇನ ಲಕ್ವಾ ಹಕ್ಕಿ ಮುಟ್ಬಿಟ್ಟದೆ ಕಣ್ರೋ’ ಎಂದು ಕೂಗತೊಡಗಿದರು. ಯಾರ ಕಣ್ಣಿಗೂ ಹಕ್ಕಿ ಮಾತ್ರ ಕಾಣಲಿಲ್ಲ. ಎಮ್ಮೆ ಮಾತ್ರ ಮೇಲೇಳುತ್ತಿಲ್ಲ. ಈ ಹಕ್ಕಿ ಕುರಿತಂತೆ ಕಥೆಯೊಂದಿದೆ. ಅದು ನಿಜವೊ ಸುಳ್ಳೊ ಈ ತನಕ ತಿಳಿದಿಲ್ಲ. ಪಿಟ್ಟೆಕ್ಯಾತನಂಥ ಕಾವಿಗೆ ಕೂತ ಸಣ್ಣ ಹಕ್ಕಿಯೊಂದು ತನ್ನ ಮೊಟ್ಟೆಗಳ ಹತ್ತಿರ ಬರುವ ಪ್ರಾಣಿಗಳ ಮೈಮೇಲೆ ಚೀರಾಡಿ ಕೂತುಕೊಳ್ಳುತ್ತದಂತೆ . ಹಕ್ಕಿ ಕೂತ ತಕ್ಷಣವೆ ಆ ಪ್ರಾಣಿ ಲಕ್ವಾ ಹೊಡೆಸಿಕೊಂಡಂತೆ ಕುಸಿದು ಬೀಳುತ್ತದೆನ್ನುತ್ತಾರೆ. ಏನಾಯಿತೊ ಏನೊ ಎಮ್ಮೆ ಮಾತ್ರ ಮೇಲೇಳುತ್ತಿಲ್ಲ. ಉರಿಕೆಂಡದಂತ ನಮ್ಮ ಎಮ್ಮೆ, ಗೆಳೆಯರ ಪ್ರಕಾರ ಎರಡು ಬೆರಳು ಗಾತ್ರದ ಯಃಕಶ್ಚಿತ್ ಹಕ್ಕಿಯೊಂದರ ಸ್ಪರ್ಶಕ್ಕೆ ಸೊಂಟ ಮುರಿದುಕೊಂಡು ನೆಲಮುಖಿಯಾಯ್ತು ಎಂದರೆ ಹೇಗೆ ನಂಬುವುದು.
ಹುಡುಗರೆಲ್ಲ ಎಮ್ಮೆಗಳನ್ನು ಊರಕಡೆಗೆ ತಿರುಗಿಸಿ ನಡೆಯತೊಡಗಿದರು. ನಮ್ಮ 11 ಎಮ್ಮೆಗಳೂ ಅವುಗಳೊಟ್ಟಿಗೆ ಹೆಜ್ಜೆ ಹಾಕತೊಡಗಿದವು. ಒಬ್ಬನೇ ಉಳಿಯುವುದು ಹೇಗೆ ನಾನೂ ಮನೆ ಕಡೆ ನಡೆಯತೊಡಗಿದೆ. ಸೊಂಟ ಮುರಿದು ಬಿದ್ದ ಎಮ್ಮೆ ಸಣ್ಣಗೆ ನರಳುವುದು ಫರ್ಲಾಂಗಿನಷ್ಟು ದೂರದವರೆಗೂ ಕೇಳಿಸುತ್ತಿತ್ತು. ಅಳುತ್ತಲೇ ಮನೆಗೆ ಹೋಗಿ ಎಮ್ಮೆಗಳನ್ನು ಕಟ್ಟಿಹಾಕಿ ನೋಡಿದರೆ ಮನೆಯಲ್ಲಿ ಒಬ್ಬರೂ ಇಲ್ಲ. ಮಳೆ ಬರಬಹುದೆಂದು ಎಲ್ಲರೂ ಹೊಲದಲ್ಲೆ ಕೆಲಸ ಮಾಡುತ್ತಿದ್ದಾರೆ. ತುಸು ಹೊತ್ತಿಗೆ ಅಮ್ಮ ಮತ್ತು ಅಕ್ಕ ಬಂದರು. ಅಳುತ್ತಲೆ ಸುದ್ದಿ ತಿಳಿಸಿದೆ. ‘ತೋಳಗಳೊ , ಕಿರುಬಗಳೊ ತಿಂದುಬಿಡುತ್ತವೆಂದೂ ಮನೆಗೆ ದೊಡ್ಡವರು ಬರುವ ಹೊತ್ತಾಗಿದೆ, ಬಂದಕೂಡಲೇ ಕಳಿಸುತ್ತೇನೆ ನೀವು ಬೇಗನೆ ಹೋಗಿ ಕಾಯುತ್ತಿರಿ’ ಎಂದು ಆಜ್ಞಾಪಿಸಿದರು. ಅಮ್ಮ ಎಷ್ಟು ನಿಷ್ಕರುಣಿ ಎನ್ನಿಸಿತು. ಹೋಗಲಾರೆವೆಂದು ಪ್ರತಿಭಟಿಸುವಂತೆಯೂ ಇಲ್ಲ. ಕತ್ತಲು ನುಂಗಿ ಹಾಕುವಷ್ಟು ಗವ್ವೆನ್ನುತ್ತಿದೆ. ಎಮ್ಮೆ ಬಿದ್ದಿರುವ ಜಾಗ ಊರಿಂದ ಒಂದೂವರೆ ಮೈಲಿ ಆಚೆ ಇದೆ. ಕತ್ತಲಾದೊಡನೆ ಆ ದಾರಿಯಲ್ಲಿ ನಡೆಯುವುದಕ್ಕೆ ಗಟ್ಟಿಗುಂಡಿಗೆಯ ಗಂಡಸರೂ ಹೆದರುತ್ತಿದ್ದರು.
ಮೈಸೂರರಸರ ಕಾಲದಲ್ಲಿ ನೆಟ್ಟ ಹುಣಿಸೆ ಮರಗಳು , ಭೀಕರಾಕಾರದ ಆಲ ಮತ್ತು ಬೇವಿನ ಮರಗಳು ರಸ್ತೆಯುದ್ಧಕ್ಕೂ ನಿಂತಿವೆ. ಪ್ರತಿ ಮರದಲ್ಲೂ ಸತ್ತ ಒಬ್ಬೊಬ್ಬರು ದೆವ್ವವಾಗಿದ್ದಾರೆಂದು ಕಥೆಗಳು ಬೇರೆ . ಊರಾಚೆ ಓಣಿ, ಅದನ್ನು ದಾಟಿದೊಡನೆ ಕಾಲುದಾರಿ. ದಾರಿಯಲ್ಲಿ ತಡವರಿಸಿ ಹೋಗಬೇಕು, ಬೆಳಕಿನ ಯಾವ ಆಸರೆಯೂ ಇಲ್ಲ. ನಿಶಾಚರಿ ಗೂಬೆಗಳ ರಕ್ತ ಹೆಪ್ಪುಗಟ್ಟಿಸುವ ಘೂಕು. ನರಿ, ತೋಳ, ಕಿರುಬಗಳು ಹೆಜ್ಜೆ ಮೂಸಿ ಹಿಂದೆ ಬರುತ್ತಿರಬಹುದೆಂಬ ಭಯ.’ಇಂಥ ಮನೆಯಲ್ಲಿ ನಮ್ಮನ್ನು ಹುಟ್ಟಿಸಿದ್ದು ಯಾಕೆ ದೇವರೇ, ನಿನಗೆ ಕಣ್ಣಿದ್ದರೆ ಅವು ಇಂಗಿ ಹೋಗಲಿ’ ಎಂದು ಎಂಥದೊ ಶಾಪ ಹಾಕಿ ಅಕ್ಕ ನಡೆದಳು. ಭಯಭೀತ ಎರಡು ಪುಟ್ಟ ದೇಹಗಳು ಮೆಲ್ಲಗೆ ತೆವಳಿಕೊಂಡು ಅಂತೂ ಅರ್ಧ ಮೈಲಿ ನಡೆದವು. ಅದು ವೀರತಿಪ್ಪಯ್ಯನ ಹೊಲದ ಬೀಳು. ಹತ್ತು ವರ್ಷಗಳ ಹಿಂದೆ ಮಡಿದಿದ್ದ ನನ್ನ ಇನ್ನೊಬ್ಬ ಅಕ್ಕನನ್ನು ಸುಟ್ಟಿದ್ದ ಜಾಗ ಅದು. ಸತ್ತ ಅಕ್ಕನೂ ದೆವ್ವವಾಗಿದ್ದಾಳೆಂದು ಊರ ಜನ ಪುಕಾರೆಬ್ಬಿಸಿದ್ದರು. ಹಾಗಂದವರ ಮೇಲೆ ಅಮ್ಮ ಕೆಂಡಾಮಂಡಲ ರೇಗುತ್ತಿದ್ದಳು. ‘ಸರಿ ನೀ ದೆವ್ವವಾಗಿದ್ದರೂ ಸರಿಯೇ ಮನೆಮಕ್ಕಳನ್ನು ಉಳಿದ ದೆವ್ವ ಪಿಶಾಚಿಗಳಿಂದ, ಹಲ್ಲುಕಿರಿವ ತೋಳಗಳಿಂದ ಕಾಪಾಡು’ ಎಂದು ಮೆಲ್ಲನೆ ಕೇಳಿಕೊಂಡೆವು.
ಹಾಗೆ ನೂರು ಹೆಜ್ಜೆ ನಡೆದಿರಬಹುದು, ಥಟ್ಟನೆ ಭೂತದ ಕೈಗೆ ಸಿಕ್ಕ ಪಿಳ್ಳೆಗಳಂತೆ ನಿಂತುಬಿಟ್ಟೆವು. ಇಡೀ ಮರ, ಪೊದೆ ಎಲ್ಲವೂ ಭೂಮಿಯಿಂದ ಮುಗಿಲವರೆಗೆ ನಿಂತು ಕೆಂಡದ ಪಂಜು ಹಿಡಿದು ಝಗ್ಗ ಝಗ್ಗನೆ ಕುಣಿದಂತೆ, ಉರಿದು ಆರುವ ರಾಕ್ಷಸ. ಎಲ್ಲಿಂದಲೋ ಕೇಳುವ ಜೀವ ನಡುಗಿಸುವಂಥ ಶಬ್ಧಗಳು ಮತ್ತು ನುಂಗಿ ಹಾಕಿದ ಕತ್ತಲು ಮಾತ್ರ ಸಾಕ್ಷಿ. ಸಂದೇಹವೇ ಇರಲಿಲ್ಲ, ಅದು ಕೊಳ್ಳಿ ದೆವ್ವ. ಸತ್ತ ಹಸುಗೂಸಿನಂಥ ಅಕ್ಕ ದೆವ್ವವಾಗಿದ್ದರೆ ತಾನೇ ಇಂಥಾ ಭೀಕರಾಕಾರದ ಉರಿವ ಪಂಜಿನ ಮೈಯ ಕೊಳ್ಳಿದೆವ್ವದ ಎದುರು ತಾನೆ ಏನು ಮಾಡಲು ಸಾಧ್ಯ? ಮನೆ ದೇವರಾದಿಯಾಗಿ ಯಾರೂ ನಮ್ಮನ್ನು ಕಾಪಾಡಲಾರರು. ಇದರ ಕೈಯಲ್ಲಿ ಸಿಕ್ಕಿ ಭಸ್ಮವಾಗುವುದರ ಹೊರತು ಬೇರೆ ದಾರಿ ಇಲ್ಲ , ಸಾವು ಮೌನವಾಗಿ ಸುತ್ತಲೂ ಓಡಾಡುತ್ತಿದೆ ಎನ್ನಿಸಿತು. ಒಬ್ಬರ ಉಸಿರು ಇನ್ನೊಬ್ಬರಿಗೆ ಕೇಳಿಸುತಿತ್ತು. ಎತ್ತಲೂ ಕದಲಲಾರದ ನಿರ್ದಯಿ ಗಳಿಗೆ .ಜೀವನದಲ್ಲಿ ಎಂದೂ ಹೀಗಾಗಿರಲಿಲ್ಲ. ನೋಡಿರಲೂ ಇಲ್ಲ. ಅದಾಗಿ ಎಷ್ಟೋ ವರ್ಷಗಳಾದ ಮೇಲೆ ಕುವೆಂಪು ಅವರ ‘ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ’ ಎಂಬ ಪದ್ಯ ನಮ್ಮನ್ನು ನೋಡಿಯೇ ಬರೆದಿರಬೇಕು ಅನ್ನಿಸಿತು. ತುಸು ದೊಡ್ಡವಳಾದ ಅಕ್ಕನಿಗೆ ಏನಾಯಿತೋ ಕಾಣೆ, ರಪ ರಪಾ ಅಂತ ಹೊಡೆಯತೊಡಗಿದಳು. ತಡೆಯಲಾರದೆ ಮೆಲ್ಲನೆ ಭಿಕ್ಕತೊಡಗಿದೆ.’ಜೋರಾಗಿ ಅಳೋ’ ಎಂದು ಮತ್ತೆ ಹೊಡೆಯತೊಡಗಿದಳು. ಅಳತೊಡಗಿದೆ.
ಆಗ ಮನುಷ್ಯ ಜಗತ್ತಿನ ಆಕ್ರಂದನದ ಶಬುದವೊಂದರ ಆಸರೆಯ ಎಳೆಯೊಂದನ್ನು ಹಿಡಿದು ಮೆಲ್ಲನೆ ತೆವಳತೊಡಗಿದೆವು. ಅಳು ನಿಲ್ಲಿಸುವಂತಿಲ್ಲವೆಂದು ಆದೇಶಿಸಿದಳು. ದೆವ್ವ ಇಷ್ಟು ಹೊತ್ತಾದರೂ ಏನೂ ಮಾಡಿಲ್ಲವೆಂದು ತುಸು ಗೊಂದಲವೂ ಆಯ್ತು. ತುಸು ಹತ್ತಿರಕ್ಕೆ ನಡೆದು ಮೆಲ್ಲನೆ ದಿಟ್ಟಿಸಿ ನೋಡಿದೆವು ತಕ್ಷಣವೆ ಹೋದ ಜೀವವೊಂದು ಮರಳಿ ಎದೆಯೊಳಗೆ ಮಿಡುಕಿದಂತಾಯ್ತು. ಅದು ಮಿಂಚು ಹುಳುಗಳು ಕೂಡಿ ಕುಣಿಯುವ ರಾವಣ ನೃತ್ಯ. ಇಂಥ ದೃಶ್ಯವನ್ನೆಂದೂ ನಾವು ನೋಡಿರಲಿಲ್ಲ. ಕಲ್ಪಿಸಿಕೊಂಡಿರಲೂ ಇಲ್ಲ. ಆ ದೃಶ್ಯ ಈಗಲೂ ಕನಸಿನಲ್ಲಿ ಬಂದು ಬೆಚ್ಚಿ ಬೀಳಿಸುತ್ತದೆ. ಗಿಡ್ಡಯ್ಯನ ಕುಂಟೆಯ ಮೋಟು ಆಲದ ಮರ , ಪಾಳು ಬಿದ್ದ ಮಂಟಪ ಎಲ್ಲವೂ ದೆವ್ವಗಳ ಕಾರಸ್ಥಾನವೆ. ಕಲ್ಲುಕಲ್ಲಿಗೂ ರಕ್ತಕಾರುವ ಕಥೆಗಳು. ಬಹುಶಃ ಟಿ.ವಿ ಬಂದ ಮೇಲೆ ಮನುಷ್ಯನ ಮುಗ್ಧತೆ, ನಿಗೂಢಗಳ ಕುರಿತಾದ ವಿಸ್ಮಯ ಪ್ರಜ್ಞೆಗಳೆಲ್ಲ ಮರೆಯಾಗಿ ಹೋದವೆನ್ನಿಸುತ್ತದೆ.
ಪ್ರತಿ ಹೆಜ್ಜೆಯೂ ಸಾವಿನ ಬಾಗಿಲಿಗೆ ಇಡುತ್ತಿರುವಂತೆ ಭಾಸವಾಗುತಿತ್ತು. ನಾನು ಅಳುತ್ತಲೆ ನಡೆದೆ. ಅಕ್ಕ ಬಯ್ಯುತ್ತಾ, ಹೊಡೆಯುತ್ತಾ ಬಂದಳು. ನನ್ನ ಅಳುವೆ ಅವಳಿಗೆ ಹೆಜ್ಜೆ ಇಡಲು ಆಸರೆ . ಇಲ್ಲದಿದ್ದರೆ ನಿಶ್ಯಬ್ಧವೆಂಬುದು ನಮ್ಮನ್ನು ಕತ್ತು ಹಿಸುಕಿ ಕೊಂದು ಹಾಕುತಿತ್ತು. ಅಂತೂ ಎಮ್ಮೆ ಇರುವ ಸ್ಥಳಕ್ಕೆ ನಡೆದೆವು. ಕಿರುಬ -ತೋಳಗಳ ಬಿಸಿ ಬಿಸಿಯಾದ ಉಗ್ರ ಹಸಿವಿನ ವಾಸನೆ ತಟ್ಟಿದಂತೆಯೂ , ಕತ್ತಲು ನಮ್ಮನ್ನು ಹಿಡಿದು ಕವುಚಿ ಹಾಕಿದಂತೆಯೂ ಭಾಸವಾಯ್ತು. ಪಾಪ ನಮ್ಮನ್ನು ಇಂಥ ಘನ ಘೋರ ಕಷ್ಟಕ್ಕೆ ಸಿಕ್ಕಿಸಿದ ಎಮ್ಮೆಯೂ ನಾಲಿಗೆ ಚಾಚಿ ಓಡಾಡುತ್ತಿರುವ ಪ್ರಾಣಿಗಳ ಎದುರು ತನ್ನ ಸಾವಿಗೆ ಕಾಯುತ್ತಿದೆಯೇನೊ ಎಂಬಂತೆ ನರಳುತಿತ್ತು. ಸಾವಿನ ನೋವು ಮೈ ನೇವರಿಸುವ ಗಳಿಗೆಗಳಲ್ಲಿ ಮನುಷ್ಯ-ಪ್ರಾಣಿ-ಮೃಗಗಳೆಲ್ಲದರ ಅಸ್ತಿತ್ವದ ಅಸಹಾಯಕತೆಗಳಲ್ಲಿ ವ್ಯತ್ಯಾಸಗಳಿವೆಯೇ? ಹಸಿವು ನಾನಾ ತರ.