ಜಿ ಎನ್ ಮೋಹನ್
‘ಇದರಲ್ಲಿ ಹೆಣ್ಣು ಯಾವುದು, ಗಂಡು ಯಾವುದು ಹೇಳಿ’ ಅಂತ ಒಂದು ಪ್ರಶ್ನೆ ತಟ್ಟನೆ ನಿಮ್ಮತ್ತ ತೂರಿಬಂದರೆ ಏನು ಮಾಡುತ್ತೀರಿ..?
ಕಿಸಕ್ ಎಂದು ನಗುತ್ತೀರಿ
ಹೆಣ್ಣು ಯಾವುದು, ಗಂಡು ಯಾವುದು ಎಂದು ಕಂಡು ಹಿಡಿಯೋದೇನು ಬ್ರಹ್ಮ ವಿದ್ಯೆಯೇ?
ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ..
ಅಂತಹದೇ ಒಂದು ಪ್ರಶ್ನೆ ನನ್ನತ್ತ ಇದ್ದಕ್ಕಿದ್ದಂತೆ ತೂರಿ ಬಂದಾಗ
ನೀವು ನಂಬಬೇಕು..
ಖಂಡಿತಾ ನಾನು ಉತ್ತರಿಸಲಾಗದೆ ಸೋತೆ
ಅಷ್ಟೇ ಅಲ್ಲ, ನೀವೂ ಸಹಾ ಖಂಡಿತಾ ಸೋಲುತ್ತೀರಿ ಎಂಬ ಭರವಸೆ ನನಗಿದೆ.
ಹೈದ್ರಾಬಾದ್ ಕರ್ನಾಟಕದ ಮೂಲೆ ಮೂಲೆಯನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದೆ
ಆಗತಾನೆ ಪಿ ಸಾಯಿನಾಥ್ ಕಲಬುರ್ಗಿಗೆ ಬಂದು ಹೋಗಿದ್ದರು
ನೂರೆಂಟು ಮಾತನಾಡಿದ ನನಗೆ ಮೂರನೆಯ ಕಣ್ಣೊಂದು ಸಿಕ್ಕಿದಂತಾಗಿತ್ತು
ಮನೆಯೊಳಗಿಲ್ಲ ಎಂದರೆ ಊರವರ ನಡುವೆ ಎನ್ನುವಂತೆ ಸುತ್ತುತ್ತಿದ್ದೆ
ಹಾಗೆ ಕಲಬುರ್ಗಿ ದಾಟಿ ಬೀದರ್ ಗೆ ಹೆಜ್ಜೆ ಇಡಬೇಕು ಅಲ್ಲಿ ಕಮಲಾಪುರ ಅನ್ನುವ ಊರು ಸಿಗುತ್ತದೆ
ಕಮಲಾಪುರ ಬಾಳೆಹಣ್ಣು ಅಂದರೆ ಸಿಕ್ಕಾಪಟ್ಟೆ ಹೆಸರುವಾಸಿ.
ನೋಡಬೇಕು ನೀವು ಆ ಬಾಳೆಹಣ್ಣನ್ನು, ಹಾಗಿರುತ್ತದೆ
ಯಾವಾಗ ಬೀದರ್ ಗೆ ಹೋಗಬೇಕಾದರೂ ಒಂದು ‘ಬಾಳೆ ಸ್ಟಾಪ್’ ಗ್ಯಾರಂಟಿ
ಹಾಗೆ ಇಳಿದಾಗಲೇ ನನ್ನತ್ತ ಈ ಪ್ರಶ್ನೆ ತೂರಿ ಬಂದದ್ದು
ಕಮಲವ್ವ ಈ ಪ್ರಶ್ನೆ ಕೇಳಿದ್ದಳು
ಆಕೆಯ ಮುಂದಿದ್ದದ್ದು ಎಲೆ ಕೋಸು ಮತ್ತು ಹತ್ತಿ
ನಾನು ಆ ಕಡೆ ಈ ಕಡೆ ನೋಡಿದೆ
ಎಲ್ಲೂ ಯಾರೂ ಕಾಣುತ್ತಿಲ್ಲ
ಮತ್ತೆ ಗಂಡು- ಹೆಣ್ಣು ಹೇಳುವುದು ಹೇಗಪ್ಪಾ ಅಂತ
ನನ್ನ ತಡಕಾಟ ನೋಡಿದವಳೇ ಕಮಲವ್ವ ಕಡ್ಡಿಪುಡಿ ಜಗಿದು ಆಗಲೇ ಕಪ್ಪಗಾಗಿದ್ದ ಅಷ್ಟೂ ಹಲ್ಲುಗಳನ್ನು ಬಿಟ್ಟು ಜೋರಾಗಿ ನಗಲು ಆರಂಭಿಸಿದಳು
ನಾನೋ ಕಕ್ಕಾಬಿಕ್ಕಿ
ಇದ್ಯಾಕವ್ವಾ ಅಂದೆ
ಆಕೆ ತಕ್ಷಣವೇ ನಾನು ‘ಗಂಡೋ ಹೆಣ್ಣೋ ಹೇಳಿ ಅಂದದ್ದು ಈ ಕೋಸು, ಹತ್ತಿಗೇನೇ’ ಅಂದಳು
ನನಗೋ ಇನ್ನಷ್ಟು ಗೊಂದಲ
ಊರವರ ಮುಂದೆ ಬೇಕಂತಲೇ ಕಾಲೆಳೆಯುತ್ತಿದ್ದಾಳೆ ಅಂದುಕೊಂಡೆ
ಅಲ್ಲ, ಹಾಗಲ್ಲ
ಹತ್ತಿ ಗಂಡು, ಕೋಸು ಹೆಣ್ಣು ಅಂತ ಗೊತ್ತಾಯಿತು
ನನ್ನ ಮುಖದ ಮೇಲೆ ನೂರೆಂಟು ಪ್ರಶ್ನೆಗಳು ನಾಟ್ಯವಾಡುತ್ತಿತ್ತೇನೋ
ಕೊನೆಗೆ ಕಮಲವ್ವನೇ ಹೇಳಿದಳು
ಮಾರ್ಕೆಟ್ ನಲ್ಲಿ ಯಾವುದಕ್ಕೆ ಯಾವಾಗಲೂ ಜಾಸ್ತಿ ರೇಟ್ ಇರುತ್ತೋ ಅದು ಗಂಡು
ಕಡಿಮೆ ರೇಟ್ ಇರೋದು ಹೆಣ್ಣು ಅಂತ
ಒಂದು ಕ್ಷಣ ‘ಏನು ಮಾಡಿದೆಯೋ ಶಿವನೇ ಮರೆಮೋಸ..’ ಅನಿಸಿ ಹೋಗಿದ್ದು ಸುಳ್ಳಲ್ಲ
ಎರಡು ಹೆಣ್ಣುಗಳನ್ನು ಬಗಲಿಗಿಟ್ಟುಕೊಂಡರೂ ಆ ಶಿವನಿಗೆ ಹೆಣ್ಣಿನ ಮಹತ್ವವೇ ಗೊತ್ತಾಗಲಿಲ್ಲವೇ ಅನಿಸಿತು
ಇದೆ ರೀತಿ ಕಕ್ಕಾಬಿಕ್ಕಿ ಆಗಿ ನಿಂತಿದ್ದವರು ಶ್ವೇತಾ ಧಗಾ
ರಾಜಸ್ಥಾನದ ಉದಯಪುರದ ಮೂಲೆಯ ಹಳ್ಳಿಯೊಂದರಲ್ಲಿ
ಪಿ ಸಾಯಿನಾಥ್ ಅವರನ್ನು ಓದಿ ಪ್ರಭಾವಿತರಾದ ಅವರು ಹಳ್ಳಿಯ ನಿಟ್ಟುಸಿರನ್ನು ಜಗತ್ತಿಗೆ ಧಾಟಿಸುತ್ತಾ ಊರೂರು ಅಲೆಯುತ್ತಿದ್ದರು
ಹಾಗೆ ಅಲೆಯುತ್ತಿದ್ದಾಗ ಎದುರಾದದ್ದು ಚಮ್ನೀಬಾಯಿ
ಘಾಟಿ ಅನ್ನುವ ಕುಗ್ರಾಮದಲ್ಲಿ
ತನ್ನ ಮುಂದೆ ನೂರೆಂಟು ರೀತಿಯ ಬೀಜಗಳನ್ನು ಹರಡಿಕೊಂಡಿದ್ದ ಚಮ್ನೀಬಾಯಿ ಆ ಬೀಜಗಳಲ್ಲಿ ಗಂಡು ಯಾವುದು ಹೆಣ್ಣು ಯಾವುದು ಎಂದು ಬಣ್ಣಿಸಿ ಹೇಳುತ್ತಿದ್ದಳು
ಚಮ್ನೀಬಾಯಿ ಎಲ್ಲಾ ಬೀಜಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಊರ ತಾಯಿ
ಕೈಯಿಂದ ಕೈಗೆ ಬೀಜಗಳು ಬದಲಾದರಷ್ಟೇ ದೇಸಿ ಸೊಗಡು ಉಳಿಯಲು ಸಾಧ್ಯ ಎಂದು ನಂಬಿರುವವಳು
ಅವಳು ಹೇಳುತ್ತಿದ್ದಳು- ಇಲ್ಲಿ ತರಕಾರಿ ಬೀಜಗಳನ್ನ ಹೆಣ್ಣು ಅಂತಾರ್ರೀ ಹತ್ತಿ, ಕಾಫಿ, ತಂಬಾಕು ಎಲ್ಲಾ ಗಂಡು
ತರಕಾರಿ ಏನು ಮಾಡಾಕ ಬರ್ತಾದ್ರೀ ಮನೀ ಒಳಗ ಅಡುಗೆ ಮಾಡಬೇಕಷ್ಟೇ
ಆದ್ರೆ ಕಾಫಿ ತಂಬಾಕ ಹತ್ತಿ ಎಲ್ಲಾ ಬೇಕಾದಷ್ಟು ದುಡೀತಾವ್ರಿ ಊರ್ರೂರು ತಿರುಗತಾವ್ರಿ ಅದಕ್ಕಾ ಗಂಡು ಅಂತ ಕರೀತಾರ್ರಿ
ಹಾಗೆ ಹೇಳುವಾಗ ಅವಳ ಮುಖದಲ್ಲಿ ಒಂದು ಸಣ್ಣ ವಿಷಾದದ ಎಳೆ ಇತ್ತು
‘ಅಮೃತ ಬೀಜ’ ಅನ್ನುವ ಒಂದು ಡಾಕ್ಯುಮೆಂಟರಿ ನೋಡಿದ್ದೆ
ಮೀರಾ ದಿವಾನ್ ಅನ್ನುವ ನಿರ್ದೇಶಕಿ ಕೆನಡಾದಿಂದ ಕರ್ನಾಟಕಕ್ಕೆ ಬಂದು ಊರೂರು ಸುತ್ತಿ ಇಂತ ಬೀಜ ರಕ್ಷಕರನ್ನು ತೆರೆಗೆ ತಂದಿದ್ದರು
ಇಡೀ ಸಾಕ್ಷ್ಯಚಿತ್ರ ನೋಡುತ್ತಾ ಹೋದಾಗ ನನಗೆ ಥಟ್ಟನೆ ಅರಿವಾಗಿದ್ದು ಅರೆ! ಬೀಜ ರಕ್ಷಿಸಬೇಕು ಅಂತ ಒಬ್ಬ ಗಂಡೂ ಮುಂದಾಗಿರಲಿಲ್ಲ
ಎಲ್ಲಾ ಹೆಣ್ಣು ಮಕ್ಕಳೇ
ಮನೆಯೊಳಗಿದ್ದ ಕೆಲಸವನ್ನು, ಸಂಸಾರವನ್ನು, ಹೊಲದ ಚಾಕರಿಯನ್ನೂ ನಿಭಾಯಿಸಿಕೊಂಡು ಬೀಜಗಳನ್ನು ತಮ್ಮ ಗರ್ಭದೊಳಗಿನ ಮಕ್ಕಳಂತೆ ಕಾಪಾಡುತ್ತಿದ್ದರು
ಯಶೋದಾ, ಸುನಂದಾ, ನೀಲಮ್ಮ ಈ ಮೂವರೂ ಬರೀ ಬೀಜಗಳನ್ನು ಮಾತ್ರ ಕಾಪಾಡುತ್ತಿರಲಿಲ್ಲ
ಬದಲಿಗೆ ಅವರಿಗೂ ಅರಿವಾಗದಂತೆ ದೊಡ್ಡ ಆಂದೋಲನಕ್ಕೆ ನಾಂದಿ ಹಾಡಿ ಬಿಟ್ಟಿದ್ದರು
ಈ ಮೂವರೂ ಬೀಜಗಳನ್ನು ಮಾತ್ರ ರಕ್ಷಿಸುತ್ತಿರಲಿಲ್ಲ, ಬದಲಿಗೆ ಇಡೀ ಜಗತ್ತಿಗೆ ಅರಿವಿನ ಬೀಜ ಬಿತ್ತುತ್ತಿದ್ದರು
ಈ ಮೂವರೂ ಕೇವಲ ಬೀಜಗಳನ್ನು ಮಾತ್ರ ಮಡಿಲಿನಲ್ಲಿಟ್ಟುಕೊಂಡಿರಲಿಲ್ಲ, ಬದಲಿಗೆ ಅಮೆರಿಕಾದ ವಿರುದ್ಧ ಗುಟುರು ಹಾಕಿದ್ದರು
ಈ ಮೂವರೂ ತಮಗೇ ಗೊತ್ತಿಲ್ಲದಂತೆ, ವಿಶ್ವ ಬ್ಯಾಂಕ್, ವಿಶ್ವ ವ್ಯಾಪಾರ ಸಂಘಟನೆ, ಗ್ಯಾಟ್, ಡಂಕೆಲ್ ಹೀಗೆ ಎಲ್ಲವನ್ನೂ ಪ್ರಶ್ನಿಸಿಬಿಟ್ಟಿದ್ದರು
ಬೀಜಗಳಿಗೆ ಪೇಟೆಂಟ್ ಮಾಡಲೇಬೇಕು ಎಂದು ಗ್ಯಾಟ್ ಪಟ್ಟು ಹಿಡಿದಾಗ ತಮ್ಮ ಒಡಲಲ್ಲಿದ್ದ ಕೂಸುಗಳನ್ನು ಹರಿದು ಒಗೆಯುತ್ತಿದ್ದಾರೆ ಎನ್ನುವಂತೆ ತಳಮಳಿಸಿದವರು ಇವರು
ದೇಶದ ಯಾವ ಮೂಲೆಗೆ ಹೋದರೂ ಹೆಣ್ಣು ಮಕ್ಕಳು ತಮ್ಮ ಮುರುಕು ಮನೆಯ ನೆಲದಲ್ಲಿ, ಗೋಡೆಯಲ್ಲಿ, ಗೂಡೆಯಲ್ಲಿ ಬೀಜಗಳನ್ನು ಬಚ್ಚಿಟ್ಟು
ದೇಸಿತನವನ್ನ ಅಲುಗಾಡದಂತೆ ನೋಡಿಕೊಂಡಿದ್ದರು
ಅಂತಹ ಗಟ್ಟಿಗಿತ್ತಿಯರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಬೀಜಗಳಾಗಿ ಹೋಗಿದ್ದರು
ಅಷ್ಟೆಲ್ಲಾ ಆಗಿತ್ತು
ಒಂದು ನಿಮಿಷ ಎಂದವಳೇ ಚಮ್ನೀಬಾಯಿ ಓಡಿ ಹೋದಳು
ಏನಪ್ಪಾ ಎಂದು ಶ್ವೇತಾ ಧಗಾ ಆ ಕಡೆ ತಿರುಗಿದರೆ ಜೋರು ಮಳೆಯ ಮಧ್ಯೆ ಬೀಜಗಳು ಕೊಚ್ಚಿ ಹೋಗದಂತೆ ಚಮ್ನೀಬಾಯಿ ಹರಸಾಹಸ ಪಡುತ್ತಿದ್ದಳು
ಇಂತಹ ಚಂದುಳ್ಳ ಹೆಣ್ಣು ಮಕ್ಕಳ ಒಂಬತ್ತು ಕೊಡು ಸ್ವಾಮಿ..