ಜಿ ಎನ್ ಮೋಹನ್
‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ ಅಂದಳು
ನಾನು ಒಂದು ಕ್ಷಣ ಗರಬಡಿದಂತಾದೆ
ಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆ
ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ ಈ ಪ್ರಶ್ನೆ ಎಸೆದಾಗ ನಾನು ಕಕ್ಕಾಬಿಕ್ಕಿಯಾದೆ
ಕಾಂಡೋಮ್ ಬಗ್ಗೆ ಮಾತನಾಡಲು ಇನ್ನೂ ‘ಶೈನಿಂಗ್ ಇಂಡಿಯಾ’ ಮುಜುಗರಪಡುತ್ತಾ ಕುಳಿತಿರುವಾಗ ಲೀಲಾ ಈ ಪ್ರಶ್ನೆ ಕೇಳಿದ್ದಳು
ಅವಳು ಹಾಗೆ ಕೇಳಲು ಕಾರಣವೂ ಇತ್ತು.
ಕರೋನಾ ಭಯ ಇಲ್ಲದೆ ಹೋಗಿದ್ದರೆ ಜಗತ್ತು ಈ ವೇಳೆಗೆ ಒಲಂಪಿಕ್ಸ್ ಉನ್ಮಾದಕ್ಕೆ ತಯಾರಿ ನಡೆಸುತ್ತಿರುತ್ತಿತ್ತು. ಜುಲೈನಲ್ಲಿ ಟೋಕಿಯೋದಲ್ಲಿ ಒಲಂಪಿಕ್ಸ್ ಗತ್ತಿನಿಂದ ಆರಂಭವಾಗಬೇಕಿತ್ತು.
‘ಇಷ್ಟು ದಿನ ದೇಶ ದೇಶಗಳ ನಡುವೆ ಇದ್ದ ಮುಸುಕಿನ ಗುದ್ದಾಟ ಈಗ ಕ್ರೀಡಾರಂಗದಲ್ಲಿ. ಪ್ರತಿಯೊಬ್ಬರೂ ತಮ್ಮ ದೇಶವನ್ನು ಒಂದು ಯುದ್ಧ ಗೆಲ್ಲಿಸಿ ಕೊಡಲಿಕ್ಕೆ ಹೋಗುತ್ತಿದ್ದಾರೇನೋ ಎನ್ನುವ ಒತ್ತಡ.
ಮಾಡು ಇಲ್ಲವೇ ಮಡಿ’ ಅಂತ ಅವಳಿಗೆ ಒಲಂಪಿಕ್ಸ್ ರಾಜಕೀಯ ಬಣ್ಣಿಸುತ್ತಾ ಕೂತಿದ್ದೆ.
ತಕ್ಷಣವೇ ಆಕೆ ಕೇಳಿದಳು ಏನಂದೆ ‘ಪರ್ಫಾರ್ಮ್ ಆರ್ ಪೆರಿಶ್?’
ಹೌದು, ಖಂಡಿತಾ ನಿಜ… ಆದರೆ ನೀನು ಹೇಳಿದಂತೆ ಬರೀ ಕ್ರೀಡಾಪಟುಗಳಿಗಲ್ಲ. ಜಗತ್ತಿನ ಅನೇಕ ಮುಗ್ಧ ಹೆಣ್ಣು ಮಕ್ಕಳಿಗೂ..’
ನಾನು ಕಿವಿಯ ಮೇಲೆ ಇಡೀ ಲಾಲ್ ಬಾಗನ್ನೇ ಮುಡಿಸಿಕೊಂಡವನಂತೆ
‘ಅಲ್ಲಮ್ಮಾ ಅದಕ್ಕೂ ಇದಕ್ಕೂ ಏನು ಸಂಬಂಧ? ಜಗತ್ತಿನ ಎಲ್ಲೆಡೆ ಹರಡಿಹೋಗಿರುವ ಮುಗ್ಧ ಮಹಿಳೆಯರಿಗೂ- ಒಲಂಪಿಕ್ಸ್ ಗೂ..’ ಅಂದೆ
ಆಗಲೇ ಆಕೆ ನನ್ನತ್ತ ಆ ಪ್ರಶ್ನೆ ಎಸೆದಿದ್ದು ಎಷ್ಟು ಕಾಂಡೋಮ್ ಬೇಕು ಗೊತ್ತಾ ಅಂತ.
ಇಡೀ ಜಗತ್ತು ಒಲಂಪಿಕ್ಸ್ ಎಂದರೆ ಟಿ ವಿ ಪರದೆಯ ಮೇಲೆ ನಡೆಯುವುದು, ರಿಯೋ ಅಂಗಳದಲ್ಲಿ ನಡೆಯುವುದು ಮಾತ್ರ ಅಂದುಕೊಂಡುಬಿಟ್ಟಿದೆ
ಆದರೆ ಈ ಪರದೆಗಳ ಹಿಂದೆ ಜರುಗುವ ಸ್ಪರ್ಧೆಗಳೇ ಬೇರೆ. ‘ಮನುಕುಲದ ಒಳಿತಿಗಾಗಿ’ ಎಂಬ ಸ್ಲೋಗನ್ ಗೂ ಅದಕ್ಕೂ ಏನೇನೂ ಸಂಬಂಧವಿಲ್ಲ.’ಅದಿರಲಿ ಒಂದು ಒಲಂಪಿಕ್ಸ್ ಯಶಸ್ವಿಯಾಗಿ ನಡೆಯಬೇಕು ಎಂದರೆ ಎಷ್ಟು ಕಾಂಡೋಮ್ ಬೇಕು ಎಂಬ ಅಂದಾಜಿದೆಯಾ’ ಎಂದಳು
ಒಲಂಪಿಕ್ಸ್ ಎಂದರೆ ಕ್ರೀಡೆ, ಕ್ರೀಡಾಂಗಣ, ಜ್ಯೋತಿ, ಬೇಟನ್ ಎನ್ನುವ ಕಾಲ ಎಂದೋ ಮುಗಿದು ಹೋಗಿದೆ. ಒಲಂಪಿಕ್ಸ್ ಎನ್ನುವುದು ಕಾಂಡೋಮ್ ಗಳ ಆಟ ಕೂಡಾ ಎಂದಳು
ನಾನು ಪತ್ರಕರ್ತನ ವೇಷದಿಂದ ‘ಪಾಪ ಪಾಂಡು’ ವೇಷಕ್ಕೆ ಸ್ವ ಇಚ್ಛೆಯಿಂದ ಬದಲಾಗಿದ್ದೆ
ಒಂದು ಒಲಂಪಿಕ್ಸ್ ಎಂದರೆ 1 ಕೋಟಿಗೂ ಹೆಚ್ಚು ಕಾಂಡೋಮ್ ಬೇಕು .
ಒಬ್ಬ ಕ್ರೀಡಾಪಟು ಒಲಂಪಿಕ್ಸ್ ನಡೆಯುವ ಎರಡು ವಾರದಲ್ಲಿ ಸರಾಸರಿ 51 ಕಾಂಡೋಮ್ ಬಳಸುತ್ತಾನೆ ಗೊತ್ತಾ ಅಂದಳು
ಎಲ್ಲರೂ ಅಂದುಕೊಂಡಿದ್ದಾರೆ ಒಲಂಪಿಕ್ಸ್ ಸ್ಥಳ ಘೋಷಣೆ ಆದ ತಕ್ಷಣ ತಯಾರಾಗುವುದು ಆ ದೇಶ, ಒಲಂಪಿಕ್ಸ್ ಸಮಿತಿ, ಕ್ರೀಡಾಳುಗಳು ಅಂತ
ನಿಜ, ಆದರೆ ಅವರಿಗಿಂತ ಮುಂಚೆ ಸಿದ್ಧವಾಗುವುದು ಇಡೀ ಜಗತ್ತಿನ ವೇಶ್ಯಾ ಗೃಹಗಳು ಹಾಗೂ ಕಾಂಡೋಮ್ ಕಂಪನಿಗಳು
ಒಲಂಪಿಕ್ಸ್ ಎಂದರೆ ವೇಶ್ಯಾವಾಟಿಕೆಗೆ ಯುಗಾದಿ ಹಬ್ಬ ಇದ್ದಂತೆ
12 ದಿನದಲ್ಲಿ ವರ್ಷದ ಬೆಳೆ ಬೆಳೆಯಬೇಕು ಎಂದು ಮನುಷ್ಯರನ್ನೇ ತಿಂದು ಹಾಕುವ ಕಾರ್ಖಾನೆಗಳು ಹಲ್ಲು ಮಸೆದು ನಿಲ್ಲುತ್ತಾವೆ
‘ಇಡೀ ಜಗತ್ತಿನಲ್ಲಿ ಹೆಣ್ಣು ಮಕ್ಕಳ ತಲಾಷ್ ನಡೆಯುತ್ತದೆ.
ಕಪ್ಪು, ಬಿಳಿ, ಕಂದು, ಸಣ್ಣ, ದಪ್ಪ ಎನ್ನುವ ಬೇಧ ಇಲ್ಲದೆ ಇರುವ ಒಂದೇ ಕೈಗಾರಿಕೆ ಎಂದರೆ ಸೆಕ್ಸ್ ಉದ್ಯಮ ಮಾತ್ರ
ಹೆಂಗಸಾಗಿದ್ದರೆ ಸಾಕು’ ಅಂತ ನಿಟ್ಟುಸಿರಿಟ್ಟಳು.
ಲೀಲಾ ಸಂಪಿಗೆ ಹೇಳುತ್ತಿರುವ ಯಾವುದೇ ವಿಚಾರವನ್ನು ಪ್ರಶ್ನಿಸುವ ಅಗತ್ಯ ನನಗಿರಲಿಲ್ಲ
ಆಕೆ ಸಂಪಿಗೆ ಎಂಬ ಊರಿನಿಂದ, ಕಟ್ಟಾ ಸಂಪ್ರದಾಯಸ್ಥ ಮನೆಯಿಂದ ಹೊರಟು ತಟ್ಟಿದ್ದು ಈ ಜಗತ್ತು ತಟ್ಟಲು ಒಲ್ಲೆ ಎನ್ನುವ ಮನೆಯ ಬಾಗಿಲುಗಳನ್ನು.
ಆಕೆ ಊರೂರುಗಳನ್ನು ಸುತ್ತಿದಳು, ಲೈಂಗಿಕ ಕಾರ್ಯಕರ್ತೆಯರ ಮನೆಯ ಬಾಗಿಲು ತಟ್ಟಿದಳು
ಹಗಲು ರಾತ್ರಿ ಎನ್ನದೆ ಅವರ ಕಥೆಗಳನ್ನು ಕೇಳಿದಳು. ಪೊಲೀಸ್ ಅಧಿಕಾರಿಗಳ ಬೆನ್ನು ಬಿದ್ದಳು. ಒಂದಿಷ್ಟು ಕಿರುಕುಳ ಇಲ್ಲದ ಬದುಕು ದಕ್ಕಿಸಿಕೊಡಲು ಯತ್ನಿಸಿದಳು
ಮನೆ ಮನೆಯ ಕತ್ತಲೆಯಲ್ಲಿ ಉಳಿದು ಪ್ರತಿ ಕಣ್ಣ ಕಣ್ಣೀರನ್ನು ಅರಿತಳು
ಆಗಲೇ ಆಕೆಯನ್ನು ಪರಿಚಯಿಸುವಾಗ ‘ಬಾಂಡ್- ಜೇಮ್ಸ್ ಬಾಂಡ್’ ಎನ್ನುವಂತೆ ನಾನು ‘ಲೀಲಾ ಸಂಪಿಗೆ- ಡಾ ಲೀಲಾ ಸಂಪಿಗೆ’ ಅಂತ ಪರಿಚಯಿಸಿದ್ದು ಯಾಕೆ ಗೊತ್ತಾ
ಈ ಸುತ್ತಾಟಗಳನ್ನು ಆಕೆ ಕೇವಲ ಸುತ್ತಾಟಗಳಿಗಷ್ಟೇ ಸೀಮಿತಗೊಳಿಸಲಿಲ್ಲ
ಬದಲಿಗೆ ಮಡಿವಂತಿಕೆಯ ಮನಸ್ಸುಗಳಿಗೂ ಈ ಕರಾಳತೆಯ ಅರಿವಾಗಿಸಲು ವೇಶ್ಯಾವೃತ್ತಿಯ ಬಗ್ಗೆಯೇ ಪಿಎಚ್ಡಿ ಅಧ್ಯಯನ ನಡೆಸಿದಳು
ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಳು.
ಇಲ್ಲಿ ವೇಶ್ಯಾ ಜಾಲವೂ ತನ್ನ ‘ಆಟ ‘ ಆಡುತ್ತದೆ
ಎನ್ನುವಾಗ ಅವಳ ದನಿ ತಣ್ಣಗೆ ಇರಿಯುತ್ತಿತ್ತು.
ವೇಶ್ಯಾವಾಟಿಕೆಗಳು ಎಷ್ಟು ಸಂಭ್ರಮದಿಂದ ಕುಣಿಯುತ್ತಾವೆ ಎಂದರೆ
ಎಷ್ಟೋ ಊರುಗಳಲ್ಲಿ ಬೀದಿಯಲ್ಲಿ ಆಡುತ್ತಿದ್ದ ಹೆಣ್ಣು ಮಕ್ಕಳು, ಕಾಲೇಜು ಗೇಟು ತಲುಪಿಕೊಳ್ಳುತ್ತಿದ್ದ ಯುವತಿಯರೂ ನಾಪತ್ತೆಯಾಗಿಬಿಡುತ್ತಾರೆ.
ಕ್ರೀಡಾಪಟುಗಳಿಗೆ ಮಾತ್ರ ಅಲ್ಲ, ಕ್ರೀಡಾಧಿಕಾರಿಗಳು, ಕ್ರೀಡಾಭಿಮಾನಿಗಳು, ಕ್ರೀಡೆ ನೆಪದಲ್ಲಿ ಬರುವ ಪ್ರವಾಸಿಗರು, ಒಲಂಪಿಕ್ಸ್ ಗೆ ಬೇಕಾದ ಕಟ್ಟಡ, ಕ್ರೀಡಾಂಗಣ ನಿರ್ಮಿಸಲು ಬರುವ ಕಾರ್ಮಿಕರು, ಮೇಸ್ತ್ರಿಗಳು ಎಲ್ಲರಿಗೂ ವೇಶ್ಯೆಯರನ್ನು ಸರಬರಾಜು ಮಾಡುವ ತಾಣ ಎದ್ದು ನಿಲ್ಲುತ್ತದೆ.
ಇಡೀ ಜಗತ್ತಿನ ಹಲವು ದೇಶಗಳಲ್ಲಿ ಒಲಂಪಿಕ್ಸ್ ಬಂದಾಗ ವಿಚಿತ್ರ ಜಾಹೀರಾತೊಂದು ಕಾಣಿಸಿಕೊಳ್ಳುತ್ತದೆ-
‘ನಿಮ್ಮ ಜೀವಮಾನದ ಕಷ್ಟ ಬಗೆಹರಿಸಿಕೊಳ್ಳಬೇಕೇ?
ಇಲ್ಲಿದೆ ಸುಲಭ ಮಾರ್ಗ, ಸರಿಯಾದ ಅವಕಾಶ..’
ಆ ಸುಲಭ ಮಾರ್ಗ, ಸರಿಯಾದ ಅವಕಾಶ ಎನ್ನುವುದು ಅವರನ್ನು ಕೊಂಡೊಯ್ದು ನಿಲ್ಲಿಸುವುದು ಒಲಂಪಿಕ್ಸ್ ವೇಶ್ಯಾ ಅಡ್ಡೆಗಳಿಗೆ.
ಒಂದು ಒಲಂಪಿಕ್ಸ್ ಎಂದರೆ 75 ಸಾವಿರ ವೇಶ್ಯೆಯರಾದರೂ ಬೇಕು
‘ಪರ್ಫಾರ್ಮೆನ್ಸ್ ಹೌಸ್’ ಎನ್ನುವ ಅಟ್ರಾಕ್ಟಿವ್ ಹೆಸರು ಸಹಾ ಇದಕ್ಕೆ ಇದೆ
‘perform or perish ಅಂದ್ರೆ ಏನು ಅಂತ ಗೊತ್ತಾಯ್ತಾ?’ ಅಂತ ಲೀಲಾ ನಕ್ಕಾಗ ನನಗೆ ಕ್ರೀಡೆಗಳ ಅಂಕಿ ಅಂಶಗಳ ತಜ್ಞ ರಾಜನ್ ಬಾಲಾ ನೀಡುತ್ತಿದ್ದ ಅಂಕಿ ಅಂಶಕ್ಕೂ ಈ ಲೀಲಾ ನೀಡುತ್ತಿದ್ದ ಅಂಕಿ ಅಂಶಕ್ಕೂ ಇರುವ ವ್ಯತ್ಯಾಸ ಷಾಕ್ ನೀಡಿತ್ತು.
ಚಳಿಗಾಲದ ಒಲಂಪಿಕ್ಸ್ ಬಂದರೆ ‘ಚಳಿ ಅಂತ ಭಯಪಡಬೇಡಿ ಬಿಸಿ ಮಾಡುತ್ತೇವೆ’ ಎನ್ನುವ ಜಾಹೀರಾತು ಒಲಂಪಿಕ್ಸ್ ದೇಶದಲ್ಲಿ ಬೀದಿ ಬೀದಿಗಳಲ್ಲಿ ರಾರಾಜಿಸುತ್ತದೆ.
ಒಂದೆಡೆ ಒಲಂಪಿಕ್ಸ್ ಕ್ರೀಡೆ, ಇನ್ನೊಂದೆಡೆ ಲೈಂಗಿಕ ಕ್ರೀಡೆ
ಕಾಂಡೋಮ್ ವೀಕ್, ಸೆಕ್ಸ್ ವೀಕ್, ಕಾಂಡೋಮ್ ಫ್ಯಾಷನ್ ಷೋ ಇವು ಒಂದೆರಡು ಝಲಕ್ ಅಷ್ಟೇ.
ವಿಶ್ವಸಂಸ್ಥೆಯ ಪ್ರಕಾರವೇ ಪ್ರತೀ ವರ್ಷ 7 ಬಿಲಿಯನ್ ಡಾಲರ್ ನಷ್ಟಾದರೂ ಸೆಕ್ಸ್ ವಹಿವಾಟು ನಡೆಯುತ್ತದೆ
ಇದನ್ನ ಸಹಕಾರಿ ವ್ಯಾಪಾರ ಅಂತ ಘೋಷಿಸಿ ಸಹಕಾರಿ ಸಂಸ್ಥೆ ಅಡಿ ರಿಜಿಸ್ಟರ್ ಮಾಡಿ ಎನ್ನುವ ಕೂಗೂ ವೇಶ್ಯಾಗೃಹಗಳಿಂದ ಹೊರಬಿದ್ದಿದೆ.
‘ಅದಿರಲಿ ಬಿಡು ನಿಮ್ಮ ಮೀಡಿಯಾ ಇದನ್ನೆಲ್ಲಾ ಜಗತ್ತಿಗೆ ಹೇಳಬೇಕು ಹೌದಲ್ವಾ’ ಅಂದಳು
ನಾನು ‘ಹೌದು, ಹೌದು ಅಲ್ಲಿನ ಕರಾಳ ಕಥೆಗಳು, ಮಾನವ ಸಾಗಾಟ, ಸ್ಕ್ಯಾಂಡಲ್ ಗಳು ಎಲ್ಲವೂ ಸುದ್ದಿ ಅಷ್ಟೇ ಅಲ್ಲ, ಪೇನಲ್ ಡಿಸ್ಕಷನ್, ಒಪಿನಿಯನ್ ಪೋಲ್, ಅಭಿಯಾನ ಎಲ್ಲಾ ಆಗಿ ಹೊರಹೊಮ್ಮಬೇಕು’ ಅಂತ ಉತ್ಸಾಹದಿಂದ ಹೇಳುತ್ತಿದ್ದೆ. ಆಗಲೇ ಲೀಲಾ ಒಂದು ಪುಟ್ಟ ಸೂಜಿ ಕೈಗೆತ್ತಿಕೊಂಡದ್ದು
‘ನಿಮ್ಮ ಮೀಡಿಯಾದವರಿಗೆ ಸೆಕ್ಸ್ ನೇರಪ್ರಸಾರದ ಹಕ್ಕು ಬೇಕಂತೆ, ಹಾಗಂತ ಅರ್ಜಿ ಹಾಕಿಕೊಂಡಿದ್ದಾರೆ’ ಎಂದಳು
ನನ್ನ ಉತ್ಸಾಹದ ಬಲೂನಿಗೆ ಸೂಜಿ ನೇರವಾಗಿಯೇ ತಾಕಿತ್ತು
‘ಅದೇ ಆಟ, ಅದೇ ಓಟ ಅಂದ್ರೆ ಯಾರಿಗೆ ಇಂಟರೆಸ್ಟ್ ಇರುತ್ತೆ ಎಷ್ಟು ದಿನಾ ಅಂತ ಕುಣಿಯೋದು, ನೆಗೆಯೋದೇ ತೋರಿಸೋದಿಕ್ಕೆ ಆಗುತ್ತೆ?
ಲಕ್ಷಾಂತರ ಡಾಲರ್ ಕೊಟ್ಟು ಪ್ರಸಾರದ ರೈಟ್ಸ್ ತಗೊಂಡು ಮೂರು ನಾಮ ಹಾಕಿಕೊಳ್ಳುವುದೇ ಆಗಿದೆ.
ಆದ್ದರಿಂದ ಒಲಂಪಿಕ್ಸ್ ನೈಟ್ ಲೈಫ್ ಪ್ರಸಾರ ಮಾಡೋದಿಕ್ಕೂ ಅವಕಾಶ ಕೊಡಿ. ಬೇಕಾದರೆ ಅದಕ್ಕೆ ಇನ್ನೂ ಸ್ವಲ್ಪ ಜಾಸ್ತಿ ದುಡ್ಡೂ ತಗೊಳ್ಳಿ’ ಅಂದಿದ್ದು ಖ್ಯಾತ ಮೀಡಿಯಾ ಸಂಸ್ಥೆಗಳು.
‘ಹೋಗ್ಲಿ ಬಿಡಪ್ಪಾ, ಮೀಡಿಯಾದವರ ಒಕ್ಕೊರಲ ಹಕ್ಕೊತ್ತಾಯ ಏನು ಗೊತ್ತಾ..??ಒಲಂಪಿಕ್ಸ್ ನಲ್ಲಿ ಬೆತ್ತಲೆ ಓಟ ಬೇಕಂತೆ’
ಯಾಕಂತೆ ಅಂದೆ
ಅದಕ್ಕೂ ಒಳ್ಳೆ ಡಿಫೆನ್ಸ್ ಇದೆ
ಒಲಂಪಿಕ್ಸ್ ಆರಂಭದಲ್ಲಿ ಫಸ್ಟ್ ಗೋಲ್ಡ್ ಮೆಡಲ್ ಬಂದದ್ದು ನಗ್ನವಾಗಿ ಓಡಿದವನಿಗೆ
ಹಾಗಾಗಿ ಪ್ರತೀ ಒಲಂಪಿಕ್ಸ್ ನಲ್ಲಿ ‘ನ್ಯೂಡ್ ರನ್’ ಇಡಿ ಅಂತಿದ್ದಾರೆ ಅಂತ ಲೀಲಾ ಸಂಪಿಗೆ ತಣ್ಣಗೆ ವಿವರಿಸುತ್ತಿದ್ದಳು.
ಜಗತ್ತಿನ ಕಣ್ಣಿನ ಮುಂದೆ ಬೆತ್ತಲೆ ಓಡುತ್ತಿರುವವರು ಯಾರು? ಎನ್ನುವ ಪ್ರಶ್ನೆ ನನ್ನ ಮನಸ್ಸಿನೊಳಗೆ ಅಷ್ಟೇ ಶರವೇಗದಲ್ಲಿ ಓಡಲಾರಂಭಿಸಿತು