ಜಿ ಎನ್ ಮೋಹನ್
‘ಹೌದು ಎಲ್ಲಿ ಉಳಿದುಕೊಂಡಿದ್ದೀರಿ?’ ಅಂದರು
ನಾನು ‘ಬೆಲ್ ಮೌಂಟ್’ ನಲ್ಲಿ ಅಂದೆ
ಅವರಿಗೆ ಏನೆಂದರೆ ಏನೂ ಗೊತ್ತಾದಂತೆ ಕಾಣಲಿಲ್ಲ
ಮತ್ತೆ ಅದೇ ಪ್ರಶ್ನೆ ಒಗೆದರು
ನಾನು ‘ಮಂಗಳೂರು ಸಮಾಚಾರ’ದಲ್ಲಿ ಎಂದೆ
ಅವರು ಇನ್ನಷ್ಟು ಗೊಂದಲಕ್ಕೀಡಾದರು
‘ನಾನು ಕೇಳಿದ್ದು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಲ್ಲ’ ಎಂದರು
ನಾನು ಆಗ ಕ್ವಿಜ್ ಪ್ರೋಗ್ರಾಮ್ ಗೆ ಕೊನೆ ಹಾಡುವವನಂತೆ ನಾನಿರುವುದು ‘ಬಲ್ಮಠ’ದಲ್ಲಿ
‘ಮಂಗಳೂರು ಸಮಾಚಾರ’ ಇರುವ ಅಂಗಳದಲ್ಲೇ ಎಂದೆ
ಮತ್ತೆ ಅದ್ಯಾಕೆ ‘ಬೆಲ್ ಮೌಂಟ್’ ಅಂದಿರಿ ಎಂದರು
ಆಗ ನಾನು ಅವರ ಮುಂದೆ ಮೂರು ಸಂಪುಟಗಳ ದೊಡ್ಡ ಕಟ್ಟನ್ನು ಹಿಡಿದು ನಿಲ್ಲಬೇಕಾಯಿತು.
ನಾನು ಯಾವಾಗಲೂ ಗೆಳೆಯರೊಂದಿಗೆ ತಮಾಷೆ ಮಾಡುತ್ತಿರುತ್ತೇನೆ- ‘ನನಗೆ ಮಂಗಳೂರಿನ ಗ್ರೀನ್ ಕಾರ್ಡ್ ಇದೆ’ ಎಂದು
ಎರಡು ಅವಧಿಯಲ್ಲಿ ೯ ವರ್ಷಗಳ ಕಾಲ ಮಂಗಳೂರಿನಲ್ಲಿದ್ದವನು ನಾನು.
ಬೆಂಗಳೂರಿನಿಂದ ನನ್ನ ಕೈನೆಟಿಕ್ ಹೋಂಡಾ ಏರಿ ಜುಮ್ಮಂತ ಘಟ್ಟ ಇಳಿದು ಕಡಲ ನಗರಿ ಸೇರಿಕೊಂಡವನಿಗೆ ಈಗಲೂ ಮನದೊಳಗೆ ಕಡಲ ಅಲೆಗಳದ್ದೇ ನಾದ.
ಮಂಗಳೂರಿಗೆ ಎಂದು ಸ್ಕೂಟರ್ ಹತ್ತಿದವನಿಗೆ ಹೇಳಿದರು- ಅಲ್ಲಿ ಹೇಗಿರುತ್ತೀಯೋ ಮಾರಾಯ
ದಪ್ಪ ಅಕ್ಕಿ, ಬಿರು ಬೇಸಿಗೆ, ಭಾರೀ ಮಳೆ, ಮೀನಿನ ವಾಸನೆ..
ಹಾಗೆ ಅನಿಸಿಬಿಡುತ್ತಿತ್ತೇನೋ.. ನಾನು ಮಂಗಳೂರು ಹೊರಗೂ ಹೆಜ್ಜೆ ಹಾಕದಿದ್ದರೆ..
ಕಾರ್ಕಳದ ಭುವನೇಂದ್ರಕ್ಕೆ ಹಾಮಾನಾ ಬರುತ್ತಾರಂತೆ, ಕುಂದಾಪುರದಲ್ಲಿ ಕಾರಂತರ ಮನೆ ಇದೆಯಂತೆ, ಉಡುಪಿಯಲ್ಲಿ ಭೂತ ಮುಖವರ್ಣಿಕೆ ಪ್ರಾತ್ಯಕ್ಷಿಕೆ ಇದೆಯಂತೆ, ಕವತಾರ್ ನಲ್ಲಿ ಸಿರಿ ಜಾತ್ರೆಯಂತೆ, ಸುಳ್ಯದಲ್ಲಿ ಬಣ್ಣದ ಮಾಲಿಂಗರುು ಇದ್ದಾರಂತೆ.. ಅಂತ ಇದ್ದಬದ್ದ ನೆಪಗಳನ್ನೆಲ್ಲಾ ಹುಡುಕಿಕೊಂಡು ಮೂಲೆ ಮೂಲೆ ಸುತ್ತಿಬಿಟ್ಟೆ.
ಜಿ ಎಸ್ ಸಿದ್ಧಲಿಂಗಯ್ಯನವರು ಒಮ್ಮೆ ಹೇಳಿದ್ದರು- ‘ಹಸು ಕರು ಹಾಕಿದ ತಕ್ಷಣ ಅದರ ಬಗ್ಗೆ ಪ್ರೀತಿ, ಮಮತೆ ಏನೂ ಹುಟ್ಟುವುದಿಲ್ಲ ಕಣೋ, ಯಾವಾಗ ಕರುವಿನ ಮೈ ಮೇಲಿರುವ ಲೋಳೆಯನ್ನು ಶುಚಿ ಮಾಡಲು ಅದರ ಮೈ ನೆಕ್ಕಲು ಆರಂಭಿಸುತ್ತದೋ ಅಲ್ಲಿಂದ ಹುಟ್ಟುತ್ತದೆ ಪ್ರೀತಿ ಸಂಬಂಧ’ ಅಂತ..
ಯಸ್, ಹೌದು, ಅಂದ್ , ಹಾಂ ಜೀ.. ಎಂದು ಈಗ ಖಡಕ್ಕಾಗಿ ಅದನ್ನು ಅನುಮೋದಿಸುತ್ತೇನೆ.
ಏಕೆಂದರೆ ಬಂದರಿಗೆ ಹೋಗಿ ಮೀನು ದಡ ಸೇರುವ ವೇಳೆಗೆ ಲಾಟ್ ನಲ್ಲಿ ಮೀನು ಕೊಂಡು ಮನೆಗೆ ಬಂದವನು ನಾನು.
ಯಾವ ‘ಕಜೆ ಅಕ್ಕಿ’ ಚೆನ್ನ ಎಂದು ನಿದ್ದೆಯಲ್ಲಿ ಕೇಳಿದರೂ ಹೇಳಬಲ್ಲೆ,
ದೋಸೆಗೆ ಹಲಸಿನ ಹಣ್ಣು ಹಾಕಿದಾಗ ಬರುವ ಸುವಾಸನೆ ಯಾವುದು ಎಂದು ಮನಮುಟ್ಟುವಂತೆ ವಿವರಿಸಬಲ್ಲೆ.
ಅದು ಬಿಡಿ ವಾಸನೆಯನ್ನು ವಾಸನೆ ಎಂದೂ ಸುವಾಸನೆಯನ್ನು ಸುವಾಸನೆ ಎಂದೂ ಗುರುತಿಸಬಲ್ಲೆ ಎಂದರೆ ನನಗಲ್ಲದೆ ಇನ್ನಾರಿಗೆ ಗ್ರೀನ್ ಕಾರ್ಡ್ ಸಿಗಲು ಸಾಧ್ಯ..!
ಆದರೆ ಒಂದು ಅಳುಕಿತ್ತು. ಸೂಟರ್ ಪೇಟೆ, ವೆಲೆನ್ಸಿಯಾ, ಸ್ಟರಕ್ ರಸ್ತೆ, ಮೋರ್ಗನ್ಸ್ ಗೇಟ್ , ಹಾಮಿಲ್ಟನ್ ಸರ್ಕಲ್ ಇವು ನನಗೆ ಒಳ್ಳೆ ಗಣಿತ ಪರೀಕ್ಷೆಯ ಅತಿ ಕಠಿಣ ಥೀರಮ್ ಗಳಂತೆ ಕಾಣುತ್ತಿತ್ತು.
ಬಿಡಿಸಲಾಗದ ಒಗಟು.
ಆ ವೇಳೆಗೆ ಈ ಅಡ್ಕಗಳೂ, ಗುಡ್ಡೆಗಳೂ, ಬೈಲುಗಳೂ ಹೀಗೆಯೇ ನನ್ನ ತಲೆ ತಿಂದಿತ್ತು.
ಆದರೆ ನಾನು ಆರ್ಕೆ ಮಣಿಪಾಲರ ಸ್ಥಳನಾಮ ಅಧ್ಯಯನಗಳ ಮೊರೆ ಹೊಕ್ಕು ಇವುಗಳಲ್ಲಿ ಬಹುತೇಕ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದೆ.
ಹಾಗಾಗಿ ಜಲ್ಲಿ ಗುಡ್ಡೆ, ಮಣ್ಣು ಗುಡ್ಡೆಗಳೂ, ದೇರೆಬೈಲುಗಳೂ, ಅಡ್ಯನಡ್ಕ, ಹಿರಿಯಡ್ಕಗಳೂ ಅಂತಹ ದೊಡ್ಡ ಭೂತವಾಗಿ ನನ್ನ ಮುಂದೆ ಕುಣಿಯುತ್ತಿರಲಿಲ್ಲ.
ನಾನೋ ಭಟ್ಕಳದಿಂದ ಕಣ್ಣೂರಿನವರೆಗೆ ಸುತ್ತಿದ್ದೇನೆ ಎಂದು ಎಲ್ಲರ ಮುಂದೆ ಕೊಚ್ಚಿಕೊಳ್ಳುತ್ತಾ ಮಂಗಳೂರಿನವರಿಗೇ ಮಂಗಳೂರಿನ ದಾರಿ ಹೇಳಬಲ್ಲೆ ಎಂದು ಮೀಸೆ ತಿರುವುತ್ತಿದ್ದೆ.
ಈ ಅಹಂಗೆ ಭಂಗ ತಂದದ್ದೇ ಇವು. ಈ ಸೂಟರ್, ಸ್ಟರಕ್, ಹಾಮಿಲ್ಟನ್ ಗಳು.
ಏನು ಮಾಡಿದರೂ ಇದರ ಅರ್ಥ ಹೊಳೆಯುತ್ತಲೂ ಇರಲಿಲ್ಲ. ಅಶೋಕವರ್ಧನರ ಅತ್ರಿ ಪುಸ್ತಕದ ಅಂಗಡಿಗೆ ಹೊಕ್ಕು ಹುಡುಕಿಯೂ ಸೋತಿದ್ದೆ.
ಇದು ಗೊತ್ತಾಗಲಿಲ್ಲ ಎನ್ನುವ ಕೊರತೆಯೊಂದಿಗೆ ನಾನು ಮಂಗಳೂರು ದಾಟಿ ಹೈದ್ರಾಬಾದ್ ಗೆ ಹೋದೆ.. ಅಲ್ಲಿಂದ ಬೆಂಗಳೂರು ಸೇರಿಕೊಂಡೆ
ಹೀಗಿರುವಾಗಲೇ ಒಂದು ದಿನ ೨೫೦೦ ಪುಟಗಳು ನನ್ನ ಎದುರು ಹರಡಿಕೊಂಡವು.
ನನ್ನ ಬದುಕಿಗೆ ಒಂದು ‘ಗಿಳಿಸೂವೆ’ಯಾಗಿರುವ ಬಿ ಎ ವಿವೇಕ ರೈ ಅವರ ‘ಸುಯಿಲ್’ಗೆ ಹೋದಾಗ ನನ್ನೆದುರು ಹರಡಿಕೊಂಡ ಹಾಳೆಗಳು ನನ್ನನ್ನು ಒಂದೇ ಏಟಿಗೆ ಎತ್ತಿ ಅರಬ್ಬೀ ಸಮುದ್ರಕ್ಕೂ, ಅಲ್ಲಿಂದ ಅಳಿವೆಗಳಿಗೂ, ಬಂದರಿಗೂ, ಬ್ರಿಟಿಷರ ಸಾಮ್ರಾಜ್ಯಕ್ಕೂ, ಜೈನ ಬೀಡುಗಳಿಗೂ, ಗುತ್ತುಗಳಿಗೂ, ಟಿಪ್ಪು ಸುಲ್ತಾನನ ಕೋಟೆಗಳಿಗೂ, ಜೋಗಿ ಮಠಕ್ಕೂ, ಚಾಪೆಲ್, ಚರ್ಚ್ ಗಳಿಗೂ, ಬ್ಯಾರಿ ಸಾಹಿತ್ಯ ಅಕ್ಯಾಡೆಮಿಗೂ, ಕೊಂಕಣರ ರಥ ಬೀದಿಗೂ.. ಗುಜರಾತಿ ಹೋಟೆಲ್ ಗೂ ಭೇಟಿ ಕೊಡಿಸಿ ಕುದ್ಮುಲ್ ರಂಗರಾಯರು, ಫಾದರ್ ಅಗಸ್ಟಸ್ ಮುಲ್ಲರ್, ಮೊಳಹಳ್ಳಿ ಶಿವರಾವ್, ಕಾರ್ನಾಡ್ ಸದಾಶಿವರಾವ್, ಮಣೇಲ್ ಶ್ರೀನಿವಾಸ ನಾಯಕ್, ಜಾರ್ಜ್ ಫರ್ನಾಂಡಿಸ್ ಅವರ ಕೈ ಕುಲುಕಿಸಿತು.
ನಾನು ವಿವೇಕ ರೈ ಅವರ ಮುಖ ನೋಡಿದೆ. ಅಭಿಮಾನದಿಂದ. ಮಂಗಳೂರು ಎಂಬ ಮಂಗಳೂರು ೨೫೦೦ ಪುಟಗಳಲ್ಲಿ ಹರಡಿ ನಿಂತಿತ್ತು.
‘ಮೊದಲು ಎರಡು ಸಂಪುಟದಲ್ಲಿ ಮಂಗಳೂರು ದರ್ಶನ ಮಾಡಿಸಬೇಕು ಎಂದಿತ್ತು. ಆದರೆ ನಾವು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಶುರು ಮಾಡಿದಾಗ ಇದು ಇಷ್ಟಕ್ಕೇ ಮುಗಿಯುವ ಕೆಲಸವಲ್ಲ ಅನಿಸಿ ಹೋಯಿತು. ಸಂಪಾದಕ ಮಂಡಳಿ ಸಂಗ್ರಹಿಸಿದ ಮಾಹಿತಿಗಳು ನಾಲ್ಕು ಸಂಪುಟಕ್ಕಾಗುವಷ್ಟಿತ್ತು. ಕೊನೆಗೆ ಮೂರು ಸಂಪುಟ ನಿಮ್ಮ ಮುಂದಿದೆ ‘ ಎಂದರು.
‘ಮಂಗಳೂರು ದರ್ಶನ’ದ ಈ ಮೂರೂ ಸಂಪುಟಗಳನ್ನು ನೋಡಿದಾಗ ‘ವಿವೇಕ’ ಹಾಗೂ ‘ಆನಂದ’ ಎರಡರ ಹೆಜ್ಜೆ ಗುರುತೂ ಸಿಕ್ಕಿಬಿಡುತ್ತದೆ.
ವಿವೇಕ ರೈ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ‘ಮೈಸೂರು ದರ್ಶನ’ದ ನಾಲ್ಕು ಸಂಪುಟಗಳನ್ನು ರೂಪಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಆಡಳಿತಕ್ಕೆ ೨೦೦ ವರ್ಷವಾದಾಗ ‘ಪೊಲಿ’ ಸ್ಮರಣ ಸಂಚಿಕೆ ರೂಪಿಸಿದ್ದರು.
ಈಗ ಈ ‘ಮಂಗಳೂರು ದರ್ಶನ’.
ಮಂಗಳೂರು ಮಹಾನಗರಪಾಲಿಕೆಗೆ ೧೫೦ ವರ್ಷಗಳಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಎ ಬಿ ಇಬ್ರಾಹಿಂ, ಅಧ್ಯಕ್ಷತೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಘನ ಕಾರ್ಯದ ಹೊಣೆ ಹೊತ್ತುಕೊಂಡಿತು.
ಅಧ್ಯಕ್ಷರಾಗಿದ್ದ ಇಬ್ರಾಹಿಂ ಕೋಡಿಜಾಲ್ ಹಾಗೂ ಆಯುಕ್ತರಾಗಿದ್ದ ಮೊಹಮ್ಮದ್ ನಜೀರ್ ಚುಕ್ಕಾಣಿ ಹಿಡಿದರು.
ಡಾ ವಾಮನ ನಂದಾವರ, ಡಾ ಸತ್ಯನಾರಾಯಣ ಮಲ್ಲಿಪಟ್ಟಣ, ಮುದ್ದು ಮೂಡುಬೆಳ್ಳೆ ಅವರು ಸಹಾಯಕ ಸಂಪಾದಕರ ಗುರುತರ ಜವಾಬ್ದಾರಿ ಹೊತ್ತರು.
೧೮ ತಿಂಗಳುಗಳ ಕಾಲ ಮಂಗಳೂರಿನ ಮೂಲೆ ಮೂಲೆಗಳಲ್ಲಿ ಕಂಡಿದ್ದು ಈ ಮಂಗಳೂರು ದರ್ಶನದ ತಂಡ.
ಮಂಗಳೂರಿನ ಒಳಗೆ ಸೇರಿ ಹೋದ ಮೇಲೆಯೇ ಗೊತ್ತಾದದ್ದು ಮಂಗಳೂರು ಒಂದು ನಗರ ಹಲವು ಹೆಸರು ಎಂದು.
ಅದು ತುಳುವರಿಗೆ ‘ಕುಡ್ಲ’ ಕೊಂಕಣಿಗರಿಗೆ ‘ಕೊಡಿಯಾಲ’ ಬ್ಯಾರಿಗಳಿಗೆ ‘ಮೈಕಾಲ’. ಓಹ್! ಒಂದು ನಗರಕ್ಕೆ ಅಷ್ಟೊಂದು ಹೆಸರಿದೆಯಾ.. ಎಂದು ಕಣ್ಣು ಬಾಯಿ ಬಿಟ್ಟಿದ್ದೆ.
ಆದರೆ ‘ದರ್ಶನ’ದ ಪುಟ ತಿರುಗಿಸುತ್ತಾ ಹೋದಂತೆ.. ಇದಕ್ಕೆ ಮಂಗಳಾಪುರ, ಮ್ಯಾಂಗರೌತ್, ಮಂಜರೂರ್ ಎನ್ನುವ ಹೆಸರುಗಳೂ ಇತ್ತು ಎನ್ನುವ ದರ್ಶನವೂ ಆಗಿ ಹೋಯ್ತು.
ನನಗೆ ಗೊತ್ತಿಲ್ಲದ ಮಂಗಳೂರೇ.. ಎನ್ನುವ ನನ್ನ ಅಹಮಿಕೆಯ ಬೆಲೂನಿಗೆ ಒಂದೊಂದು ಸಂಪುಟವೂ ಸೂಜಿಯಂತೆ ಚುಚ್ಚುತ್ತಾ ಹೋಯಿತು.
‘ಮಂಗಳೂರು ಏನು?’ ಎಂದು ನೇರಾ ನೇರ ವಿವೇಕ ರೈ ಅವರನ್ನೇ ಕೇಳಿದೆ.
‘ಮಂಗಳೂರು ದೇಶದ ಒಳಗೂ, ಹೊರಗೂ ಜನಪ್ರಿಯ, ಅರಬೀ ಸಮುದ್ರದ ದಡದಲ್ಲಿ ನೇತ್ರಾವತಿ, ಗುರುಪುರ ನದಿಗಳ ನಡುವೆ ಇರುವ ಊರು. ಇದು ಬಂದರಾಗಿ, ಪಟ್ಟಣವಾಗಿ, ನಗರವಾಗಿ ಬೆಳೆದ ವಿದ್ಯಮಾನವೇ ಒಂದು ರೋಚಕ ಸಂಕಥನ..’.
‘…ಇದು ಬೇರೆ ಬೇರೆ ಧರ್ಮ, ದೇಶ, ರಾಜ ಮನೆತನ, ಸಮುದಾಯಗಳ ಆಡಳಿತಕ್ಕೆ ಒಳಪಟ್ಟಿತ್ತು. ಅದರ ಎಲ್ಲಾ ಧನಾತ್ಮಕ ಅಂಶಗಳನ್ನು ಹೀರಿಕೊಂಡು ಒಂದು ಸಮ್ಮಿಶ್ರ ಸಂಕೀರ್ಣ ಪ್ರದೇಶವಾಗಿ ಬೆಳೆದ ಪರಿಯೇ ಬೆರಗನ್ನು ಉಂಟುಮಾಡುತ್ತದೆ’ ಎನ್ನುತ್ತಾರೆ.
‘ತುಳು, ಕನ್ನಡ, ಕೊಂಕಣಿ, ಬ್ಯಾರಿ, ಮಲೆಯಾಳಿ, ಮರಾಠಿ, ಉರ್ದು ಇಂಗ್ಲಿಷ್ ಎಲ್ಲವನ್ನೂ ಒಳಗೊಂದು ಭಾಷಾ ವಿಜ್ಞಾನಿಗಳಿಗೆ ಸವಾಲಾಗಿ ಬೆಳೆದಿರುವ ಊರು ಮಂಗಳೂರು’.
‘ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಬ್ರಹ್ಮ ಮುಂತಾದ ದೇವರುಗಳ ಆರಾಧನೆಯ ಜೊತೆಯೇ ತುಳುವ ಸಂಸ್ಕೃತಿಯ ಕೊರಗ ತನಿಯ, ಕೋರ್ದಬ್ಬು, ತನ್ನಿ ಮಾನಿಗ, ಕಾಣದ ಕಾಟದ, ಪಂಜುರ್ಲಿ, ಕಲ್ಲುಡ ಕಲ್ಲುರ್ಟಿ ಮುಂತಾದ ದೈವಗಳ ಕೋಲ ನೇಮಗಳ ಆವಾಸ ಸ್ಥಾನವೂ.’.
‘ನಾಥಪಂಥದ ಒಂದು ಮುಖ್ಯ ಕೇಂದ್ರವಾಗಿ ಕೂಡಾ ಐತಿಹಾಸಿಕವಾಗಿ ಮಂಗಳೂರು ಸಂಶೋಧಕರ ಗಮನವನ್ನು ಸೆಳೆದಿದೆ’.
‘ಮುಸ್ಲಿಂ ಸಂಸ್ಕೃತಿಯ ಭಿನ್ನ ವಿನ್ಯಾಸಗಳ ಮಸೀದಿಗಳು ಮತ್ತು ದರ್ಗಾಗಳೂ, ರೋಮನ್ ಕ್ರೈಸ್ತ ಪಂಥದ ಮತ್ತು ಪ್ರೊಟೆಸ್ಟೆಂಟ್ ಪಂಥದ ಭಿನ್ನ ಮಾದರಿ ಇಗರ್ಜಿಗಳು, ಜೈನ ಬಸದಿ, ವೀರಶೈವ ಮಠಗಳ ಜೊತೆಗೆಯೇ ಇತ್ತೀಚಿನ ಸಿಖ್ಖರ ಗುರುದ್ವಾರ ಕೂಡಾ ಮಂಗಳೂರಿನ ಬಹುಧರ್ಮದ ಸಾಮರಸ್ಯದ ಭೂಮಿಕೆಗೆ ಪ್ರವೇಶ ಮಾಡಿದೆ ‘
ವಿವೇಕ ರೈ ಅವರು ಬಣ್ಣಿಸುತ್ತಾ ಹೋದರು.
ನನಗೋ ‘ಸಹೋದಯ’ದ ನೆನಪು.
ಮಂಗಳೂರಿಗೆ ಕಾಲಿಟ್ಟರೆ ನಾನು ಸೇರಿಕೊಳ್ಳುವುದೇ ಸಹೋದಯದ ಅಂಗಳಕ್ಕೆ. ನನ್ನ ಎಲ್ಲಾ ಗೆಳೆಯರಿಗೂ ಆಶ್ಚರ್ಯ.
‘ಮಂಗಳೂರಿನಲ್ಲಿ ಈಗ ಪಾಶ್ ಹೋಟೆಲು ಉಂಟು ಮಾರಾಯ’ ಎನ್ನುತ್ತಾರೆ.
ನನಗೋ ‘ಮಂಗಳೂರು ಸಮಾಚಾರ’ ಪತ್ರಿಕೆ ಮುದ್ರಿತವಾಗುತ್ತಿದ್ದ,, ಅದರ ಅಚ್ಚುಮೊಳೆಗಳು ಇನ್ನೂ ಇರುವ, ಜೈಮಿನಿ ಭಾರತ, ತೊರವೆ ರಾಮಾಯಣ, ದಾಸರ ಪದಗಳು, ಕುಮಾರವ್ಯಾಸ ಭಾರತ, ಬಸವ ಪುರಾಣ, ರಾವಣೇಶ್ವರನ ದಿಗ್ವಿಜಯಗಳನ್ನು ತಾಳೆ ಗರಿಯಿಂದ ಬಿಡಿಸಿಕೊಂಡು ಬಂದು ಕೈಗಿತ್ತ ಮೋಗ್ಲಿಂಗ್, ಕಿಟ್ಟೆಲ್, ವೈಗ್ಲೆ ಅವರು ಇದ್ದ ಈ ಅಂಗಳವೇ ಎದೆಗೆ ಹತ್ತಿರ.
ನಾನು ಆ ಅಂಗಳಕ್ಕೆ ಎಷ್ಟು ಬಾರಿ ಕಾಲಿಟ್ಟಿದ್ದೇನೋ- ಹಾಗೆ ಒಮ್ಮೆ ಹೋದಾಗ ಅಲ್ಲಿ ಶ್ರೀನಿವಾಸ ಹಾವನೂರರು ತಮ್ಮ ಕೊಠಡಿಯ ಹೊರಗೆ ತಮ್ಮ ಯಾವತ್ತೂ ಪ್ರೀತಿಯ ಶ್ರೀಖಂಡವನ್ನು ಮೆಲ್ಲುತ್ತಾ ಕುಳಿತಿದ್ದವರು.
ನನ್ನನ್ನು ನೋಡಿದವರೇ ‘ಬಾ ಇಲ್ಲಿ’ ಎಂದು ಕೈಹಿಡಿದು ‘ಈ ಮೋಗ್ಲಿಂಗ್ ಎಂತ ಮನುಷ್ಯ ಮಾರಾಯ’ ಎಂದರು.
ನನಗೋ ಅವರನ್ನು ಸದಾ ಚುಡಾಯಿಸಿಯೇ ಗೊತ್ತು.. ‘ಎಂತ ಮನುಷ್ಯ’ ಎಂದೆ.
ಅವರು ಆಗಲೇ ಮೋಗ್ಲಿಂಗ್ ಲೋಕದಲ್ಲಿ ಕಳೆದು ಹೋಗಿದ್ದರು.
ಯಾವುದೋ ಸಾಲುಗಳ ಮೇಲೆ ಕಯ್ಯಾಡಿಸಿದರು. ನಾನು ಇಣುಕಿ ನೋಡಿದೆ. ಅಲ್ಲಿ ಮೊಗ್ಲಿಂಗ್ ಬರೆದಿದ್ದ ‘ಇನ್ನೂ ಹುಟ್ಟದಿರುವ ಕನ್ನಡದ ಬಾಲಕರ ಕೃತಜ್ಞತೆಗೆ ಪಾತ್ರನಾಗುವ ಹೆಮ್ಮೆ ನನ್ನದು’ ಎಂದಿತ್ತು.
ಹೌದಲ್ಲಾ.. ತಾಳೆ ಗರಿಗಳು ಮೋಗ್ಲಿಂಗ್ ಕಾಲದಲ್ಲಿಯೇ ಕಪ್ಪಗಾಗಿ ಹೊಗೆ ಹಿಡಿದಿತ್ತು. ಅದನ್ನು ಆತ ಅಲ್ಲಿಂದ ನಡೆಸಿಕೊಂಡು ಬಂದು ಪುಸ್ತಕದ ಹಾಳೆಗಳ ಒಳಗೆ ಪ್ರವೇಶ ಕೊಡಿಸದಿದ್ದರೆ ನಮಗೆಲ್ಲರಿಗೂ ಈ ಶ್ರೀಮಂತ ಸಾಹಿತ್ಯವೇ ಕೈ ತಪ್ಪಿ ಹೋಗುತ್ತಿತ್ತಲ್ಲಾ ಅನಿಸಿತು.
ಹೌದಲ್ಲಾ.. ಬಿ ಎ ವಿವೇಕ ರೈ ಅವರೂ ತಮ್ಮ ತಂಡವನ್ನು ಕಟ್ಟಿಕೊಂಡು ಹೊರಡದಿದ್ದರೆ ನಾಳಿನ ಪೀಳಿಗೆಗೆ ಮಂಗಳೂರು ಎಂದರೇನು ಎನ್ನುವುದರ ಚರಿತ್ರೆಯೇ ಸಿಕ್ಕದೇ ಹೋಗುತ್ತಿತ್ತಲ್ಲ ಅನಿಸಿತು.
ಅದೆಲ್ಲಾ ಸರಿ ನೀವು ಬಲ್ಮಠಕ್ಕೆ ‘ಬೆಲ್ ಮೌಂಟ್’ ಅಂತ ಕರೆದಿದ್ದು ಏಕೆ ಹೇಳಲೇ ಇಲ್ಲ ಅಂದಿರಾ..
ಹೇಳಲ್ಲ, ಬೇಕಿದ್ದರೆ ‘ಮಂಗಳೂರು ದರ್ಶನ’ದ ಪುಟ ತಿರುಗಿಸಿ’