ಜಿ.ಎನ್.ಮೋಹನ್
ಮುಂಬೈ ನ ಮುಲುಂದ್ ನ, ವೈಶಾಲಿನಗರದ, 2D- 57 ಫ್ಲ್ಯಾಟ್ ನಿಂದ ಹೊರಟ ಆ ಪತ್ರ ನನ್ನ ಕೈ ಸೇರಿ ಸರಿಯಾಗಿ ೨೫ ವರ್ಷಗಳಾಗಿವೆ.
ಆ ಪತ್ರವೇ ಕಾರಣವಾಗಿ ಆರಂಭವಾದ ಗೆಳೆತನಕ್ಕೆ ಸಹಾ ಈಗ ಬೆಳ್ಳಿ ಸಂಭ್ರಮ.
”ದೊಡ್ಡ ದನಿಯ ಬೇಂಡು ಬಜಂತ್ರಿ, ಕೂಗಿ ಕರೆಯುವ ದಲ್ಲಾಳಿಗಳ ಪೇಟೆಯಲ್ಲಿ- ಮೂಲೆಯಲ್ಲಿ ಬಕುಳದ ಹೂವಿನ ಮಾಲೆಗಳನ್ನು ಹಿಡಿದು ಕೂತಿದ್ದವರು ಅವರು …” ಎಂದು ಎಕ್ಕುಂಡಿಯವರನ್ನು ಬಣ್ಣಿಸಿದ ಪತ್ರ ಬರೆದವರು ಮತ್ತಾರೂ ಅಲ್ಲ- ಜಯಂತ್ ಕಾಯ್ಕಿಣಿ.
ನಾನು ಸು ರಂ ಎಕ್ಕುಂಡಿಯವರನ್ನು ಕುರಿತು ‘ಎಕ್ಕುಂಡಿ ನಮನ’ ಕೃತಿ ಹೊರತಂದು ಕೆಲವೇ ದಿನಗಳಾಗಿತ್ತಷ್ಟೇ.
ಅಘನಾಶಿನಿಯ ತವರಿನಲ್ಲಿದ್ದ ಎಕ್ಕುಂಡಿಯವರ ಬಗ್ಗೆ ಉತ್ತರ ಕನ್ನಡದವರೆಲ್ಲರಿಗೂ ಇನ್ನಿಲ್ಲದ ಹೆಮ್ಮೆ.
ಹಾಗಾಗಿಯೇ ಇರಬೇಕು ಜಯಂತ್ ತಮ್ಮ ಸುಂದರ ಅಕ್ಷರ, ವಿನ್ಯಾಸಗಳ ಮೂಲಕ ಗುರುತು ಗೊತ್ತಿಲ್ಲದ ನನಗೆ ಪತ್ರ ಬರೆದಿದ್ದರು.
ಅಂದಿನಿಂದ ಇಂದಿನವರೆಗೂ ನಾವು ಸ್ವಚ್ಚಂದ ಸ್ನೇಹವನ್ನು ಸದಾ ಜಾರಿಯಲ್ಲಿಟ್ಟಿದ್ದೇವೆ.
ಚಿತ್ರಕಲಾ ಪರಿಷತ್ತಿನ ಬಂಡೆಗಳ ಮೇಲೆ ನಾವು ಕುಳಿತಾಗಲೂ ನಮ್ಮ ಮಾತು ಎಕ್ಕುಂಡಿಯವರಿಂದಲೇ ಆರಂಭವಾಯಿತು.
‘ನನ್ನ ತಂದೆ ಅವರನ್ನು ಸುರಮ್ಯ ಕವಿ ಎನ್ನುತ್ತಿದ್ದರು’ ಎಂದು ಜಯಂತ್ ನೆನಪಿನ ಲೋಕಕ್ಕೆ ಜಾರಿಹೋದರು.
ಆ ವೇಳೆಗಾಗಲೇ ಇನ್ನು ಹನಿದೇ ಸಿದ್ಧ ಎನ್ನುವಂತೆ ಮೋಡಗಳು ಗೂಡು ಕಟ್ಟುತ್ತಿದ್ದವು.
ಜಯಂತ್ ಒಂಟಿಯಾಗಿ ಎಲ್ಲಿಯೂ ಸುಳಿದದ್ದು ಗೊತ್ತಿಲ್ಲ. ಜೊತೆಗೆ ಸಂಗಾತಿ ಸ್ಮಿತಾ ಇರುತ್ತಾರೆ. ಆ ಲೆಕ್ಕಕ್ಕೆ ಈಗ ಸೇರ್ಪಡೆಯಾಗಿರುವುದು ಮಳೆ.
ಬೇರೆಯವರಿಗೆ ಜಯಂತ್ ‘ಮುಂಗಾರು ಮಳೆ’ಯಾದರೆ ನನಗೆ ಅವರು ‘ಬೊಗಸೆಯಲ್ಲಿ ಮಳೆ’.
ಹಾಗಾಗಲಿ ಮಳೆ ನಾನಿಲ್ಲದೇ ಮಾತಿಲ್ಲ ಎನ್ನುವಂತೆ ಎಂಟ್ರಿ ಕೊಟ್ಟಿತು.
ಜಯಂತ್ ನೂರೆಂಟು ರೀತಿಯ ಮಳೆಯನ್ನು ಬಣ್ಣಿಸುತ್ತಾ ಹೋದರು.
’ಮಳೆ’…. ನಮ್ಮ ಮನಸ್ಸನ್ನು ಮತ್ತೆ ಬಾಲ್ಯಕ್ಕೆತೆಗೆದುಕೊಂಡು ಹೋಗುವಂತಹ, ಯಾವ ಪೂರ್ವಾಗ್ರಹ ಇಲ್ಲದೆ ಜಗತ್ತನ್ನು ನೋಡಲು ಪ್ರೇರೇಪಿಸುವಂತಹ,ಮನಸ್ಸನ್ನು ಹಸುರಾಗಿಸಿ, ಚಿಗುರಾಗಿಸಿ, ಹೂವಾಗಿಸಿ ಬೆಳಕಿನ ಕಡೆಗೆ ಕರೆದೊಯ್ಯುವಂತಹ ಮನಸ್ಥಿತಿ..
..ನನ್ನೊಳಗೆ ಮೊದಲು ಇಳಿದದ್ದು ಗೋಕರ್ಣದ ಮಳೆ. ನನ್ನ ಜೊತೆಗೆ ಮಳೆಯೂ ಬೆಳೆಯುತ್ತಾ ಹೋಗಿದೆ. ಶಾಲೆಯಲ್ಲಿದ್ದಾಗನಾನು ನೋಡಿದ ಮಳೆಯೇ ಬೇರೆ, ಕಾಲೇಜಿಗೆ ಹೋಗುವಾಗ ಇದೆ ಮಳೆ ಇನ್ನೊಂದಾಗಿತ್ತು. ಕೆಲಸ ಹುಡುಕುತ್ತಿದ್ದಾಗ,ಇಂಟರ್ವ್ಯೂಗಾಗಿ ಕಾಯುತ್ತಿರುವಾಗ ಆ ಮಳೆ ಬಣ್ಣ ಇನ್ನೂ ಬೇರೆಯೇ.. ಇಂಟರ್ವ್ಯೂ ಏನಾಯ್ತೋ, ಪೋಸ್ಟ್ ಮನ್ ಏನು ಉತ್ತರತರುತ್ತಾನೋ ಎಂದು ಕಾಯುವಾಗ ಬರುವ ಮಳೆ ಬೇರೆ ಥರ ಇರುತ್ತದೆ. ಕೆಲಸಕ್ಕೆ ಹೋಗುವಾಗ ಬಸ್ ತಡವಾದಾಗಬರುವ ಮಳೆ ಬೇರೆ ಥರ ಇರುತ್ತದೆ. ಹೀಗೇ ಒಂದೇ ಮಳೆ ನನ್ನೊಳಗೆ ನೂರೆಂಟು ರೀತಿ ಬೆಳೆದಿದೆ.
ಕಾಯ್ಕಿಣಿ ಎಂದ ತಕ್ಷಣ ಮಳೆ ಹೇಗೆ ನೆನಪಾಗುತ್ತದೋ ಹಾಗೆಯೇ ಗೋಕರ್ಣ. ಕಾಯ್ಕಿಣಿ ತುಂಬು ಪ್ರೀತಿಯಿಂದ ಗೋಕರ್ಣವನ್ನು ತಮ್ಮೊಂದಿಗೆ ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ.
‘ಗೋಕರ್ಣ ನನ್ನ ಭಾವಕೋಶವನ್ನು ರೂಪಿಸಿತು. ನನ್ನೂರು ಒಂದು ರೀತಿಯಲ್ಲಿ ಚಲನಶೀಲವಾದದ್ದು. ಗೋಕರ್ಣದಲ್ಲಿ ಪರ್ವತ ಇದೆ, ಸಮುದ್ರ ಇದೆ, ಮಳೆ ಇದೆ, ಜೊತೆಗೆ ಒಂದು ಆಧುನಿಕತೆಯೂ ಇದೆ. ಏಕೆಂದರೆ ಗೋಕರ್ಣ ಒಂದು ಪ್ರವಾಸೀಕೇಂದ್ರ. ಅತ್ಯಾಧುನಿಕವಾದ ಪ್ರವಾಸಿಗಳು ಬರುತ್ತಾರೆ ಅಲ್ಲಿಗೆ. ಅಲ್ಲಿ ಜಾನಪದವೂ ಇದೆ. ಅಲ್ಲಿ ಉಪನಿಷದ್ ಮತ್ತುವೇದಾಧ್ಯಯನ ಮಾಡುವವರೂ ಇದ್ದಾರೆ. ಹಾಲಕ್ಕಿ ವಚನ ಹಾಡುವವರೂ ಇದ್ದಾರೆ. ಎಲ್ಲಾ ಸೇರಿರುವ ಕೇಂದ್ರ ಅದು. ನಿತ್ಯ ಚಲನಶೀಲವಾದದ್ದು.
ಅಘನಾಶಿನಿ ಎಂದರೆ ಸಾಕು ಉತ್ತರ ಕನ್ನಡಿಗರ ಒಡಲೊಳಗೆ ಒಂದು ಸಂತಸದ ಬಗ್ಗೆ.
ಕಾಯ್ಕಿಣಿ ಕೂಡಾ ಅಘನಾಶಿನಿಯ ಹಿತ್ತಲಲ್ಲೇ ಬೆಳೆದವರು. ಹಾಗಾಗಲಿ ನನಗೆ ಒಂದು ಕನಸಿತ್ತು.
ನಾನು ‘ಸಮಯ’ ಚಾನಲ್ ನ ಮುಖ್ಯಸ್ಥನಾಗಿದ್ದಾಗ ಕಾಯ್ಕಿಣಿ ಅವರನ್ನು ಗೋಕರ್ಣದ ತುಂಬಾ ಸುತ್ತಾಡುವಂತೆ ಮಾಡಿ ಅವರ ಒಳಗಿನ ಸಂತಸದ ಬುಗ್ಗೆಗೂ ಕ್ಯಾಮೆರಾ ಹಿಡಿದಿದ್ದೆವು. ‘ಗೋಕರ್ಣದಲ್ಲಿ ಕಾಯ್ಕಿಣಿ’ ಒಂದು ಸುಂದರ ಬರಹದಂತೆಯೇ ಇತ್ತು.
ಜಯಂತ್ ಆಗ ಹೇಳಿದ ಒಂದು ಮಾತು ನನ್ನನ್ನು ತುಂಬಾ ಕಾಡಿತ್ತು. ಕೇಳಿದೆ- ’ದೇವರುಗಳ ಜೊತೆ ನಮಗೆ ತುಂಬಾ ಸಲಿಗೆಇತ್ತು, ಅವರೆಲ್ಲಾ ನಮ್ಮ ಜೊತೆ ಆಟ ಆಡಲು ಬರ್ತಾ ಇದ್ದರು’ ಎಂದು ನೀವು ಹೇಳಿದ್ದಿರಿ.
ನಮ್ಮ ಗೋಕರ್ಣದಲ್ಲಿ ಅಜೀರ್ಣ ಆಗೋಷ್ಟು ದೇವಸ್ಥಾನಗಳಿವೆ. ಮಹಾಬಲೇಶ್ವರ, ಗಣಪ, ವೆಂಕಟರಮಣ ಇವು ಮುಖ್ಯ ಗುಡಿಗಳು. ಅದರ ಹೊರತಾಗಿ ಗುಡ್ಡಗಳ ಮೇಲೆ ಭರತ ಗುಡಿ, ಪಾಂಡವರ ಗುಡಿ, ರಾಮತೀರ್ಥ, ಜಟಾಯು ತೀರ್ಥ ಹೀಗೆ ಎಷ್ಟೋಇರುತ್ತಿದ್ದವು.
ಅಲ್ಲಿ ಯಾರೂ ಯಾತ್ರಾರ್ಥಿಗಳು ಹೋಗುತ್ತಿರಲಿಲ್ಲ. ನಾವು ಮಕ್ಕಳು ಆಟವಾಡುವುದಕ್ಕೆ ಆ ದೇವಸ್ಥಾನಗಳು. ಪಾಳುಬಿದ್ದ ಪ್ರಾಂಗಣಗಳು, ಅಲ್ಲಿ ಪಾರಿವಾಳಗಳು, ಹಾಲಕ್ಕಿಗಳು, ಅಲ್ಲಿ ನಮ್ಮ ಆಟ.
ಹಾಗಾಗಿ ದೇವರೆಂದರೆ ನಮಗೆ ಸಲಿಗೆ ಮತ್ತು ಪ್ರೀತಿ. ದೇವರು ನಮಗೆ ಯಾವತ್ತೂ ಒಬ್ಬ ಹಿರಿಯ ಸರ್ಕಾರಿ ಅಧಿಕಾರಿಯ ಹಾಗೆ ಭಯ ಹುಟ್ಟಿಸುತ್ತಿರಲಿಲ್ಲ! ಅವನೂ ನಮ್ಮ ಜೊತೆಯವನೇ, ನಮ್ಮನ್ನು ಅರ್ಥಮಾಡಿಕೊಳ್ಳಬಲ್ಲವನು ಎಂದೇಅನ್ನಿಸುತ್ತಿತ್ತು. ಭಯ ಅಂತ ಆಗಲೇ ಇಲ್ಲ.
ಮಳೆಯಲ್ಲಿ ತೊಯ್ಯುತ್ತಾ, ಅಘನಾಶಿನಿಯ ಅಂಗಳದಲ್ಲಿ ಆಡುತ್ತಾ ಇದ್ದ ಜಯಂತ್ ತಲುಪಿಕೊಂಡಿದ್ದು ಕುಮಟೆಯನ್ನು, ಅಲ್ಲಿಂದ ಧಾರವಾಡ.
ಮನೋಹರ ಗ್ರಂಥಮಾಲಾದ ಅಟ್ಟದ ಮೇಲಿನ ಮಾತುಗಳಿಗೆ ಕಿವಿ ಕೊಟ್ಟು ಅರಳಿದ ಜಯಂತ್ ಗೆ ೧೯ ನೆಯ ವಯಸ್ಸಿಗೇ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿತ್ತು.
ಅಟ್ಟ ನಿಮ್ಮನ್ನು ಪ್ರಭಾವಿಸಿದ್ದು ಹೇಗೆ ಎಂದೆ.
ನೋಡಿ ಈಗ ಹಿಂದಿರುಗಿ ನೋಡಿದಾಗ ಅದೆಲ್ಲಾ ಮೋಹಕವಾಗಿ ಕಾಣುತ್ತದೆ, ಜಿ ಬಿ ಜೋಶಿಯವರ ಅಟ್ಟ, ಕಲಾಕ್ಷೇತ್ರದ ಮೆಟ್ಟಿಲು ಎಲ್ಲಾ.
ಆದರೆ ಆಗ ಅಲ್ಲಿಗೆ ಹೋಗಲು ಸಹ ಒಂದು ಹಿಂಜರಿಕೆಇರುತ್ತಿತ್ತು.
ಉದಾಹರಣೆಗೆ ಲಂಕೇಶ್. ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಸಾಹಿತಿಗಳನ್ನು ನೋಡಬೇಕು, ಭೇಟಿಯಾಗಬೇಕು ಅನ್ನಿಸುತ್ತಿತ್ತು, ಆದರೆ ಒಂದು ಹಿಂಜರಿಕೆ. ಅಲ್ಲಿ ಒಂದು ಒಡ್ದೋಲಗ ಇರಬಹುದು ಎನ್ನುವ ಭಾವನೆ. ಲಂಕೇಶ್ ಎಂದ ಕೂಡಲೆ ನನಗೆ ನೆನಪಾಗುವುದು ಒಂದು ದೊಡ್ಡ ಟೇಬಲ್. ಅದರ ಒಂದು ತುದಿಯಲ್ಲಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಥರ ಲಂಕೇಶ್, ನಾವೆಲ್ಲಾ ತಪ್ಪು ಮಾಡಿದವರ ಹಾಗೆ ಕೈಕಟ್ಟಿ ನಿಲ್ಲಬೇಕಾಗಬಹುದು ಎನ್ನುವ ಚಿತ್ರವೇ ನನಗೆ ಗಾಬರಿ ಹುಟ್ಟಿಸಿ ನಾನು ಅವರನ್ನು ಭೇಟಿಮಾಡಲು ಹೋಗಲೇ ಇಲ್ಲ.
ಆ ಥರ ಯಾವುದೇ ಭಯ ಇಲ್ಲದೆ ನನ್ನನ್ನು ಹತ್ತಿರ ಸೆಳೆದವರು ಶಾಂತಿನಾಥ ದೇಸಾಯಿ ಮತ್ತು ಯಶವಂತ ಚಿತ್ತಾಲರು. ಅವರಿಬ್ಬರೊಡನೆಯೂ ನನ್ನದು ಒನ್ ಟು ಒನ್ ಎನ್ನುವ ಸಂಬಂಧ.
ಉತ್ತರ ಕನ್ನಡದವರಿಗೆ, ಕರಾವಳಿಯವರಿಗೆ ಮುಂಬಯಿ ಪಕ್ಕದ ಮನೆಯಂತೆ. ಜಯಂತ್ ಮುಂಬೈ ತಲುಪಿಕೊಂಡಿದ್ದೂ ಹಾಗೆಯೇ.
ಬಯೋ ಕೆಮಿಸ್ಟ್ರಿ ಓದಿದ್ದ ನನಗೆ ಬೆಂಗಳೂರಿನಲ್ಲಿ ಆಗ ಇದ್ದ ಅವಕಾಶ ಎಸ್ ಕೆ ಎಫ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮಾತ್ರ. ಅಲ್ಲಿ ಪ್ರಯತ್ನಿಸಿದರೂ ನನಗೆ ಕೆಲಸ ಸಿಗಲಿಲ್ಲ.ಹಾಗಾಗಿ ಬಾಂಬೆ ನನ್ನನ್ನು ಸೆಳೆಯಿತು. ಅಲ್ಲಿಗೆ ಹೋಗಿದ್ದರ ಬಗ್ಗೆ ನನಗೆ ತುಂಬಾ ಸಂತಸ ಇದೆ.
ಅಲ್ಲೇ ನಿಮಗೆ ನಿಮ್ಮ ಹುಡುಗಿ ಸಿಕ್ಕಿದ್ದು ಎಂದು ಮಾತನ್ನು ಒಂದಿಷ್ಟು ಬೇರೆ ದಿಕ್ಕಿಗೆ ಹೊರಳಿಸಿದೆ.
ಜಯಂತ್ ಕಣ್ಣುಗಳಲ್ಲಿ ನಕ್ಷತ್ರಗಳು.
ಹಾ… ಹೌದು! ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು, ಸಿಕ್ಕಿದೆವು.
ಅವಳು ನನಗೆ ಏನು ಎಂದು ಪ್ರತ್ಯೇಕಿಸಿ ಹೇಳಲಾಗದಷ್ಟು ಒಂದಾಗಿರುವ ಪಯಣ ನಮ್ಮದು. ನನಗಾಗಿ ಕೊಂಕಣಿ, ಕನ್ನಡ ಕಲಿತಳು. ಬೇರೆಬೇರೆ ರೀತಿಯಲ್ಲಿ ಪಾಸಿಟಿವ್ ಆಗಿ ನನ್ನ ಜಗತ್ತಿಗೆ ಅವಳು ತನ್ನನ್ನು ಅಳವಡಿಸಿಕೊಳ್ಳುತ್ತಾ ಬಂದಿದ್ದಾಳೆ. ಅದಕ್ಕೆ ನಾನು ಅವಳಿಗೆ ಸದಾಋಣಿ.
ಮುಂಬೈಗೆ ಇನ್ನೂ ಕಾಲಿಟ್ಟಿದ್ದಷ್ಟೇ.. ಚಿತ್ರರಂಗ ಕಾಯ್ಕಿಣಿಯನ್ನು ಕೈ ಬೀಸಿ ಕರೆಯಿತು. ಇನ್ನೂ ೨೩ ವರ್ಷದ ಹುಡುಗ ಗಿರೀಶ್ ಕಾಸರವಳ್ಳಿಯವರ ‘ಮೂರು ದಾರಿಗಳು’ ಸಿನೆಮಾಗೆ ಸಹಾಯಕ ನಿರ್ದೇಶಕರಾಗಿ ಹೋದರು.
ನಮಗೆಲ್ಲಾ ಸಿನಿಮಾ ಎನ್ನುವುದೇ ಒಂದು ಹುಚ್ಚು. ಕಾಸರವಳ್ಳಿ ಆಗ ಚಿತ್ತಾಲರ ’ಮೂರು ದಾರಿಗಳು’ ಚಿತ್ರಮಾಡುತ್ತಿದ್ದರು. ಅದರ ಸಂಭಾಷಣೆಯನ್ನು ಜಿ ಎಸ್ ಸದಾಶಿವ ಅವರು ಬರೆದಿದ್ದರು. ಅದಕ್ಕೆ ಗೋಕರ್ಣದ ಸ್ಥಳೀಯ ಸ್ಪರ್ಶ ಕೊಡಲು ನನ್ನನ್ನು ಕರೆದರು. ಚಿತ್ರರಂಗದ ವ್ಯಾಕರಣಗಳನ್ನು ಕಲಿಯಲು ಅದು ನನಗೆ ಒಂದು ದೊಡ್ಡ ಅವಕಾಶ ಆಯಿತು. ಅದು ನನಗೆ ಒಂದು ಅಪೂರ್ವವಾದ ಅನುಭವ.
ಅದಾದ ಮೇಲೆ ಟಿ ಎಸ್ ನಾಗಾಭರಣ. ಶಿವರಾಮ ಕಾರಂತರ ಕಾದಂಬರಿ ‘ಚಿಗುರಿದ ಕನಸು’ ಚಿತ್ರಕ್ಕೆ ರಾಜ ಕುಮಾರ್ ಕುಟುಂಬ ಕರಾವಳಿ ಜೀವನ ಗೊತ್ತಿರುವವರನ್ನು ಸ್ಕ್ರಿಪ್ಟ್ ಮಾಡಲು ಹುಡುಕುತ್ತಿದ್ದರು. ಹಾಗಾಗಿ ರಾಜಕುಮಾರ್ ಕುಟುಂಬದ ಜೊತೆ ಕೂತು ರಾಜಕುಮಾರ್ ಅವರನ್ನು ನೋಡುವ ಅವಕಾಶ ಮತ್ತು ಸಾಹಿತ್ಯ ಕೃತಿಒಂದು ಚಲನಚಿತ್ರವಾಗಿ ಹೇಗೆ ಪರಿವರ್ತನೆ ಆಗುತ್ತದೆ ಎನ್ನುವುದನ್ನು ನೋಡುವ ಒಂದು ಅವಕಾಶ ಸಿಕ್ಕಿತು. ಅಪೂರ್ವವಾದ ಅನುಭವ.
ಮೂರ್ನಾಲ್ಕುತಿಂಗಳು ರಾಜಕುಮಾರ್ ಅವರ ಜೊತೆಯಲ್ಲಿ ನಡೆದ ’ಕಥಾ ಕಾಲಕ್ಷೇಪ’ ಒಂದು ಅವಿಸ್ಮರಣೀಯವಾದ ಅನುಭವ.
ಕಿರಾಣಿ ಅಂಗಡಿಯಲ್ಲಿ ಕೊಂಡ ವಸ್ತುಗಳ ಪಟ್ಟಿಯಲ್ಲಿ ಜಯಂತ್ ನೋಡಿದ ಸಿನೆಮಾಗಳ ಹೆಸರೂ ಇರುತ್ತಿತ್ತು ಎಂದು ಅವರ ನೆನಪಿನ ಲೋಕಕ್ಕೆ ಕೈ ಹಾಕಿದೆ.
ಕಿರಾಣಿ ಅಂಗಡಿಯಲ್ಲಿ ಮನೆ ಸಾಮಾನಿಗೆ ಲೆಕ್ಕ ಬರೆಸುತ್ತಾರಲ್ಲ ಹಾಗೆ ನಾವು ಸಿನಿಮಾಗೆ ಹೋಗಲೂ ಸಹ ಅಲ್ಲಿ ನಗದುತೆಗೆದುಕೊಂಡು, ಲೆಕ್ಕ ಬರೆಸಿ ಸಿನಿಮಾ ನೋಡುತ್ತಿದ್ದೆವು.
ಆ ಕಿರಾಣಿ ಲೆಕ್ಕದ ಪುಸ್ತಕದಲ್ಲಿ ತೆಂಗಿನೆಣ್ಣೆ, ಬಾರ್ ಸೋಪು, ಸಾಸಿವೆಗಳ ಜೊತೆಯಲ್ಲಿ’ಸಿನಿಮಾ : ೫ ರೂ’ ಎಂದು ಸಹ ಇರುತ್ತಿತ್ತು!
ಹೀಗಾಗಿಸಿನಿಮಾ ಹಾಡು ಬರೆಯುವುದೆಂದರೆ ನನಗೆ ಅದು ನನ್ನ ಕ್ಷೇತ್ರಕ್ಕಿಂತ ಭಿನ್ನವಾದುದು ಎಂದೇನೂ ಅನ್ನಿಸಲಿಲ್ಲ.
ನೇರ ‘ಮುಂಗಾರು ಮಳೆ’ಯ ವಿಷಯಕ್ಕೆ ಬಂದೆ.
ನೀವು ಟ್ಯೂನ್ ಗೆ ಕವಿತೆ ಬರೆದದ್ದೇ ಇಲ್ಲ. ಹಾಗಿರುವಾಗ ಅದೇಗೆ ‘ಮುಂಗಾರು ಮಳೆ’ಯಲ್ಲಿ ಯೋಗರಾಜ ಭಟ್ಟರು ಕೊಟ್ಟ ಟ್ಯೂನ್ ಗೆ ಹೊಂದಿಕೊಂಡಿರಿ ಎಂದೆ.
‘ಯಾರಿಗೂ ಹೇಳೋಣು ಬ್ಯಾಡ ಯಾರಿಗೂ..’ ಎನ್ನುವಂತೆ ನನ್ನ ಕಡೆ ನೋಡಿದವರೇ ‘ನಿಜ ಹೇಳಬೇಕು ಅಂದ್ರೆ ಕಾಲೇಜು ದಿನಗಳಲ್ಲಿ ನಾನು ನನ್ನ ಸ್ನೇಹಿತರಿಗೆಲ್ಲಾ ಪ್ರೇಮಪತ್ರ ಬರೆದುಕೊಡುತ್ತಿದ್ದೆ..
..ಪೋಸ್ಟ್ಆಫೀಸಿನ ಹೊರಗೆ ಪತ್ರ ಬರೆಯುವವರು ಇರುವ ಹಾಗೆ ನಾನು ಹಾಸ್ಟೆಲಿನಲ್ಲಿ ಪ್ರೇಮಪತ್ರಗಳನ್ನುಬರೆದುಕೊಡುತ್ತಿದ್ದೆ. ಹಿಂದಿ ಹಾಡಿನ ಟ್ಯೂನ್ಗಳಿಗೆ ನಾನು ಕನ್ನಡದಲ್ಲಿ ಹಾಡು ಬರೆದುಕೊಡುತ್ತಿದ್ದೆ. ಹಾಗಾಗಿ ಟ್ಯೂನ್ ಗೆ ಹಾಡು ಬರೆಯುವುದರ ಅಭ್ಯಾಸ ನನಗಿತ್ತು’.
‘ಮುಂಗಾರುಮಳೆ’ಯ ‘ಅನಿಸುತಿದೆ ಯಾಕೋ ಇಂದು..’ ಹೀಗೆ ನಿಮ್ಮನ್ನುಜನರ ಮನದೊಳಗೆ ಹೋಗಿ ಕೂರಿಸಬಹುದು ಎಂದು ನಿಮಗನ್ನಿಸಿತ್ತಾ?
ಇಲ್ಲ, ನಮಗ್ಯಾರಿಗೂ ಹಾಗನ್ನಿಸಿರಲಿಲ್ಲ. ಅದಕ್ಕಾಗಿ ಬರೆದ ಆ ಸಾಲುಗಳು ಜನರಿಗೆ ಯಾವುದೋ ತಿಜೋರಿಯ ಬಾಗಿಲು ತೆಗೆಯುವ ಕೀಲಿ ಕೈ ಆಗಬಹುದು ಎಂದು ನನಗನ್ನಿಸಿರಲಿಲ್ಲ.
ಅದಾದ ಮೇಲೆ ನಾನು ಸುಮಾರು ೨೦೦ ಹಾಡುಗಳನ್ನಾದರೂ ಬರೆದಿದ್ದೇನೆ, ಅದಕ್ಕಿಂತ ಚೆನ್ನಾಗಿರುವ ಹಾಡುಗಳನ್ನೂ ಬರೆದಿದ್ದೆನೆ. ಆದರೆ ಇಂದೂ ಸಹ ಜನ ನನ್ನನ್ನು ಆ ಹಾಡಿನಿಂದಲೇ ಗುರುತಿಸುತ್ತಾರೆ.
ಇನ್ನೂಒಂದು ಘಟನೆ ಇದೆ, ಒಂದು ಕುಟುಂಬದಲ್ಲಿ ಮಗುವನ್ನು ಕೊಂದು ತಂದೆ ತಾಯಿ ಇಬ್ಬರೂ ಆತ್ಮಹತ್ಯೆಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಮಗು ಉಳಿದುಕೊಂಡಿದೆ. ಆದರೆ ಪ್ರಜ್ಞೆ ಇಲ್ಲ. ಅಪ್ಪ ಅಮ್ಮ ಇಬ್ಬರೂಉಳಿದಿಲ್ಲ..
..ಆಗ ಪಕ್ಕದ ಮನೆ ಅಜ್ಜಿ ಹೇಳಿದರಂತೆ, ಮಗು ಈ ಹಾಡು ತುಂಬಾ ಕೇಳುತ್ತಿತ್ತು ಎಂದು. ಮಗುವಿನ ಕಿವಿಯಲ್ಲಿ ಈ ಹಾಡನ್ನು ಕೇಳಿಸಿದಾಗ ಮಗುವಿಗೆ ಪ್ರಜ್ಞೆ ಬಂದು ಬದುಕಿಗೆ ಮರಳಿತಂತೆ. ಅದೆಲ್ಲಾ ಕೇಳಿದಾಗ ನಾವು ಕೇವಲ ಸಿನಿಮಾ ಹಾಡು ಎನ್ನುವ ಹಾಡೊಂದು ಬೇರೆ ಬೇರೆ ರೀತಿಯಲ್ಲಿ ಜನರನ್ನು ತಾಕುತ್ತಿರುತ್ತದೆ.
ಗೋಕರ್ಣದಂತೆಯೇ ಮುಂಬೈ ಅನ್ನೂ ಅಲ್ಲಿನ ಬ್ಯಾಂಡ್ ಸ್ಟಾಂಡ್, ಲೋಕಲ್ ಟ್ರೇನ್, ಡಬ್ಬಾವಾಲಾ, ಬಾಚಣಿಗೆ ಹೀಗೆ ಎಲ್ಲವನ್ನೂ ಕನ್ನಡ ಓದುಗ ಲೋಕಕ್ಕೆ ಕಟ್ಟಿಕೊಟ್ಟವರು ಜಯಂತ್.
ಮುಂಬೈ ನ ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಎಂದು ಕೇಳಿದೆ.
ಜಯಂತ್ ನಿಜಕ್ಕೂ ಕಳೆದು ಹೋದರು.
ನನಗೆ ಮುಂಬೈ ಒಂದು ಊರಲ್ಲ, ಅದು ಒಂದು ಮನೋಧರ್ಮ. ಕಾಯಕ ಸಂಸ್ಕೃತಿಯಿಂದ ಹುಟ್ಟಿದ ಮನೋಧರ್ಮ. ಯಾರು ಯಾರ ಬದುಕಿನಲ್ಲೂ ಮಧ್ಯೆ ಪ್ರವೇಶಿಸುವುದಿಲ್ಲ. ಈಗಲೂ ಸಹ ಮುಂಬೈನಲ್ಲಿ ಆಟೋದವನು ನಿಮಗೆ ಒಂದು ರೂ ಚಿಲ್ಲರೆ ವಾಪಸ್ ಕೊಡುತ್ತಾನೆ. ಅದು ಆ ಸಿಟಿಯ ಮೌಲ್ಯವನ್ನು ಹೇಳುತ್ತದೆ..
..ಅಲ್ಲಿ ಗಲೀಜಿದೆ, ಅಲ್ಲಿ ಧೂಳಿದೆ, ಅಲ್ಲಿ ಬೆವರಿದೆ, ಅಲ್ಲಿ ಧಾರಾವಿಯಂತಹ ಪ್ರಪಂಚದ ಅತಿದೊಡ್ಡ ಸ್ಲಂ ಇದೆ. ಆದರೆ ಇವೆಲ್ಲವನ್ನೂ ಮೀರುವಂತಹ, ಬಂಧುತ್ವವನ್ನು ಮಾತನಾಡದೆಯೂ ಅನುಭವಕ್ಕೆ ತರುವಂತಹ ಒಂದು ಸಲಿಗೆ ಇದೆ..
..ಅದಕ್ಕೇ ಮುಂಬೈ ಹಿಂದಿಯಲ್ಲಿ ಬಹುವಚನ ಇಲ್ಲ. ನನಗೆ ಅಂತಹ ಒಂದು ದೃಷ್ಟಿದಾನವನ್ನು ಮಾಡಿದ ಊರು ಮುಂಬೈ. ಹಾಗಾಗಿ ನಾನು ನಿರಂತರ ಮುಂಬೈ ಪ್ರತಿಪಾದಕ.
ಜಯಂತ್ ಅವರನ್ನು ಮುಂಬೈಗಿಂತಲೂ ಗಾಢವಾಗಿಸಿಬಿಡಬಹುದಾದ ಇನ್ನೊಂದು ವಿಷಯವಿತ್ತು.
ನಿಮ್ಮ ಬದುಕಿನೊಳಗೆ ಒಂದು ಸಮುದ್ರವಿದೆ ಎಂದೆ.
ಜಯಂತ್ ಇನ್ನಷ್ಟು ನೆನಪಿನ ಲೋಕಕ್ಕೆ ಜಾರಿದರು.
ನನಗೆ ಸಮುದ್ರ ಎಂದರೆ ಜೋಗುಳ, ಅಸೀಮ ಅದು. ಅದರ ಸ್ವರೂಪಗಳು ಬೇರೆಯಾಗುತ್ತಿರುತ್ತವೆ..
..ಸಮುದ್ರಕ್ಕೆ ದುಖಃದ ಕಥೆಗಳೂ ಇವೆ. ಸಾರಾ ಅಬೂಬಕ್ಕರ್ ಒಂದು ಮಾತು ಹೇಳ್ತಾಇದ್ದರು. ಅವರ ಕಡೆ ಹಲವಾರು ಹೆಣ್ಣು ಮಕ್ಕಳು ಸಮುದ್ರದ ಮೊರೆತ ಕೇಳಿರುತ್ತಾರೆ, ಆದರೆ ಸಮುದ್ರವನ್ನು ನೋಡದೆ ೧೫-೨೦ ವರ್ಷಗಳನ್ನುಕಳೆದಿರುತ್ತಾರೆ.
ಸಮುದ್ರ ಇವೆಲ್ಲಕ್ಕೂಸಾಕ್ಷಿ. ಮಳೆಗಾಲದಲ್ಲಿ ಸಮುದ್ರದ ಘೋಷ ನನಗೆಇಷ್ಟ. ಸಮುದ್ರದ ಅಗಾಧತೆ ನನಗೆ ವಿಧೇಯತೆ ಕಲಿಸುತ್ತದೆ. ಸಮುದ್ರದ ದಂಡೆಯಲ್ಲಿರುವ ಊರುಗಳಿಗೆ ಸದಾ ಜಗತ್ತಿಗೆ ಒಂದು ಕಿಟಕಿ ತೆಗೆದಿಟ್ಟಂತೆ. ಅದು ಮನಸ್ಸಲ್ಲೂ ಒಂದು ಕಿಟಕಿ ತೆರೆಯುತ್ತದೆ ಎಂದು ನನ್ನ ಅಭಿಪ್ರಾಯ.
ಸಮುದ್ರದ ತಡಿಯಲ್ಲೇ ಸಾಕಷ್ಟು ವರ್ಷ ಕಳೆದ ನನಗೂ ಅದರ ಗುಂಗು ಹತ್ತಿತ್ತು. ಮಾತಿಲ್ಲದೆ ಒಂದು ಚಂದ ಹಗ್ ಕೊಟ್ಟೆ