Thursday, November 21, 2024
Google search engine
Homeಸಾಹಿತ್ಯ ಸಂವಾದಅಂತರಾಳಕ್ಲಾಸ್ ರೂಂ v/s ನ್ಯೂಸ್ ರೂಂ

ಕ್ಲಾಸ್ ರೂಂ v/s ನ್ಯೂಸ್ ರೂಂ

ಜಿ.ಎನ್.ಮೋಹನ್


ಹೆಸರು?
-ಕಾಶೀನಾಥ ಚಂದ್ರಕಾಂತ ಬಗರೆ.

‘ಬಗರೆ’ ಅಂದ್ರೇನು?
-ನಮ್ಮ ತಂದೆ ಇಟ್ಟಿರೋ ಹೆಸರು.

ಅದು ಸರಿ, ಆದ್ರೆ ‘ಬಗರೆ’ ಅಂತ ಯಾಕಿಟ್ರು?
-ಗೊತ್ತಿಲ್ಲ ಸಾರ್, ಅವರು ಇಟ್ರು

ಎದುರುಗಡೆ ಕುಳಿತಿದ್ದ ಹುಡುಗನ ಮುಖ ನೋಡಿದೆ.

ಅವನ ಕಣ್ಣಲ್ಲಿ ಫಳ ಫಳ ಅನ್ನೋ ಆತ್ಮವಿಶ್ವಾಸ ಮಿಂಚ್ತಿತ್ತು. ಇನ್ನು ಎರಡೇ ಎರಡು ತಿಂಗಳು. ಇದು ಮುಗಿದುಬಿಟ್ರೆ ನಾನೂ ಕೂಡಾ ‘ಜರ್ನಲಿಸ್ಟ್’ ಆಗಿಬಿಡ್ತೀನಿ ಅನ್ನೋ ಅವಸರ ಇಣುಕ್ತಾ ಇತ್ತು. ಎರಡೇ ತಿಂಗಳು- ನೂರೆಂಟು ರಾಜದೀಪ್ ಸರ್ದೇಸಾಯ್, ನೂರೆಂಟು ಬರ್ಖಾ ದತ್ ಸೃಷ್ಟಿ ಆಗ್ಬಿಡೋದಿಕ್ಕೆ.

ಜುಲೈ – ಆಗಸ್ಟ್ ತಿಂಗಳು ಬಂತು ಅಂದ್ರೆ ಸಾಕು ಯಾವ ಪೇಪರ್, ಚಾನಲ್, ಮೀಡಿಯಾ ಹೌಸ್ ಗಳಿಗೆ ಹೋದ್ರೂ ಗಿಜಿ ಗಿಜಿ ವಾತಾವರಣ. ಹತ್ತಾರು ಹೊಸ ಮುಖಗಳು.

ಮೀಡಿಯಾ ಲೋಕದಲ್ಲಿ ಇರುವವರಿಗೆ ಚೆನ್ನಾಗಿ ಗೊತ್ತು. ಆಷಾಡ ಮಾಸ ಮುಗಿದ ಮೇಲೆ ಬರೋದು ವಸಂತ ಮಾಸ ಅಲ್ಲ ‘ಇಂಟರ್ನ್ ಶಿಪ್ ಮಾಸ’ ಅಂತ.

ಬೇರೆ ಬೇರೆ ಕಾಲೇಜು, ಯೂನಿವರ್ಸಿಟಿಗಳಲ್ಲಿ ಪತ್ರಿಕೋದ್ಯಮ ಓದಿದ ವಿದ್ಯಾರ್ಥಿಗಳು ಪ್ರಾಕ್ಟಿಕಲ್ ಆಗಿ ಮೀಡಿಯಾ ಹೇಗಿರುತ್ತೆ ಅಂತ ತಿಳಕೊಳ್ಳೋದಿಕ್ಕೆ ಮೀಡಿಯಾ ಆಫೀಸ್ ಗಳಿಗೆ ಬರ್ತಾರೆ.

ಒಂದು – ಎರಡು ತಿಂಗಳು ಇದ್ದು ತಾವು ಕಲಿತದ್ದನ್ನೆಲ್ಲ ಟೆಸ್ಟ್ ಮಾಡಿ ನೋಡ್ಬಿಡಬೇಕು ಅಂತ ಚಡಪಡಿಸ್ತಿರ್ತಾರೆ. ‘I am from the Press’ ಅಂತ ಹೇಳಿಕೊಳ್ಳೋದಿಕ್ಕೆ ಇರೋ ದೂರ ಕೇವಲ ಎರಡು ತಿಂಗಳಿನದ್ದು.

‘ಅಲ್ಲಪ್ಪಾ, Nose for the News ಮೊದಲ ಶುರುವಾಗೋದು ನಮ್ಮಿಂದಲೇ, ನಮ್ಮ ಹೆಸರಿಂದಲೇ. ಬೇರೆ ಯಾವುದೋ ಪ್ರೊಫೆಶನ್ ನವರಿಗೆ ‘ಬಗರೆ’ ಅಂತ ಯಾಕಿಟ್ರು ಅಂತ ಗೊತ್ತಿಲ್ಲದೆ ಹೋದ್ರೆ ಪರವಾಗಿಲ್ಲ. ಆದ್ರೆ ನೀನು ಜರ್ನಲಿಸ್ಟ್ ಆಗೋನು. ಸುದ್ದೀಗೆ ಮೂಗು ತೂರಿಸೋನು, ನ್ಯೂಸ್ ಅನ್ನೋದು ನಮ್ಮಿಂದಾನೆ ಶುರು ಆಗ್ಬೇಕು ಅಲ್ವಾ’ ಅಂದೆ.

ಮಾರನೆಯ ದಿನ ಅದೇ ಕಾಶೀನಾಥ ಬಗರೆ ನನ್ನೆದ್ರು ನಿಂತಾಗ ಅವನ ಮುಖದಲ್ಲಿ ಕಾನ್ಫಿಡೆನ್ಸ್ ಹತ್ತು ಪಟ್ಟು ಜಾಸ್ತಿ ಆಗಿತ್ತು.

‘ಸಾರ್, ನಮ್ಮ ಪೂರ್ವಜರು ಬಣ್ಣದ ಕೆಲಸದಲ್ಲಿದ್ದವರು. ಅವ್ರಿಗೆ ರಂಗದಾಳೆ ಅಂತ ಕರೀತಿದ್ರು. ನಮ್ಮ ಫ್ಯಾಮಿಲಿ ಬುಗುರೀಗೆ ಬಣ್ಣಾ ಹಾಕೋದ್ರಲ್ಲಿ ಎತ್ತಿದ ಕೈ. ಹಾಗಾಗಿ ಅದೇ ಹೆಸರು ಅಂಟಿಕೊಳ್ತು. ಬುಗರಿಹೋಗಿ ಬಗರೆ ಆಯ್ತು’ ಅಂದ.

ಆತ ಅಷ್ಟಕ್ಕೆ ಸುಮ್ಮನಾಗಲಿಲ್ಲ.

ತನ್ನ ತಾಯಿ ಪಾರ್ವತಿ ಅಚಲ್ ಕರ್ ಅವರ ಹೆಸರಲ್ಲಿದ್ದ ಅಚಲ್ ಕರ್ ಬೆನ್ನಿಗೂ ಬಿದ್ದಿದ್ದ. ಅಷ್ಟೇ ಆಗಿದ್ದರೆ ಆಶ್ಚರ್ಯ ಆಗ್ತಿರಲಿಲ್ಲ. ಆತ ತನ್ನ ಕಿವಿ ಮೇಲೆ ಆಗೀಗ ಬೀಳ್ತಿದ್ದ ರಾಶೀನ್ ಕರ್, ಧಾರವಾಡಕರ್, ಕುಮಟೆ, ಪುಠಾಣೆ- ಹೀಗೆ ಎಲ್ಲಾ ಹೆಸರುಗಳ ಬೆನ್ನಟ್ಟಿ ಹೋಗಿದ್ದ.

ತಮ್ಮ ಅನೇಕ ಸರ್ ನೇಮ್ ಗಳಲ್ಲಿ ಈ ‘ಕರ್’ ಯಾಕೆ ಮೇಲಿಂದ ಮೇಲೆ ಬರುತ್ತೆ ಅಂತ ಹುಡುಕಿದ್ದ.

ಅಷ್ಟಕ್ಕೂ ನಿಲ್ಲಿಸದೆ ತಮ್ಮ ಪೂರ್ವಜರು ಎಲ್ಲಿದ್ದರು, ನಂತರ ಎಲ್ಲೆಲ್ಲಾ ಹರಡಿ ಹೋದರು, ತಮ್ಮ ಕುಟುಂಬಗಳು ಯಾಕೆ ಬಟ್ಟೆ ಮಾರಾಟ ಹಾಗೂ ಟೈಲರಿಂಗ್ ಗೆ ಸೀಮಿತ ಆಗಿದೆ. ಈ ಎರಡೂ ವೃತ್ತಿ ಈಗ ಹೇಗೆ ಏದುಸಿರುಬಿಡ್ತಾ ಇದೆ ಅಂತೆಲ್ಲಾ ವಿಚಾರಿಸಿದ್ದ.

‘ಷೂವಣ್ ಸರ್ ಲ್ ನಹೀ, ಪೋಟ್ ಭರ್ ಲ್ ನಹೀ’ (ಹೊಲಿಗೆ ಹೊಲಿಯೋದು ತಪ್ಪಲಿಲ್ಲ, ಹೊಟ್ಟೆ ತುಂಬಲಿಲ್ಲ) ಹಾಗಾಗೀನೇ ನಾನು ಸೂಜಿ ಹಿಡಿಯೋದು ಬಿಟ್ಟು, ಮೀಡಿಯಾ ಸ್ಟೂಡೆಂಟ್ ಆದೆ ಅಂತ ನಿಟ್ಟುಸಿರಿಟ್ಟ.

ಅರೆ! ತನ್ನ ಜೊತೆಯೇ 22 ವರ್ಷಗಳಿಂದ ಓಡಾಡಿದ್ದ ಒಂದು ಹೆಸರು ಏನೆಲ್ಲಾ ಕಥೆಯನ್ನು ಬಚ್ಚಿಟ್ಟುಕೊಂಡಿತ್ತು.

ಬಗರೆ ಎನ್ನುವ ಒಂದು ಹೆಸರು ಹೇಗೆ ಭಾವಸಾರ ಕ್ಷತ್ರಿಯ ಲೋಕದ ದುರಂತವನ್ನೇ ಅನಾವರಣ ಮಾಡಿತ್ತು.

ಒಂದು ಕುತೂಹಲ ಒಂದು ಹಪಾಹಪಿ, ಅಥವಾ ಸರಿಯಾಗಿರುವ ಒಂದು ಮೂಗು ಏನೆಲ್ಲಾ ನಮ್ಮ ಮುಂದೆ ತಂದು ಹರಡಲು ಸಾಧ್ಯ ಅನಿಸಿತು.

ನನ್ನ ಮುಂದಿದ್ದ ಮನೋಜ್, ವಿನಯ್, ಸಂತೋಷ್, ಮಲ್ಲೇಶಪ್ಪ, ನಂದೀಶ್, ನಂಜೇಗೌಡ, ಅನಿಲ್, ರವಿಚಂದ್ರ, ಗುರು ಅವರ ಮುಖ ನೋಡಿದೆ.

ಅವರ ಹೆಸರುಗಳು ಸರ್ ನೇಮ್ ತಗುಲಿಸಿಕೊಂಡಿರದಿದ್ದರೂ ಒಂದು ಸಿನೆಮಾ, ಟಿವಿ ಸೀರಿಯಲ್ ಗೆ ಬೇಕಾದ ಎಲ್ಲಾ ತಿರುವುಗಳನ್ನೂ ಹೊಂದಿತ್ತು.

ಆ ಹೆಸರುಗಳ ಹಿಂದೆ ಹಳೆಯ ನೆನಪಿತ್ತು, ಪೂರ್ವಿಕರ ಸ್ಮರಣೆ ಇತ್ತು, ಇಲ್ಲವಾದವರ ಬಗೆಗಿನ ಕಣ್ಣೀರಿತ್ತು, ಜಾತಿಯಿಂದ ನೊಂದ ನಿಟ್ಟುಸಿರಿತ್ತು.

ಇದೆಲ್ಲಾ ನನಗೆ ನೆನಪಾಗಿದ್ದು ಎಕ್ಸ್ ಪ್ರೆಸ್ ಗ್ರೂಪ್ ನೀಡಿದ್ದ ಜಾಹೀರಾತಿನಿಂದ.

ತಾನು ಆರಂಭಿಸಲಿರುವ ಪತ್ರಿಕೋದ್ಯಮ ಕೋರ್ಸ್ ಗೆ ಅದು ನೀಡಿದ ಕರೆ- ‘ಕ್ಲಾಸ್ ರೂಂ ಬಿಡಿ, ನ್ಯೂಸ್ ರೂಂ ಸೇರಿ’. ನಾಲ್ಕು ಗೋಡೆಯ ನಡುವೆ ಕಟ್ಟಿ ಹಾಕದೆ ಮೊದಲ ದಿನದಿಂದಲೇ ಫೀಲ್ಡ್ ನಲ್ಲಿ ತರಬೇತಿ ನೀಡುವ ಭರವಸೆಯನ್ನು ಅದು ನೀಡುತ್ತಿತ್ತು.

ಇವತ್ತು ಕೆಲವೇ ಕೆಲವು ಅಪವಾದ ಬಿಟ್ಟರೆ ಕ್ಲಾಸ್ ರೂಂ ಹಾಗೂ ನ್ಯೂಸ್ ರೂಂಗಳು ಪರಸ್ಪರ ಬೆನ್ನು ಹಾಕಿ ಕೂತುಬಿಟ್ಟಿದೆ.

ತರಗತಿಯಲ್ಲಿ ಕಲಿತ ಪತ್ರಿಕೋದ್ಯಮ ನಿಜಕ್ಕೂ ‘ಪುಸ್ತಕದ ಬದನೇಕಾಯಿ’ ಅನ್ನೋದು ಗೊತ್ತಾಗುತ್ತಿದೆ. ಅದಕ್ಕೆ ತದ್ವಿರುದ್ಧವಾಗಿ ‘ಪುಸ್ತಕ ಓದಿದ ಜರ್ನಲಿಸ್ಟ್ ಗಳೆಲ್ಲಿದ್ದಾರೆ?’ ಅಂತ ಕೇಳುವವರೂ ಇದ್ದಾರೆ.

ಇಷ್ಟು ಮಾತ್ರ ನಿಜ. ಕ್ಲಾಸ್ ರೂಂ ಹಾಗೂ ನ್ಯೂಸ್ ರೂಂ ಇನ್ನೂ ಕೈ ಕುಲುಕಿಲ್ಲ. ಪತ್ರಿಕೋದ್ಯಮ ಓದಿದರೆ ಸಾಲದು ಪೋಲ್ ವಾಲ್ಟ್ ಜಿಗಿತ ಮಾಡಿದರಷ್ಟೇ ಮೀಡಿಯಾದಲ್ಲಿ ನಿಲ್ಲಲ್ಲು ಜಾಗ ಎಂಬುದು ನ್ಯೂಸ್ ರೂಂ ಪ್ರವೇಶಿಸಿದ ಬಹುತೇಕ ಎಲ್ಲರ ಅನುಭವ.

‘ಪ್ರಜಾವಾಣಿ’ಗೆ ಆಯ್ಕೆಯಾಗಿ ಕಾಲಿಟ್ಟ ಮೊದಲ ದಿನದ ನೆನಪು ಇನ್ನೂ ಹಸಿರಾಗಿದೆ. ಕನ್ನಡ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡು, ಲ್ಯಾಬ್ ಜರ್ನಲ್ ನಲ್ಲಿ ಒಳ್ಳೇ ಮಾರ್ಕ್ಸ್ ಪಡೆದು, ಎಡಿಟಿಂಗ್ ನಲ್ಲೂ ಪರವಾಗಿಲ್ಲ ಎನಿಸಿಕೊಂಡಿದ್ದ ನಾನು ಕುಳಿತದ್ದು ನೇರ ಎಡಿಟೋರಿಯಲ್ (ಜನರಲ್) ಡೆಸ್ಕ್ ನಲ್ಲಿ.

ನ್ಯೂಸ್ ಮುಖ್ಯಸ್ಥ ಕೆ ಎಸ್ ನಾಗಭೂಷಣಂ ನನಗೆ ಏಜನ್ಸಿ ಕಾಪಿ ಕೊಟ್ಟರು. ನಾನು ಅದರ ಮೇಲೆ ಕೈಯಾಡಿಸಿ ಹತ್ತೇ ನಿಮಿಷದಲ್ಲಿ ಅವರಿಗೆ ವಾಪಸ್ ಕೊಟ್ಟೆ.

ಅವರು ಅವಾಕ್ಕಾಗಿ ‘ನೀವು ಸೆಲೆಕ್ಟ್ ಆಗಿರೋದು ಪ್ರಜಾವಾಣಿಗೋ, ಡೆಕ್ಕನ್ ಹೆರಾಲ್ಡ್ ಗೋ’ ಅಂತ ಕೇಳಿದ್ರು.

ಆಗಿದ್ದು ಇಷ್ಟೇ- ಅವರು ಕೊಟ್ಟ ಪಿಟಿಐ ಕಾಪಿಯನ್ನು ನಮ್ಮ ಕ್ಲಾಸ್ ರೂಂನಲ್ಲಿ ಹೇಳಿಕೊಟ್ಟಂತೆ ಹೆಡ್ ಲೈನ್ ಹಾಕಿ, ಕ್ಯಾಪ್ಸ್ ಮಾರ್ಕ್ ಮಾಡಿ, ಪ್ಯಾರಾ ಸಪರೇಟ್ ಮಾಡಿ, ಅನಗತ್ಯ ವಿಷಯ ಡೆಲಿಟ್ ಮಾಡಿ ಅವರ ಮುಂದಿಟ್ಟಿದ್ದೆ.

ಆದರೆ ಅದರ ಅನುವಾದ ಮಾಡಿರಲಿಲ್ಲ. ಯಾಕೆಂದರೆ ನಮ್ಮ ಎಡಿಟಿಂಗ್ ಕ್ಲಾಸ್ ಇಂಗ್ಲಿಷ್ ಎಡಿಟಿಂಗ್ ಮಾತ್ರ ಹೇಳಿಕೊಟ್ಟಿತ್ತು. ಕನ್ನಡ ಪತ್ರಿಕೋದ್ಯಮ ಕ್ಲಾಸ್ ನಲ್ಲಿ ಇಷ್ಟು ದಪ್ಪದ ನಾಡಿಗ ಕೃಷ್ಣಮೂರ್ತಿ ಪುಸ್ತಕ ಕೈಗಿಟ್ಟು ಓದಿಕೊಂಡ್ಬಿಡಿ ಅಂದಿತ್ತು.

ನ್ಯೂಸ್ ರೂಂ ನಲ್ಲಿ ಕುಳಿತಿದ್ದ ನಾನು ಕ್ಲಾಸ್ ರೂಂನ ಎಲ್ಲಾ ಅವಘಡಗಳಿಗೆ ಸಾಕ್ಷಿಯಾಗಿದ್ದೆ.

ಕೊಳವೆ ಬಾವಿಯೊಳಗೆ ಕ್ಯಾಮೆರಾ ಇಳಿಸುವ ಕಾಲಕ್ಕೆ ಬಂದಿರುವಾಗಲೂ, ತೆಹೆಲ್ಕಾ ಸ್ಟಿಂಗ್ ಗಳು ನೂರೆಂಟು ಕಡೆಯಿಂದ ಕಚ್ತಾ ಇರುವಾಗಲೂ ನಾವು ಅದೇ ಅದೇ ವಿಲ್ಬರ್ ಸ್ಕ್ರಾಂ ಕಮ್ಯುನಿಕೇಶನ್ ಮಾಡೆಲ್ ಗಳಿಗೆ ಗಂಟು ಬಿದ್ದಿದ್ದೀವಿ.

ಹೊಸಾ ಹೊಸಾ ಮಾಧ್ಯಮ, ಮಾಧ್ಯಮ ತಂತ್ರಜ್ಞಾನದಲ್ಲಿ ದಿನಕ್ಕೊಂದು ಬದಲಾವಣೆ ಆಗುತ್ತಿದ್ದರೂ ನಮ್ಮ ಸಿಲಬಸ್ ಗಳಲ್ಲಿ ಮಾತ್ರ ಅದೇ ಮುಗ್ಗುಲು ವಾಸನೆ.

ಯಾವುದೋ ದೇಶದ ಯಾವುದೋ ಕಪಾಟಿನಿಂದ ಹೆಕ್ಕಿದ ಪಾಠಗಳು ನಮ್ಮನ್ನು ‘ನ್ಯೂಯಾರ್ಕ್ ಟೈಮ್ಸ್’ಗೆ ರೆಡಿ ಮಾಡುತ್ತದೆ ಆದರೆ ವಾಸ್ತವದಲ್ಲಿ ‘ಸಂಜೆವಾಣಿ’ ಬಾ, ಬಾ ಅನ್ನುತ್ತದೆ.

‘ಈಟಿವಿ’ಗಾಗಿ ಕ್ಯಾಂಪಸ್ ಇಂಟರ್ವ್ಯೂ ನಡೆಸಲು ಹೋಗಬೇಕಾಗಿ ಬಂದಾಗ ಒಂದು ಆಸೆ ಇತ್ತು. ಏನೇನೋ ಬದಲಾಗಿವೆ. ಹಾಗೆ ನಮ್ಮ ಕ್ಲಾಸ್ ರೂಂಗಳೂ ಬದಲಾಗಿರಬಹುದೂ ಅಂತ.

‘ಮತ್ತದೇ ಬೇಸರ, ಅದೇ ಸಂಜೆ’ ಎಂಬಂತೆ ಎಲ್ಲವೂ ಅದೇ, ಅದೇ!

ಆಯ್ಕೆಯಾದ ಎಲ್ಲರಿಗೂ ಎರಡು ತಿಂಗಳು ‘ಈನಾಡು ಜರ್ನಲಿಸಂ ಸ್ಕೂಲ್’ ನಲ್ಲಿ ತೀವ್ರ ತರಬೇತಿ ಕೊಡುತ್ತಿದ್ದೆವು.

ಕಾರಣ ಇಷ್ಟೇ- ರಾಮೋಜಿ ರಾವ್ ಹೇಳಿದ್ದರು- ಕಲಿಸುವ ಮುಂಚೆ, ಕಲಿತದ್ದು ತೆಗೆಸೋದು ಮುಖ್ಯ. Do Unlearning ಅಂತ.

ಹೊಸ ನೋಟದ ಲೆಕ್ಚರರ್ಸ್ ಇಲ್ಲ ಅಂತಲ್ಲ, ಸಿಲಬಸ್ ಏನೇನೂ ಬದಲಾಗಿಲ್ಲ ಅಂತಾನೂ ಅಲ್ಲ, ಬರೀ ಥಿಯರಿ ಮಾತ್ರ ಇದೇ ಅಂತಾನೂ ಅಲ್ಲ. ಆದ್ರೆ ಇವತ್ತಿನ ಮಾಧ್ಯಮಕ್ಕೆ, ಮಾಧ್ಯಮದಲ್ಲಿ ಬದಲಾಗ್ತಿರೋ ಗ್ರಾಮರ್ ಗೆ ಏನು ಬೇಕಾಗಿದೆ ಅನ್ನೋದರ ಗ್ಯಾಪ್ ತುಂಬೋದಿಕ್ಕೆ ಆಗ್ತಾ ಇಲ್ಲ.

5W+1H ಕಾಲದಿಂದ ಸುದ್ದಿ ಅನ್ನೋದು ಸಾಕಷ್ಟು ದೂರ ಬಂದಿದೆ. ಬೋರ್ಡ್ ಮೇಲೆ ಕ್ಯಾಮೆರಾ ಬರೆದು ಅದರ ಭಾಗಗಳನ್ನು ವಿವರಿಸ್ತಾ ಇದ್ದ ಕಾಲದಿಂದ ಒಂದಿಷ್ಟಾದರೂ ನಮ್ಮ ಪಾಠಗಳು ದೂರ ಬಂದಿದೆ ಅನ್ನೋದೇ ಸಮಾಧಾನ.

‘ನಮಗೆ ಇದೆಲ್ಲಾ ಗೊತ್ತೇ ಇಲ್ಲ, ನಮಗೆ ಇದೆಲ್ಲಾ ಹೇಳಿಕೊಟ್ಟಿಲ್ಲ’ ಅನ್ನೋ ಉದ್ಗಾರ ನ್ಯೂಸ್ ರೂಂನಲ್ಲಿ ತೀರಾ ಸಾಮಾನ್ಯ.

ಅಂದ್ರೆ, ಆ ಸ್ಟೂಡೆಂಟ್ ಗಳು ಕ್ಲಾಸ್ ರೂಂನಿಂದ ನ್ಯೂಸ್ ರೂಂಗೆ ಅಡ್ಜಸ್ಟ್ ಆಗೋದಿಕ್ಕೆ ಪೋಲ್ ವಾಲ್ಟ್ ಕೈನಲ್ಲಿ ಹಿಡಿದು ಸಜ್ಜಾಗಿದ್ದಾರೆ ಅಂತಾನೇ ಅರ್ಥ.

‘ನಿಮ್ಮ ಹತ್ರ ಎಷ್ಟು ಫೋನ್ ನಂಬರ್ ಇದೆ ಹೇಳಿ’ ಅಂತ ಇಂಟರ್ನಿಗಳಿಗೆ ಕೇಳಿದೆ. ಮೊಬೈಲ್ ನಲ್ಲಿ ಕ್ಲಾಸ್ ಮೆಟ್ ಗಳು, ನೆಂಟರಿಷ್ಟರದ್ದು ಬಿಟ್ಟರೆ ಇನ್ನೊಂದು ನಂಬರ್ ಅಪರೂಪ ಆಗಿತ್ತು.

ವಿಧಾನಸೌಧದಲ್ಲಿ ಗರ ಗರ ಸುತ್ತೋ ಎಲ್ಲಾ ಪತ್ರಕರ್ತರಿಗೂ ಗೊತ್ತಿರುತ್ತೆ ಮಿನಿಸ್ಟರ್ ನಷ್ಟೇ ಅಲ್ಲಿರೋ ಪ್ಯೂನ್ ಕೂಡ ನ್ಯೂಸ್ ನ ದೊಡ್ಡ ಜೀವಾಳ ಅಂತ.

ಕ್ಲಾಸ್ ರೂಂಗಳು ಹಾಗೂ ನ್ಯೂಸ್ ರೂಂಗಳು ಕೈಕುಲುಕದೆ ಹೋದರೆ ಆಗೋ ಪರಿಣಾಮ ಇದು. ಕನಿಷ್ಠ ‘ಕಾಂಟ್ಯಾಕ್ಟ್’ ಅನ್ನೋದು ಜರ್ನಲಿಸ್ಟ್ ನ ಜೀವಾಳ ಅಂತ ಗೊತ್ತಾಗದೇ ಜರ್ನಲಿಸಂ ಮಾಡೋದು ಹೇಗೆ?

ತಕ್ಷಣ ನನಗೆ ‘ಈಟಿವಿ’ ನ್ಯೂಸ್ ಡೆಸ್ಕ್ ನ ಮೀಟಿಂಗ್ ಗಳು ಜ್ಞಾಪಕಕ್ಕೆ ಬಂತು.

ಮೊಬೈಲ್ ಗಳಲ್ಲಿ T9 ಅನ್ನೋ ಲಾಂಗ್ವೇಜ್ ಬಳಸ್ತಾರೆ. ಯಾಕೆ T9 ಅಂತ ಕರೀತಾರೆ? ಏನದು T9 ಅಂದ್ರೆ? Star TV ಎಕ್ಸ್ ಪ್ಯಾನ್ಶನ್, ವಾಟರ್ ಗೇಟ್ ಅಂದ್ರೇನು? ಕನ್ನಡ ಸಾಹಿತ್ಯ ಪರಿಷತ್ ಗೆ ಮೈಸೂರು ರಾಜರೂ ಅಧ್ಯಕ್ಷರಾಗಿದ್ರು ಅಂತ ಇದೇ ಮಹೇಶ್, ಮೊಯಿದ್ದೀನ್, ಕಲ್ಲೇಶಪ್ಪ, ಯೋಗೀಶ್, ಆಶಾ ಪಟ ಪಟಾ ಅಂತ ಇವತ್ತು ಕ್ಲಾಸ್ ಕೊಡ್ತಾರೆ.

ಇವರೂನೂ ಕುವೆಂಪು, ಬೆಂಗಳೂರು, ಗಂಗೋತ್ರಿ, ಮಂಗಳೂರು ಯೂನಿವರ್ಸಿಟಿ ಕ್ಲಾಸ್ ಗಳಿಂದ ಎದ್ದು ಬಂದವರೇ. ಆದ್ರೆ ಇವರು ಕ್ಲಾಸ್ ರೂಂನ ಕೊರತೆಯನ್ನು ತುಂಬಿಸಿಕೊಂಡು ನ್ಯೂಸ್ ರೂಂಗೆ ರೆಡಿ ಆಗಿದ್ದಾರೆ. ಪೋಲ್ ವಾಲ್ಟ್ ಮಾಡಿ ಗೆದ್ದುಕೊಂಡಿದ್ದಾರೆ.

ಈ ರೀತಿ ಬದಲಾದ ಎರಡು ಘಟನೆ ಹೇಳಬೇಕು. ನರೇಂದ್ರ ಮಡಿಕೇರಿ ಮೈಸೂರು ಯೂನಿವರ್ಸಿಟಿಯಲ್ಲಿ ಬೇಷ್ ಅನಿಸಿಕೊಂಡು ಬಂದ ಹುಡುಗ. ನ್ಯೂಸ್ ರೂಂಗೆ ಬಂದಾಗ ತಬ್ಬಿಬ್ಬಾಗಿ ಕುಳಿತಿದ್ದ. ಕೆಲವೇ ದಿನ ಅಷ್ಟೇ ನ್ಯೂಸ್ ರೂಂ ನ ಗಿರಣಿ ಅವನನ್ನ ಬದಲು ಮಾಡಿತ್ತು.

ಅನಿಲ್ ಕುಂಬ್ಳೆ ಒನ್ ಡೇ ಮ್ಯಾಚ್ ಗೆ ವಿದಾಯ ಹೇಳಿದ್ದರು. ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ. ತಾವು ಬರೆದುಕೊಂಡು ಬಂದಿದ್ದ ವಿದಾಯ ಹೇಳಿಕೆ ಓದಿ ಎದ್ದರು.

ಅದರಲ್ಲಿ ನ್ಯೂಸ್ ಅನ್ನೋದು ಎಲ್ಲಿರುತ್ತೆ? ಕುಂಬ್ಳೆ ಹೊರಗಡೆ ಬರಲಿ ಬೈಟ್ ತಗೊಳ್ಳೋಣ ಅಂತ ಎಲ್ಲಾ ಚಾನಲ್ ನವರೂ ಕಾಯ್ತಿದ್ರು.

ಆದ್ರೆ ಕುಂಬ್ಳೆ ನೇರವಾಗಿ ಕಾರ್ ಹತ್ತಿ ಹೊರಟರು. ನರೇಂದ್ರ ಮಡಿಕೇರಿ ಜಿಗಿದವನೇ ಗೇಟ್ ಹಾಕಿಬಿಟ್ಟ. ಕಾರ್ ನಿಲ್ಲಲೇಬೇಕಾಯ್ತು. ಬೇಕಾದ ಹೆಡ್ ಲೈನ್ ಸಿಕ್ತು.

ಇನ್ನೊಂದು ಘಟನೆ- ಎಲ್ಲಾ ಪತ್ರಕರ್ತರೂ ಜನಾರ್ದನ ರೆಡ್ಡಿ ಸಿ.ಡಿ. ರಿಲೀಸ್ ಮಾಡ್ತಾರೆ ಅಂತ ಬಳ್ಳಾರಿ ಮನೆಯಲ್ಲಿ ಮುತ್ತಿಕೊಂಡಿದ್ರು. ಎಷ್ಟೋ ಚಾನಲ್ ಗಳು ನೇರ ಪ್ರಸಾರಕ್ಕೆ ಅಂತ ಓ.ಬಿ. ವ್ಯಾನ್ ತಗೊಂಡು ಬಳ್ಳಾರಿ ಎಂಟರ್ ಆಗಿತ್ತು.

ಆದ್ರೆ ಜ್ಯೋತಿ ಇರ್ವತ್ತೂರು ಬೆಂಗಳೂರಿನಲ್ಲಿ ಎಡವಿ ಬಿದ್ರೆ ಸಿಗೋ ಚಾಲುಕ್ಯ ಹೋಟೆಲ್ ಪಕ್ಕದ ರೆಡ್ಡಿ ಮನೆಯಲ್ಲಿದ್ಲು. ಅವರ ಅಡುಗೆಮನೆ ಅಕ್ಕಿಡಬ್ಬಿಯಲ್ಲಿ ಅದೇ ಸಿ.ಡಿ.ಗಳಿದ್ವು.

ಜ್ಯೋತಿ ಮಂಗಳೂರು ಯೂನಿವರ್ಸಿಟಿಯಿಂದ ಬಂದು ರಾಮೋಜಿ ಫಿಲಂ ಸಿಟಿಯಲ್ಲಿ ಹತ್ತರಲ್ಲಿ ಹನ್ನೊಂದು ಅನ್ನುವ ಹಾಗೆ ಕುಳಿತಿದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.

ಹಾಗಾದ್ರೆ ಎಲ್ಲಾ ಪತ್ರಕರ್ತರೂ ಬೆಂಗಳೂರು ಟು ಬಳ್ಳಾರಿ ಯಾತ್ರೆ ಮಾಡ್ತಿದ್ದಾಗ ಅಕ್ಕಿ ಡಬ್ಬದಲ್ಲಿರೋ ಸಿ.ಡಿ. ಅವಳಿಗೆ ಕಂಡಿದ್ದಾದರೂ ಹೇಗೆ? ಗೇಟ್ ಕ್ಲೋಸ್ ಆದ್ರೆ ಬುಲೆಟಿನ್ ಓಪನ್ ಆಗುತ್ತೆ ಅಂತ ನರೇಂದ್ರ ಮಡಿಕೇರಿಗೆ ಹೇಳಿಕೊಟ್ಟವರು ಯಾರು?

ಅದೇ ನ್ಯೂಸ್ ರೂಂನ ಚಮತ್ಕಾರ.

‘ಯಾಕಪ್ಪಾ ಇಷ್ಟು ಸ್ಪೆಲಿಂಗ್ ಮಿಸ್ಟೇಕ್’ ಅಂತ ಗುರುಪ್ರಸಾದ್ ಬರೆದಿದ್ದ ರಿಪೋರ್ಟ್ ನೋಡ್ತಾ ಕೇಳಿದಾಗ ಚಾನಲ್ ಗಳಲ್ಲಿ ಬರೆಯೋದೇನಿರಲ್ಲ ಅಂತ ಉತ್ತರ ಕೊಟ್ಟಿದ್ದ.

ಅದೇ ಹುಡುಗ ಎರಡು ದಿನ ಬಿಟ್ಟು ಎಲ್ಲಾ ಇಂಟರ್ನಿಗಳಿಗೆ ಚಂದ್ರಯಾನ ಪಾಠ ಮಾಡ್ತಿದ್ದ. ವಿ.ಐ.ಪಿ. ಸೆಕ್ಯುರಿಟಿಯಲ್ಲಿ ಎಷ್ಟು ವಿಧ ಅಂತ ವಿವರಿಸ್ತಿದ್ದ. ನ್ಯೂಸ್ ಅದರಿಂದಾನೂ ಹೇಗೆ ತೆಗೀಬಹುದು ಅಂತ ಹುಡುಕಿ ಕೊಡ್ತಾ ಇದ್ದ. ಕ್ಲಾಸ್ ರೂಂನಿಂದ ಒಂದಷ್ಟು ದಿನ ಹೊರಗೆ ಬಂದಿದ್ದ.

ರವೀಂದ್ರನಾಥ ಟ್ಯಾಗೂರರ ‘ಪಂಜರ ಶಾಲೆ’ ನಾಟಕ ನೋಡಿದ್ದೀರಾ.

ಮತ್ತೆ ಕಾಶೀನಾಥ ಬಗರೆ ನೆನಪಿಗೆ ಬಂದ.

ಜರ್ನಲಿಸಂ ಅನ್ನೋದು ದರ್ಜಿ ಕೆಲಸಾನೇ. ಕ್ಲಾಸ್ ರೂಂ ಅನ್ನೋ ಸೂಜಿ ತಗೋಬೇಕು, ನ್ಯೂಸ್ ರೂಂ ಅನ್ನೋ ದಾರ ಪೋಣಿಸಬೇಕು, ನ್ಯೂಸ್ ಅನ್ನೋ ಕೌದಿ ತಯಾರು ಮಾಡ್ಬೇಕು.

RELATED ARTICLES

1 COMMENT

  1. ತುಂಬಾ ಚೆನ್ನಾಗಿದೆ ಸರ್ ಈ ಬರವಣಿಗೆ ಇಂದಿನ ಪ್ರತಿಯೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಗೆ ಇದೊಂದು ಮಾಹಿತಿ ಮಂಟಪದಂತಿತ್ತು..

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?