ಜಿ.ಎನ್.ಮೋಹನ್
ಹೀಗೇ ಪೇಪರ್ ತಿರುವಿ ಹಾಕುತ್ತಾ ಕೂತಿದ್ದೆ. ಯಾವುದೋ ಜಾಹೀರಾತು ಕೊನೆಯಲ್ಲಿ ಒಕ್ಕಣೆ. ನಿಮ್ಮ ಅರ್ಜಿಗಳನ್ನು ‘ಸ್ನೇಲ್ ಮೇಲ್ನಲ್ಲಿ ಬೇಡ, ಈ ಮೇಲ್ನಲ್ಲಿ ಕಳಿಸಿ’.
ಅರ್ಥ ಇಷ್ಟೆ, ಬಸವನಹುಳು ವೇಗದಲ್ಲಿ ಬರುವ ಪೋಸ್ಟ್ ಮೂಲಕ ಬೇಡ. ಮಿಂಚಿನಂತೆ ಬಳಿ ಬರುವ ಈ ಮೇಲ್ ಬಳಸಿ.
ಒಂದು ಕ್ಷಣ ಮಾತೇ ಹೊರಡಲಿಲ್ಲ. ಯಾಕಂದ್ರೆ ಪೋಸ್ಟ್ ಇಲ್ಲದ ಕಾಲವನ್ನು ಊಹಿಸಿಕೊಳ್ಳಲೂ ನನ್ನ ಮನಸ್ಸು ನಿರಾಕರಿಸುತ್ತಿತ್ತು.
ನಾನೂ ಬದಲಾದ ಕಾಲದಲ್ಲಿ ಈ-ಮೇಲ್ ಬಳಸುತ್ತಿರುವವನೇ. ಲೆಕ್ಕ ಹಾಕಿದರೆ ಬೇರೆಯವರಿಗಿಂತ ಒಂದು ಕೈ ಜೋರಾಗಿಯೇ ಈ-ಮೇಲ್ಗೆ ಒಗ್ಗಿಹೋಗಿದ್ದೇನೆ.
ಆದರೆ… ಆದರೆ.. ಆ ಅಂಚೆಯಣ್ಣನ ಕೈಯಿಂದ ನೇರವಾಗಿ ಬರುವ ಪೋಸ್ಟ್ ನ ಥ್ರಿಲ್ ನನ್ನಿಂದ ದೂರವಾಗಿಲ್ಲ.
ಪೋಸ್ಟ್ ಅನ್ನೋದು ಯಾಕೆ ನನ್ನ ಎದೆಯೊಳಕ್ಕೆ ಇಳಿದುಹೋಗಿದೆಯೋ ಅದು ಮುಂದೆ ಬದುಕುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಪೋಸ್ಟ್ ಎಂಬುದು ನನ್ನ ಸಮೃದ್ಧ ಬಾಲ್ಯ ಹಾಗೂ ಮಿಂಚುಂಡೆಗಳ ಯೌವನ.
ಎರಡನೇ ಕ್ಲಾಸಿರಬಹುದೇನೋ, ಸ್ಕೂಲ್ನಲ್ಲಿ ಎಲ್ಲಾರೂ ಮನೆಯಿಂದ ನಾಕಾಣೆ ತನ್ನಿ, ಫಿಲಂಗೆ ಕರಕೊಂಡು ಹೋಗ್ತೀವಿ ಅಂದ್ರು. ನಾನೂ ಕಾಡಿಬೇಡಿ, ಸ್ಟ್ರೈಕ್ ಕೂತು ನಮ್ಮಪ್ಪನಿಂದ ನಾಕಾಣೆ ಸಂಪಾದಿಸಿದೆ.
ಫಿಲಂ ಯಾವುದು ಏನೂ ಗೊತ್ತಿರಲಿಲ್ಲ. ಸಾಲಾಗಿ ನಡಕೊಂಡು ಥಿಯೇಟರ್ ಮುಟ್ಟಿದ್ವಿ. ಸಿನಿಮಾ ಹೆಸರು ‘ಮೀನಾಳ ಕಾಗದ’. ಇಬ್ರು ತುಂಬಾ ಫ್ರೆಂಡ್ಸ್ ಇರ್ತಾರೆ. ಆಮೇಲೆ ಅಪ್ಪ ಅಮ್ಮನಿಗೆ ಟ್ರಾನ್ಸ್ಫರ್ ಆಗುತ್ತೆ, ದೂರದೂರಿಗೆ ಹೋಗ್ತಾರೆ. ಪುಟ್ಟ ಹುಡುಗರಿಗೆ ಗೆಳೆತನ ದೂರಾ ಆಗುತ್ತಲ್ಲ ಅಂತ ಕಣ್ಣೀರು.
ಒಂದು ದಿನ ಪೋಸ್ಟ್ ಮ್ಯಾನ್ ಸೈಕಲ್ ತುಳಿದುಕೊಂಡು ಬಂದು ಆ ಹುಡುಗನ ಕೈಗೆ ಒಂದು ಕಾಗದ ಕೊಡ್ತಾನೆ. ಅರೆ ಅದು ‘ಮೀನಾಳ ಕಾಗದ’.
ಆ ಹುಡುಗನಿಗೆ ಆಕಾಶವೇ ಸಿಕ್ತೇನೋ ಅನ್ನೋಷ್ಟು ಖುಷಿ ಆಗುತ್ತೆ. ಕಾಗದ ಕೈಲಿ ಹಿಡಕೊಂಡು ಆತ ಇದೇ ಜಗತ್ತು ತನ್ನ ತೆಕ್ಕೆಗೆ ಸಿಕ್ತೇನೋ ಅಂತ ಸಂಭ್ರಮಿಸೋ ರೀತಿ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.
ಬಹುಶಃ ಇದಕ್ಕೇ ಇರ್ಬೇಕು, ಆ ವಯಸ್ಸಲ್ಲೇ ಪೋಸ್ಟ್ ಅನ್ನೋದು ಸಂಭ್ರಮದ ವಿಷಯ ಅನಿಸ್ಬಿಟ್ಟಿತ್ತು. ಪೋಸ್ಟ್ ನವರು ಬರ್ತಾರೆ, ಕಾಗದ ಕೊಡ್ತಾರೆ ಎಷ್ಟು ಚೆನ್ನಾಗಿರುತ್ತೆ ಅಲ್ವ.
‘ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ, ಅದರಾಗ ಸುಖ ದುಃಖ ಎರಡೂ ತುಂಬೇತಿ’ ಅಂದಿದ್ದು ಆ ಧಾರವಾಡದ ಹೆಣ್ಣುಮಗಳು ಸುನಂದಾ ಬೆಳಗಾಂವಕರ. ‘ಕಜ್ಜಾಯ’ ಪ್ರಬಂಧ ಸಂಕಲನದಲ್ಲಿ
ಕಾಲೇಜು, ಕೆಂಪು ಮಣ್ಣು, ಅಮ್ಮ ಅಂತ ಬರೀತಾ ಯಾಕೋ ಗೊತ್ತಿಲ್ಲ ಈ ಮಾತನ್ನು ಬರ್ದಿದ್ದು. ಅರೆ! ಹೌದಲ್ಲ ಅನಿಸ್ತು.
ಕೆಂಪು ಪೋಸ್ಟ್ ಡಬ್ಬಿಯಲ್ಲಿ ಲಗ್ನಪತ್ರಿಕೇನೂ ಇರುತ್ತೆ, ತಿಥಿ ಕಾರ್ಡೂ ಇರುತ್ತೆ. ಆ ಪೋಸ್ಟ್ ಡಬ್ಬೀನಲ್ಲಿ ಅಣ್ಣ ಊರಿಗೆ ಬರೋ ವಿಷಯಾನೂ ಇರುತ್ತೆ, ಮನೆ ಪಾಲಾಗಿ ಹೋದ ಕಥೇನೂ ಇರುತ್ತೆ.
ಗಂಡ-ಹೆಂಡತಿ ಡೈವೋರ್ಸ್ ಆದದ್ದನ್ನು ಹೊತ್ತುಕೊಂಡಿರೋ ಡಬ್ಬಿ 25 ವರ್ಷದ ಸುಖ ದಾಂಪತ್ಯದ ಸಿಹಿ ಸುದ್ದಿ, ಪಾಸಾಗಿರೋ ಸುದ್ದಿ, ಫೇಲಾಗಿರೋ ಪತ್ರ ಎರಡೂ ಅಕ್ಕಪಕ್ಕ ಕೂತಿರುತ್ತೆ.
ಆ ಹುಡುಗಿಗೆ ಪ್ರೊಪೋಸ್ ಮಾಡಿ ಬರೆದ ಪತ್ರ, ಇನ್ನೊಂದು ಎರಡು ವರ್ಷ ಸುತ್ತಾಡಿ ಇನ್ನೇನು ಮದುವೆ ಆಗ್ಬೇಕು ಅನ್ನೋವಾಗ ಸಂಬಂಧಾನೇ ಕಿತ್ತುಹೋದ ದುಗುಡ ಎರಡೂ ಇರುತ್ತೆ ಅಕ್ಕಪಕ್ಕದಲ್ಲೇ.
ಜೀವನ ಅನ್ನೋದು ಒಂದು ಥರಾ ಯುಗಾದಿ ಇದ್ದಂಗೆ ಅಲ್ವಾ. ಅದೇ ಥರಾನೇ ಪೋಸ್ಟ್ ಡಬ್ಬಿಯಲ್ಲಿ ಕಹೀನೂ ಇದೆ, ಚಪ್ಪರಿಸಬಹುದಾದ ಸಿಹೀನೂ ಇದೆ. ಒಂದು ಥರದಲ್ಲಿ ಪೋಸ್ಟ್ ಡಬ್ಬಿ ಅನ್ನೋದು ಬದುಕಿನ ದಾರ್ಶನಿಕ.
ನನಗೆ ಈ ಪೋಸ್ಟ್ ಗೀಳು ಎಷ್ಟು ಅಂಟಿಕೊಳ್ತು ಅಂದ್ರೆ ಏನಾದ್ರೂ ಪೋಸ್ಟ್ ಬರ್ಲೇಬೇಕು ಅನ್ನೋ ಹುಚ್ಚು ಹಿಡೀತು.. ಅಣ್ಣನಿಗೆ ಬರುತ್ತೆ, ಅಪ್ಪನಿಗೆ ಬರುತ್ತೆ, ನನಗ್ಯಾಕೆ ಬರಲ್ಲ ಅಂತ.
ಏಳನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಅಂತ ಗೊತ್ತಾದಾಗ ನಾನು ಫಸ್ಟ್ ಕೇಳಿದ್ದೇ ಅದು ಹಾಲ್ ಟಿಕೇಟ್ ಪೋಸ್ಟ್ ನಲ್ಲಿ ಕಳಿಸ್ತಾರ ಅಂತ. ಅಷ್ಟು ಹುಚ್ಚಿತ್ತು.
ಹೈಸ್ಕೂಲ್ ಗೆ ದಾಟಿಕೊಂಡೆ. ಪೋಸ್ಟ್ ಹುಚ್ಚು ಇನ್ನೂ ಜಾಸ್ತಿ ಆಯ್ತು.
ಒಂದಿನಾ ಪೇಪರ್ ತಿರುವಿ ಹಾಕ್ತಿದ್ದಾಗ ‘ಸುವಾರ್ತೆಗಳು, ಯೇಸು ನಿಮಗಾಗಿ ಇದ್ದಾನೆ. ತಿಳಿಯಬೇಕಾದರೆ ಪೋಸ್ಟ್ ಬಾಕ್ಸ್ ನಂ….ಗೆ ಅಂಚೆ ಹಾಕಿ’ ಅಂತಿತ್ತು.
ದೂರಾಲೋಚನೆ ಮಾಡ್ದೆ. ನಾನೂ ಒಂದು ಪೋಸ್ಟ್ ಕಾರ್ಡ್ ಹಾಕಿದರೆ ಅವರು ಉತ್ತರ ಬರೀತಾರೆ ಅಲ್ವ ಅಂತ.
ಪೋಸ್ಟ್ ಕಾರ್ಡ್ ಗೆ ದುಡ್ಡೆಲ್ಲಿಂದ ತರೋದು. ಎರಡು ಇಡ್ಲಿಗೆ ಇಷ್ಟು, ಬಸ್ಗೆ ಇಷ್ಟು ಅಂತ ಕರೆಕ್ಟಾಗಿ ಲೆಕ್ಕಹಾಕಿ ದುಡ್ಡು ಕೊಡ್ತಿದ್ರು. ಅಂತಾದ್ರಲ್ಲಿ ಪೋಸ್ಟ್ ಕಾರ್ಡ್ ಗೆ ಎಲ್ಲಿ ಉಳಿಸೋದು. ಅವಾಗ್ಲೇ ಅಪ್ಪನ ಜೋಬಿಗೆ ಕೈಹಾಕೋ ವಿದ್ಯೆ ಗೊತ್ತಾಗಿತ್ತು. 5 ಪೈಸ ಕಾರ್ಡ್ ಗಾಗಿ ನಾಲ್ಕುದಿನ ನಿದ್ದೆ ಮಾಡಿಲ್ಲ.
ಓಹ್! ಅಂತೂ ಬಂತಲ್ಲ ಯೇಸುವಿನ ಸುವಾರ್ತೆ. ನಾನೀಗ ಯೇಸು ವಿದ್ಯೆ ಕಲಿಯುವ ಕರೆಸ್ಪಾಂಡೆಂಟ್ ಸ್ಟೂಡೆಂಟ್. ಅವರು ಪಾಠ ಕಳಿಸ್ತಾರೆ. ಕ್ವಶ್ಚನ್ ಪೇಪರ್ ಕಳಿಸ್ತಾರೆ. ಪಾಸಾದ್ರೆ ಸರ್ಟಿಫಿಕೇಟ್. ನಾನೂ ಯಾವ ಸುವಾರ್ತೆ ಕಲಿತ್ನೋ ನನಗಂತೂ ಗೊತ್ತಿಲ್ಲ. ನನ್ನ ದೋಸ್ತ್ ಗಳಿಗೂ ಸಹಾ ನಾನು ಸುವಾರ್ತೆ ಕಲಿತಿದ್ದೀನಿ ಅನ್ನೋ ಗಂಧಗಾಳಿ ಸಿಕ್ಕಿಲ್ಲ. ಅದೂ ಯೇಸೂ ಆದ್ರೂ ಯಾರಾದ್ರೂ ನನಗೆ ಪೋಸ್ಟ್ ನಲ್ಲಿ ಬರುತ್ತೆ ಅನ್ನೋದಷ್ಟೆ ಮುಖ್ಯ ಆಗಿದ್ದದ್ದು.
ಚಡ್ಡಿ ಏರಿಸ್ಕಂಡು ನೆಲದ ಮೇಲೆ ಕೂತುಕೊಳ್ತಾ ಇರೋವಾಗ ಮೇಷ್ಟ್ರು ಬೆತ್ತ ಕೈಯಲ್ಲಿ ಹಿಡಿದು ‘ಅಂಚೆಯ ಅಣ್ಣ ಬಂದಿಹನಣ್ಣ ಅಂಚೆಯ ಹಂಚಲು ಮನೆ ಮನೆಗೆ…’ ಅಂತ ಪದ್ಯ ಹೇಳಿಕೊಡ್ತಾ ಇದ್ರಲ್ಲಾ ಅವಾಗ ಈ ಪೋಸ್ಟ್ ಮ್ಯಾನ್ ನನ್ನ ಒಳಗಡೆ ಇಳಿದುಬಿಟ್ಟ.
ಹೈಸ್ಕೂಲ್ ನಲ್ಲಿ ನನಗೆ ಸುವಾರ್ತೆ ಕೇಳಿ ಕೇಳಿ ಸುಸ್ತಾಗೋ ಕಾಲ ಬಂತಲ್ಲಾ, ಅವಾಗ ನನ್ನ ಫ್ರೆಂಡ್ಸ್ ಇನ್ನೊಂದು ದಾರಿ ತೋರಿಸ್ಕೊಟ್ರು. ಬೇರೆ ದೇಶದ ಎಂಬಸೀಗೆ ಪತ್ರ ಬರೆಯೋದು. ‘ಐ ವಾಂಟ್ ಟು ನೋ ಮೋರ್ ಎಬೌಟ್ ಯುವರ್ ಕಂಟ್ರಿ’ ಅಂತ.
ವಾಹ್! ಎಷ್ಟು ಚನ್ನಾಗಿರೋ ಪೋಸ್ಟ್ ಬರೋದು ಗೊತ್ತಾ. ಕಲರ್ ಕಲರ್ ಬ್ರೋಷರ್ ಗಳು, ನಮ್ಮ ಅಡ್ರೆಸ್ ಕೂಡಾ ನೀಟಾಗಿ ಟೈಪ್ ಮಾಡಿರೋರು. ಅದು ಬರ್ತಾ ಇದ್ದ ಹಾಗೆ ನಮ್ಮನೇಲಿ ನನ್ನ ಸ್ಟ್ಯಾಂಡರ್ಡೂ ಜಾಸ್ತಿ ಆಗ್ತಾಹೋಯ್ತು.
ಇರೋಬರೋ ದೇಶದ ರಾಯಭಾರಿ ಕಛೇರಿಗೆಲ್ಲಾ ಬರ್ದೆ. ಐ ವಾಂಟ್ ಟು ನೋ, ಐ ವಾಂಟು ನೋ…ಅಂತ.
ಒಂದಿನಾ ಹೀಗೆ ಒಂದು ಪೋಸ್ಟ್ ಆಫೀಸ್ ಮುಂದೆ ಹೋಗ್ತಾ ಇದ್ದೆ, ಶಾಕ್ ಆಗೋಯ್ತು, ಅದು ದೊಡ್ಡ ಪೋಸ್ಟ್ ಆಫೀಸು, ಎದುರುಗಡೆ ಕೆಂಪು ಡಬ್ಬ ಮಾತ್ರ ಅಲ್ಲ, ಹಳದಿ, ಹಸಿರು ಬಣ್ಣದ ಡಬ್ಬಾನೂ ಇತ್ತು.
ಯಾಕಪ್ಪಾ ಅಂತ ಹತ್ತಿರ ಹೋಗಿ ನೋಡಿದ್ರೆ ನಿಮ್ಮ ಊರಿಗೆ ಆದ್ರೆ ಈ ಡಬ್ಬದಲ್ಲಿ ಹಾಕಿ, ಡೆಲ್ಲಿಗಾದ್ರೆ ಈ ಡಬ್ಬದಲ್ಲಿ, ಮುಂಬೈಗಾದ್ರೆ ಇಲ್ಲಾಕಿ ಅಂತ ಬರ್ದಿತ್ತು.
ತುಂಬಾ ಬೇಜಾರಾಗಿ ಹೋಯ್ತು. ನನಗೆ ಪೋಸ್ಟ್ ಬಾಕ್ಸ್ ಅಂದ್ರೆ ಅದು ಕೆಂಪು ಪೋಸ್ಟ್ ಬಾಕ್ಸೇ, ಜೀವನ ಅಂದ್ರೆ ಹಳದಿ ಪೋಸ್ಟ್ ಬಾಕ್ಸ್ ಇದ್ದಹಾಗೆ, ಜೀವನ ಅಂದ್ರೆ ಹಸಿರು ಪೋಸ್ಟ್ ಬಾಕ್ಸ್ ಇದ್ದಹಾಗೆ ಅಂತ ಬರಿಯೋಕೆ ಆಗುತ್ತಾ.
ಅದ್ರಲ್ಲೂ ಪೋಸ್ಟ್ ಬಾಕ್ಸ್ ಅಂದ್ರೆ ಬರೀ ಸುಖಾ ದುಃಖಾ ಅಲ್ಲ. ಅದು ಎಲ್ಲಾ ಊರುಗಳನ್ನೂ ಹೊಟ್ಟೆಯಲಿಟ್ಟುಕೊಂಡು ಕೂತಿರಬೇಕು. ಡೆಲ್ಲಿ ಬೇರೆ, ನೀವು ಬೇರೆ ಅಂತ ಹೇಗೆ ಹೇಳೋಕೆ ಸಾಧ್ಯ.
ಒಂದು ಟೈಮ್ ಬಂತು. ಒಂದೇ ಒಂದು ಪೋಸ್ಟ್ ಕಾರ್ಡ್ ಗಾಗಿ ಹಗಲೂ ರಾತ್ರಿ ನಿದ್ದೆ ಕಳೆದುಕೊಂಡಿದ್ದ ನನಗೆ ಈಗ ಕಂತೆಗಟ್ಲೆ ಪೋಸ್ಟ್ ಬರೋ ಕಾಲ ಬಂತು.
ನಾನೂ ಒಂದು ಪೋಸ್ಟ್ ಬಾಕ್ಸ್ ಬಾಡಿಗೆಗೆ ತಗೊಂಡೆ. ಪೋಸ್ಟ್ ಆಫೀಸ್ ನೋರು ಒಂದು ಕೀ ಕೊಡ್ತಾರೆ. ನಾವೇ ಹೋಗಿ ನಮ್ಮ ನಂಬರ್ ಡಬ್ಬಿ ತೆಗೆದ್ರೆ ಎಲ್ಲಾ ಪೋಸ್ಟ್ ಅಲ್ಲಿರೋದು. ಒಳ್ಳೆ ಐಡಿಯಾ ಅಂದ್ಕೊಂಡು ಅದನ್ನ ತಗೊಂಡೆ.
ಆದ್ರೆ ಎರಡೇ ದಿನಕ್ಕೆ ನನಗೆ ಗೊತ್ತಾಗಿ ಹೋಯಿತು. ಅಮ್ಮ ಮಾಡಿದ ಅಡಿಗೇನಲ್ಲಿ ಅಮ್ಮನ ಟಚ್ ಇರುತ್ತಲ್ಲ, ಹಾಗೇ ಪೋಸ್ಟ್ ಅಂದ್ರೆ ಬರೀ ಪೋಸ್ಟ್ ಅಲ್ಲ ಅದ್ರಲ್ಲಿ ಪೋಸ್ಟ್ ಮ್ಯಾನ್ ಟಚ್ ಕೂಡಾ ಇರುತ್ತೆ ಅಂತ.
ಬೀದಿ ಕೊನೇನಲ್ಲಿ ಪೋಸ್ಟ್ ಮ್ಯಾನ್ ಕಾಣಿಸ್ಕೊಳ್ಳಬೇಕು. ನಿಧಾನವಾಗಿ ಮನೆ ಮನೇ ಬಾಗಿಲು ಬಡೀತಾ ಬರ್ಬೇಕು. ನಮ್ಮನೇ ಚಿಲಕಾನೂ ಕಿಲಕಿಲ ಅನ್ಬೇಕು, ಅವಾಗ್ಲೇ ಅದಕ್ಕೆ ಪೋಸ್ಟ್ ಅನ್ನೋದು ಅಂತ ಗೊತ್ತಾಗೋಯ್ತು.
ಪತ್ರ ಬರೆಯೋರಿಲ್ಲ ಅಕ್ಷರದ ಆಟ ಗೊತ್ತಾಗಲ್ಲ, ‘ಓಂ’ ‘ಶ್ರೀ’ ಕಾಣೋದಿಲ್ಲ, ಶುಭಾರ್ಶಿವಾದ ಹಾರೈಕೆ ಇರೋದಿಲ. ‘ಚಿರಂಜೀವಿಗೆ’ ಅನ್ನೋ ಒಕ್ಕಣೆ ಇಲ್ವೇ ಇಲ್ಲ ಅಂತ ನೊಂದ್ಕೊಳ್ತಾರೆ.
ಆದ್ರೆ ನನಗೆ ಇದೆಲ್ಲಾ ಹೋಯ್ತಲ್ಲಾ ಅನಿಸಲ್ಲ. ಅದಕ್ಕಿಂತಲೂ ನನ್ನ ಹಳೆಯ ಬದುಕಿಗೆ ಹೋಗೋದಿಕ್ಕೆ ಇದ್ದ ಒಂದೇ ಒಂದು ದೋಣೀನೂ ಕಾಣೆ ಆಗೋಯ್ತಲ್ಲಾ ಅನಿಸುತ್ತೆ.
—-
Art Courtesy: https://www.facebook.com/DishaChauhanArt/