Wednesday, January 15, 2025
Google search engine
Homeಸಾಹಿತ್ಯ ಸಂವಾದಅಂತರಾಳಓದುಗರ ಕೈಗೆ ಲೇಖನಿ...

ಓದುಗರ ಕೈಗೆ ಲೇಖನಿ…

ಜಿ ಎನ್ ಮೋಹನ್


ಓದುಗರ ಕೈಗೆ ಲೇಖನಿ–

ಜಿ.ಆರ್. ದೃಢ ಕಂಠದಲ್ಲಿ ಹೇಳಿದ ಮಾತಿದು.

ಮಾಧ್ಯಮಗಳ ಜಗತ್ತಿನಲ್ಲಿ ಈಗ ಹೊಸ ಚಡಪಡಿಕೆ ಆರಂಭವಾಗಿದೆ. ಎಷ್ಟು ಪತ್ರಿಕೆ ತಿರುವಿ ಹಾಕಿದರೂ, ಎಷ್ಟು ಚಾನೆಲ್ ಗಳನ್ನು ಮಗುಚಿದರೂ ತಮಗೆ ಬೇಕಾದ ಸುದ್ದಿ ಸಿಗುತ್ತಿಲ್ಲ ಎಂಬ ಚಡಪಡಿಕೆ ಓದುಗನದ್ದು.

ಆಕಾಶದಲ್ಲಿ ತೇಲಿ ಚಂದ್ರನ ಮೇಲೆ ನೀರಿದೆಯೇ ಎಂದು ಪರೀಕ್ಷಿಸುತ್ತಿರುವ ನಾಸಾ ವಿಜ್ಞಾನಿಗಳ ಶೋಧನೆಗಿಂತ ಹಾರೋಗೇರಿಯ ನೆಲದಲ್ಲಿ ಇಷ್ಟು ನೀರು ಹಿಂಗಿದ್ದು ಹೇಗೆ ಎಂಬುದು ಗೊತ್ತಾಗಬೇಕು..

ಹಿಲ್ಲರಿ ಕ್ಲಿಂಟನ್ ಬರೆದ ಪುಸ್ತಕಕ್ಕಿಂತಲೂ ಪಿ. ಸಾಯಿನಾಥ್ ಭಾರತದ ಹಳ್ಳಿಗಳನ್ನು ಕದಡುತ್ತಿರುವ ಸಮಸ್ಯೆಗಳ ಬಗ್ಗೆ ಬರೆದ ಪುಸ್ತಕ ಗೊತ್ತಾಗಬೇಕು.

..ಸಯಾಮಿ ಅವಳಿಗಳ ತಲೆ ಬೇರ್ಪಡಿಸಲು ನಡೆದ ಶಸ್ತ್ರಚಿಕಿತ್ಸೆಗಿಂತ ಆಸ್ಪತ್ರೆಯ ಮೆಟ್ಟಿಲು ಹತ್ತಲಾಗದೆ ಕಣ್ಣು ಮುಚ್ಚುತ್ತಿರುವ ಎಳೆಯ ಕಂದಮ್ಮಗಳ ಕಥೆ ಬೇಕು, ಡೇವಿಡ್ ಬೆಕಮ್ ಫುಟ್ಬಾಲ್ ಒದೆಯುವುದನ್ನು ನೋಡಲು ಸಾಗರದಷ್ಟು ಜನ ಸೇರಿದ್ದರ ಬಗ್ಗೆಗಿಂತ ಬಿಹಾರದಲ್ಲಿ ಕೂಲಿ ಕೆಲಸದ ಯುವಕರು ಕನಸನ್ನೇ ಬಂಡವಾಳ ಮಾಡಿಟ್ಟುಕೊಂಡು ಕಟ್ಟಿದ ತಂಡದ ಆಟ ನೋಡಲು ಜನರೇ ಇಲ್ಲದಿರುವ ನಿಟ್ಟುಸಿರು ಬೇಕು.

ಬಾಹ್ಯಾಕಾಶ ತಂತ್ರಜ್ಞಾನ ಬಳಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶಕ್ಕೆ ನಡೆಯುವ ಶಸ್ತ್ರ ಚಿಕಿತ್ಸೆಗಿಂತ ಉತ್ತರ ಕನ್ನಡದ ಮಂಚಿಕೇರಿಯಲ್ಲಿ ಇದ್ದ ಕೂಲಿ ಹಣವನ್ನೆಲ್ಲಾ ಕೊಟ್ಟರೂ ನಕಲಿ ಔಷಧಿ ನೀಡುತ್ತಿರುವ ಖೊಟ್ಟಿ ವೈದ್ಯರ ಕರಾಮತ್ತು ಗೊತ್ತಾಗಬೇಕು.

ಮಾಧ್ಯಮ ಒಂದು ವ್ಯಾಪಾರವಾಗಿರುವಾಗ ನಿಟ್ಟುಸಿರುಗಳ ಲೆಕ್ಕ ಹಾಕಲು ಪುರುಸೊತ್ತಾದರೂ ಎಲ್ಲಿ?

ದೆಹಲಿಯಿಂದ ಹಿಡಿದು ನಮ್ಮ ಊರ ಅಂಗಳದಲ್ಲಿ ಬೆಡಗಿನಿಂದ ಹೆಜ್ಜೆ ಹಾಕುವ ಮುಗುಳ್ನಗೆಯ ಸುಂದರಿಯರ ಫ್ಯಾಷನ್ ಷೋ ಹಾಗೂ ನಿಟ್ಟುಸಿರುಗಳ ಮಧ್ಯೆ ಆಯ್ಕೆ ಬಂದಾಗ ಐದು ಕಾಲಂ ಫೋಟೋ ಆಗುವ, ದಿನಗಟ್ಟಲೇ ಬರೆದರೂ ಮುಗಿಯದ ಸುದ್ದಿಯ ಅರ್ಹತೆ ಇರುವುದು ಆ ಮುಗುಳ್ನಗೆಯ ಒಡತಿಯರಿಗೆ.

ಹಾಗಾಗಿಯೇ ಜಿ. ಆರ್. ದೃಢವಾಗಿ ಹೇಳಿದ್ದು-

‘ಓದುಗರ ಕೈಗೆ ಲೇಖನಿ.’

‘ನಮ್ಮೊಡನಿದ್ದೂ ನಮ್ಮಂತಾಗದ’ ಮಾಧ್ಯಮಗಳ ಮಧ್ಯೆ ನಮ್ಮನ್ನು ನಾವೇ ಹುಡುಕಿಕೊಳ್ಳುವ ಪ್ರಯತ್ನ.

ಭಾರತದ ಮಾಧ್ಯಮಗಳ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಬ್ರಿಟನ್-ಅಮೆರಿಕಾದ ಕಣ್ಣಿನಿಂದ ಸುದ್ದಿಯನ್ನು ನೋಡುವ ದಿನಗಳು ಇನ್ನೂ ಮುಗಿದಿಲ್ಲ.

ಈ ಮಧ್ಯೆಯೇ ಬಂದ ಜಾಗತೀಕರಣದ ಅಲೆ ಸುದ್ದಿಯ ಅರ್ಥವನ್ನೇ ಬದಲಿಸಿದೆ. ಮಾತ್ರವಲ್ಲ, ಸುದ್ದಿಗಳನ್ನು ವಿದೇಶೀ ಕಣ್ಣಿನಿಂದ ನೋಡುವ ಪ್ರವೃತ್ತಿಗೆ ಇನ್ನಷ್ಟು ಮಣೆ ಹಾಕಿದೆ.

ಆದ್ದರಿಂದಲೇ ಓದುತ್ತಿರುವ ಸುದ್ದಿಗೂ, ಓದಬೇಕಾಗಿದ್ದ ಸುದ್ದಿಗೂ ವಿಪರೀತ ಅಂತರ.

ಭಾರತದ ಬಡತನ, ಹಸಿವಿನ ಸಾವುಗಳು, ಇದಕ್ಕೆ ಬೇಕಾದ ಪರಿಹಾರ, ಎಲ್ಲರೂ ಬದುಕಲು ಅವಕಾಶವಿರುವ ದೇಶ ಕಟ್ಟುವ ಚಿಂತನೆಗಳು ಈಗ ಬದಲಾದ ವ್ಯಾಕರಣದಿಂದಾಗಿ ಮರೆಯಾಗಿ ಹೋಗಿವೆ.

ಇಂತಹ ಸಂದರ್ಭದಲ್ಲಿಯೇ ಜಿ. ಆರ್. ಓದುಗರ ಕೈಗೇ ಲೇಖನಿ ನಿಡುವ ಮಾತುಗಳನ್ನು ಮುಂದಿಟ್ಟಿದ್ದಾರೆ.

ಓದುಗನಿಗೆ ಬೇಕಾದದ್ದನ್ನು ಓದುಗನೇ ಬರೆಯುವಂತಾದರೆ ಎಂಬುದು ಈ ಕಲ್ಪನೆಯ ಹಿಂದಿರುವ ಆಶಯ. ಬೇಕಾದ ಸುದ್ದಿಗಳೇ ಇಲ್ಲದಿರುವ ದಿನಗಳಲ್ಲಿ ಬೇಕಾದ ಸುದ್ದಿಗಳನ್ನು ಹುಡುಕುವ ಪ್ರಯತ್ನ.

ಪತ್ರಿಕೆ ಎನ್ನುವುದು ಯಾರೋ ರೂಪಿಸಬೇಕಾದದ್ದು, ಸುದ್ದಿ ಎನ್ನುವುದು ಇನ್ನಾರೋ ನಿರ್ಧರಿಸಬೇಕಾದದ್ದು ಎನ್ನುವ ದಿನಗಳಿಗೆ ಕೊನೆ ಹಾಡುವ ನಿರ್ಧಾರ ಇದರ ಹಿಂದಿದೆ.

ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಳ್ಳಬೇಕಾದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಬೇಕಾದ ಸುದ್ದಿಗಳು ಸಿಗದ ಈ ಚಡಪಡಿಕೆಯ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಬಹುಶಃ ಓದುಗನ ಕೈಗೆ ಲೇಖನಿ ನೀಡುವ ಪ್ರಯತ್ನ ಪರ್ಯಾಯ ಮಾಧ್ಯಮವನ್ನು ಹುಡುಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.

ಯಾವುದೇ ಪತ್ರಿಕೆಯ ‘ವಾಚಕರ ವಾಣಿ’ ವಿಭಾಗಗಳು ಜನರ ಸಂಪಾದಕೀಯ ಎಂದೇ ಹೆಸರಾಗಿದೆ. ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸುವ ಓದುಗರು ತೆರೆದಿಡುವ ಕಣ್ಣೋಟ ಪತ್ರಿಕೆಯ ಸುದ್ದಿಗಳನ್ನೂ ಮೀರಿ ನಿಲ್ಲುವ ಗುಣಗಳನ್ನು ಹೊಂದಿರುತ್ತದೆ. ಸುದ್ದಿಗಳ ಅನೇಕ ವೇಳೆ ಮುಚ್ಚಿಡುವ, ಬಿಚ್ಚಿಡುತ್ತಿದ್ದೇವೆ ಎನ್ನುವ ಭ್ರಮೆ ಹುಟ್ಟಿಸುತ್ತಲೇ ಬೇಕಾದ್ದನ್ನು ಮಾತ್ರ ಹೇಳುವ, ಎಷ್ಟೋ ವೇಳೆ ವಶೀಲಿಬಾಜಿ ನಡೆಸುವಾಗ ಈ ಜನತೆಯ ಸಂಪಾದಕೀಯಗಳು ಸಮಾಜದ ಸ್ಪಂದನವನ್ನು ನೀಡುತ್ತವೆ.

‘ಸಮುದಾಯ’ ಸಂಘಟನೆ ಹೊಸ ಮೌಲ್ಯಗಳತ್ತ ಬೀದಿನಾಟಕಗಳ ಜಾಥಾ ಹಮ್ಮಿಕೊಂಡಾಗ ವಾಚಕರವಾಣಿಗಳು ಯುದ್ಧರಂಗವಾಗಿತ್ತು. ಪರ ವಿರೋಧಗಳ ಸುರಿಮಳೆ ಯಾವುದನ್ನೂ ಮುಚ್ಚಿಡದೆ ಜನರಿಗೆ ದನಿ ನೀಡಿದ್ದವು.

ಈ ಕಾರಣಕ್ಕಾಗಿಯೇ ಓದುಗ ತನಗೆ ದೃಷ್ಟಿಕೋನವನ್ನು ರೂಪಿಸಿಕೊಳ್ಳುವ, ತನಗೆ ಬೇಕಾದ ಮಾರ್ಗವನ್ನು ಆರಿಸಿಕೊಳ್ಳುವ ಅವಕಾಶ ಸೃಷ್ಟಿಯಾಗುತ್ತಿತ್ತು.

ಈಗ ಸುದ್ದಿ ಅತ್ಯುತ್ತಮ ರೀತಿಯಲ್ಲಿ ಪ್ಯಾಕ್ ಮಾಡಲ್ಪಟ್ಟ ಒಂದು ಬಿಕರಿಗಿರುವ ಉತ್ಪನ್ನ ಎನ್ನುವ ದಿನಗಳು ಬಂದಿವೆ. ಆದ್ದರಿಂದಲೇ ಓದುಗ ತನಗೆ ಅನ್ನಿಸಿದ್ದೆಲ್ಲವನ್ನೂ ಹೇಳುವ, ತನಗೆ ಅನ್ನಿಸಿದ್ದಕ್ಕೆ ನಾಜೂಕಿನ ಯಾವುದೇ ಪ್ಯಾಕ್ ಹೊದಿಸದೆ ಹೇಳುವುದಕ್ಕೆ ಪ್ರಾಮುಖ್ಯತೆ ಬಂದಿವೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿಯ ಕೊಂಚಾವರಂ ತಾಂಡಾದಲ್ಲಿ ಲಂಬಾಣಿಗಳು ಮಕ್ಕಳನ್ನು ಮಾರಾಟ ಮಾಡಬೇಕಾಗಿ ಬಂದದ್ದು ಏಕೆ? ಕಲಬುರ್ಗಿಯಲ್ಲಿ ಅಪೌಷ್ಟಿಕತೆಯಿಂದ ಸಾವು ಬರಲು ಕಾರಣರಾದವರು ಯಾರು? ಕೂಲಿಗಾಗಿ ಕಾಳು ನೀಡಬೇಕಾಗಿದ್ದ ಸರ್ಕಾರ ಯಂತ್ರಗಳನ್ನು ಏಕೆ ಕಾಮಗಾರಿಗಳಿಗೆ ಕಳಿಸುತ್ತಿದೆ? ಬರ ಬರಲಿ ಎಂದು ಹಾರೈಸುವವರ ಸಂತಸದ ಕಾರಣ ಏನು?

ಜನರು ಲೇಖನಿ ಕೈಗೆತ್ತಿಕೊಂಡಾಗ ಮಾತ್ರ ಒಳ ಸತ್ಯಗಳು ಹೊರಬರಲು ಸಾಧ್ಯ. ಕೆಂಡದ ಮೇಲೆ ನಡೆದವರಿಗೆ ಮಾತ್ರವೇ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ.

ಜಿ.ಆರ್. ಮಂಡಿಸಿದ ಈ ಓದುಗನೇ ಬರಹಗಾರನಾಗುವ ಆಲೋಚನೆ ಪತ್ರಿಕೋದ್ಯಮದ ಅನೇಕ ಸೂತ್ರಗಳನ್ನು ಕದಲಿಸಲು ಸಾಧ್ಯ.

ಇದಕ್ಕೆ ಕೃಷಿಕರು ತಮ್ಮ ಕೈಗೆ ಲೇಖನಿ ಎತ್ತಿಕೊಂಡ ಉದಾಹರಣೆಯೂ ನಮ್ಮೊಂದಿಗಿದೆ.
ಅಡಿಕೆಯ ಬೆಲೆ ಕುಸಿಯಲು, ಪಾತಾಳ ಕಾಣಲು ಆರಂಭವಾದಾಗ ತೋಟಗಳಲ್ಲಿ ದಿಕ್ಕು ಕಾಣದೆ ನಿಂತ ಹಲವರು ‘ಕೃಷಿಕರ ಕೈಗೆ ಲೇಖನಿ’ ನೀಡುವ ಕನಸನ್ನು ಕಂಡಿದ್ದರು.

ಬೀಳದ ಮಳೆ, ಏಳದ ಬೆಲೆ, ದಿಕ್ಕೆಟ್ಟ ಬದುಕುಗಳು ಎಲ್ಲ ಕೃಷಿಕರನ್ನೂ ಕದಡುತ್ತಿರುವಾಗ ಪತ್ರಿಕೆಗಳು ಎಂದಿನಂತೆ ರಾಸಾಯನಿಕ ಔಷಧಿಗಳನ್ನು ಎಷ್ಟು ಸಿಂಪಡಿಸಬೇಕು, ಡಾಲರ್ ಗಳ ಮಳೆಯೇ ಸುರಿಸಬೇಕಾದರೆ ಯಾವ ಬೆಳೆ ತೆಗೆಯಬೇಕು, ತಾಳೆ ಬೆಳೆದರೆ ರೈತನ ಬದುಕು ಹೇಗೆ ಬಂಗಾರವಾಗುತ್ತದೆ ಎಂಬುದರ ಪಾಠ ಮಾಡುತ್ತಿದ್ದವು.

ಪ್ರಯೋಗಾಲಯದಲ್ಲಿ ಮಾಡಿದ ಸೂತ್ರಗಳು ರೈತನ ಅಂಗಳದಲ್ಲಿ ಹೊರಳಾಡುತ್ತಿದ್ದ ವಾಸ್ತವವೇ ಪತ್ರಿಕೆಗಳಿಗೆ ತಿಳಿದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮಾಡಿದ ಚಿಂತನೆ ಇಂದು ದೊಡ್ಡ ಆಂದೋಲನ.

ನೆಲದಲ್ಲಿ ಕಳೆ ಕಿತ್ತ, ಮಣ್ಣು ಅಗೆದ, ಸಸಿ ನೆಟ್ಟ, ರಾಸಾಯನಿಕ ಸಿಂಪಡಿಸಿ ತಲೆ ಮೇಲೆ ಕೈ ಹೊತ್ತ ಕೃಷಿಕರೇ ಲೇಖನಿ ಕೈಗೆತ್ತಿಕೊಂಡರು. ಒಂದು ಪ್ರಶ್ನೆ, ಹಲವು ಪ್ರಶ್ನೆ, ಹಲಹಲವು ಪ್ರಶ್ನೆಗಳನ್ನು ಕೇಳುತ್ತಾ ಕೇಳಿಕೊಳ್ಳುತ್ತಾ, ಬರೆಯುತ್ತಾ ಹೋದರು.

ಮಾಧ್ಯಮಗಳ ಮನಸ್ಸನ್ನು ಬದಲಿಸುವ, ಮಾಧ್ಯಮಗಳನ್ನು ತಿದ್ದುವ, ಅವರ ವ್ಯಾಕರಣಗಳನ್ನು ಜನಪರವಾಗಿ ರೂಪಿಸುವ ಕೆಲಸ ಓದುಗರೇ ಲೇಖನಿ ಕೈಗೆತ್ತಿಕೊಳ್ಳುವ ಮೂಲಕ ಆರಂಭವಾಗುತ್ತದೆ.

ಮಾಧ್ಯಮಗಳನ್ನು ವಿಮರ್ಶಿಸುವ ಪರಿಪಾಠ ಇಲ್ಲದ ಕಾರಣದಿಂದಲೇ ಮಾಧ್ಯಮಗಳು ಇಂದು ತಮಗೆ ಬೇಕಾದ್ದನ್ನು ತಿಳಿಸುವ ಹಂತದಲ್ಲಿದೆ.

ಇರಾಕ್ ಯುದ್ಧವಾದರೆ ಅಮೆರಿಕಾಗೆ ಬೇಕಾದ ದೃಷ್ಟಿಕೋನ ತಿಳಿಸಲು ಸೇನೆಯ ತುಕಡಿಯೊಂದಿಗೆ ಸಾಗಲು ಮಾಧ್ಯಮಗಳು ಸಿದ್ಧವಾಗಿದ್ದು ಮಾಧ್ಯಮವನ್ನು ಪ್ರಶ್ನಿಸುವ ಮನಸ್ಸು ಇಲ್ಲದ ಕಾರಣ.

ಕೋಮುವಾದದ ಬೆಂಕಿ ಹರಡುತ್ತಾ ಹೋಗಿದ್ದರಲ್ಲಿ ಸ್ವಲ್ಪ ಪಾಲು ಮಾಧ್ಯಮಗಳನ್ನು ಪ್ರಶ್ನಿಸದ ಮನಸ್ಸಿನಲ್ಲಿಯೂ ಇದೆ.

ಪತ್ರಿಕೆಗಳು ಫ್ಯಾಷನ್ ಷೋ ಬೆನ್ನು ಹತ್ತುವುದರಲ್ಲಿ, ಜೀವನದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುವ ಮೆರವಣಿಗೆಯನ್ನು ನಿರ್ಲಕ್ಷಿಸುವುದರಲ್ಲಿ, ಐಟಿ ಕಂಪನಿಗಳನ್ನು ವಿಜೃಂಬಿಸುವುದರಲ್ಲಿ, ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿಬಿಡಿ ಎಂದು ಭೋದಿಸುವುದರಲ್ಲಿ, ಗ್ರಾಮೀಣ ಕೃಪಾಂಕ ಮಾರಕ ಎಂದು ಬಿತ್ತುವುದರ ಹಿಂದೆ ಮಾಧ್ಯಮಗಳನ್ನು ಪ್ರಶ್ನಿಸದ ಮನಸ್ಸುಗಳಿವೆ.

ಓದುಗ ಈ ಪ್ರಶ್ನೆಗಳನ್ನು ತಾನೇ ಒಡ್ಡಿಕೊಳ್ಳುತ್ತಾ, ಬರೆಯುತ್ತಾ ಹೋದಂತೆ ದಾರಿಗಳು ಸ್ಪಷ್ಟವಾಗಲಿವೆ. ಕತ್ತಲಿನ ಕೋಣೆಯಿಂದ ಬೆಳಕಿಗೆ ದಾರಿಗಳು ಹುಟ್ಟಿಕೊಳ್ಳಲಿವೆ.
—-

‘ಜಿ ಆರ್’ ಎಂದೇ ಖ್ಯಾತರಾದ ಜಿ ರಾಮಕೃಷ್ಣ ನವಕರ್ನಾಟಕ ಪ್ರಕಾಶನ ಹೊರ ತರುತ್ತಿರುವ ‘ಹೊಸತು‘ ಮಾಸಿಕ ಪತ್ರಿಕೆಯ ಗೌರವ ಸಂಪಾದಕರೂ ಹೌದು.

ನಾನು ಮಂಗಳೂರಿನಲ್ಲಿ ‘ಪ್ರಜಾವಾಣಿ’ಯ ವರದಿಗಾರನಾಗಿದ್ದಾಗ ‘ಹೊಸತು’ ಪತ್ರಿಕೆಯ ವಾರ್ಷಿಕೋತ್ಸವವನ್ನು ಅಲ್ಲಿ ಹಮ್ಮಿಕೊಳ್ಳಲಾಯಿತು.

ಜಿ ಆರ್ ಮಾಡಿದ ಭಾಷಣ ನನ್ನನ್ನು ಇನ್ನಷ್ಟು ಮಾಧ್ಯಮದ ಬಗ್ಗೆ ಯೋಚಿಸಲು ಕಾರಣವಾಯಿತು. ಆ ವೇಳೆಗಾಗಲೇ ಮಾಧ್ಯಮದ ಸೂತ್ರಗಳು ಬದಲಾಗಬೇಕಾದ ಅನಿವಾರ್ಯತೆಯನ್ನು ಮನಗಾಣುತ್ತಿದ್ದ ನಾನು ಜಿ ಆರ್ ಮಾತಿನಿಂದ ಪ್ರೇರಿತನಾಗಿ ಬರೆದ ಲೇಖನ ಇದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?