Publicstory
ತುರುವೇಕೆರೆ: ಮಕ್ಕಳ ಶೈಕ್ಷಣಿಕ ಹಿತದೃಷ್ಟಯಿಂದ 2016 ರಿಂದ ಇಲ್ಲಿಯ ವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಶೀಘ್ರವೇ ನೇಮಿಸಲು ಅವಕಾಶ ಕಲ್ಪಿಸಬೇಕೆಂದು ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ರಾಜ್ಯಾಧ್ಯಕ್ಷ ವೈ.ಎಚ್.ಹುಚ್ಚಯ್ಯನವರು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಿನ ಅನುದಾನಿತ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು
ರಾಜ್ಯದಾದ್ಯಂತ ಸುಮಾರು ಹತ್ತು ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದುವರೆಗೆ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳೂ ಸಹ ಶಿಕ್ಷಕರನ್ನು ನೇಮಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಬಂದಿವೆ ಎಂದು ಟೀಕಿಸಿದರು.
ಅನುದಾನಿತ ಶಾಲೆಗಳಿಗೆ ಬಡವರು, ಕೂಲಿಕಾರ್ಮಿಕರ ಮಕ್ಕಳೇ ಜೀವಾಳ. ಆದರೆ ವಿಷಯ ಶಿಕ್ಷಕರುಗಳಿಲ್ಲದೆ ಅವರ ಭವಿಷ್ಯ ಹಾಳಾಗುತ್ತಿದೆ. ಮೊದಲೇ ಈ ಶಾಲೆಗಳು ಎಂದರೆ ಮೂಗು ಮುರಿಯುವ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರುವುದು ಅನಿವಾರ್ಯವಾಗಿತ್ತು. ನ್ಯಾಯಾಲಯವು ಕೂಡಲೇ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶವನ್ನೂ ಸಹ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು, ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಸೇರಿದಂತೆ ಎಲ್ಲರಿಗೂ ನೀಡಲಾಗಿದೆ. ಅಲ್ಲದೇ ಕೂಡಲೇ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡಬೇಕೆಂದೂ ಸಹ ಮನವಿ ಕೂಡ ಮಾಡಿಕೊಳ್ಳಲಾಗಿದೆ ಎಂದರು.
ಶಿಕ್ಷಕರನ್ನು ನೇಮಕ ಮಾಡದೇ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದಂತಾಗಿದೆ. ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಅವಕಾಶ ನೀಡಿರುವ ಸರ್ಕಾರ ಅನಿದಾನಿತ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಅವಕಾಶ ನೀಡದೆ ಮಲತಾಯಿ ಧೋರಣೆ ತಾಳಿದೆ. ಇದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತಿದೆ. ಸರ್ಕಾರ ಹಲವಾರು ಯೋಜನೆಗಳಿಗೆ ಸಹಸ್ರಾರು ಕೋಟಿ ವೆಚ್ಚ ಮಾಡುತ್ತದೆ. ಆದರೆ ಶಿಕ್ಷಕರ ನೇಮಕಕ್ಕೆ ಕೇವಲ ಮುನ್ನೂರು ಕೋಟಿಯಷ್ಠೇ ಬೇಕು. ಆದರೂ ಸಹ ವ್ಯಯ ಮಾಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ಎಲ್ಲಾ ಸರ್ಕಾರಗಳೂ ಸಹ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವುದು ದುರಂತವೇ ಸರಿ ಎಂದು ವಿಷಾದಿಸಿದರು.
ಈಗಾಗಲೇ ರಾಜ್ಯದ ನೂರಾರು ಅನುದಾನಿತ ಶಾಲಾ ಆಡಳಿತ ಮಂಡಲಿಯ ಪದಾಧಿಕಾರಿಗಳು. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮಠ ಮಂದಿರಗಳು, ಪ್ರಭಾವಿ ಜನಪ್ರತಿನಿಧಿಗಳೂ ಸಹ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ.
ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜ್ಯದ ಶಿಕ್ಷಣ ಕ್ಷೇತ್ರದ ಸಮಸ್ಯೆಯನ್ನು ವಿವರಿಸಲಾಗುವುದು. ಇದಕ್ಕೂ ಮೀರಿ ಶಿಕ್ಷಕರ ಹುದ್ದೆ ತುಂಬಲು ಅವಕಾಶ ನೀಡದಿದ್ದಲ್ಲಿ ನ್ಯಾಯಾಂಗ ನಿಂದನೆ ಕುರಿತು ಚಿಂತಿಸಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ದೇವರಾಜಯ್ಯ, ಜಿಲ್ಲಾ ಅಧ್ಯಕ್ಷರಾದ ಕೆ.ವಿ.ಕೃಷ್ಣಮೂರ್ತಿ, ಬಾಣಸಂದ್ರ ವಿಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ್, ಹುಲ್ಲೇಕೆರೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಪ್ರಸನ್ನಕುಮಾರ್, ವಿದ್ಯಾರಣ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಯಣ್ಣ, ಕೃಷ್ಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಉಗ್ರಯ್ಯ, ಕಂಚಿರಾಯ ಸ್ವಾಮಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ರತ್ನಮ್ಮ ಎ.ಕಂಚೀರಾಯ, ಸಂಪಿಗೆಯ ಚಂಪಕ ವಿದ್ಯಾ ಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು, ದೀಪು ಸಂಸ್ಥೆಯ ನಟೇಶ್, ರಾಮಾಂಜನೇಯ ಗ್ರಾಮಾಂತರ ಪ್ರೌಢಶಾಲಾ ಮುಖ್ಯ ಶಿಕ್ಷಕ ಸಂಪತ್ತು, ಮುಖ್ಯಶಿಕ್ಷಕ ನಾಗರಾಜು, ಕನ್ನಡಭಾರತಿ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.