ತುಮಕೂರು: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ತಿಪಟೂರಿನಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.
ಇಲ್ಲಿ ಟಿಕೆಟಗಾಗಿ ಷಡಕ್ಷರಿ, ಟೂಡಾ ಶಶಿಧರ್ ನಡುವೆ ಪೈಪೋಟಿ ಇತ್ತು. ಕಳೆದ ಸಲ ಇದೇ ಕಾರಣಕ್ಕಾಗಿ ಷಡಕ್ಷರಿ ಅವರಿಗೆ ಅಳೆದು ತೂಗಿ ಕಡೇ ಗಳಿಗೆಯಲ್ಲಿ ಟಿಕೆಟ್ ನೀಡಲಾಗಿತ್ತು.
ಈ ಸಲ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಷಡಕ್ಷರಿ ಅವರಿಗೆ ನೀಡಲಾಗಿದೆ.
ಶಿರಾದಲ್ಲೂ ಸಹ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಅನುಮಾನಗಳನ್ನು ಹರಿಯಬಿಡಲಾಗಿತ್ತು. ಈಗ ಅವರಿಗೇನೆ ನೀಡಲಾಗಿದೆ. ಸಾಸಲು ಸತೀಶ್ ಇಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಾಸಲು ಸತೀಶ್ ಜೆಡಿಎಸ್ ಗೆ ಸೇರಬಹುದು ಎಂಬ ವದಂತಿ ಸಹ ಇದೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಮಾಜಿ ಶಾಸಕ, ಬಿಜೆಪಿಯಿಂದ ಬಂದ ಕೆ.ಎಸ್.ಕಿರಣ್ ಕುಮಾರ್ ಅವರಿಗೆ ನೀಡಲಾಗಿದೆ.ಇಲ್ಲಿ ಡಾ. ಪರಮೇಶ್ವರಪ್ಪ ಪಕ್ಷ ಕಟ್ಟಲು ಹರಸಾಸಹ ಪಟ್ಟಿದ್ದರು. ಅವರಿಗೇನೆ ಟಿಕೆಟ್ ಎಂಬ ಸ್ಥಿತಿ ಇತ್ತು. ಆದರೆ ಕಿರಣ್ ಕುಮಾರ್ ಅವರು ಬಂದ ಕಾರಣ ಅವರಿಗೆ ನೀಡಲಾಗಿದೆ.
ತುಮಕೂರು ಗ್ರಾಮಾಂತರಕ್ಕೆ ಯಾರ ಹೆಸರನ್ನು ಘೋಷಿಸಿಲ್ಲ. ಇಲ್ಲಿ ಮಾಜಿ ಶಾಸಕ ಎಚ್.ನಿಂಗಪ್ಪ ಸ್ಪರ್ಧಿಸುವ ಬಗ್ಗೆ ಖಚಿತ ನಿರ್ಧಾರಕ್ಕೆ ಬಾರದ ಕಾರಣ ಪಕ್ಷ ಮೌನವಾಗಿದೆ.
ತುರುವೇಕೆರೆಯಿಂದ ಬೆಮಕ್ ಕಾಂತರಾಜ್, ಪಾವಗಡದಿಂದ ಶಾಸಕ ವೆಂಕಟರಮಣಪ್ಪ ಮಗ ವೆಂಕಟೇಶ್, ಮಧುಗಿರಿಯಿಂದ ಕೆ.ಎನ್.ರಾಜಣ್ಣ, ಕೊರಟಗೆರೆಯಿಂದ ಡಾ. ಜಿ.ಪರಮೇಶ್ವರ್ ಗೆ ಟಿಕೆಟ್ ಘೋಷಣೆಯಾಗಿದೆ.