Publicstory
Tumakuru: ಗುಬ್ಬಿ ಭೂ ಹಗರಣದಲ್ಲಿ ಆರೋಪಿಯಾಗಿರುವ ಗುಬ್ಬಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಅವರಿಗೆ ತುಮಕೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಭೂ ಹಗರಣದಲ್ಲಿ ಅಣ್ಣಪ್ಪ ಸ್ವಾಮಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸುವ ಸಾಧ್ಯತೆ ಇರುವ ಕಾರಣ ಅಣ್ಣಪ್ಪಸ್ವಾಮಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ನಿರೀಕ್ಷಣಾ ಜಾಮೀನು ನೀಡಲು ತಕರಾರು ಸಲ್ಲಿಸಿದ ಸರ್ಕಾರಿ ವಕೀಲರು, ಅರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು ಎಂದು ಬಲವಾಗಿ ವಾದಿಸಿದರು.
ಆರೋಪಿಯು ತನ್ನ ತಾಯಿ ಗೌರಮ್ಮ ಹೆಸರಿಗೆ ನಾಲ್ಕು ಎಕರೆ, ತಂಗಿ ಶಾಂತಾ ಹೆಸರಿಗೆ 4 ಎಕರೆ ಭೂಮಿ ಪಡೆದುಕೊಂಡಿದ್ದಾರೆ. ಈ ದಾಖಲೆಗಳನ್ನು ತಿದ್ದಲು ಪ್ರಕರಣದ ಪ್ರಮುಖ ಆರೋಪಿಗೆ ಫೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.
ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪಡೆಯುವುದು ಹೀನ ಕೃತ್ಯವಾಗಿದೆ. ಆರೋಪಿಗೆ ರಾಜಕೀಯ ಶಕ್ತಿ ಇರುವ ಕಾರಣ ಸಾಕ್ಷ್ಯ ಪಡಿಸುವ ಸಾಧ್ಯತೆ ಇದೆ ಎಂಬುದನ್ನು ಒತ್ತಿಹೇಳಿದ ನ್ಯಾಯಾಧೀಶರಾದ ಡಿ.ಟಿ.ಪಾಂಡುರಂಗಸ್ವಾಮಿ ಅವರು ಜಾಮೀನು ನಿರಾಕರಿಸಿದರು.