ಎಲ್ಲಿಂದ ಕಲಿತೆ?
ಚಿಗುರೆಲೆಗೆ
ಎಳೆ ಹಸಿರು,
ಹರೆಯದಲ್ಲಿ ಗಾಢ,
ಹಣ್ಣಾದಾಗ ಹಳದಿ,
ಬಣ್ಣ ಬಳಿಯುವೆಯಲ್ಲಾ…
ನಿನ್ನ ಬಣ್ಣ ಮಿಶ್ರ ಕಲೆ
ಎಲ್ಲಿಂದ ಕಲಿತೆ?
ಅರಳುವ ಉಮೇದು….
ಚಳಿಗಾಲದ
ಚಿತ್ತ
ಕದಡಿ
ರಂಗಿನ ರಾಡಿ…
ಎಲ್ಲ ಹೂಗಳಿಗೂ
ಒಂದೇ ಕಾಲಕ್ಕೆ
ಅರಳುವ
ಉಮೇದು..
ದುಂಬಿ
ಜೆನ್ನೋಣ
ಹಾರಿ ಹಾರಿ
ಗುಯ್ ಗುಟ್ಟೀ
…ಸೊಳ್ಳೆಗಳೂ ಪೈಪೋಟಿ ಗೆ
ಇಳಿದು..
ಹೆಂಗೆಳೆಯರೂ
ಅರಳಿದ
ಹೂ ಮುಡಿದು
ಹಬ್ಬಗಳ ಸಿರಿ..
ಝರಿ ಸೀರೆ
ಮದುವೆ ಮನೆಯಲ್ಲಿ
ಝರ ಭರ…
ನೀನೆ ಹೇಳು ವಸಂತ
ಕೆಳಗೆ
ತರಗೆಲೆ
ಮರದಲ್ಲಿ
ಚಿಗುರೆಲೆ…
ಮಾವಿನ
ಮರದಲ್ಲಿ
ಹೂ….
ಹೂ ಕಚ್ಚಿ
ಹಣ್ಣು ಆಗುವುದೆ?
ಹುಣಸೆ ತೊಕ್ಕು
ಮಾವಿನ ಚಿತ್ರಾನ್ನ
ಹಣ್ಣುಗಳ.. ತಿನ್ನಲೋ
ಹೂ ಮುಡಿಯಲೋ
ರಂಗೇರಿದ ಪ್ರಕೃತಿಯ
ಅಸ್ವಾದಿಸಲೋ
…ನೀನೇ ಹೇಳು ವಸಂತ..
ಎಲೆ ಅಳಲಿಲ್ಲ!?
ತೊಟ್ಟು
ಕಳಚಿ
ಬಿದ್ದ ಎಲೆ
ಅಳಲಿಲ್ಲ..
ಚಿಗುರೊಡೆದ
ಎಲೆ..
ಅರಳಿದ ಹೂ
ಕಚ್ಚಿದ ಕಾಯಿ
ಎಲ್ಲವೂ
ನಿಶಬ್ಧ…
ಹಣ್ಣಾಗಿ
ತೊಟ್ಟು
ಕಳಚಿ
ಬಿದ್ದಾಗ
ನೋವಿಲ್ಲ
ಮರ ಒಡೆಯುವ
ಕಾಲ
ಕೈ ಕಾಲು
ತುಟಿ
ಒಡೆದು…
ನಾವೂ ಪ್ರಕೃತಿಯ
ಭಾಗವೇ…