ನನ್ನ ಭೂಮಿ ಎತ್ತಿನಹೊಳೆ ಯೋಜನೆಗೆ ಸ್ವಾಧೀನಗೊಂಡಿದೆ. ಕಡಿಮೆ ಪರಿಹಾರ ನೀಡಿದ್ದಾರೆ. ಇದನ್ನು ನಾನು ಎಲ್ಲಿ ಪ್ರಶ್ನೆ ಮಾಡಬೇಕು ತಿಳಿಸಿ.
ಕಲ್ಲೇಶ್, ಕಲ್ಲೇಗೌಡನಪಾಳ್ಯ, ತಿಪಟೂರು
ಹೊಸ ಭೂ ಸ್ವಾಧೀನ ಕಾಯ್ದೆಯಡಿ ಸರ್ಕಾರ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಭೂಮಿ ಸ್ವಾಧೀನಕ್ಕೂ ಮುನ್ನ ಯೋಜನೆಯಿಂದ ಆಗುವ ಸಾಮಾಜಿಕ ಪರಿಣಾಮಗಳ ನಿರ್ಧರಣೆಯನ್ನು ಮಾಡಬೇಕಾಗುತ್ತದೆ. ವಿಶೇಷ ಭೂ ಸ್ವಾಧೀನಾಧಿಕಾರಿಗಳು ನಿಮ್ಮ ಭೂಮಿಗೆ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸಿದ ನಂತರ ನಿಮಗೆ ಅಂತಿಮ ಅವಾರ್ಡ್ ನೋಟಿಸ್ ಅನ್ನು ನೀಡುತ್ತಾರೆ. ನಿಮಗೆ ಕಡಿಮೆ ಪರಿಹಾರ ನೀಡಿದ್ದಾರೆ ಅನ್ನಿಸಿದರೆ ನೀವು ಅವಾರ್ಡ್ ನೋಟಿಸ್ ಪಡೆದ 60 ದಿನಗಳ ಒಳಗಾಗಿ ಸಕ್ಷಮ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿ ಎದುರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ವಕೀಲರ ಮೂಲಕ ಸಲ್ಲಿಸಿ. ಈ ಅರ್ಜಿ ವಿಚಾರಣೆ ನಡೆಸಿ ಹೆಚ್ಚುವರಿ ಪರಿಹಾರ ನಿರ್ಧರಣೆ ಮಾಡುವಂತೆ ಜಿಲ್ಲಾಧಿಕಾರಿ ಅವರು ನಿಮ್ಮ ಅರ್ಜಿಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿ ಕೊಡುತ್ತಾರೆ. ನ್ಯಾಯಾಲಯವು ನೀವು ಸಲ್ಲಿಸುವ ಸಾಕ್ಷ್ಯ ಆಧರಿಸಿ ಭೂಮಿಯ ಮಾರುಕಟ್ಟೆ, ಗಿಡಮರಗಳ ಮೌಲ್ಯವನ್ನು ನಿರ್ಧರಣೆ ಮಾಡಲಿದೆ. ನಿಮ್ಮ ಭೂಮಿಯನ್ನು ಸ್ವಾಧೀನದ ಪ್ರಕಟಣೆ ಹೊರಡಿಸಿದ ದಿನದಿಂದ ಕೋರ್ಟ್ ಆದೇಶದ ದಿನದವರೆಗೆ ಕೋರ್ಟ್ ನೀಡಿದ ಹೆಚ್ಚುವರಿ ಪರಿಹಾರಕ್ಕೆ ನಿಮಗೆ ಬಡ್ಡಿ ಸಹ ಸಿಗಲಿದೆ.
ನನ್ನ ಭೂಮಿಯನ್ನು ಹೇಮಾವತಿ ನಾಲಾ ವಲಯಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ ನಾನು ಹಾಕಿದ ಕೇಸ್ ವಜಾ ಆಗಿತ್ತು. ಇದಾಗಿ ಹತ್ತು ವರ್ಷ ಕಳೆದಿವೆ. ಈಗ, ನಾನು ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದೇ?
- ಪುಟ್ಟೇಗೌಡ, ಹೊಸೂರ್, ನೊಣವಿನಕೆರೆ. ತುಮಕೂರು ಜಿಲ್ಲೆ
ಸೂಕ್ತ ಕಾರಣಗಳನ್ನು ನೀಡಿ ಮೇಲ್ಮನವಿ ಸಲ್ಲಿಸಲು ನಿಮಗೆ ಅವಕಾಶವಿದೆ. ಭೂ ಸ್ವಾಧೀನದ ಪ್ರಕರಣಗಳಲ್ಲಿ ಕಾಲ ವಿಳಂಬವನ್ನು ನ್ಯಾಯಾಲಯಗಳು ಮನ್ನಾ ಮಾಡಿದ ಅನೇಕ ಉದಾಹರಣೆಗಳಿವೆ. ಹೀಗಾಗಿ ನೀವು ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಿ.
- ನನ್ನ ಹೆಂಡತಿ ಮೂರು ವರ್ಷದಿಂದ ನನ್ನ ಜತೆ ಬದುಕುತ್ತಿಲ್ಲ. ಇದೇ ಆಧಾರದಲ್ಲಿ ನಾನು ವಿವಾಹ ವಿಚ್ಛೇದನ ಪಡೆಯಬಹುದೇ?
ರಾಮಕೃಷ್ಣಾ, ಬೆಂಗಳೂರು
ಹೆಂಡತಿ ಪ್ರತ್ಯೇಕವಾಸದಲ್ಲಿ ಇದ್ದರೆ ಇದೇ ಆಧಾರದಲ್ಲಿ ನೀವು ಡೈವೋರ್ಸ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕುಟುಂಬದಲ್ಲಿ ಗಂಡ ಹೆಂಡತಿ ಬಂದಾಗಿ ಬದುಕಲು ಮೊದಲು ಪ್ರಯತ್ನಿಸಬೇಕು. ಹಿರಿಯರೊಂದಿಗೆ ಮಾತನಾಡಿ ನಿಮ್ಮ ಮನಸ್ತಾಪ ಕಡಿಮೆ ಮಾಡಿಕೊಳ್ಳಿ. ರಾಜೀ ಆಗಿದೆ. ಇದಾಗಿದ್ದರೆ ನೀವು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ. ಸ್ಥಳೀಯ ವಕೀಲರನ್ನು ಭೇಟಿ ಮಾಡಿ ಮಾಹಿತಿ ಪಡೆಯಿರಿ.