ಪಾವಗಡ : ರೈತರು ಇನ್ನೂ 10 ಸಾವಿರ ಎಕರೆ ಭೂಮಿ ಕೊಟ್ಟರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತೀವಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಪಾವಗಡ ತಾಲೂಕಿನ ತಿರುಮಣಿಯ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್‌ಗೆ ಬುಧವಾರ ಇಂಧನ ಸಚಿವ ಕೆ.ಜೆ.ಜಾರ್ಜ್ ಜತೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಪಾವಗಡದಲ್ಲಿ 2400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗ್ತಿದೆ. ಸ್ಥಳೀಯರ ಇನ್ನೂ ಜಮೀನು ಕೊಟ್ಟರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತೇವೆ. ಗುಲ್ಬರ್ಗಾ ಕಡೆಯೂ ಕೇಳುತ್ತಿದ್ದಾರೆ. ಇಲ್ಲಿ ಯಾರಿಗೂ ಲಂಚ ಕೊಡುವ ಅಗತ್ಯವಿಲ್ಲ. ರೈತರು ಮುಂದೆ ಬಂದರೆ ಮತ್ತಷ್ಟು ವಿಸ್ತರಣೆ ಮಾಡ್ತೀವಿ ಎಂದರು.
ಸುಸ್ಥಿರ ಅಭಿವೃದ್ಧಿಗೆ ಸಾಕ್ಷಿ : ಪಾವಗಡ ಸೋಲಾರ್ ಪಾರ್ಕ್ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಗೆ ಕರ್ನಾಟಕದ ಬದ್ಧತೆಗೆ ಸಾಕ್ಷಿಯಾಗಿದೆ. ರಾಜ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಅತಿದೊಡ್ಡ ಸೋಲಾರ್ ಪಾರ್ಕ್ , ಶುದ್ಧ- ಹಸಿರು ಇಂಧನ ಮೂಲಗಳನ್ನು ಬಳಸಿಕೊಳ್ಳುವಲ್ಲಿ ನಮ್ಮ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಹವಾಮಾನ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಜತೆಗೆ, ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಪಾವಗಡ ಸೋಲಾರ್ ಪಾರ್ಕ್ ಸ್ವಚ್ಛ ಮತ್ತು ಸುಸ್ಥಿರ ಇಂಧನ ಪರಿಹಾರಗಳಿಗೆ ನಮ್ಮ ಬದ್ಧತೆಯ ಕುರುಹಾಗಿದೆ. ಸರ್ಕಾರ ಮತ್ತು ನವೀಕರಿಸಬಹುದಾದ ಇಂಧನ ಉದ್ಯಮದ ನಡುವಿನ ಬಾಂಧವ್ಯ ಉತ್ತಮ ಪಡಿಸುವ ಜತೆಗೆ ಹೂಡಿಕೆ, ಸಹಯೋಗವನ್ನು ಉತ್ತೇಜಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಖ್ಯವಾಗಿ, ಉದ್ಯೋಗ ಸೃಷ್ಟಿಗೆ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ನಮ್ಮ ಗುರಿಎಂದು ವಿವರಿಸಿದರು.
ಶುದ್ಧ ಇಂಧನ ಉತ್ಪಾದನೆಗೆ ರಾಷ್ಟ್ರ ಹಾಕಿಕೊಂಡಿರುವ ಗುರಿಗೆ ನಮ್ಮ ಸೋಲಾರ್ ಪಾರ್ಕ್ ಈಗಾಗಲೇ ದೊಡ್ಡ ಕೊಡುಗೆ ನೀಡಿದೆ. ಅದರ ಅತ್ಯಾಧುನಿಕ ದ್ಯುತಿವಿದ್ಯುಜ್ಜನಕ ಫಲಕಗಳು, ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ವಿದ್ಯುತ್ ಸಂಗ್ರಹ ವ್ಯವಸ್ಥೆ ಮತ್ತು ಸಮರ್ಥ ಗ್ರಿಡ್ ಏಕೀಕರಣದೊಂದಿಗೆ, ಸೋಲಾರ್ ಪಾರ್ಕ್ ವರ್ಷಕ್ಕೆ 4.5 ಶತಕೋಟಿ ಯುನಿಟ್ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆ ಮೂಲಕ ವಾರ್ಷಿಕ 3.6 ಮಿಲಿಯನ್ ಟನ್‌ಗಳಷ್ಟು ಕಾರ್ಬನ್ ಡೈಕ್ಸಾಡೈ ಹೊರಸೂಸುವಿಕೆಯನ್ನು ತಗ್ಗಿಸಲು ನೆರವಾಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳು ನಮ್ಮ ಪರಿಸರ ಮತ್ತು ಆರ್ಥಿಕತೆಯ ಮೇಲೆ ಬೀರಬಹುದಾದ ಪ್ರಭಾವವನ್ನು ಈ ಅಂಕಿಅಂಶಗಳೇ ಸಾರಿ ಹೇಳುತ್ತವೆಎಂದರು.
ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ಸ್ಥಳೀಯ ಶಾಸಕ ಎಚ್.ವಿ.ವೆಂಕಟೇಶ್ ಮತ್ತಿತರರು ಇದ್ದರು.