ಜನಮನ

ಸಂಸಾರದ ನೊಗ ಹೊತ್ತೂ ತಹಶೀಲ್ದಾರ್ ಆದ ಆರತಿ

ಸಂಸಾರದ ನೊಗ ಹೊತ್ತೂ ಕೆಎಎಸ್ ಅಧಿಕಾರಿಯಾದ
ಗುಬ್ಬಿ ತಹಸೀಲ್ದಾರ್ ಆರತಿ ಬಿ ಻ಅವರ ಸಾಧನೆ ಮಹಿಳೆಯರಿಗೆ ಮಾದರಿಯಾಗಿದೆ.
……………………………
ಲಕ್ಷ್ಮೀಕಾಂತರಾಜು ಎಂ ಜಿ
lakshmikantharajumg@gmail.com


ಕಾಲೇಜು ಸಮಯದಲ್ಲಿಯೇ ವಿವಾಹವಾಗಿ ಸಂಸಾರದ ಜೊತೆಯೂ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ಸಾಧನೆಗೆ ಕುಟುಂಬದ ಕಾರಣಗಳು ಅಡ್ಡಿಯಾಗದು ಎಂಬ ಮಾತನ್ನ 13 ವಿವಿಧ ಸರ್ಕಾರಿ ಹುದ್ದೆಗಳನ್ನ ಪಡೆಯುವ ಮೂಲಕ ಅಕ್ಷರಶಃ ನಿಜವಾಗಿಸಿದವರು ತುಮಕೂರು ಜಿಲ್ಲೆ ಗುಬ್ಬಿ ತಹಸೀಲ್ದಾರ್ ಆಗಿರುವ ಆರತಿ ರವರು.

ಹೌದು. ಮಹಿಳೆಯೊಬ್ಬಳು ಮದುವೆಯಾಗಿ ಸಂಸಾರಕ್ಕೆ ಕಾಲಿಟ್ಟಳೆಂದರೆ ಅವಳ ಬದುಕು ಇನ್ನು ಕುಟುಂಬಕ್ಕೆ ಸೀಮಿತ ಎಂಬ ವಾತಾವರಣದ ನಡುವೆ , ತನ್ನ ಕಾಲೇಜು ಅವಧಿಯಲ್ಲಿಯೇ ಮದುವೆಯಾಗಿ ಆನಂತರ ಮಕ್ಕಳು ಮತ್ತು ಸಂಸಾರದ ಜಂಜಾಟಗಳ ನಡುವೆಯೂ ಆರತಿಯವರು ಸಾಧನೆಗೈದಿರುವುದು ದೊಡ್ಡ ಸಾಧನೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿ ತಾಲ್ಲೂಕಿನ ಕೃಷಿಕ ಕುಟುಂಬದ ಗಾಣಿಗ ಸಮಾಜದ ಆರತಿಯವರಿಗೆ 18 ತುಂಬಿದ ಕೂಡಲೇ ವಿವಾಹವಾಗುತ್ತೆ. ಆಗ ಅವರು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಆನಂತರ ದಿನಗಳಲ್ಲಿ ಮದುವೆಯಾದ ಕಾರಣಕ್ಕೆ ವಿದ್ಯಾಭ್ಯಾಸ ಮೊಟಕು ಗೊಳಿಸದೇ ಮುಂದುವರೆಸಿ ಬಾಗೆಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯು ,ಬೆಂಗಳೂರಿನ ಜಿಕೆವಿಕೆ ಯಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿಯನ್ನ ಪಡೆದಿರುತ್ತಾರೆ.


ಪದವಿಯಲ್ಲಿ ಬಿಎಸ್ಸಿ ಎಜಿ ಆಯ್ಕೆ ಮಾಡಿಕೊಂಡು ಮೊದಲ ವರ್ಷದ
ಬಿಎಸ್ಸಿಯಲ್ಲಿಯೇ ತಾಯಿಯೂ ಆಗುವ ಮೂಲಕ ಸಂಸಾರದ ಜವಬ್ದಾರಿಗಳನ್ನ ಹೊತ್ತೂ ಛಲ ಬಿಡದೇ ಓದುತ್ತಾ ಬಿಎಸ್ಸಿಯ ಅಂತಿಮ ವರ್ಷದಲ್ಲಿಯೇ ಕೆಪಿಎಸ್ಸಿಯ ಪರೀಕ್ಷೆ ತೆಗೆದುಕೊಂಡು 2014 ರ ಬ್ಯಾಚಿನಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡು ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಿ ಜಿಲ್ಲೆಯ ತಿಪಟೂರು ತಹಸೀಲ್ದಾರ್ ಆಗಿ 2019 ರಲ್ಲಿ ನೇಮಕವಾಗುವ ಮೂಲಕ ಮದುವೆಯಾದ ಮಹಿಳೆ ಸಂಸಾರಕ್ಕೆ ಸೀಮಿತ ಎಂಬ ಮಾತನ್ನ ಸುಳ್ಳಾಗಿಸಿದ್ದಾರೆ.


ಇದಿಷ್ಟೇ ಅಲ್ಲದೆ , ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಬ್ ರಿಜಿಸ್ಟಾರ್ ಸೇರಿದಂತೆ ವಿವಿಧ 13 ಹುದ್ದೆಗಳಿಗೆ ಆಯ್ಕೆಯಾಗಿ ಆ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೇ ಅಂತಿಮವಾಗಿ ತಹಸೀಲ್ದಾರ್ ಹುದ್ದೆಯನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಬಿಎಸ್ಸಿಯಲ್ಲಿ ಚಿನ್ನದ ಪದಕಗಳೊಂದಿಗೆ ಪದವಿ ಪಡೆದಿರುವುದು ಇವರ ಅರ್ಹತೆಯನ್ನ ಗುರುತಿಸುತ್ತಿದೆ.
ಆರತಿಯವರ ಪತಿ ವಕೀಲರಾಗಿದ್ದು ,ಇವರ ಪ್ರಯತ್ನಕ್ಕೆ ಸದಾ ಬೆನ್ನಲುಬಾಗಿ ನಿಂತಿದ್ದು ಇವರ ಸಾಧನೆಗೆ ತಮ್ಮ ಪತಿಯವರ ಬೆಂಬಲವನ್ನ ಆರತಿಯವರು ಸ್ಮರಿಸುತ್ತಾರೆ.ಶಿಕ್ಷಣ ಸಂಪೂರ್ಣ ಮುಗಿದ ಮೇಲೆ ನಾಗರಿಕ ಸೇವೆಗಳ ಹುದ್ದೆಗಳನ್ನ ಪಡೆದಿರುವವರು ಇರಬಹುದು‌. ಆದರೆ, ಪಿಯು ಹಂತದಲ್ಲೇ ಮದುವೆ ಯಾಗಿ ,ನಂತರದಲ್ಲಿ ಕಾಲೇಜು ದಿನಗಳನ್ನ ಎದುರಿಸಿ ದೊಡ್ಡ ಹುದ್ದೆ ಪಡೆದಿರುವ ಆರತಿಯವರ ಸಾಧನೆ ವಿಶೇಷವೇ ಸರಿ.


ಇವರ ತಂದೆಗೆ ಆರತಿಯವರು ಸೇರಿದಂತೆ ಮೂವರು ಹೆಣ್ಣುಮಕ್ಕಳು. ಮೂವರ ಪೈಕಿ ಆರತಿ ತಹಸೀಲ್ದಾರ್ ಆಗಿದ್ದರೆ ಕೊನೆಯ ಸಹೋದರಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕುಟುಂಬ ಕಲ್ಯಾಣ ಯೋಜನೆಯಲ್ಲಿ ” ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ” ಎಂಬ ಘೋಷವಾಕ್ಯವಿತ್ತು. ಈ ಕುಟುಂಬದಲ್ಲಿ ಆರತಿಗು ಕೀರ್ತಿಗೂ ಈ ಹೆಣ್ಣುಮಕ್ಕಳೇ ಪಾತ್ರರಾಗಿದ್ದಾರೆ.

ಮದುವೆಯಾದ ಮೇಲೆ ಶಿಕ್ಷಣ ,ಉದ್ಯೋಗ ಪಡೆಯುವ ಅವಕಾಶಗಳ ಬಾಗಿಲು ಮುಚ್ಚಿ ಹೋಯ್ತು ಎಂಬುವ ಸನ್ನಿವೇಶದಲ್ಲಿ , ಮದುವೆಯ ನಂತರ ಶಿಕ್ಷಣ,ಉದ್ಯೋಗ ಪಡೆಯಲಿಚ್ಛಿಸುವ ಯುವತಿಯರಿಗೆ ಆರತಿ ಮಾದರಿಯಾಗಬಲ್ಲರು.


ನಮ್ಮ ತಂದೆ ಕೃಷಿಯ ಜೊತೆಗೆ ಕೆಸ್ಸಾರ್ಟಿಸಿಯಲ್ಲಿ ನಿರ್ವಾಹಕರಾಗಿದ್ದರು. ನಮ್ಮ ಓದಿಗೆಂದೇ ಬಾಗೆಪಲ್ಲಿಗೆ ನಮ್ಮ ಕುಟುಂಬ ಸ್ಥಳಾಂತರಗೊಂಡಿತ್ತು. ನನ್ನದೇನಾದರೂ ಸಾಧನೆ ಅಂತಿದ್ದರೆ ಅದರ ಹಿಂದೆ ನನ್ನ ತಂದೆ ಹಾಗೂ ನನ್ನ ಪತಿಯ ಸಹಕಾರ ಸಾಕಷ್ಟಿದೆ.

  • ಆರತಿ ಬಿ.ಕೆಎಎಸ್

Comment here