ಮಧುಗಿರಿ: ಇಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಮಾಜಿ ಪ್ರಧಾನಿ ದೇವೇಗೌಡರು ಭಾವುಕರಾದರು.
ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದರೂ ನನ್ನನ್ನು ಇಲ್ಲಿಗೆ ತುಮಕೂರಿನ ಕೆಲ ಮುಖಂಡರೇ ಒತ್ತಾಯವಾಗಿ ಕರೆತಂದು ಬಲಿಪಶು ಮಾಡಿದರು ಎಂದರು.
ಬಹುಶಃ ಮಧುಗಿರಿ ಒಂದೇ ಸಾಕು ಕಾಂಗ್ರೆಸ್ ನಾಯಕರಿಗೆ ಉತ್ತರ ಕೊಡೋಕೆ, ನನ್ನನ್ನು ಸೋಲಿಸಿದವರಿಗೆ ವೀರಭದ್ರಯ್ಯನವರನ್ನು ಗೆಲ್ಲಿಸುವ ಮೂಲಕ ಉತ್ತರ ಕೊಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಮುಖಂಡರ ವಿರುದ್ದ ಹರಿಹಾಯ್ದರು.
ಈ ಹಿಂದೆ ನಾನು ಸಿಎಂ ಆಗುವ ಸಂದರ್ಭದಲ್ಲಿ ತುಮಕೂರಿನಲ್ಲಿ 9 ಕ್ಷೇತ್ರಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲೂ ಮತದಾರರು ಅದೇ ಫಲಿತಾಂಶವನ್ನು ನೀಡಬೇಕು. ಕುಮಾರಣ್ಣ ನಿಮ್ಮ ಮೇಲೆ ವಿಶ್ವಾಸ ವಿಟ್ಟಿದ್ದು, ಅವರು ರಾಜ್ಯದ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಕೊಟ್ಟ ಮಾತಿನಂತೆ ನಡೆಯುತ್ತಾರೆ ಆದ್ದರಿಂದ ಈ ಬಾರಿ ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಕರೆ ನೀಡಿದರು.
ಶಾಸಕ ಎಂ.ವಿ. ವೀರಭದ್ರಯ್ಯನವರು ಮಧುಗಿರಿ ಕಂದಾಯ ಜಿಲ್ಲೆಯನ್ನಾಗಿ ಮಾಡಬೇಕು. ಏಕಶಿಲಾ ಬೆಟ್ಟಕೆ ರೋಪ್ ವೇ ಅಳವಡಿಸಬೇಕು ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡಬೇಕು ಎಂಬ ಕನಸು ಹೊಂದಿದ್ದು, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಜಿಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ ಬಿಜೆಪಿಯಿಂದಾಗಿ ಕರ್ನಾಟಕದ ಗೌರವವಿಲ್ಲದಂತಾಗಿದ್ದು, ಅವರು ಯಡಿಯೂರಪ್ಪನನ್ನು ಮುಗಿಸಿದ್ದಾರೆ. ರಾಜ್ಯದ 7 ಕೋಟಿ ಜನತೆಯ ಕಲ್ಯಾಣಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಹಿಂದುಳಿದವರಿಗೆ ಮೀಸಲಾತಿ ಕೊಟ್ಟವರು ಕೆಂಪೇಗೌಡನ ಮಗ ದೇವೇಗೌಡ. ಇಂತಹ ದೇವೇಗೌಡರನ್ನು ಕಾಂಗ್ರೆಸ್ ನವರು ಇಳಿ ವಯಸ್ಸಿನಲ್ಲಿ ತುಮಕೂರಿನಿಂದ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿ ಅನ್ನದಲ್ಲಿ ವಿಷ ಹಾಕುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸಾಧನೆ ಏನು ಎಂದ ಅವರು ಅವರು ಸಿಡಿಯಲ್ಲಿರುವ ಮಂತ್ರಿಗಳಿಗೆ ಇವತ್ತು ಟಿಕೆಟ್ ಕೊಟ್ಟಿದ್ದಾರೆ. ಇಂತಹ ಅಪವಿತ್ರರು ರಾಜ್ಯದಲ್ಲಿದ್ದರೆ ಮಳೆಯಾಗುತ್ತಾ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಒಬ್ಬಂಟಿಯಾಗಿದ್ದು, ಅವರ ಕೈಯಲ್ಲಿ ಏನು ಆಗುತ್ತದೆ ಎಂದು ಕೆಲವರು ಕೇಳುತ್ತಿದ್ದು, 50 ಆಕಳು ಕಟ್ಟಿದರೂ ಅಲ್ಲಿ ಒಂದೇ ಹೋರಿ ಕಟ್ಟುವುದು ಎಂಬುದನ್ನು ಅವರು ಅರಿಯಬೇಕು ಎಂದು ಸಮಾವೇಶದಲ್ಲಿ ನಗೆ ಚಟಾಕಿ ಹಾರಿಸಿದರು.
ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ ಕಳೆದ 5 ವರ್ಷಗಳಲ್ಲಿ ಪ್ರಕೃತಿ ನಮ್ಮ ಪರವಾಗಿ ಇರಲಿಲ್ಲ. ಆರಂಭದಲ್ಲಿ ಬೀಕರ ಬರಗಾಲ ಆವರಿಸಿತ್ತು ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ 300 ಬೋರ್ ವೆಲ್ ಗಳನ್ನು ಕೊರೆಸಲಾಗಿತ್ತು. 6.70 ಕೋಟಿ ಅನುದಾನ ತಂದು ತಾಲೂಕಿನಲ್ಲಿ ಮೇವು ಬ್ಯಾಂಕ್ ಆರಂಭಿಸಿ ರೈತರ ನೆರವಿಗೆ ದಾವಿಸಲಾಗಿತ್ತು. 2 ವರ್ಷ ಕರೋನಾ ಆವರಿಸಿ ಕಾಮಗಾರಿ ಕುಂಟಿತಗೊಂಡಿತ್ತು. ಬಿಜೆಪಿ ಸರ್ಕಾರದಲ್ಲಿ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತಹ ಪರಿಸ್ಥಿತಿ ಇದ್ದರೂ 1143 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದರು.