ತುಮಕೂರು:ಮಹಿಳೆಯರು ಹಾಗೂ ಮಕ್ಕಳ ಮೇಲೆ ಹೆಚ್ಚಿನ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಬಾದಾಮಿ ಹಿರಿಯ ಸಿವಿಲ್ ನ್ಯಾಯಾದೀಶರಾದ ವಿ ಹನುಮಂತಪ್ಪ ವಿಷಾದ ವ್ಯಕ್ತಪಡಿಸಿದರು.
ನಗರದ ಸೂಫಿಯ ಕಾನೂನು ವಿದ್ಯಾಲಯದಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ನಡೆದ “ಮಾನವ ಹಕ್ಕುಗಳಡಿಯಲ್ಲಿ ಮಹಿಳೆಯರ ಹಕ್ಕುಗಳು” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಾಯಣ, ಮಹಾಭಾರತದ ಕಾಲದಿಂದಲೂ ಮಹಿಳೆಯರ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ಮುಂದುವರೆಯುತ್ತಲೇ ಬಂದಿದೆ. ತಂತ್ರಜ್ಞಾನ ಮುಂದುವರೆದಿರುವ 21 ನೇ ಶಶತಮಾನದಲ್ಲಿಯೂ ಪುರುಷ ಪ್ರಧಾನ ಮನಸ್ಥಿತಿಯನ್ನು ಯುವ ಪೀಳಿಗೆ ಮೇಲೆ ಅರಿವಿಲ್ಲದೆ ಹೇರಲಾಗುತ್ತಿದೆ. ಅದರ ಪರಿಣಮ ಭ್ರೂಣದಲ್ಲಿಯೇ ಹೆಣ್ಣು ಮಗುವನ್ನು ಹತ್ಯೆ ಮಾಡುವಂತಹ ಕ್ರೂರ ಮನಸ್ಥಿತಿಯನ್ನು ಸಮಾಜ ಬೆಳೆಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣಿನ ಹುಟ್ಟಿಗೆ ಪುರುಷನೇ ಕಾರಣ ಎನ್ನುವ ವೈಜ್ಞಾನಿಕ ಅರಿವನ್ನು ಜನತೆಗೆ ತಲುಪಿಸುವ ಕೆಲಸ ಕಾನೂನು ವಿದ್ಯಾರ್ಥಿಗಳು ಮಾಡಬೇಕಿದೆ. ಸಾಕು ಪ್ರಾಣಿ ಆಯ್ಕೆಯಿಂದ ಮಗುವಿನ ಆಯ್ಕೆಯನ್ನೂ ಪುರುಷ ಪ್ರೇರಿತವಾಗಿಯೇ ಇರುತ್ತವೆ. ಹೆಣ್ಣಿನ ಪ್ರಾಮುಖ್ಯತೆ ಮತ್ತು ಪ್ರಾಧಾನ್ಯತೆಯನ್ನು ಸಮಾಜ ಕಡೆಗಣಿಸಿದೆ ಎಂದು ತಿಳಿಸಿದರು.
ತುಮಕೂರು ವಕೀಲರ ಸಂಘದ ಅಧ್ಯಕ್ಷ ಎಚ್ ಕೆಂಪರಾಜಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಕೀಲ ವೃತ್ತಿ ವಿಶ್ವ ಮನ್ನಣೆಯನ್ನು ಪಡೆದಿದ್ದು, ಕಠಿಣ ಶ್ರಮ ಮತ್ತು ಪ್ರಾಮಾಣಿಕತೆಯಿಂದ ಸಾಧನೆ ಸಾಧ್ಯ ಎಂದರು.
ಪ್ರಾಂಶುಪಾಲ ಡಾ. ಎಸ್. ರಮೇಶ ಅವರು ಮಾತನಾಡಿ, ಸಂವಿಧಾನದ ಪ್ರಾಸ್ಥಾವಿಕ ನುಡಿಯಲ್ಲಿಯೇ ಸಮಾನತೆಯನ್ನು ಕಲ್ಪಿಸಲಾಗಿದೆ. ಆದರೂ ಸಹ ಎಲ್ಲೆಡೆ ಅಸಮಾನತೆ ತಾಂಡವಾಡುತ್ತಿದೆ. ಅಸಮಾನತೆಯನ್ನು ಹೋಗಲಾಡಿಸಲು ಕಾನೂನು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕರೆ ನೀಡಿದರು.
ಉಪಪ್ರಾಂಶುಪಾಲರಾದ ಟಿ ಓಬಯ್ಯ, ಉಪನ್ಯಾಸಕರಾದ ಮಮತ, ಕಾಶಿಫ್, ಶ್ವೇತ, ಗ್ರಂಥಪಾಲಕ ಸುಬ್ರಹ್ಮಣ್ಯ, ಅದೀಕ್ಷಕ ಜಗದೀಶ್ ಉಪಸ್ಥಿತರಿದ್ದರು.