ಚಿಕ್ಕನಾಯಕನಹಳ್ಳಿ : ಐಪಿ ಸೆಟ್’ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.
ಇದರ ಹಿಂದೆ ವಿದ್ಯುತ್ತಚ್ಛಕ್ತಿ ಸೌಲಭ್ಯವನ್ನು ಖಾಸಗೀಕರಣ ಮಾಡಿ, ರೈತರಿಂದ ದುಪ್ಪಟ್ಟು ಶುಲ್ಕ ವಸೂಲಿಮಾಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿ, ಐಪಿ ಸೆಟ್ಟುಗಳಿಗೆ ರೈತರ ಆಧಾರ್ ಕಾರ್ಡ್ ಜೋಡಣೆ ಪ್ರಕ್ರಿಯೆಯನ್ನು ವಿರೋಧಿಸಿ ರೈತಸಂಘದವರು ಪಟ್ಟಣದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ, ತಾಲ್ಲೂಕು ದಂಡಾಧಿಕಾರಿ ಕೆ ಪುರಂದರ’ರವರ ಮುಖೇನ ಇಂಧನ ಸಚಿವ ಕೆ ಜೆ ಜಾರ್ಜ್’ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೂಲ ಸಿದ್ಧಾಂತಗಳ ಯಜಮಾನಿಕೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ’ಯ ತಾಲ್ಲೂಕು ಸಮಿತಿ ಕಾರ್ಯದರ್ಶಿ ಯದುಕುಮಾರ್, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರೈತರು ಐಪಿ ಸೆಟ್ಟುಗಳನ್ನು ಬಳಸುತ್ತಿದ್ದಾರೆ. 10 ಹೆಚ್ ಪಿ ವರೆಗಿನ ರೈತರ ಐಪಿ ಸೆಟ್ಟುಗಳಿಗೂ ಯಾವುದೇ ವಿದ್ಯುತ್ ದರ ಇರುವುದಿಲ್ಲ. ಆದರೂ ಈಗ ಐಪಿ ಸೆಟ್ಟುಗಳಿಗೆ ರೈತರು ಆಧಾರ್ ಕಾರ್ಡ್ ಜೋಡಣೆ ಮಾಡಿಸಬೇಕೆಂದು ಆದೇಶ ಹೊರಡಿಸಿರುವುದು ಯಾತಕ್ಕಾಗಿ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದು ಈಗ ರೈತರಲ್ಲಿ ಅನುಮಾನ ಮೂಡಿಸುತ್ತಿದೆ ಎಂದರು.
ಕೇಂದ್ರ ಸರ್ಕಾರ ಹಿಂದಿನ ಲೋಕಸಭೆಯಲ್ಲಿ “ವಿದ್ಯುತ್ ಖಾಸಗೀಕರಣ” ಮಾಡುವ ಮಸೂದೆಯನ್ನು ಮಂಡಿಸಿ ಸದನಸಮಿತಿಗೆ ಸಲ್ಲಿಸಿರುವುದು. ಇದನ್ನು ಗಮನಿಸಿರುವ ರೈತರಲ್ಲಿ ಈ ಆಧಾರ್ ಕಾರ್ಡ್ ಜೋಡಣೆಯ ಆದೇಶದ ಹಿಂದೆ ವಿದ್ಯುತ್ ಖಾಸಗೀಕರಣ ಮಾಡಲು ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳುತ್ತಿರಬಹುದು ಎಂಬ ಅಭಿಪ್ರಾಯ ಮೂಡಿದೆ. ಸರ್ಕಾರ ಇದಕ್ಕೆ ಸ್ಪಷ್ಟವಾಗಿ ಉತ್ತರಿಸಬೇಕು ಎಂದರು.
ಅದೇ ರೀತಿ ಕರ್ನಾಟಕ ರಾಜ್ಯದ ಹಾಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಕೂಡ, ಚುನಾವಣೆಯ ಮೊದಲು ತಾವು ಎಂದಿಗೂ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂಬ ಭರವಸೆ ಕೊಟ್ಟಿತ್ತು. ಆದರೆ, ಅಧಿಕಾರ ವಹಿಸಿಕೊಂಡ ಮೇಲೆ ‘ವಿದ್ಯುತ್ ಖಾಸಗೀಕರಣ’ ಮಾಡುವುದಿಲ್ಲವೆಂದು ವಿಧಾನ ಸಭೆಯಲ್ಲಿ ನಿರ್ಣಾಯಕವನ್ನು ಮಂಡಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಬೇಕಿತ್ತು. ರಾಜ್ಯ ಸರ್ಕಾರ ಇದುವರೆಗೂ ಆ ಕೆಲಸವನ್ನು ಮಾಡಲಿಲ್ಲ. ನೆರೆಯ ರಾಜ್ಯಗಳಾದ ಸೀಮಾಂಧ್ರ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳದ ಸರ್ಕಾರಗಳು “ವಿದ್ಯುತ್ ಖಾಸಗೀಕರಣ” ಮಾಡುವುದಿಲ್ಲ ಎಂದು ನಿರ್ಣಾಯಕವನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿವೆ. ಅದೇ ರೀತಿ ನಮ್ಮ ರಾಜ್ಯದ ರೈತರ ಹಿತವನ್ನು ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿವೆ. ಆದರೂ ಸರ್ಕಾರ ತನ್ನ ಉದಾಸೀನ ಧೋರಣೆಯನ್ನು ಬಿಟ್ಟು, ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲ. ಅನಿವಾರ್ಯವಾಗಿ ರಾಜ್ಯದ ರೈತರು ಈಗ ಪ್ರತಿಭಟನೆ, ಹೋರಾಟ ಮಾಡುತ್ತಿದ್ದೇವೆ. ಮುಂದೆ ಇದು ಇನ್ನೂ ತೀವ್ರಗೊಳ್ಳಲಿದೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ, ರೈತ ಮಹಿಳೆ ಭಾಗ್ಯಮ್ಮ, ಸೀಬಿಲಿಂಗಯ್ಯ, ಯದುಕುಮಾರ್, ಕುಮಾರಯ್ಯ, ರೇವಣ್ಣ, ಸೈಯದ್ ಕಲಂದರ್, ಬಸವರಾಜು, ನಟರಾಜು ಸೇರಿದಂತೆ ಹಲವು ಮಂದಿ ರೈತರು ಪಾಲ್ಗೊಂಡಿದ್ದರು.
ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ