Publicstory
ತುರುವೇಕೆರೆ: 2023ರ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8 ಜೆಡಿಎಸ್ ಸ್ಥಾನಗಳು ಗೆಲ್ಲುವ ವಿಶ್ವಾಸವಿದ್ದು ಆ ಮೂಲಕ ಎಚ್.ಡಿ.ಕುಮಾರ್ ಸ್ವಾಮಿಯವರು ಮುಖ್ಯ ಮಂತ್ರಿಯಾಗಲಿದ್ದಾರೆಂದು ತುಮಕೂರು ತಾಲ್ಲೂಕು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಭರವಸೆ ವ್ಯಕ್ತಪಡಿಸಿದರು.
ತಾಲ್ಲೂಕು ಜೆಡಿಎಸ್ ವತಿಯಿಂದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗು ಪರಾಜಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತುರುವೇಕೆರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಜೆಡಿಎಸ್ ಪಾಳಯದಲ್ಲಿ ಯಾವುದೇ ಗೊಂದಲವಿಲ್ಲ. ಮುಂದಿನ ಚುನಾವಣೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಒಳಗೊಂಡಂತೆ ಎಲ್ಲರೂ ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಲಿದ್ದೇವೆ. ನಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಾಗುವುದು ಎನ್ನುವ ಮೂಲಕ ಗುಬ್ಬಿ ಶಾಸಕರ ಮೇಲಿದ್ದ ಆರೋಪಗಳಿಗೆ ತೆರೆ ಎಳೆದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಯ ಅಭಿವೃದ್ದಿಗೆ ಕೇವಲ 3 ಕೋಟಿ ಮಾತ್ರ ಅನುದಾನ ನೀಡಿದೆ. ಕ್ಷೇತ್ರದ ಅಭಿವೃದ್ದಿಗೆ ಹಣವಿಲ್ಲದೆ ಸರ್ಕಾರ ದಿವಾಳಿಯಾಗಿದೆ. ಬಿಜೆಪಿ ಹಣದಿಂದ ರಾಜಕೀಯ ಮಾಡಿದರೆ ಜೆಡಿಎಸ್ ರೈತರ, ಜನರ ಪ್ರೀತಿ ವಿಶ್ವಾಸ ಮತ್ತು ಸ್ವಾಭಿಮಾನದಿಂದ ಅಧಿಕಾರಕ್ಕೆ ಬರುತ್ತದೆ.
ಬಿಜೆಪಿಯೊಂದಿಗೆ ಮೈತ್ರಿ ಇಲ್ಲ: ದೇಶದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಂದು ಚಾರಿತ್ರಿಕವಾದ ಹಿನ್ನೆಲೆ ಹಾಗು ಜನಾಭಿಮಾನವಿದೆ. ಹೀಗಿರುವಾಗ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಹಾಗು ವಿಲೀನ ಮಾಡಿಕೊಳ್ಳುವ ವಿಚಾರ ಸತ್ಯಕ್ಕೆ ದೂರವಾದದು.
ಗ್ರಾ.ಪಂ ಅಧ್ಯಕ್ಷ- ಉಪಾಧ್ಯ ಸ್ಥಾನಗಳ ಮೀಸಲಾತಿಗಾಗಿ ಜಿಲ್ಲೆಯಾದ್ಯಂತ ತೆರೆಮರೆಯ ರಾಜಕೀಯ ದಂಧೆಗಳು ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಹಾಗು ಸಚಿವರು ಹೇಳಿದಂತೆಯೇ ಅಥವಾ ಚುನಾವಣಾ ಆಯೋಗದಂತೆ ಮೀಸಲಾತಿ ಮಾಡಲಾಗುತ್ತಿದೆಯೇ ಎಂದು ಜಿಲ್ಲಾಧಿಕಾರಿಗಳಿಗೆ ದೂರವಾಣಿಗಳ ಮೂಲಕ ಮಾರ್ಮಿಕವಾಗಿ ಪ್ರಶ್ನಿಸಿರುವುದಾಗಿ ಹೇಳಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪಿ 309 ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯರುಗಳ ಆಯ್ಕೆಯಾಗಿದ್ದು ನಮ್ಮಲ್ಲಿನ ಕೆಲವರನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಮಾಡುವುದಾಗಿ ಶಾಸಕ ಮಸಾಲಜಯರಾಂ ಆಮಿಷ ಒಡ್ಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನಿಮ್ಮೊಂದಿಗೆ ನಾನಿದ್ದೇನೆ ಯಾರ ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡ ಬೇಡಿ ಎಂದು ಕಾರ್ಯಕರ್ತರು, ಮುಖಂಡರು ಮತ್ತು ನೂತನ ಗ್ರಾ.ಪಂ ಸದಸ್ಯರುಗಳಿಗೆ ಧೈರ್ಯ ತುಂಬಿದರು.
ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರೇಶ್ ಮಾತನಾಡಿ, ಮಾಜಿ ಪ್ರಧಾನ ದೇವೇಗೌಡರು ಹಾಗು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವಧಿಯಲ್ಲಿ ರೈತರಿಗೆ, ಹಿಂದುಳಿದವರು, ದೀನದಲಿತರ ಆಶಾಕಿರಣವಾಗಿ ಕೆಲಸ ಮಾಡಿರುವುದನ್ನು ನೆನಪಿಸಿದರು. ರಾಜ್ಯದಲ್ಲಿ ಬಿಜೆಪಿ ಹಣ ಬಲದಿಂದ ಅಧಿಕಾರ ಹಿಡಿಯಲು ಹವಣಿಸಿದರೆ ನಮ್ಮ ಪಕ್ಷ ಜೆಡಿಎಸ್ಗೆ ರೈತರೇ ಸಂಪತ್ತು ಮತ್ತು ಆಸ್ತಿಯಾಗಿದ್ದಾರೆ. ಎಂ.ಟಿ.ಕೃಷ್ಣಪ್ಪ ಅವರ ತಾಲ್ಲೂಕಿನ ಕೋಟ್ಯಂತರ ರೂಪಾಯಿಗಳ ಅಭಿವೃದ್ದಿ ಕಾರ್ಯಗಳ ಬಗ್ಗೆ ಜನರು ಇಂದಿಗೂ ಸ್ಮರಿಸುತ್ತಾರೆ ಎಂದರು.
ಇದೇ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರಿದ ಕಾರ್ಯಕರ್ತರುಗಳನ್ನು ಪಕ್ಷಕ್ಕೆ ಶಾಸಕರು ಸೇರಿಸಿಕೊಂಡರು. ಹಾಗು ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗು ಪರಾಜಿತ ಅಭ್ಯರ್ಥಿಗಳಿಗೆ ಶಾಲು ಹಾಕಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸ್ವಾಮಿ, ಮುಖಂಡರುಗಳಾದ ಮಧುಸೂಧನ್, ವಿಜಯೇಂದ್ರ, ವೆಂಕಟಾಪುರ ಯೋಗೀಶ್ ಇನ್ನಿತರರು ಪಾಲ್ಗೊಂಡಿದ್ದರು.