ಜನಮನ

LockDown: ಇಲ್ನೋಡಿ ಹಳ್ಳಿಗರ ಶೈಲಿ..

Publicstory. in


ಶಿರಾ: ಕರೊನ ಸೋಂಕು ಹರಡದಂತೆ ದೇಶಾದ್ಯಂತ ಎಲ್ಲರೂ ಮನೆಯಲ್ಲೇ ಇದ್ದು ಕರೊ ಓಡಿಸಿ ಎಂದು ಪ್ರಧಾನ ಮಂತ್ರಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ಇದ್ದು, ಕಾಲ‌ ಕಳೆಯುತ್ತಿದ್ದಾರೆ. ಕೆಲವರು ನಿದ್ದೆ‌ ಮಾಡಿದರೆ, ಇನ್ನೂ ಕೆಲವರು ಮನಸಿಗೆ ಖುಷಿ‌ ಕೊಡುವ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ.

ನಗರವಾಸಿಗಳು ಹೆಚ್ಚಾಗಿ ಮನೆಯಲ್ಲೇ ಟಿ.ವಿ. ಕಾರ್ಯಕ್ರಮಗಳ ವೀಕ್ಷಿಸುವುದು, ಮಕ್ಕಳೊಂದಿಗೆ ಆಟ ಆಡುವುದು, ಹೆಣ್ಣುಮಕ್ಕಳು ಬಗೆಬಗೆಯ ತಿಂಡಿ-ತಿನಿಸು ಸಿದ್ಧಪಡಿಸುವುದು, ರಂಗೋಲಿ ಬಿಡಿಸುವುದು, ಚಿತ್ರಕಲೆ, ಸಂಗೀತ, ನೃತ್ಯ, ಚೆಸ್, ಕೇರಂ ಸೇರಿದಂತೆ ತರಹೇವಾರಿ ಆಟಗಳಲ್ಲಿ ತಲ್ಲೀನರಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಈ 21 ದಿನಗಳ ಜೀವನ ಶೈಲಿ ನಗರವಾಸಿಗಳಿಗಿಂತ ಭಿನ್ನವಾಗಿಯೇ‌ ಇದೆ. ರೈತಾಪಿ ಜನರೇ ಹೆಚ್ಚಿರುವ ಈ ಪ್ರದೇಶದಲ್ಲಿ ಬಹುತೇಕರು ಕೃಷಿ ಚಟುವಟಿಕೆ, ಜಾನುವಾರುಗಳ ಪಾಲನೆ-ಪೋಷಣೆ, ಪ್ರೀತಿಯ ಪ್ರಾಣಿಗಳೊಂದಿಗೆ ಸಮಯ ಕಳೆಯುವುದು, ಪ್ರಾಣಿಗಳಿಗೆ ಮೇವು ಸಂಗ್ರಹಣೆ, ಕಟಾವಣೆ, ಕಾಳುಗಳ ಸಂಗ್ರಹಣೆ, ಮನೆಯ ಹಿತ್ತಲಲ್ಲಿ ತರಕಾರಿ, ಸೊಪ್ಪು ಬೆಳೆಯುವುದು, ಗಿಡಗಳ ನೆಟ್ಟು, ಪೋಷಿಸುವುದು, ದೈನಂದಿನ‌ ಚಟುವಟಿಕೆಗಳಾಗಿವೆ..

ಹಿರಿಯರಿರುವ ಕೆಲ ಮನೆಯಲ್ಲಿ ಮಕ್ಕಳಿಗೆ ಜಾನಪದ ಗೀತೆಗಳು, ಒಗಟುಗಳು, ಗಾದೆಗಳು, ಸೋಬಾನೆ ಪದ, ಲಾವಣಿ, ದೇವರ ಪದ ಹೇಳಿಕೊಡುವುದು, ಗ್ರಾಮೀಣ ಆಟಗಳಾದ ಚೌಕಾಬಾರ, ಅಳಗುಳಿಮಣೆ ಆಟ, ಉಪ್ಪುಪ್ಪು‌ಮನೆ ಮುಂತಾದ ಆಟಗಳನ್ನು ಆಡುವ ಮೂಲಕ ಗ್ರಾಮೀಣ ಸೊಗಡನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತಿದೆ.

ಇನ್ನೂ ಕೆಲವರು ತಮ್ಮ ಮೆನಯಲ್ಲಿದ್ದ ಹಳೇಕಾಲದ ಸಾಮಗ್ರಿಗಳಾದ ಜರಡಿ-ಮೊರ, ಲಾಟೀನು, ಸಂಗೀತ ಸಾಮಗ್ರಿ, ಉಡುಗೆ ಸಾಮಗ್ರಿ, ನಾಣ್ಯ, ಅಲಂಕಾರ ವಸ್ತುಗಳ ಮರುಬಳಕೆ, ಗಡಿಯಾರ, ಸೈಕಲ್ಲು-ಟಿ.ವಿ., ರೇಡಿಯೋ, ಟೇಪ್ ರೆಕಾರ್ಡರ್, ಡಿವಿಡಿ-ವಿಸಿಡಿ ಬಿಚ್ಚಿ ರಿಪೇರಿ ಮಾಡುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸಮಯದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.


ತುಮಕೂರು ಜಿಲ್ಲೆಗೆ ಹೊಂದಿಕೊಂಡಿರುವ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಎಂ.ತಿಪ್ಪೇಸ್ವಾಮಿ-ಶಾಂತಮ್ಮ ದಂಪತಿ

ಇನ್ನೂ ಒಂದು ಹೆಜ್ಜೆ ಮುಂದೆ‌ ಹೋಗಿ ಈ 21 ದಿನಗಳಲ್ಲಿ ಪ್ರತಿದಿನವೂ ಒಂದೊಂದು ವಿನೂತನ ಕರಕುಶಲ- ‌ಜೀವನೋಪಯೋಗಿ ಚಟುವಟಿಕೆ ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.


ಸ್ವತಃ ಚಿತ್ರಕಲಾ ಶಿಕ್ಷಕರಾಗಿರುವ ತಿಪ್ಪೇಸ್ವಾಮಿ, ಮಕ್ಕಳಿಗೆ ಚಿತ್ರಕಲೆ, ಜೇಡಿಮಣ್ಣಿನ ಆಕೃತಿ ರಚನೆ, ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆ, ಸಂಗೀತ, ನೃತ್ಯ, ಮೇಕಪ್, ಆಯಿಲ್-ಮಸಾಜ್,
ಜಾದೂ, ಅನುಪಯುಕ್ತ ವಸ್ತುಗಳಿಂದ ಆಕೃತಿಗಳ ರಚನೆ, ಗಿಡಗಳ ಕುಂಡಗಳ ತಯಾರಿಕೆ ಮುಂತಾದ ಕಲೆಗಳನ್ನು ಮನೆಯ ಸದಸ್ಯರಿಗೆ ಹೇಳಿಕೊಡುತ್ತಿದ್ದಾರೆ.

ಚೌಕಾಬಾರ, ಅಳಗುಳಿಮಣೆ, ಚೆಸ್, ಕೇರಂ, ಹಾವು-ಏಣಿ‌ ಆಟ, ಉಪ್ಪಾರ ಪಟ್ಟೆ, ಬಸವಿನ ಕಟ್ಟೆ, ಸೇರಿದಂತೆ ಪ್ರತಿದಿನವೂ ಒಂದೊಂದು ಆಟಗಳ ಬಗ್ಗೆ ಹೇಳಿಕೊಡುತ್ತಿದ್ದಾರೆ.

ಇದರೊಂದಿಗೆ ಪ್ರತಿದಿನ ಯೋಗ, ಪ್ರಾಣಾಯಾಮ, ಧ್ಯಾನ, ಪ್ರಕೃತಿ ಚಿಕಿತ್ಸೆ, ಕಷಾಯ ಪುಡಿ‌‌ ತಯಾರಿಸುವುದು, ಸಿರಿಧಾನ್ಯಗಳಿಂದ ವಿವಿಧ ಬಗೆಯ ತಿಂಡಿ‌ ತಯಾರಿಕೆಯನ್ನು ಪ್ರತಿದಿನವೂ ಹೇಳಿಕೊಡುತ್ತಿದ್ದಾರೆ.

ಅವರ ಮನೆಯಲ್ಲಿ ಬಿಸಾಡಿದ್ದ ಲಾಟೀನು, ಒಣಕೆ, ರುಬ್ಬುವ ಗುಂಡು, ಬೀಸುವ ಕಲ್ಲು, ಕುಟ್ಟಣಿ, ಮರ-ಜರಡಿ, ಕೊಡಲಿ, ಬಾಳಸಿ, ನೆಲಗುದ್ದಲಿ, ಸಲಿಕೆ ಮುಂತಾದ ವಸ್ತುಗಳನ್ನು ಹೊರತೆಗೆದು ಅವುಗಳನ್ನು ಬಳಸುತ್ತಿದ್ದಾರೆ.

ಹತ್ತಿರದಲ್ಲೇ ಸಿಗುವ ಹಸುವಿನ ಸಗಣಿ ಸಂಗ್ರಹಿಸಿ ಅದರಿಂದ ಪ್ರತಿದಿನವೂ ಬೆರಣಿ ತಟ್ಟಿ ಅವುಗಳನ್ನು ಹೋಮ-ಅಗ್ನಿಹೋತ್ರಿಗೆ ಬಳಸುವುದು, ಮನೆಯ ಹಿತ್ತಲಲ್ಲಿ ಬೆಳೆದಿರುವ ಅಮೃತ ಬಳ್ಳಿ, ತುಳಸಿ-ಬೇವು, ಬಿಲ್ವಪತ್ರೆ, ಶುಂಠಿ, ಪುದಿನ ಕಷಾಯ ತಯಾರಿಸುವುದು, ಹತ್ತಿರದಲ್ಲಿ‌ ಸಿಗುವ ಸೌದೆ ಸಂಗ್ರಹಿಸಿ ಒಲೆಯಲ್ಲಿಯೇ ಸೌದೆ ಬಳಸಿ ಅಡುಗೆ ತಯಾರಿಸುವುದು ಮುಂತಾದ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Comments (1)

  1. Your article is really good… Thank u sir

Comment here