Sunday, November 10, 2024
Google search engine
Homeಜನಮನಮರೆಯಲಾರದ ಮಂಜುಳಾ: ಒಂದು ನೆನಪು

ಮರೆಯಲಾರದ ಮಂಜುಳಾ: ಒಂದು ನೆನಪು

ಅಂತಿಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ, ನಾ ಬರುವ ದಾರಿ ಗೌರವ ತೋರಿ, ಕೈಯ ಕಟ್ಟಿ ನಿಲ್ಲುವರೆಲ್ಲ ಎನ್ನುವ ಹಾಡು ಯಾರಿಗೆ ತಾನೆ ಗೊತ್ತಿಲ್ಲ.

ಬಜಾರಿಯಾಗಿ, ದರ್ಪದ ಶ್ರೀಮಂತ ಅಪ್ಪನಿಗೆ ತಕ್ಕ ಮಗಳಾಗಿ ಗಂಡುಬಿರಿಯಂತೆ ನಟಿಸಿ, ಅಲ್ಲಿಂದ ಸುಮಾರು ಒಂದು ದಶಕಗಳಷ್ಟು ಕಾಲ ಇಡೀ ಕನ್ನಡ ಸಿನಿಮಾ ರಂಗವನ್ನು ಆಳಿದ ಲೇಡಿ ಸೂಪರ್ ಸ್ಟಾರ್ ಬೇರಾರು ಅಲ್ಲ, ತುಮಕೂರಿನ ಹೆಮ್ಮೆಯ ಮಗಳು ಮಂಜುಳಾ.

ಮಂಜುಳಾ ಅವರ ಹುಟ್ಟು ಹಬ್ಬ ಇಂದು. ಅದರ ಜ್ಞಾಪಕಾರ್ಥ ಈ ಪುಟ್ಟ ಲೇಖನ ನಿಮ್ಮ ಮುಂದೆ.

ತುಮಕೂರಿನ ಸೆರಗಿನಲ್ಲಿರುವ ಹೊನ್ನೇನಹಳ್ಳಿ ಇವರ ಸ್ವಂತ ಊರು. ಪಟೇಲರಾಗಿದ್ದ ಹನುಮಂತೇಗೌಡ ಮಂಜುಳಾ ಅವರ ಮುತ್ತಾತ.

ಸುತ್ತ ಮುತ್ತಲ ಹತ್ತು ಹಳ್ಳಿಗಳಲ್ಲಿ ಇದ್ದ ದೊಡ್ಡ ಕುಳಗಳ ಕುಟುಂಬಗಳಲ್ಲಿ ಇವರದೂ ಒಂದು. ಹನುಮಂತೇಗೌಡ ಅವರಿಗೆ ಮೇಲಗಿರಿಗೌಡ, ದೊಡ್ಡಯ್ಯ, ಚಿಕ್ಕಮೇಲಪ್ಪ, ಹುಚ್ಚಯ್ಯ ಎಂಬ 4 ಗಂಡುಮಕ್ಕಳು.

ಕೃಷಿ ಮಾಡಿಕೊಂಡು ತೋಟ ತುಡಿಕೆ ಹೊಂದಿದ್ದ ಅನುಕೂಲಸ್ಥರು. ಹಿರಿಯ ಮಗ ಮೇಲಗಿರಿಗೌಡ ಮತ್ತು ಈರಮ್ಮ ದಂಪತಿಗಳಿಗೆ ಶಿವಣ್ಣ, ಗೌರಮ್ಮ, ಗುರುಸಿದ್ದಮ್ಮ ಎಂಬ ಮೂವರು ಮಕ್ಕಳು.

ಹಿರಿಯ ಮಗ ಶಿವಣ್ಣ ಹೈಸ್ಕೂಲ್ ಮುಗಿಸಿದ ನಂತರ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಪೋಲೀಸ್ ಶಿವಣ್ಣ ಹಾಗೂ ಅನ್ನಪೂಣರ್ೆಯೆಂದೇ ಹೆಸರಾಗಿದ್ದ ದೇವೀರಮ್ಮ ದಂಪತಿಗಳ ಮೊದಲನೇ ಮಗಳು.

ಮದುವೆಯಾಗಿ ಸುಮಾರು 15 ವರ್ಷ ಮಕ್ಕಳಿಲ್ಲ ಎನ್ನುವ ನೋವಿಗೆ ಅವರು ಮೊರೆ ಹೋದದ್ದು ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ.

ಶಿವಣ್ಣ ಮತ್ತು ದೇವೀರಮ್ಮ ದಂಪತಿಗಳಿಗೆ 8/11/1954 ರಂದು ಚಂದ್ರನ ತುಂಡಿನಂಥ ಒಂದು ಮುದ್ದಾದ ಹೆಣ್ಣು ಮಗು ಜನಿಸಿತು. ಮಂಜುನಾಥನ ಕೃಪೆಯಿಂದ ಮಗು ಹುಟ್ಟಿತು ಎಂಬ ನಂಬಿಕೆಯಿಂದ ಮಂಜುಳಾ ಎಂದು ಮಗುವಿಗೆ ನಾಮಕರಣ ಮಾಡಿಸಿದರು.

ಮಂಜುಳಾ ನಂತರ ಉಮಾ, ಮಂಜುನಾಥ, ನೀಲಕಂಠ, ಮಮತ ಹೀಗೆ ನಾಲ್ಕು ಮಕ್ಕಳು ಮನೆ ತುಂಬಿದರು, ಸಂಸಾರ ಬೆಳೆಯಿತು.

ಚಿಕ್ಕಂದಿನಿಂದಲೇ ಚೂಟಿಯಾಗಿದ್ದ ಮಂಜುಳಾ ನೃತ್ಯ ಪ್ರವೀಣೆ. ತುಮಕೂರಿನ ರಾಜರಾಜೇಶ್ವರಿ ನೃತ್ಯ ಕಲಾ ಮಂದಿರದ ಸಂಸ್ಥಾಪಕರಾದ ಶ್ರೀ ಗುರು ನಾಟ್ಯಶ್ರೀ ಕೆ.ಎಂ. ರಾಮನ್ ಅವರಲ್ಲಿ ತಮ್ಮ 5 ನೇ ವಯಸ್ಸಿಗೆ ನೃತ್ಯ ಕಲಿಯಲು ಆರಂಭಿಸಿದರು.

ಈ ನಂಟು ಮಂಜುಳಾ ಅವರ ಸಾವಿನ ವರೆಗೂ ಮುಂದುವರಿಯುತ್ತದೆ.

ಅವರು ದೊಡ್ಡ ನಟಿ ಯಾದ ಮೇಲೂ ರಾಮನ್ ಅವರು ನೃತ್ಯಾಭ್ಯಾಸ ಮಾಡಿಸಲು ಬೆಂಗಳೂರಿಗೆ ವಾರಕ್ಕೆರಡು ಬಾರಿ ಹೋಗಿಬರುತ್ತಿದ್ದರು. ಶಿವ ತಾಂಡವ ನೃತ್ಯ, ಕೊರವಂಜಿ, ಶೃಂಗಾರ ಲಹರಿ, ಮೊದಲಾದವುಗಳು ಮಂಜುಳಾ ಅವರ ಹೆಸರಾಂತ ಪ್ರದರ್ಶನಗಳು.

ಅದಲ್ಲದೆ ಪ್ರಭಾತ್ ಕಲಾವಿದರು ಆಶ್ರಯದಲ್ಲಿಯೂ ಪ್ರದರ್ಶನಗಳನ್ನು ನೀಡುತ್ತಾ ಬಂದರು. ಎಲ್ಲ ಮಕ್ಕಳಂತೆ ಓದು ನೃತ್ಯ ಹೀಗೆ ತೊಡಗಿಸಿಕೊಂಡು ಕುಟುಂಬದ ನಲ್ಮೆಯ ಮಗುವಾಗಿ ಬೆಳೆದ ಮಂಜುಳಾ ಅವರಿಗೆ ಯಾವ ಅದೃಷ್ಠವೋ, ತಂದೆ ತಾಯಿಯ ಆಶಯವೋ ಎಂಬಂತೆ 1966 ರಲ್ಲಿ ಮನೆ ಕಟ್ಟಿ ನೋಡು ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಲು ಆಹ್ವಾನ ಬಂದಿತು. ಸಿ.ವಿ ಶಿವಶಂಕರ್ ಅವರು ಈ ಚಿತ್ರ ನಿರ್ಮಿಸಿದರು.

ಉದಯ ಕುಮಾರ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಅವರ ಮಗಳ ಪಾತ್ರದಲ್ಲಿ ಮಂಜುಳ ಬಾಲ ನಟಿಯಾಗಿ ನಟಿಸುತ್ತಾರೆ. ಪಾತ್ರದ ಹೆಸರು ಮಂಜು ಎಂದು ಇದ್ದದ್ದು ಕಾಕತಾಳೀಯ.

ಹೀಗೆ ತನ್ನ 12 ನೇ ವಯಸ್ಸಿಗೆ ಸಿನಿ ಪಯಣ ಆರಂಭಿಸಿದ ಮಂಜುಳ ಹಿರಿಯ ನಟಿ ಜಯಂತಿ ಅಭಿನಯದ ಎರಡು ಮುಖ ಚಿತ್ರದಲ್ಲಿ ಅವರ ತಂಗಿಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.

ಮತ್ತೊಂದು ತೆರೆ ಕಾಣದ ಚಿತ್ರ ಪದವೀಧರ ದಲ್ಲಿಯೂ ಅಭಿನಯಿಸಿದರು.

1973 ರಲ್ಲಿ ತೆರೆಕಂಡ ಮೂರು ನಾಯಕಿಯರನ್ನೊಳಗೊಂಡ ಮೂರುವರೆ ವಜ್ರ ಸಿನಿಮಾದಲ್ಲಿ ಅಂದಿನ ಪ್ರಸಿದ್ಧ ಹೀರೋಯಿನ್ ಗಳಾದ ಜಯಂತಿ, ಆರತಿ, ಅವರ ಜೊತೆಯಲ್ಲಿ ಮಂಜುಳ ಕೂಡ ನಾಯಕಿಯಾಗಿ ಅಭಿನಯಿಸಿದರು.

ಅಲ್ಲಿಂದ ಮುಂದೆ ಎರಡು ಕನಸು, ನಂತರ ಸಂಪತ್ತಿಗೆ ಸವಾಲ್. ಇಲ್ಲಿಂದ ಶುರುವಾಯಿತು ಅವರ ನಟನೆಯ ನಾಗಾಲೋಟ. ಆಗಿನ ಚಲನಚಿತ್ರ ರಂಗದ ಮೇರು ನಟರ ಜೊತೆ ನಟಿಸಿದರು.

ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಶಂಕರ್ನಾಗ್, ಅಶೋಕ್, ಅನಂತ್ನಾಗ್, ದ್ವಾರಕೀಶ್, ಹೀಗೆ ಎಲ್ಲರ ಜೊತೆಯೂ ಅಭಿನಯಿಸಿದ ಮಂಜುಳ ಹೀರೋ ಗಳಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

ಇವರು ನಟಿಸಿದ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ 98. ಕೆಲವನ್ನು ಹೆಸರಿಸುವುದಾದರೆ ಸಂಪತ್ತಿಗೆ ಸವಾಲ್, ಮಯೂರ, ದಾರಿ ತಪ್ಪಿದ ಮಗ, ನೀ ನನ್ನ ಗೆಲ್ಲಲಾರೆ, ಎರಡು ಕನಸು, ಶ್ರೀನಿವಾಸ ಕಲ್ಯಾಣ, ಗಲಾಟೆ ಸಂಸಾರ, ಹುಡುಗಾಟದ ಹುಡುಗಿ, ಪಾಯಿಂಟ್ ಪರಿಮಳ, ಸವತಿಯ ನೆರಳು. ಸೀತಾರಾಮು, ದೀಪ, ಮರೆಯದ ಹಾಡು, ಮರೆಯಲಾಗದ ಕಥೆ, ಕುಂಕಮ ರಕ್ಷೆ, ಬದುಕು ಬಂಗಾರವಾಯಿತು.

ನಿನಗಾಗಿ ನಾನು, ಶಿಕಾರಿ, ಸೊಸೆ ತಂದ ಸೌಭಾಗ್ಯ, ಮಿಥುನ, ಬೆಸುಗೆ, ಸಿಂಗಾಪುರದಲ್ಲಿ ರಾಜಾಕುಳ್ಳ, ಕಿಟ್ಟು ಪುಟ್ಟು, ಬೆತ್ತಲ ಸೇವೆ, ಪಟ್ಟಣಕ್ಕೆ ಬಂದ ಪತ್ನಿಯರು ಹೀಗೆ, ಸಾಗುತ್ತದೆ ಪಟ್ಟಿ. ಅವರ ಕೊನೆ ಸಿನಿಮಾ ಮನ ಗೆದ್ದ ಮಗ ಇವರು ಅಕಾಲ ಮರಣಕ್ಕೆ ತುತ್ತಾದ ನಂತರ ತೆರೆ ಕಾಣುತ್ತದೆ.

ಡಬ್ಬಿಂಗ್ಗೆ ಕೂಡ ಇವರು ಇರಲಿಲ್ಲ. ಎರಡು ದಂಡೆಯ ಮೇಲೆ, ಹಾಗೂ ಬೆತ್ತಲ ಸೇವೆ ಅಪೂರ್ಣ ಚಿತ್ರಗಳು. ಕನ್ನಡದ ಜೊತೆಗೆ ತಮಿಳಿನಲ್ಲಿ 5, ತೆಲುಗಿನಲ್ಲಿ 2 ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಮಂಜುಳ.

ದೀಪ ಚಿತ್ರದ ಮನೋಜ್ಞ ಅಭಿನಯಕ್ಕಾಗಿ 1977 ರಲ್ಲಿ ಫಿಲಂ ಫೇರ್ ಅವಾಡರ್್ ಅನ್ನು ಪಡೆದರು. ನವರಸಗಳ ಅಭಿನಯವನ್ನು ಕರಗತ ಮಾಡಿಕೊಂಡಿದ್ದ ಇವರು, ಸೀತಾ ರಾಮು ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರ ರಸಿಕರ ಮನ ಗೆದ್ದರು. ಅನೇಕ ಚಿತ್ರಗಳಲ್ಲಿ ತಮ್ಮನ್ನು ತಾವು ಪ್ರಯೋಗಕ್ಕೆ ಒಗ್ಗಿಸಿಕೊಂಡರು.

ಮಂಜುಳಾ ಅವರನ್ನು ಹಾಕಿಕೊಂಡು ಚಿತ್ರ ತೆಗೆದರೆ ಚಿತ್ರ ಗೆಲ್ಲುತ್ತದೆ ಎಂಬುದು ಆಗ ಸಿನಿಮಾ ರಂಗದಲ್ಲಿ ಪ್ರಚಲಿತದಲ್ಲಿದ್ದ ಮಾತು. ಒಮ್ಮೊಮ್ಮೆ ಡೇಟ್ ಸಿಗದೆ ಒಟ್ಟೊಟ್ಟಿಗೆ ಎರಡು ಮೂರು ಚಿತ್ರಗಳ ಶೂಟಿಂಗ್ ಒಪ್ಪಿಕೊಂಡಿದ್ದೂ ಇದೆ.

ವಿಶೇಷತೆ ಯೆಂದರೆ ನಟನೆ ಮಾಡುತ್ತಿದ್ದುದು ಮಂಜುಳಾ, ಆದರೆ ನಿರ್ದೇಶಕರೊಂದಿಗೆ, ನಿರ್ಮಾಪಕರೊಂದಿಗೆ ವ್ಯವಹಾರ ಮಾತಾಡುತ್ತಿದ್ದದ್ದು ತಾಯಿ ದೇವೀರಮ್ಮ ನವರೆ ಆಗಿದ್ದರು.

1976 ರಲ್ಲಿ ತೆರೆ ಕಂಡ, ತಾನೇ ನಾಯಕಿಯಾಗಿ ನಟಿಸಿದ್ದ ಹುಡುಗಾಟದ ಹುಡುಗಿ ಚಿತ್ರದ ನಿದರ್ೇಶಕ ರಾದ ತಮಿಳು ನಾಡು ಮೂಲದ ಅಮೃತಂ ಅವರನ್ನು 1977 ನೇ ಇಸವಿಯಲ್ಲಿ ಮದುವೆಯಾದರು. ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು.

ಆಗ ಮಂಜುಳಾ ಅವರ ವಯಸ್ಸು ಕೇವಲ 23. ಇದು ಇವರಿಗೆ ಮೊದಲ ಮದುವೆ. ಆದರೆ ಅಮೃತಂ ಅವರಿಗೆ ಎರಡನೆ ಮದುವೆ. ಈ ದಂಪತಿಗೆ ಒಬ್ಬನೇ ಗಂಡು ಮಗು, ಹೆಸರು ಅಭಿಷೇಕ್ ಎಂದು.

ಮದುವೆಯಾಗಿ ತಾಯಿಯಾದ ಮೇಲೆ ಸ್ವಲ್ಪ ದಪ್ಪಗಾಗಿದ್ದ ಮಂಜುಳಾ ಅವರಿಗೆ ಕ್ರಮೇಣ ಬರತೊಡಗಿದ ಪಿಕ್ಟರ್ಗಳು ಕಡಿಮೆಯಾದವು ಅನ್ನುವ ಮಾತಿದೆ. ಅವಕಾಶಗಳು ಕಡಿಮೆಯಾದಾಗ ಖಿನ್ನತೆಗೂ ಒಳಗಾಗಿರುವ ಸಾಧ್ಯತೆ ಇದೆ.

ಅಂದು ತಾರೀಕು 12 ಸೆಪ್ಟೆಂಬರ್ 1986. ವಾರ ಶುಕ್ರವಾರ. ಯಥಾಪ್ರಕಾರ ಅದು ಸಾಧಾರಣಾ ದಿನವೇ. ಆದರೆ ಅಂದು ನಡೆದ ಘಟನೆಯೊಂದು ಆ ದಿನವನ್ನು ಇತಿಹಾಸದಲ್ಲಿ ದಾಖಲಿಸಿರದಿದ್ದರೆ ಅದು ಜನಮಾನಸದಿಂದ, ಆ ಕುಟುಂಬದ ನೆನಪಿನಾಳದಿಂದ, ಅಳಿಸಿಹೋಗುತಿತ್ತೇನೋ. ಆದರೆ ಆ ವಿಧಿಯ ಕ್ರೂರ ಆಟವೇ ಬೇರೆಯಾಗಿತ್ತು.

ಗ್ಯಾಸ್ ಸ್ಟೌವ್ ಸಿಡಿದು ನಟಿ ಮಂಜುಳ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದಾರೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಸ್ಟೌವ್ ಸಿಡಿದಾಗ ಅವರು ಹಾಕಿದ್ದ ಆಕಾಶ ಬಣ್ಣದ ನೈಲಾನ್ ನೈಟಿ ಯಿಂದ ಮತ್ತಷ್ಟು ಚರ್ಮ ಸುಟ್ಟಿತ್ತು. ಎದೆ ಭಾಗ, ಕೈಯಲ್ಲಾ ಸುಟ್ಟು ಹೋಗಿತ್ತು.

ಆ ನೋವಿಯಲ್ಲಿಯೂ ಆ ಜೀವ ತನ್ನ ತಮ್ಮನನ್ನು ಕೇಳಿದ್ದಿಷ್ಟೇ ನನ್ನ ಮುಖಕ್ಕೆ ಏನೂ ಆಗಿಲ್ಲ ತಾನೆ. ಅಷ್ಟರಲ್ಲಾಗಲೆ ಡಾಕ್ಟರ್ ಉಳಿಯುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ಅಂದು 1986ರ 19ನೇ ತಾರೀಖು.

ಶುಕ್ರವಾರ ಸರಿಯಾಗಿ ಸಂಜೆ 7.30. ಕೊನೆ ಕ್ಷಣ ಕಣ್ಣರಳಿಸಿ ತಮ್ಮನನ್ನು ದಿಟ್ಟಿಸಿದರು. ಕಣ್ಣಿನಲ್ಲಿ ನೀರು ಧಾರೆಯಾಯಿತು. ಏನು ಹೇಳಬೇಕಿತ್ತೋ, ಆದರೆ ದನಿ ಹೊರಡಲಿಲ್ಲ. ತಮ್ಮ ಏನೂ ಅಗಲ್ಲ ಸುಮ್ಮನಿರು ಎಂದರು.

ಅಷ್ಟೇ, ಕ್ಷಣದಲ್ಲಿ ಕಣ್ಣುಗಳು ಮುಚ್ಚಿದವು. ಉಸಿರು ನಿಂತು ಪ್ರಾಣ ಪಕ್ಷಿ ಹಾರಿ ಹೋಯಿತು. ದುರ್ಘಟನೆ ನಡೆದು ಸರಿಯಾಗಿ ಒಂದು ವಾರಕ್ಕೆ, ಸುಟ್ಟ ಗಾಯಗಳ ಯಮಯಾತನೆ ಅನುಭವಿಸಿದ, ಅಪಾರ ಜೀವನ ಪ್ರೀತಿ ಹೊಂದಿದ್ದ, ಭವಿಷ್ಯದ ಬದುಕಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ, ತಾರೆ ಬದುಕಿಗೆ ವಿದಾಯ ಹೇಳಿ ಇಹಲೋಕ ತ್ಯಜಿಸಿದರು.

ಆಸ್ಪತ್ರೆಯ ವೈದ್ಯರು ಮಂಜುಳ ಸಾವನ್ನು ಅಧಿಕೃತವಾಗಿ ಘೋಷಿಸಿದ ಮೇಲೆ ಶೋಕ ಸಾಗರದಲ್ಲಿ ಸಿನಿ ಲೋಕ ಮುಳುಗಿತು. ಕನ್ನಡನಾಡು ಕಂಬನಿ ಗರೆಯಿತು.

1966ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಒಂದು ದಶಕದ ಕಾಲ, ಒಂದು ಶತಕಕಕ್ಕೂ ಹೆಚ್ಚು ಸಿನಿಮಾಗಳಲ್ಲಿ, ವೈವಿಧ್ಯಮಯ ಪಾತ್ರಗಳಲ್ಲಿ, ಚಿತ್ರರಸಿಕರನ್ನು ರಂಜಿಸಿ, ಇಡೀ ಚಿತ್ರ ಜಗತ್ತನ್ನೇ ಆಳಿದ ಅಭಿಯನ ಸರಸ್ವತಿ. ಬಟ್ಟಲುಗಣ್ಣಿನ ಚೆಲುವೆ ಬಾರದ ಲೋಕಕ್ಕೆ ಪಯಣಿಸಿದರು.

ಕೊನೆಯ ಚಿತ್ರ ಬೆತ್ತಲೆಸೇವೆ ಆಗ ತಾನೇ ಮುಗಿದಿತ್ತು. ಚಿತ್ರಕ್ಕಾಗಿ ಸೆಲೆಕ್ಟ್ ಮಾಡಿದ್ದ ಕಾಸ್ಟೂಮ್ ಮನೆಯಲ್ಲಿತ್ತು. ಎಲ್ಲವನ್ನೂ, ಎಲ್ಲರನ್ನೂ, ಅಪಾರ ಅಭಿಮಾನಿ ಲೋಕವನ್ನು ಬಿಟ್ಟು ಕಾಣದ ಊರಿಗೆ ನಡದೇ ಬಿಟ್ಟಿದ್ದರು ಮಂಜುಳ.

ತುಂಬಿದ ಕುಟುಂಬ, ಕುಟುಂಬದ ಹೆಬ್ಬಾಗಿಲಿನಂತಿದ್ದ ಮನೆ ಮಗಳು. ಅಪ್ಪ ಅಮ್ಮನನ್ನು, ನೆನಪಿಗೆ ಇಟ್ಟು ಕೊಳ್ಳಲೂ ಸಾಧ್ಯವಿಲ್ಲದ ವಯಸ್ಸಿನ ಮಗು ಅಭಿಷೇಕ್, ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಕುಟುಂಬ ವರ್ಗ, ಅಪಾರ ಬಂಧುಗಳನ್ನು ಬಿಟ್ಟು, ಜಯನಗರದ ಮಂಜುಳ ನಿವಾಸ ದಲ್ಲಿ ನಿಶ್ಚಲವಾಗಿ ಮಲಗಿದಳು.

ರೇಡಿಯೋಗಳಲ್ಲಿ, ಟಿ.ವಿಗಳಲ್ಲಿ ಸಾವಿನ ಸುದ್ದಿ ಪ್ರಸಾರವಾಯಿತು. ಬೆಂಗಳೂರಿನಿಂದ ತುಮಕೂರು ತಲುಪುವವರೆಗೆ ಟಿ.ಬೇಗೂರು, ನೆಲಮಂಗಲ, ದಾಬಸ್ಪೇಟೆ, ಕ್ಯಾತ್ಸಂದ್ರ, ಮುಂತಾದ ಕಡೆ ಅಭಿಮಾನಿಗಳು ವಾಹನವ ತಡೆದು ನಿಲ್ಲಿಸಿ ಅಂತಿಮ ದರ್ಶನ ಪಡೆದರು.

ಹಲವಾರು ಕಡೆ ಅವರಿಗೆ ಹಾರ ಹಾಕಿ, ಪೂಜೆ ಸಲ್ಲಿಸಿತು ಜನತೆ.

ಸಂಜೆ 4.00ರ ವೇಳೆಗೆ ತುಮಕೂರು ಸಮೀಪದ ಹುಟ್ಟೂರು ಹೊನ್ನೆನಹಳ್ಳಿಗೆ ಮೃತದೇಹ ತಲುಪಿತು. ವಿಷಯ ಕಾಳ್ಗಿಚ್ಚಿನಂತೆ ಹಬ್ಬಿತು. ಜನಸಾಗರವೇ ಹರಿದು ಬಂತು.

ಕುಟುಂಬಸ್ಥರೇ ಒಳಹೋಗಲು ಹರಸಾಹಸ ಪಡುವಂತಾಯಿತು. ಅಷ್ಟೊಂದು ಜನಜಂಗುಳಿ. ಅಷ್ಟರೊಳಗೆ ಇಲ್ಲಿದ್ದ ಕುಟುಂಬಸ್ಥರು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಸಂಸ್ಕಾರಕ್ಕೆ ನಟರಾದ ಶ್ರೀನಾಥ್, ಶಿವರಾಂ. ಸುಂದರ್ರಾಜ್, ಹಾಗೂ ಸ್ಥಳೀಯ ನಾಯಕರು, ಪೋಲೀಸ್ ಇಲಾಖೆಯ ಸಿಬ್ಬಂದಿ, ಹೀಗೆ ಜನವೋ ಜನ.

ಸಂಜೆಯಾಗುತ್ತಲೇ ಮಂಜುಳಾ ರವರನ್ನು ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಮಣ್ಣು ಮಾಡಲಾಯಿತು. ಅಲ್ಲಿಗೆ ತುಮಕೂರಿನ ಒಬ್ಬ ಹೆಸರಾಂತ ನಟಿ ನೃತ್ಯತಾರೆ ಪಂಚಭೂತಗಳಲ್ಲಿ ಲೀನವಾದರು. ವಿಧಿಯಾಟ ಬಲ್ಲವರಾರು ಸತ್ತಾಗ ಅವರ ವಯಸ್ಸು ಕೇವಲ 32.

ಇಂದು ಅವರ ಹುಟ್ಟು ಹಬ್ಬ. ಹೊನ್ನೆನಹಳ್ಳಿಯ ಅವರ ತೋಟದಲ್ಲೇ ಅವರ ಸಮಾಧಿ ಇದೆ. ಸಮೀಪದಲ್ಲಿ ಅವರೇ ಕಟ್ಟಿಸಿದ ಮಂಜುನಾಥ ದೇವಾಲಯವೂ ಇದೆ. ಅದನ್ನು ತಮ್ಮ ನೀಲಕಂಠ ಮತ್ತು ಅವರ ಕುಟುಂಬ ನೋಡಿಕೊಳ್ಳುತ್ತಿದೆ.

ತಮ್ಮಂದಿರು, ಅವರ ಕುಟುಂಬ ತುಮಕೂರಿನಲ್ಲಿ ನೆಲೆಸಿದ್ದರೆ, ತಂಗಿಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗ ಬೆಳೆದು ದೊಡ್ಡವನಾಗಿದ್ದಾನೆ. ಮಗ ಸೊಸೆ ಅವರೂ ಬೆಂಗಳೂರಿನಲ್ಲೆ ಇದ್ದಾರೆ. ಪತಿ ಅಮೃತಂ ಈ ಕುಟುಂಬದೊಟ್ಟಿಗೆ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ. ಮತ್ತೆ ಇವರ ಕುಟುಬದಿಂದ ಯಾರೂ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿಲ್ಲ. ತಮ್ಮ ನೀಲಕಂಠ ಮತ್ತು ರೂಪ ಅವರ ಮಗಳು ಮಿಥಿಲಾ ಹೆಚ್ಚು ಕಡಿಮೆ ಅತ್ತೆಯನ್ನೆ ಹೋಲುತ್ತಾಳೆ, ಅತ್ತೆಯಂತೆಯೇ ನೃತ್ಯ ಪ್ರವೀಣೆ. ಅವಳ ಹಾವ ಭಾವ ಸದಾ ಮಂಜುಳಾ ಅವರನ್ನು ನೆನಪಿಸುತ್ತದೆ.

ಕುಟುಂಬ ಮನಸ್ಸು ಮಾಡಿದರೆ ಮಂಜುಳಾ ಅವರ ಕುಟುಂಬದ ಕುಡಿ ಮತ್ತೆ ಸಿನಿ ಜಗತ್ತಿಗೆ ಬರಬಹುದೇನೋ. ಕಾದು ನೋಡಬೇಕು.
ಇಂದು ಬದುಕಿದ್ದರೆ, ಬಿ.ಸರೋಜ ದೇವಿ, ಜಯಂತಿ, ಆರತಿ, ಲೀಲಾವತಿ, ಅವರಂತೆ ಹಿರಿಯ ಕಲಾವಿದೆಯಾಗಿ ನಮ್ಮೊಂದಿಗೆ ಮಂಜುಳಾ ಇರುತ್ತಿದ್ದರು.

ಮಹಾನ್ ನಟಿಯ ಹುಟ್ಟು ಹಬ್ಬದ ದಿನದಂದು ಅವರಿಗೆ ಎಲ್ಲ ಅಭಿಮಾನಿಗಳ ಪರವಾಗಿ ನನ್ನದೊಂದು ನುಡಿ ನಮನ.


ರಾಣಿ ಚಂದ್ರಶೇಖರ್
ದೂರವಾಣಿ:9986824210

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?