ಚಿಕ್ಕನಾಯಕನಹಳ್ಳಿ : ರಾಮನಹಳ್ಳಿ ಕುಮಾರಯ್ಯ ಮತ್ತು ಸೀಬಿ ಲಿಂಗಯ್ಯ’ರವರಂತಹ ಹಿರಿಯ ರೈತ ಮುಖಂಡರೊಂದಿಗೆ, ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಅಡಿಕೆ ಸಸಿ ನೆಡುವುದರ ಮೂಲಕ ಶಾಸಕ ಸಿ ಬಿ ಸುರೇಶ್ ಬಾಬು’ರವರು ರೈತ ದಿನಾಚರಣೆಯನ್ನು ರೈತರು ಮತ್ತು ಕೃಷಿ ಅಧಿಕಾರಿಗಳ ಜೊತೆಸೇರಿ ಆಚರಿಸಿದರು.
ಸೋಮವಾರ ಬೆಳಗ್ಗೆ ತಾಲ್ಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ ಪಟ್ಟದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2024-25 ನೇ ಸಾಲಿನ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್ ಎಸ್ ಶಿವರಾಜಕುಮಾರ್’ರವರು, ಈ ಬಾರಿ ತಾಲ್ಲೂಕಿನ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ರೈತರ ಎಲ್ಲ ಬೆಳೆಗಳಲ್ಲೂ ಉತ್ತಮ ಫಸಲು ಕಂಡುಬಂದಿದೆ. ಇಂಥ ಸಮೃದ್ಧಿಯ ಕಾಲದಲ್ಲಿ ಮತ್ತು ಈಗಿನ ಸುಗ್ಗಿ-ಸೀಜ಼ನ್’ನಲ್ಲಿ ರೈತ ದಿನಾಚರಣೆ ಅರ್ಥಪೂರ್ಣ ಮತ್ತು ಸಾರ್ಥಕ ಅನಿಸುತ್ತಿದೆ ಎಂದರು.
ಶಾಸಕ ಸಿ ಬಿ ಸುರೇಶ್ ಬಾಬು’ರವರು ಮಾತನಾಡಿ, ರೈತರಿಗೆ ಜಾತಿಯಿಲ್ಲ. ಪಕ್ಷವಿಲ್ಲ. ಅನ್ನದಾತ ಎಂಬುದೊಂದೇ ಜಾತಿ ರೈತರದು. ನೇಗಿಲಧರ್ಮ ಎಂಬುದೊಂದೇ ಧರ್ಮ ಅವರದು. ಹಾಗಾಗಿ, ನಾವೂ ಕೂಡ ಜಾತಿಬೇಧ, ಪಕ್ಷಬೇಧ ಬದಿಗಿಟ್ಟು ರೈತರ ಸೇವೆ ಮಾಡಬೇಕು. ತಾಲ್ಲೂಕು ಕೃಷಿ ಅಧಿಕಾರಿಗಳು ಅದನ್ನು ಸರ್ವಥಾ ನಿಭಾಯಿಸುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆ.
ರೈತರ ಅನುಕೂಲಗಳಿಗಾಗಿ ಹತ್ತುಹಲವು ಯೋಜನೆಗಳನ್ನು ಸ್ಥಳೀಯವಾಗಿ ರೂಪಿಸುತ್ತಿರುವ ನಾವು, ರೈತರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಚಿತ ಸಿಇಟಿ ಕೋಚಿಂಗ್ ಮತ್ತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕ ಸಮಾಜದ ಮಕ್ಕಳು ಹೆಚ್ಚೆಚ್ಚು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ರಾಮನಹಳ್ಳಿ ಕುಮಾರಯ್ಯ ಮಾತನಾಡಿ, ರೈತ ಹೋರಾಟಗಳು ಕಸುವು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, ರೈತ ದಿನಾಚರಣೆಯ ಮೂಲಕ ಮತ್ತೆ ಮತ್ತೆ ರೈತಹಕ್ಕುಗಳನ್ನು ಪ್ರತಿಪಾದಿಸುವ ಅವಕಾಶಗಳು ಸಿಗುತ್ತಿರುವುದು ಸಮಾಧಾನಕರ. ಕಿಷನ್ ಪಟ್ನಾಯಕ್, ಪ್ರೊ.ಎಂ ಡಿ ನಂಜುಂಡಸ್ವಾಮಿಯವರಂತಹ ಪ್ರಖರ ಚಿಂತಕರೂ, ದಿಟ್ಟ ಹೋರಾಟಗಾರರೂ ಕಟ್ಟಿಕೊಟ್ಟ ಚಳವಳಿಯ ಬಂಧ ಈಗಲೂ ಹಿರಿ ತಲಮಾರಿನ ಹೋರಾಟಗಾರರಲ್ಲಿ ಉಳಿದಿದೆ. ಅದೇರೀತಿ, ಕೇವಲ ಇದು ದಿನಾಚರಣೆಗಷ್ಟೇ ಸೀಮಿತವಾಗದೆ ಚೌಧರಿ ಚರಣ್ ಸಿಂಗ್’ರವರ ರೈತ ಆಶಯಗಳು ಈಡೇರುವಂತಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ, ರೈತ ಮುಖಂಡರು, ಕೃಷಿ ಅಧಿಕಾರಿಗಳು, ಸಿಬ್ಬಂದಿಗಳು, ಮಹಿಳಾ ಸಾಂತ್ವನ ಕೇಂದ್ರದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ