ತುರುವೇಕೆರೆ: ಒನಕೆ ಓಬವ್ವನಂತಹ ಹತ್ತಾರು ವೀರ ಮಹಿಳೆಯರು ನಾಡಿನ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡಿರುವ ಅವರುಗಳ ಚರಿತ್ರೆಯನ್ನು ಈ ತಲೆಮಾರಿನ ಮಕ್ಕಳಿಗೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಓನಕೆ ಓಬವ್ವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಓಬವ್ವನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು
ಶತ್ರುಗಳ ದಾಳಿಯಿಂದ ಚಿತ್ರದುರ್ಗದ ಕೋಟಿಯನ್ನು ರಕ್ಷಣೆ ಮಾಡುವ ಮೂಲಕ ನಾಡಿನ ಹಾಗು ರಾಜನ ಬಗೆಗಿನ ಅತೀವ ಕಾಳಜಿಯನ್ನು ಓಬವ್ವ ತೋರಿದ್ದಾರೆ. ಅದೇ ರೀತಿ ಕನರ್ಾಟಕದ ಉದ್ದಕ್ಕೂ ರಾಜ ಪ್ರಭುತ್ವದ ಕಾಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮರಂತಹ ವೀರಾಗ್ರಹಿಣಿಯರು ನಾಡಿನ ಅಸ್ಥಿತ್ವ ಮತ್ತು ತಮ್ಮ ಪರಂಪರೆಯನ್ನು ಅನ್ಯ ಸಂಸ್ಕೃತಿಯ ದಾಳಿಗೆ ಸಿಕ್ಕಿ ಹಾಳಾಗದಂತೆ ನೋಡಿಕೊಳ್ಳಲು ತಮ್ಮ ಪ್ರಾಣ ತ್ಯಾಗಕ್ಕೂ ಹೆದರಲಿಲ್ಲ.
12 ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ವಚನ ಚಳವಳಿಯಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಅಮುಗೆರಾಯಮ್ಮ ಇಂತಹ ನೂರು ವಚನಕಾರ್ತಿಯರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದವರು.
ಮಹಿಳೆಯರು ಕೇವಲ ಗೃಹ ಕಾರ್ಯಗಳಿಗೆ ಮಾತ್ರ ಸೀಮಿತರಾಗದೆ ಆಧುನಿಕ ಯುಗದಲ್ಲಿ ಪುರುಷನಿಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ದುಡಿಯುವುದರೊಂದಿಗೆ ದೇಶ ಕಟ್ಟುವ ಕೆಲಸದಲ್ಲಿ ಸಹಬಾಗಿಯಾಗಿದ್ದಾರೆ. ಈ ನಾಡು ಹೆಣ್ಣಿಗೆ ಪವಿತ್ರ ಹಾಗು ಪೂಜನೀಯ ಸ್ಥಾನ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇದೇ ವೇಳೆ ದಬ್ಬೇಘಟ್ಟ ಹೋಬಳಿಯ ತಮಟೆ ಕಲಾವಿದೆ ಭಾಗ್ಯಮ್ಮನವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ಥೆದಾರ್ ಸುನಿಲ್ ಕುಮಾರ್, ಚುನಾವಣಾಧಿಕಾರಿ ಪಿ.ಕಾಂತರಾಜು, ಎಸ್.ಡಿ.ಎ ವತ್ಸಲಾ, ದಸಂಸ ಮುಖಂಡರಾದ ಬಾಣಸಂದ್ರ ಕೃಷ್ಣಮಾದಿಗ, ಡೊಂಕಿಹಳ್ಳಿ ರಾಮಣ್ಣ, ಜಗದೀಶ್, ಕೋಳಘಟ್ಟ ಕೇಶವ್, ದಿಲೀಪ್ ಕುಮಾರ್, ಬಾಳೇಕಾಯಿ ಶೇಖರ್, ನೀರುಗುಂದ ಮಹೇಶ್, ರಾಮಚಂದ್ರ ಪಾಲ್ಗೊಂಡಿದ್ದರು.