Publicstory/prajayoga
ಚೇತನ್ ಮೌರ್ಯ, ಶಿಕ್ಷಕರು
ಆಧುನಿಕತೆ ಮುಂದುವರೆದಂತೆ ಮಕ್ಕಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಕಾರಣ ಅನೇಕ. ನಮ್ಮ ಮಕ್ಕಳು ಹುಟ್ಟುತ್ತಾ ಖಾಲಿ ಹಾಳೆಯಂತಿರುತ್ತಾರೆ. ಅವರದು ನಿಷ್ಕಲ್ಮಶ ಮನಸ್ಸು. ಅವರು ಮಾತು ಕಲಿಯುವವರೆಗೆ ನಮ್ಮ ಮಾತುಗಳನ್ನು ಆಲಿಸುತ್ತಾ, ನಂತರ ತೊದಲು ನುಡಿಯ ಮೂಲಕ ಮಾತು ಪ್ರಾರಂಭಿಸುತ್ತಾರೆ. ಇದೆಲ್ಲ ಗೊತ್ತಿರುವ ವಿಚಾರವೇ. ಆದರೆ ಮಕ್ಕಳಿಗೆ ನಾವು ಯಾವ ರೀತಿಯ ನುಡಿಗಳನ್ನು ಕಲಿಸುತ್ತೇವೆ, ಯಾವ ರೀತಿಯ ನಡವಳಿಕೆಗಳನ್ನು ಕಲಿಸುತ್ತೇವೆ, ಮಕ್ಕಳ ಮುಂದೆ ನಾವು ಹೇಗೆ ವರ್ತಿಸುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ.
ಮಕ್ಕಳು ಶಾಲೆಗೆ ಸೇರುವ ಮೊದಲೇ ಅನೇಕ ಪಾಠಗಳನ್ನು ಮನೆಯಲ್ಲಿ ಕಲಿತಿರುತ್ತಾರೆ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ನಾಣ್ನುಡಿಯಂತೆ ಅವರಿಗೆ ಯಾವ ರೀತಿಯ ಸಭ್ಯತೆ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರ, ಒಳ್ಳೆಯ ಭಾಷೆ ಜೊತೆಗೆ ಮಾತುಗಳನ್ನು ಹೇಗೆ ಕಲಿಸುತ್ತೇವೆ ಎಂಬ ತಳಹದಿಯ ಮೇಲೆ ಅವರ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ.
ಶಾಲಾ ಜೀವನ, ಕಾಲೇಜು ಜೀವನ, ಉದ್ಯೋಗ ಜೀವನ, ಮುಂದುವರಿಯುತ್ತದೆ. ಮಕ್ಕಳಿಗೆ ಮನೆಯೇ ಮೊದಲ ವಿದ್ಯಾಲಯ. ಪೋಷಕರೇ ಗುರುಗಳು. ನ್ಯೂಟನ್ ಮೂರನೇ ನಿಯಮದಂತೆ ಮಕ್ಕಳಿಗೆ ಕಲಿಸುವ ನಡವಳಿಕೆಯ ಮೇಲೆ, ಅವರು ನಮ್ಮನ್ನು ವೃದ್ಯಾಪ್ಯದಲ್ಲಿ ಹೇಗೆ ನೋಡಿಕೊಳ್ಳುತ್ತಾರೆ ಎಂಬುದು ನಿರ್ಧಾರವಾಗುತ್ತದೆ.
“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ” ಎಂಬಂತೆ ದುರ್ವಿದ್ಯೆ ಗಳನ್ನು ಬಾಲ್ಯದಲ್ಲಿ ಕಲಿತ ಮಕ್ಕಳು ಮುಂದೆ ಒಳ್ಳೆಯ ಪ್ರಜೆಗಳಾಗುವುದು ಅಸಾಧ್ಯ. ಆದ್ದರಿಂದ ಆತ್ಮೀಯ ಪೋಷಕರು ನಿಮ್ಮ ಮಕ್ಕಳಿಗೆ ಒಳ್ಳೆಯ ಭಾಷೆ, ಗುರುಹಿರಿಯರಿಗೆ ಗೌರವ ಕೊಡುವುದು ಮೊದಲಾದ ಗುಣಗಳನ್ನು ಕಲಿಸಿದರೆ ಅದು ನಿಮಗೆ ವೃದ್ಧಾಪ್ಯದಲ್ಲಿ ಪ್ರತಿಫಲಿಸುತ್ತದೆ. ನೀವು ಮಕ್ಕಳ ಮುಂದೆ ನಿಮ್ಮ ತಂದೆ ತಾಯಿಗಳಿಗೆ ನೀವು ತೋರುವ ಕಾಳಜಿ, ಗೌರವವನ್ನು ಮಕ್ಕಳು ನೋಡುತ್ತಿರುತ್ತಾರೆ. ಅವರಿಗೆ ನೀವು ಅಗೌರವ ತೋರಿದರೆ ನಿಮಗೆ ಮುಂದೆ ಅದೇ ಗತಿ.!
ಮನೆಯಲ್ಲಿ ಏಕವಚನ ಬಹುವಚನ ಬೈಗುಳಗಳ ಮೇಲೆ ಹಿಡಿತ ಹಿಡಿತವಿರಲಿ. ಮಕ್ಕಳ ಮುಂದೆ ಇದು ಸಲ್ಲ . ಹಣದ ಕುರಿತಾದ ವಿಷಯಗಳನ್ನು ಮಕ್ಕಳ ಮುಂದೆ ಚರ್ಚಿಸಬೇಡಿ. “ದುಡ್ಡೇ ಜೀವನದಲ್ಲಿ ಮುಖ್ಯ ಎಂಬುದನ್ನು ನೀವು ಅವರ ತಲೆಗೆ ತುಂಬಬೇಡಿ” ಅವರ ವಿದ್ಯಾಭ್ಯಾಸ ಹಾಳಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಮಾಜದಲ್ಲಿ ಉತ್ತಮ ಪ್ರಜೆಗಳ ನಿರ್ಮಾಣದಲ್ಲಿ ತಂದೆ ತಾಯಿಗಳ ಜೊತೆಗೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ “ಮಾಡಿದ್ದುಣ್ಣೋ ಮಹಾರಾಯ” ಎಂಬಂತೆ ಎಲ್ಲರೂ ಪರಿಣಾಮ ಎದುರಿಸಬೇಕಾಗುತ್ತದೆ.
ಬರಹ ಲೇಖಕರ ಅಭಿಪ್ರಾಯ ಹೊರತು, ವೆಬ್‌ಸೈಟ್‌ನ ಅಭಿಪ್ರಾಯವಲ್ಲ