Publicstory/prajayoga
ಗುಬ್ಬಿ: ಹೇಮಾವತಿ ಮುಖ್ಯ ನಾಲೆಯ ಸಮೀಪದಲ್ಲೇ ಇರುವ ಸಾಗರನಹಳ್ಳಿ ಗ್ರಾಮವು ಸಂಪೂರ್ಣ ಜಲಾವೃತ ಆಗುವ ದುಸ್ಥಿತಿಯಲ್ಲಿದೆ. ಈಗಾಗಲೇ ಎಲ್ಲಾ ಮನೆಗಳು ತೇವಾಂಶದಿಂದ ಕೂಡಿದೆ. ಈ ಕೂಡಲೇ ಗ್ರಾಮದಲ್ಲಿರುವ ಗೋಮಾಳ ಜಮೀನು ಸಂತ್ರಸ್ತ ಕುಟುಂಬಗಳಿಗೆ ಮನೆ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಜಮಾಯಿಸಿದ ನೂರಾರು ಸಾಗರನಹಳ್ಳಿ ಗ್ರಾಮಸ್ಥರು ಇಡೀ ಗ್ರಾಮಕ್ಕಾಗುತ್ತಿರುವ ಅನಾಹುತ ಬಗ್ಗೆ ವಿವರಿಸಿ ಅಧಿಕಾರಿಗಳಿಗೆ ಮನದಟ್ಟು ಮಾಡಿದರು. ಗ್ರಾಮದಿಂದ ಕೇವಲ 300 ಮೀಟರ್ ದೂರದ ಹೇಮಾವತಿ ನಾಲೆಯಲ್ಲಿ ನೀರು ನಿರಂತರವಾಗಿ ಮೂರು ತಿಂಗಳಿಂದ ಹರಿದಿದೆ. ಈ ಹಿನ್ನಲೆ ಇಡೀ ಗ್ರಾಮವೇ ಜೋಪಿನ ಪ್ರದೇಶವಾಗಿದೆ ಎಂದು ಸ್ಥಳೀಯ ಮುಖಂಡ ವಿಜಯ್ ಕುಮಾರ್ ತಿಳಿಸಿದರು.
ಕಳೆದ ಮೂರು ವರ್ಷದಿಂದ ಚೆನ್ನಾಗಿ ಸುರಿದ ಮಳೆ ಜೊತೆಗೆ ನಿರಂತರ ನಾಲೆಯಲ್ಲಿ ಹರಿಯುವ ಹೇಮೆಯ ನೀರು ಪಕ್ಕದ ಗ್ರಾಮಕ್ಕೆ ಆವರಿಸಿದೆ. ಮನೆಗಳ ಗೋಡೆಗಳು ತೇವದಿಂದ ಕೂಡಿದೆ. ಯಾವುದೇ ಕ್ಷಣದಲ್ಲಾದರೂ ಮನೆಗಳು ಧರೆಗುರುಳಬಹುದು. ಮನೆಯ ಬಚ್ಚಲು ನೀರು ಸಹ ಇಂಗುವ ಸ್ಥಿತಿಯಲ್ಲಿಲ್ಲ. ಹೆಜ್ಜೆ ಇಟ್ಟಲ್ಲಿ ತೇವದ ಮಣ್ಣು ಇದೆ. ಎಷ್ಟೋ ಮನೆಗಳ ಪಿಟ್ ನೀರಿನಿಂದ ತುಂಬಿವೆ. ದನಕರುಗಳನ್ನು ಮನೆಯಿಂದ ಹೊರಗಡೆ ಕಟ್ಟಲು ಅಸಾಧ್ಯವಾಗಿದೆ. ಹೀಗೆ ಅನೇಕ ಸಮಸ್ಯೆಗಳಿವೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇದೇ ಗ್ರಾಮದಲ್ಲಿನ ಸರ್ವೇ ನಂಬರ್ 57, 58 ಮತ್ತು 60 ರಲ್ಲಿರುವ ಗೋಮಾಳ ಜಮೀನಿನಲ್ಲಿ ನಿವೇಶನ ವಿಂಗಡಿಸಿ ಮನೆ ಕಟ್ಟಿಕೊಡಬೇಕು ಎಂದು ಸ್ಥಳೀಯ ಮುಖಂಡ ವಿಜಯಕುಮಾರ್ ಆಗ್ರಹಿಸಿದರು.
ಕಳೆದ ಮೂರು ತಿಂಗಳಿಂದ ವಿಪರೀತ ಸಮಸ್ಯೆ ಕಂಡ ಗ್ರಾಮದಲ್ಲಿ ಜೀರ್ಣೋದ್ದಾರಗೊಂಡು ಉದ್ಘಾಟನೆಗೆ ಸಿದ್ಧಗೊಂಡ ದೇವಾಲಯದ ಹೆಸರು ಒಂದು ಸಮಸ್ಯೆಗೆ ಕಾರಣವಾಗಿದೆ. ಶರಣ ಕಲ್ಯಾಣದಪ್ಪ ಎಂದೇ ಹೆಸರಿನ ಗ್ರಾಮದ ದೇವಸ್ಥಾನಕ್ಕೆ 1974 ರಲ್ಲಿ ಚಂದ್ರಮೌಳೇಶ್ವರ ಎಂದು ಹೇಳಿ ಮುಜರಾಯಿ ಇಲಾಖೆಯಲ್ಲಿ ನಮೂದಿಸಿದ್ದು, ಯಾವುದೇ ಅಭಿವೃದ್ದಿ ಕೆಲಸಕ್ಕೆ ಹೆಸರೇ ಅಡ್ಡಿಯಾಗುತ್ತಿದೆ. ಇಡೀ ಗ್ರಾಮವು ತಿಳಿಸಿದಂತೆ ಶರಣ ಕಲ್ಯಾಣದಪ್ಪ ಎಂದು ಬದಲಿಸಿಕೊಡಬೇಕು ಎಂದು ಗ್ರಾಮಸ್ಥರೊಂದಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಂಜೇಗೌಡ, ಯುವರಾಜ್, ರವೀಶ್, ಶಿವನಂಜಯ್ಯ, ಚಂದ್ರಶೇಖರ, ಸಿದ್ದರಾಮಯ್ಯ, ಮಲ್ಲಿಕಾರ್ಜುನಯ್ಯ, ಜಗದೀಶ್, ರಾಜಣ್ಣ, ಸಿದ್ದಲಿಂಗಯ್ಯ, ಗಂಗಾಧರಯ್ಯ, ಗೌರಿಶಂಕರ ಇತರರು ಇದ್ದರು.